ಗುಬ್ಬಿ :
ಕೊರೋನಾ ಲಾಕ್‍ಡೌನ್ ಸಂದರ್ಭದಲ್ಲಿ ಎರಡೂವರೆ ಎಕರೆ ಪ್ರದೇಶದಲ್ಲಿ ಮೂರುವರೆ ಲಕ್ಷ ರೂ ಖರ್ಚು ಮಾಡಿ ಉತ್ಕøಷ್ಠವಾಗಿ ಬೆಳೆದಿದ್ದ ಗೋಲ್ಡ್ ಮೆರಿ ಚಂಡು ಹೊ ಕೊಳ್ಳುವವರಿಲ್ಲದೆ ಸಂಪೂರ್ಣವಾಗಿ ಬೆಳೆ ಕಳೆದುಕೊಂಡು ಆರ್ಥಿಕವಾಗಿ ತೀವೃ ನಷ್ಟ ಅನುಭವಿಸಿದ್ದ ಪ್ರಗತಿ ಪರ ಗುಬ್ಬಿ ಹೊರವಲಯದ ರೈತ ರಾಮಚಂದ್ರು ಅದೇ ಎರಡೂವರೆ ಎಕರೆ ಪ್ರದೇಶದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಖರ್ಚ ಮಾಡಿ ಹೈಬ್ರಿಡ್ ತೊಗರಿ ಬೆಳೆ ಬೆಳೆದಿದ್ದು ನಿರೀಕ್ಷೆಗೂ ಮೀರಿ ಆದಾಯ ಬರುವ ನಿರೀಕ್ಷೆಯಲ್ಲಿದ್ದರು. ಆದರೆ ತೊಗರಿ ಕಾಯಿಗೂ ಸಮರ್ಪಕವಾಗಿ ಆದಾಯ ಸಿಗದೆ ಮತ್ತಷ್ಟು ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ.
ಈಗಾಗಲೆ ತೊಗರಿ ಬೆಳೆ ಉತ್ತಮವಾಗಿ ಬಂದಿದ್ದು ಕಾಯಿಗಳನ್ನು ಕಿತ್ತು ಮಾರಾಟ ಮಾಡಲು ಹೋದರೆ ಮಾರುಕಟ್ಟೆಯಲ್ಲಿ ಕೆಜಿಗೆ ಕೇವಲ 20 ರೂ.ಗೆ ಮಾರಾಟವಾಗುತ್ತಿದೆ. ಇದರಿಂದ ಬೆಳೆ ಬೆಳೆಯಲು ಖರ್ಚು ಮಾಡಿದ್ದ ಹಣವು ದೊರೆಯುತ್ತಿಲ್ಲ, ಕಾಯಿ ಕೀಳಲು ಆಳುಗಳ ಕೂಲಿ, ಮಾರುಕಟ್ಟೆಗೆ ಸಾಗಾಣಿಕೆ ವೆಚ್ಚ ಲೆಕ್ಕಾ ಹಾಕಿದರೆ ಬೆಳೆ ಬೆಳೆಯಲು ಖರ್ಚು ಮಾಡಿದ ಹಣದಲ್ಲಿ ಅರ್ಧ ಹಣವು ಬಾರದಂತಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ರೈತರ ನಿರೀಕ್ಷೆಯಂತೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆತರೆ ಮಾತ್ರ ರೈತ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ರೈತ ರಾಮಚಂದ್ರು ಕೂಲಿ ಅಳುಗಳ ಸಹಾಯದಿಂದ ಎರಡೂವರೆ ಎಕರೆಯಲ್ಲಿ ಬೆಳೆದಿರುವ ತೊಗರಿ ಬೆಳೆಗೆ ರೋಗ ಬಾರದಂತೆ ವೈಜ್ಞಾನಿಕವಾಗಿ ರಾಸಾಯನಿಕ ಸಿಂಪರಣೆ ಮಾಡಿದ್ದಾರೆ. ಈಗಾಗಲೆ ಸಾಕಷ್ಟು ಖರ್ಚು ಮಾಡಿ ಉತ್ತಮ ಆದಾಯ ಬರುವ ನಿರೀಕ್ಷೆಯಲ್ಲಿ ಇದ್ದರು ಆದರೆ ಮಾರುಕಟ್ಟೆಯಲ್ಲಿ ತೊಗರಿ ಕಾಯಿಗೆ ಉತ್ತಮ ಬೆಲೆ ದೊರೆಯದಿರುವುದು ತೀವೃ ಬೇಸರ ತಂದಿದೆ ಎನ್ನುತ್ತಾರೆ ರೈತ ರಾಮಚಂದ್ರು.
ಚಂಡು ಹೊವಿನ ಬೆಳೆ ಕೊರೋನಾದಿಂದ ಕೈಕೊಟ್ಟರೂ ದೃತಿಗೆಡದೆ ಲಕ್ಷಾಂತರ ರೂ. ಖರ್ಚು ಮಾಡಿ ಹೈಬ್ರಿಡ್ ತೊಗರಿ ಬೆಳೆ ಬೆಳೆದಿದ್ದರು. ಇದೀಗ ಉತ್ತಮ ಬೆಲೆ ದೊರೆಯದ ಕಾರಣ ತೀವ್ರ ಹತಾಶರಾಗಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಹೂ ಮತ್ತು ತರಕಾರಿ ಬೆಳೆದು ನಷ್ಟವಾಗಿದ್ದ ರೈತರಿಗೆ ಸರ್ಕಾರ ಪರಿಹಾರ ನೀಡುವ ಯೋಜನೆ ರೂಪಿಸಿತ್ತು.
ಆದರೆ ಚಂಡು ಹೂ ಬೆಳೆದು ಆರ್ಥಿಕ ಸಂಕಷ್ಠಕ್ಕೀಡಾಗಿದ್ದು ಈವರೆಗೂ ಒಂದು ಬಿಡಿಗಾಸು ಬಂದಿಲ್ಲ, ಎಲ್ಲಾ ರೀತಿಯ ದಾಖಲಾತಿಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಿ ತಿಂಗಳುಗಳೇ ಕಳೆದರೂ ನನಗೆ ಸರ್ಕಾರದಿಂದ ಯಾವುದೆ ಪರಿಹಾರವನ್ನು ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕೃಷಿ ಅಧಿಕಾರಿಗಳು ಉತ್ತಮ ಬೆಳೆ ಬೆಳೆದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದನ್ನು ಬಿಟ್ಟರೆ ಕನಿಷ್ಟ ಪಕ್ಷ ಪ್ರಗತಿ ಪರ ರೈತರನ್ನು ಗುರುತಿಸಿ ಅಭಿನಂದನೆ ಸಲ್ಲಿಸುವ ಗೋಜಿಗೂ ಹೋಗದಿರುವುದು ಬೇಸರದ ಸಂಗತಿ ಎಂದ ಅವರು, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕಿದೆ ಎನ್ನುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ