ಸದನದಲ್ಲೇ ಕೈ- ಕೈ ಮಿಲಾಯ್ಸಿದರೆ, ಪಂಚಾಯಿತಿ ಸಭೆಗಳಲ್ಲಿ ಇನ್ನೇನಾಗಬಹುದು?

ತುಮಕೂರು : 

      ಇದೇ ಡಿ.22 ಹಾಗೂ 27ರಂದು ಗ್ರಾಮ ಪಂಚಾಯಿತಿ ಚುನಾವಣೆ ರಾಜ್ಯದಲ್ಲಿ ಎರಡು ಹಂತದಲ್ಲಿ ನಿಗದಿಯಾಗಿದೆ. ಪಕ್ಷ ರಹಿತವಾಗಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಬೇಕು. ಗ್ರಾಮಗಳಲ್ಲಿ ಸೌಹಾರ್ಧತೆ ನೆಲೆಸಬೇಕು ಎಂದು ಭಾಷಣ ಮಾಡುವ ವಿಧಾನಪರಿಷತ್ ಸದಸ್ಯರು, ಸಚಿವರೇ ಸದನದಲ್ಲಿ ಮಂಗಳವಾರ ಪರಸ್ಪರ ಕೈ ಕೈಮಿಲಾಯಿಸಿ ಕೊಂಡಿರುವುದು, ಗ್ರಾಮ ಪಂಚಾಯಿತಿ ಸ್ಪರ್ಧಾಕಾಂಕ್ಷಿಗಳ ಎದುರು ಮೇಲ್ಮನೆ ಸದಸ್ಯರು ಹಾಕಿಕೊಡುತ್ತಿರುವ ಮೇಲ್ಪಂಕ್ತಿ ಇದೆನಾ? ಎಂದು ಪ್ರಸ್ತುತ ಪ್ರಶ್ನಿಸುವಂತೆ ಮಾಡಿದೆ.

      ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ದೇಶವೆನಿಸಿದ ಭಾರತಕ್ಕೆ ಕಪ್ಪುಚುಕ್ಕೆ ಎನಿಸಿದಂತಹ ಘಟನೆ ಮಂಗಳವಾರ ಕರ್ನಾಟಕದ ವಿಧಾನಪರಿಷತ್‍ನಲ್ಲಿ ನಡೆದಿದೆ. ಮೈಸೂರು ಅರಸರ ಕಾಲದಿಂದ ಅಸ್ಥಿತ್ವದಲ್ಲಿರುವ ಹಿರಿಯರ ಮನೆ, ಮೇಲ್ಮನೆಯಲ್ಲಿ ಸಭಾಪತಿ ಪದಚ್ಯುತಿ ವಿಷಯವಾಗಿ ದುರದೃಷ್ಟಕರವಾದ ಘಟನೆ ನಡೆದಿದ್ದು, ಸಭಾಪತಿ ಒಳಪ್ರವೇಶಿಸಲು ಘಟನೆಯಿಂದ ಆರಂಭವಾದ ಆಡಳಿತಾರೂಢ ಬಿಜೆಪಿ -ವಿಪಕ್ಷ ಕಾಂಗ್ರೆಸ್ ಸದಸ್ಯರ ನಡುವಿನ ಕಿಚ್ಚು ಉಪಸಭಾಪತಿಯನ್ನು ಸಭಾಪತಿ ಪೀಠದಿಂದ ಹೊರದಬ್ಬಿ ಪರಸ್ಪರ ನೂಕಾಟ, ತಳ್ಳಾಟ ಮಾಡುವವರೆಗೆ ನಡೆದಿದ್ದು, ಪ್ರಕರಣದ ದೂರು ರಾಜ್ಯಪಾಲರ ಅಂಗಳ ತಲುಪಿದೆ.

      125 ವರ್ಷದ ಇತಿಹಾಸದ ಮೇಲ್ಮನೆಗೆ ಕಳಂಕ:

      ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆಯಾದಂತಹ ಈ ಘಟನೆ ಜರುಗಿದ ಮೇಲೆ ಪರಸ್ಪರ ಆರೋಪ –ಟೀಕೆಗಳನ್ನು ಮಾಡುತ್ತಿರುವ ಸಚಿವರು, ಶಾಸಕರು, ಪರಿಷತ್ ಸದಸ್ಯರು ಪರಿಸ್ಥಿತಿಯನ್ನು ತಪ್ಪಿಸುವ ಅವಕಾಶಗಳಿದ್ದರೂ ಅದನ್ನು ಬದಿಗೊತ್ತಿ ಬೆಳೆಸಿಕೊಂಡು ಹೋಗಿ, 125 ವರ್ಷದ ಹಿರಿಯರ ಮನೆಯ ಗೌರವವನ್ನು ಮಣ್ಣುಪಾಲಾಗಿಸಿದೆ. ಭಾರತದ ರಾಜ್ಯಸಭೆ ಸ್ಥಾಪನೆಗೆ ಪ್ರೇರಕವಾದಂತಹ ಕರ್ನಾಟಕ ವಿಧಾನಪರಿಷತ್‍ನಲ್ಲಿ ಇಂತಹ ಘಟನೆ ನಡೆಯಬಾರದಿತ್ತು ಎಂಬ ಟೀಕೆಗಳು ಎಲ್ಲೆಡೆ ವ್ಯಕ್ತವಾಗಿದೆ.

      ಕೆ.ಟಿ.ಭಾಷ್ಯಂ, ವೈಕುಂಠ ಬಾಳಿಗರಂತಹ ಮುತ್ಸದ್ದಿ ನೇತಾರರು ಸಭಾಪತಿ ಪೀಠವನ್ನು ಅಲಂಕರಿಸಿದ್ದು, ಅಂತಹ ಪೀಠವನ್ನು ಅವಮಾನಿಸುವಂತೆ ಮೇಲ್ಮನೆ ಸದಸ್ಯರು ಮ್ಯೂಸಿಕೇಲ್ ಚೇರ್ ಮಾದರಿಯಲ್ಲಿ ಉಪಸಭಾಪತಿಯನ್ನು ಕೆಳಕ್ಕೆ ತಳ್ಳಿ, ಪೀಠವನ್ನು ಅಲಂಕರಿಸುವುದಕ್ಕೆ ವಿಪಕ್ಷ ಸದಸ್ಯರು ಮುಂದಾಗಿದ್ದು, ಸಭಾಪತಿಯಾದವರನ್ನೇ ಒಳಗೆ ಬಾರದಂತೆ ಬಾಗಿಲಿಗೆ ಆಡಳಿತ ಸದಸ್ಯರು ಅಡ್ಡನಿಂತಿದ್ದು, ಇಡೀ ಘಟನೆಗೆ ಕೆಲವು ಹಿರಿಯ ಸದಸ್ಯರು ಮೂಕಪ್ರೇಕ್ಷಕರಾಗಿದ್ದು, ಇವೆಲ್ಲ ಘಟನಾವಳಿಗಳನ್ನು ಕಂಡ ಜನರು ವಿಧಾನಪರಿಷತ್‍ಅನ್ನೇ ಏಕೆ ರದ್ದು ಮಾಡಬಾರದು ಎಂಬ ಪ್ರಶ್ನೆಯನ್ನು ಕೇಳುವಂತಾಗಿದೆ.

       ಸದ್ಯ ಕರ್ನಾಟಕ, ಮಹಾರಾಷ್ಟ್ರ, ಬಿಹಾರ, ಆಂಧ್ರಪ್ರದೇಶ, ತೆಲಂಗಾಣ, ಉತ್ತರಪ್ರದೇಶದಲ್ಲಿ ಮಾತ್ರ ವಿಧಾನಪರಿಷತ್ ಅಸ್ಥಿತ್ವದಲ್ಲಿದ್ದು, ಇದೇ ರೀತಿ ಗಲಾಟೆ ಗದ್ದಲ, ಮಸೂದೆ ಅಂಗೀಕಾರದ ವಿಷಯದಲ್ಲಿ ಜಟಾಪಟಿಯ ಕಾರಣಕ್ಕೆ ಹಿಂದೆ ಅಸ್ಥಿತ್ವದಲ್ಲಿದ್ದ ಅಸ್ಸಾಂ, ಮಧ್ಯಪ್ರದೇಶ, ತಮಿಳುನಾಡು, ಜಮ್ಮುಕಾಶ್ಮೀರ, ಪಶ್ಚಿಮ ಬಂಗಾಳ, ಪಂಜಾಬ್‍ನಲ್ಲಿ ಪರಿಷತ್ ಅನ್ನು ರದ್ದುಮಾಡಿಸಲಾಗಿದೆ. ಅಂತಹ ಪರಿಸ್ಥಿತಿಯನ್ನು ಕರ್ನಾಟಕ ತಂದುಕೊಳ್ಳುವುದು ಬೇಡ. ಮಂಗಳವಾರದ ಘಟನೆಯನ್ನು ಸಮಗ್ರ ತನಿಖೆಗೊಳಪಡಿಸಿ ತಪ್ಪಿತಸ್ಥ ಸದಸ್ಯರಿಗೆ ಶಿಕ್ಷೆ ವಿಧಿಸಿ ವಿಧಾನಪರಿಷತ್ ಘನತೆಯನ್ನು ಮರುಸ್ಥಾಪಿಸುವ ಪ್ರಯತ್ನ ಮಾಡಬೇಕಿದೆ ಎಂಬ ಒತ್ತಾಯಗಳು ಕೇಳಿಬಂದಿವೆ.

ಕೆಳಮನೆಯಲ್ಲಿ ಬಟ್ಟೆ ಹರಿದುಕೊಂಡಿದ್ರು, ಮೇಲ್ಮನೆಯಲ್ಲಿ ಕುರ್ಚಿಯಿಂದಲೇ ಎಳೆದರು!…

      ವಿಧಾನಸಭೆಯಲ್ಲಿ 2009ರ ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ಗೂಳಿಹಟ್ಟಿ ಶೇಖರ್ ಸದನದ ಮೇಜಿನ ಮೇಲೆ ನಿಂತು ಬಟ್ಟೆ ಹರಿದುಕೊಂಡು ಕೂಗಾಡಿದ ಪ್ರಕರಣದ ರೀತಿಯಲ್ಲೇ ಪರಿಷತ್‍ನಲ್ಲಿ ಸಭಾಪತಿ ಪೀಠದಲ್ಲಿ ಕುಳಿತಿದ್ದವರನ್ನು ಎಬ್ಬಿಸಿ ಗಲಾಟೆ ಮಾಡಿರುವುದು ರಾಜ್ಯದ ಗೌರವಕ್ಕೆ ಚ್ಯುತಿ ತಂದಿದೆ ಎಂದರೆ ತಪ್ಪಲ್ಲ. ಕೆಳಮನೆಯಲ್ಲಿ ಮಂಡಿತವಾದ ಮಸೂದೆಗಳನ್ನು ಪರಾಮರ್ಶಿಸಿ ಚಿಂತಕರ ಚಾವಡಿಯಂತೆ ವಿಧಾನಸಭೆ ಸದಸ್ಯರಿಗೆ ಸಲಹೆ ನೀಡಬೇಕಿದ್ದ ಮೇಲ್ಮನೆಯ ಸದಸ್ಯರು ಪಂಚಾಯಿತಿ ಸದಸ್ಯರಾಗುವವರ ಮುಂದೆ ತಲೆತಗ್ಗಿಸುವಂತೆ ನಡೆದುಕೊಂಡಿದ್ದಾರೆಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿವೆ.

ರಾಜ್ಯಸಭೆ ಪರಿಕಲ್ಪನೆಗೆ ನಾಂದಿಹಾಡಿದ ಸದನ ಅವನತಿಯತ್ತ….

      1907ರಲ್ಲಿ ಸ್ಥಾಪನೆಯಾದ ಕರ್ನಾಟಕ ವಿಧಾನಪರಿಷತ್ ಮೊದಲಿಗೆ ನ್ಯಾಯ ವಿಧಾಯಕ ಸಭೆಯೆಂದು ಮೈಸೂರು ಅರಸರ ಕಾಲದಲ್ಲಿ ಕರೆಸಿಕೊಳ್ಳಲ್ಪಟ್ಟಿತ್ತು. ರಾಜ್ಯಸಭೆ ಪರಿಕಲ್ಪನೆಗೆ ನಾಂದಿಯಾಡಿದ ಸದನ. ವಿದ್ವಾಂಸರು, ಸಾಹಿತಿಗಳು, ಶಿಕ್ಷಕರು, ಪದವೀಧರರು , ಸಮಾಜ ಸೇವಕರು, ಪತ್ರಕರ್ತರು, ಆಡಳಿತ ಅನುಭವಿಗಳು ಕಾನೂನು ತಜ್ಞರುಗಳಿಗೆ ಪರಿಷತ್‍ನಲ್ಲಿ ಪ್ರಾತಿನಿಧ್ಯ ಕಲ್ಪಿಸಬೇಕೆಂದು ಇದರ ಮೂಲ ಉದ್ದೇಶ. ಡಿ.ವಿ.ಗುಂಡಪ್ಪ., ಗೊರೂರು ರಾಮಸ್ವಾಮಿ ಐಯ್ಯಂಗಾರ್, ನಜೀರ್‍ಸಾಬ್,ದಿ. ರಾಮಕೃಷ್ಣ ಹೆಗಡೆ, ಪಾಟೀಲ್‍ಪುಟ್ಟಪ್ಪ, ಕಂಬಾರರಂತಹ ಮೇಧಾವಿಗಳು ಈ ಸದನದ ಸದಸ್ಯರಾಗಿದ್ದರು. ಸದ್ಯ ಸಂಖ್ಯಾ ಬಲದ ಆಧಾರದಲ್ಲಿ ಮೇಲ್ಮನೆಯ ಸಭಾಪತಿ ಸ್ಥಾನ ಅಲಂಕರಿಸಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ನವರು ನಡೆಸಿದ ಆಟಾಟೋಪ ನೋಡಿದರೆ ರಾಜ್ಯಸಭೆಗೆ ನಾಂದಿ ಹಾಡಿದ ಸದನ ಅವನತ್ತಿಯತ್ತ ಸಾಗುತ್ತಿದೆ ಎಂಬ ಆತಂಕಕ್ಕೆ ಎಡೆಮಾಡಿದೆ.

ಎಸ್. ಹರೀಶ್ ಆಚಾರ್ಯ

Recent Articles

spot_img

Related Stories

Share via
Copy link