ಗ್ರಾಪಂ ಚುನಾವಣೆ : ಭವಿಷ್ಯದಲ್ಲಿ ಹಣವಿಲ್ಲದವರ ಸ್ಪರ್ಧೆ ಮರೀಚಿಕೆ!

ಮಧುಗಿರಿ  : 

      ತಾಲ್ಲೂಕಿನಲ್ಲಿ 2ನೇ ಹಂತದ ಗ್ರಾಪಂ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು, ಕುರುಡು ಕಾಂಚಾಣದ ಜೊತೆಯಲ್ಲಿ ಉಡುಗೊರೆಗಳ ಆರ್ಭಟವು ಈ ಚುನಾವಣೆಯಲ್ಲಿಯೂ ಕಂಡು ಬಂದು, ಬರುವಂತಹ ಚುನಾವಣೆಗಳು ಸಿರಿವಂತರ ಪಾಲು ಎಂಬ ಆತಂಕ ಉಂಟು ಮಾಡಿದೆ.

     ಡಿ. 27 ರಂದು ನಡೆದ ಗ್ರಾಪಂ ಚುನಾವಣೆಯಲ್ಲಿ ತಾಲೂಕಿನಾದ್ಯಂತ 79,661 ಮಹಿಳೆಯರು ಹಾಗೂ 86,870 ಪುರುಷರು ಸೇರಿ ಸರಾಸರಿ ಶೇ. 84.70 ಯಷ್ಟು ಮತದಾನವಾಗಿದೆ. ಎಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕೆಲ ಗ್ರಾಮಗಳಲ್ಲಿ ಸಣ್ಣ ಪುಟ್ಟ ಮಾತಿನ ಚಕಮಕಿ, ಕೆಲ ಕಡೆ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಗೊಂದಲ ಉಂಟಾಗಿದ್ದು ಬಿಟ್ಟರೆ ಬಹುತೇಕವಾಗಿ ಶಾಂತಿಯುತ ಮತದಾನವಾಗಿದೆ.

       ತಾಲ್ಲೂಕಿನ ಒಟ್ಟು 39 ಗ್ರಾಪಂಗಳ 600 ಕ್ಷೇತ್ರಗಳಿಗೆ ನಡೆದ ಈ ಚುನಾವಣೆಯಲ್ಲಿ ಕುರುಡು ಕಾಂಚಾಣವು ಎಗ್ಗಿಲ್ಲದೆ ಹರಿದಾಡಿದ್ದು, ಅಭ್ಯರ್ಥಿಗಳು ಸಹ ಹಣ ಹೊಂದಿಸಲಾಗದೆ ಆರ್ಥಿಕವಾಗಿ ಹೈರಾಣಾಗಿರುವುದು ಕಂಡು ಬಂದಿತು. ಮುಂದಿನ ದಿನಗಳಲ್ಲಿ ಮಧುಗಿರಿ ನಗರಸಭೆಯಾಗುವ ಲಕ್ಷಣಗಳಿದ್ದು, ಕಸಬಾ ವ್ಯಾಪ್ತಿಯ ಸಿದ್ದಾಪುರ, ಚಿನಕವಜ್ರ, ಬಿಜಾವರ, ಮರುವೇಕೆರೆ, ಗಂಜಲಗುಂಟೆ, ಡಿವಿ ಹಳ್ಳಿಯ 5 ಗ್ರಾ.ಪಂಗಳಿಗೆ ಹೆಚ್ಚಿನ ಅಧಿಕಾರ ಸಿಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ, ಈ ಹಳ್ಳಿಗಳಲ್ಲಿ ಗೆಲುವಿಗಾಗಿ ಕುರುಡು ಕಾಂಚಾಣವು ಹೆಚ್ಚಾಗಿ ಹರಿದಾಡಿದೆ.

      ಕೆಲ ಗ್ರಾಪಂಗಳಲ್ಲಿ ಕುಕ್ಕರ್, ಕಾಲು ಚೈನ್, ಸೀರೆ, ಒಂದು ಮತಕ್ಕೆ ಸಾವಿರದಂತೆ ಮತದಾರರ ಕೈ ಸೇರಿದೆ ಎಂಬ ಮಾತುಗಳೂ ಕೇಳಿ ಬಂದವು. ಮತಗಟ್ಟೆಯ ಸಮೀಪ ಅರಿಶಿಣ-ಕುಂಕುಮದ ಜೊತೆಗೆ ಅಭ್ಯರ್ಥಿಯ ಕರಪತ್ರ ಹಿಡಿದು ಮತ ಯಾಚಿಸುವುದು ಸಾಮಾನ್ಯವಾಗಿತ್ತು. ಗ್ರಾಪಂ ಚುನಾವಣೆಗಾಗಿ ಬೆಂಗಳೂರಿನಿಂದ ಸುಮಾರು 15 ಸಾವಿರದಷ್ಟು ಮತದಾರರು ತಾಲ್ಲೂಕಿನ ಗ್ರಾಮಗಳಿಗೆ ಆಗಮಿಸಿ ಮತ ಚಲಾಯಿಸಿ, ಕೆಲವರು ವಾಪಸ್ಸಾಗಿದ್ದಾರೆ ಎನ್ನಲಾಗುತ್ತಿದೆ.

      ದೊಡ್ಡೇರಿಯ ಮತಗಟ್ಟೆ ಸಂಖ್ಯೆ 262ರಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ ಮತದಾನದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾವಣೆ ಮಾಡಿದರು. ನೇರಳೆಕೆರೆ ಗ್ರಾಮದ ಮತಗಟ್ಟೆ ಸಂಖ್ಯೆ 118/1 ರಲ್ಲಿ ಅಂತಿಮ ಕ್ಷಣದಲ್ಲಿ ಜನ ಸಾಗರ ಹೆಚ್ಚಾದ ಪರಿಣಾಮ ಜನರು ಯಾವುದೇ ವ್ಯಕ್ತಿಗತ ಅಂತರ ಕಾಯ್ದು ಕೊಳ್ಳದೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ಈ ಕೇಂದ್ರದಲ್ಲಿ ಮತದಾನವು ಸಂಜೆ 6.20 ಗಂಟೆಗೆ ಅಂತ್ಯಗೊಂಡಿತು.

ಪಿಪಿ ಕಿಟ್ ಧರಿಸಿದ ಕೊರೋನಾ ಸೋಂಕಿತರಿಂದ ಮತದಾನ :

      ತಾಲ್ಲೂಕಿನ ಕಸಬಾ, ದೊಡ್ಡೇರಿ, ಮಿಡಿಗೇಶಿ, ಐಡಿಹಳ್ಳಿ ಹೋಬಳಿಯ ನಾನಾ ಮತಗಟ್ಟೆಗಳಲ್ಲಿ 5 ಸೋಂಕಿತ ಮತದಾರರಿಗೆ ಮತದಾನ ಮುಕ್ತಾಯವಾಗಲು ಒಂದು ಗಂಟೆ ಸಮಯಾವಕಾಶ ಇರುವಾಗ ಮತದಾನ ಮಾಡಲು ಅವಕಾಶ ಕಲ್ಪಿಸಿ ಕೊಡಲಾಯಿತು.

ನಶೆ ಏರಿಸಿಕೊಂಡ ಮದ್ಯಪ್ರಿಯರು :

      ಗ್ರಾಮೀಣ ಭಾಗದಲ್ಲಿ ಮದ್ಯ ಮರಾಟಕ್ಕೆ ನಿಷೇಧ ಹೇರಿದ್ದರೂ, ಪಟ್ಟಣದಲ್ಲಿ ಮದ್ಯ ಖರೀದಿ ಜೋರಾಗಿದ್ದು, ಕಡಿಮೆ ಮೌಲ್ಯದ ಮದ್ಯವು ಸಿಗದೆ ಪರದಾಟ ನಡೆದಿದೆ. ಅಭ್ಯರ್ಥಿಗಳಿಗೆ ಹೆಚ್ಚಿನ ದರದ ಮದ್ಯವು ಹೊರೆಯಾಗಿತ್ತು. ಮದ್ಯಪಾನ ಪ್ರಿಯರು ನಾವಿನ್ನೂ ಮತ ಹಾಕಿಲ್ಲ ಎಂದು ಆಗಾಗ ಅಭ್ಯರ್ಥಿಗಳ ಸುತ್ತ-ಮುತ್ತ ಅಲೆಯುತ್ತಾ, ನಮಗೆ ಕಿಕ್ಕೇರಿಸಿದರೆ ಮಾತ್ರ ನಾವು ಮತಗಟ್ಟೆಗೆ ಆಗಮಿಸಿ ಓಟು ಹಾಕುವುದು ಎಂಬ ಸೂಚನೆ ನೀಡುತ್ತಿದ್ದುದು ಬಹುತೇಕ ಗ್ರಾಮಗಳಲ್ಲಿ ಕಂಡು ಬಂದಿತು. ಇನ್ನು ಎಣ್ಣೆಯ ಅಮಲಿನಲ್ಲಿ ತೇಲುತ್ತಿದ್ದ ಕೆಲ ಮದ್ಯಪ್ರಿಯರನ್ನು ಅಭ್ಯರ್ಥಿಗಳು ಸಂಜೆ 4 ಗಂಟೆಯ ನಂತರ ಎಚ್ಚರಿಸಿ ಮತದಾನ ಮಾಡಿಸಿದ ಪ್ರಸಂಗಗಳೂ ನಡೆದವು.

      ಇದರಿಂದ ಈ ಬಾರಿಯ ಚುನಾವಣೆಯು ಶ್ರೀ ಸಾಮಾನ್ಯನ ಚುನಾವಣೆಯಾಗಿ ಉಳಿಯದೆ ಶ್ರೀಮಂತರ ಚುನಾವಣೆಯಾಗಿ ಬದಲಾಗಿದೆ ಎಂಬುದು ಈ ಚುನಾವಣೆಯಿಂದ ಸಾಬೀತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap