ಬರಗೂರು :
ಶಿರಾ ತಾಲ್ಲೂಕಿನಲ್ಲಿ ಡಿ.27 ರಂದು ಎರಡನೆ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯುತ್ತಿರುವ ಬೆನ್ನ ಹಿಂದೆಯೆ ಮತ್ತೊಂದು ಕೊರೊನಾ ವೈರಸ್ ಹರಡುವ ಸಾಧ್ಯತೆ ಇದ್ದು, ಚುನಾವಣಾ ಕ್ಷೇತ್ರಗಳಲ್ಲಿ ಮತ ಚಲಾಯಿಸುವ ವೇಳೆ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಕಾಪಾಡಿ ಕೊರೊನಾ ನಿಯಮಗಳನ್ನು ಪಾಲಿಸಬೇಕೆಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅನಿತಾ ತಿಳಿಸಿದರು.
ಅವರು ಶಿರಾ ತಾಲ್ಲೂಕು ಬರಗೂರು ಗ್ರಾಮ ಪಂಚಾಯ್ತಿ ವತಿಯಿಂದ ಡಿ.27ರಂದು ನಡೆಯಲಿರುವ ಗ್ರಾಮ ಪಂಚಾಯ್ತಿ ಚುನಾವಣಾ ಅಂಗವಾಗಿ ಕೊರೊನಾ ನಿಯಮಗಳನ್ನು ಪಾಲಿಸುವ ಜೊತೆಗೆ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಹಮ್ಮಿಕೊಂಡಿದ್ದ ಧ್ವನಿವರ್ಧಕ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.
2020 ರಲ್ಲಿ 8-10 ತಿಂಗಳಿಂದಲೂ ಕೊರೊನಾ ವೈರಸ್‍ನಿಂದ ಜನರು ತೀವ್ರ ಆತಂಕಕ್ಕೀಡಾಗಿದ್ದರು. ಕೊರೊನಾ ವೈರಸ್ ಪ್ರಮಾಣ ಇತ್ತೀಚೆಗೆ ಕಡಿಮೆಯಾಗುತ್ತಿತ್ತು. ಇದರ ಬೆನ್ನ ಹಿಂದೆಯೇ ದೇಶಾದ್ಯಂತ ಅದರಲ್ಲೂ ಕರ್ನಾಟಕ ರಾಜ್ಯದಲ್ಲೂ ಮತ್ತೊಂದು ವೈರಸ್ ಹರಡುವ ಭೀತಿ ಕಂಡು ಬರುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರ ಕೈಗೊಳ್ಳುವ ನಿಯಮಗಳನ್ನು ಪಾಲಿಸಿ ಕೊರೊನಾ ವಿರುದ್ದ ಹೋರಾಡಬೇಕಿದೆ ಎಂದರು.
ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ಲಕ್ಷ್ಮಣ, ಕಂಪ್ಯೂಟರ್ ಆಪರೇಟರ್ ಪುಟ್ಟರಾಜು ಹಾಗೂ ಪಂಚಾಯ್ತಿ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ