ಸ್ಮಾರ್ಟ್ ಸಿಟಿ ಕಾಮಗಾರಿ ; ಕಳಪೆ ಗುಣಮಟ್ಟದ ವಿದ್ಯುತ್ ಕಂಬ, ಡಕ್‍ಗಳ ನಿರ್ಮಾಣ ಆರೋಪ

 ತುಮಕೂರು : 

      ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಅನುಷ್ಠಾನದಲ್ಲಿ ತೃಪ್ತಿಯಿಲ್ಲ ಎಂದು ಕಾಂಗ್ರೆಸ್ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಪ್ರತಿಕ್ರಿಯಿಸಿದ್ದಾರೆ.

      ಸ್ಮಾರ್ಟ್ ಸಿಟಿ ಕಾಮಗಾರಿ ಕುರಿತು ಪ್ರಜಾಪ್ರಗತಿಯೊಂದಿಗೆ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆ ಜಾರಿಯ ಹಿಂದಿನ ಶ್ರಮವನ್ನು ನೆನಪಿಸಿಕೊಂಡರೆ ಈಗ ನಡೆಯುತ್ತಿರುವ ಕಾಮಗಾರಿಗಳು ಸಮಾಧಾನ ತರುತ್ತಿಲ್ಲ. ಕಳಪೆ ಗುಣಮಟ್ಟದ ವಿದ್ಯುತ್ ಕಂಬಗಳು, ಅಂಡರ್‍ಗ್ರೌಂಡ್ ಡಕ್‍ಗಳನ್ನು ನಿರ್ಮಿಸುತ್ತಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿ ಹೆಸರಲ್ಲಿ ಹಿಂದೆ ಪಾಲಿಕೆಗೆ ದೊರೆತ ನೂರು ಕೋಟಿ ವಿಶೇಷ ಅನುದಾನದಲ್ಲಿ ನಿರ್ಮಿಸಿದ ರಸ್ತೆಗಳೆಲ್ಲ ಹಾಳಾಗುವಂತಾಗಿದೆ ಎಂದು ಆಪಾದಿಸಿದರು.

      ಪ್ರಧಾನಿ ಮೋದಿ ಅವರು ದೇಶದ ನೂರು ಮಹಾನಗರ ಪಾಲಿಕೆಗಳಿಗೆ ಸ್ಮಾರ್ಟ್ ಸಿಟಿ ಘೋಷಣೆ ಮಾಡಿದ 2015 ರ ಸಂದರ್ಭದಲ್ಲಿ ತುಮಕೂರು ಮಹಾನಗರ ಪಾಲಿಕೆಯನ್ನು ಸ್ಮಾರ್ಟ್ ಸಿಟಿ ಆಯ್ಕೆಗೆ ಅಣಿಗೊಳಿಸುವುದೇ ಸವಾಲಾಗಿತ್ತು. ಆಗ ಶಾಸಕನಾಗಿದ್ದ ನಾನು ನಗರಾಭಿವೃದ್ಧಿ ಸಚಿವರಾಗಿದ್ದ ಸೊರಕೆ, ಕಾನೂನು ಸಚಿವರಾಗಿದ್ದ ಜಯಚಂದ್ರ ಅವರ ಬಳಿ ಮನವಿ ಮಾಡಿ, ಇರುವ ಕಾನೂನು ತೊಡಕನ್ನು ವಿವಾರಿಸಿ ನಗರಸಭೆಯಾಗಿದ್ದನ್ನು ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿ, ತಾವೂ ಸಂಸದರು ಸೇರಿ ಸ್ಮಾರ್ಟ್‍ಸಿಟಿ ಸ್ಪರ್ಧೆಗೆ ಪಾಲಿಕೆಯನ್ನು ಅಣಿಗೊಳಿಸಿದ್ದರಿಂದಲೇ ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರುವ ಅರ್ಹತೆ ಪಡೆಯಿತು ಎಂದರು.

      ಆಗ ಸಂಸದರಾಗಿದ್ದ ಮುದ್ದಹನುಮೇಗೌಡರು ಅಧಿಕಾರಿಗಳೊಡಗೂಡಿ ಸಾರ್ವಜನಿಕ ಸಲಹಾ ಸಭೆ ಏರ್ಪಡಿಸಿ, ಆನ್‍ಲೈನ್ ಪ್ರಶ್ನಾವಳಿಗೆ ಉತ್ತರ ಕಳುಹಿಸಿ, ಇ-ಆಡಳಿತದಲ್ಲಿ ಉತ್ತಮ ಅಂಕಗಳನ್ನು ಪಡೆದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರನ್ನು ಹಿಂದಿಕ್ಕಿ 2ನೇ ಸುತ್ತಿನಲ್ಲಿ ತುಮಕೂರು ಮಹಾನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದ್ದು. ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು 2017 ಆಗಸ್ಟ್‍ನಲ್ಲಿ ಅಮಾನಿಕೆರೆ ಗಾಜಿನ ಮನೆಯಲ್ಲಿ ಕಾಮಗಾರಿಗೆ ಚಾಲನೆ ಕೊಟ್ಟರು. ತದ ನಂತರ ಸರಕಾರ ಬದಲಾಗಿ ಶಾಸಕ, ಸಂಸದರು ಬದಲಾದೆವು. ಆಗ ಅನುಮೋದಿತವಾದ ಕಾಮಗಾರಿಯೊಂದಿಗೆ ಕೆಲವೊಂದು ಹೊಸ ಕಾಮಗಾರಿಗಳನ್ನು ಸೇರಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ ನಿಗದಿತ ಕಾಲಮಿತಿಯೊಳಗೆ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಕೋವಿಡ್ ನೆಪ ಹೇಳಿ ಅರೆಬರೆಯಾಗಿಸಿರುವ ಕಾಮಗಾರಿಗಳಿಂದ ನಗರದ ಜನತೆ ಅಸಮಾಧಾನ ಹೊಂದಿದ್ದಾರೆ ಎಂದರು.

  ರಸ್ತೆಯನ್ನೇ ಕಿರಿದು ಮಾಡಿ ಸಮಸ್ಯೆ  :

      ಯೂರೋಪ್ ಮಾದರಿ ರಸ್ತೆ ಎಂದು ಮಾಡಿರುವ ಜನರಲ್ ಕಾರಿಯಪ್ಪ ರಸ್ತೆಯಲ್ಲಿ ಪಾರ್ಕಿಂಗ್, ಪಾದಚಾರಿ ಮಾರ್ಗವೆ ದೊಡ್ಡದಾಗಿ ರಸ್ತೆಯೇ ಕಿರಿದಾಗಿದೆ. ಪಿಎಂಸಿಗಳು ತಮಗಿಷ್ಟ ಬಂದಂತೆ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಕೆಲವೊಂದು ಯೋಜನೆಗಳಿಗೆ ಯೋಜನಾ ವೆಚ್ಚ ಅಧಿಕವಾಗಿದೆ. ನಗರ ಸಂಚಾರ ದಟ್ಟಣೆ ತಗ್ಗಿಸಲೆಂದು ರಿಂಗ್ ರಸ್ತೆಯನ್ನು ಸ್ಮಾರ್ಟ್‍ಸಿಟಿ ವ್ಯಾಪ್ತಿಗೆ ಸೇರಿಸಿದರೆ, ಕಳಪೆ ಗುಣಮಟ್ಟದ ವಿದ್ಯುತ್ ಕಂಬ ಅಳವಡಿಸಿದ್ದಾರೆ. ಎಲ್‍ಇಡಿ ದೀಪಗಳ ಅಳವಡಿಕೆಯಲ್ಲೂ ಅವ್ಯವಹಾರ ಕೇಳಿಬಂದಿದೆ. ಜನಸ್ನೇಹಿಯಾಗಿ ಅನುಷ್ಠಾನಗೊಳಿಸಬೇಕಾದ ಸ್ಮಾರ್ಟ್‍ಸ ಸಿಟಿ ಕಾಮಗಾರಿಗಳು, ಸಮುದಾಯದ ಹಿತಕ್ಕೆ ವ್ಯತಿರಿಕ್ತವಾಗಿ ಅನುಷ್ಠಾನಗೊಳ್ಳುತ್ತಿರುವುದು ಕಂಡುಬಂದಿದೆ ಎಂದು ದೂರಿದರು.
 

ಸಲಹಾ ಸಮಿತಿಗೆ ನಿಕಟಪೂರ್ವ ಶಾಸಕರು, ಸಂಸದರನ್ನು ಸೇರಿಸಿ ;

      ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸ್ಮಾರ್ಟ್ ಸಿಟಿ ಸಲಹಾ ಸಮಿತಿಗೆ ನಿಕಟಪೂರ್ವ ತುಮಕೂರು ನಗರ ಶಾಸಕರು, ಮಾಜಿ ಸಚಿವರು ಹಾಗೂ ನಿಕಟಪೂರ್ವ ಸಂಸದರನ್ನು ಸೇರಿಸಿ ಸಭೆಗೆ ಆಹ್ವಾನಿಸಿ ಮುಕ್ತ ಚರ್ಚೆ ನಡೆಸಬೇಕು ಎಂದು ಅಭಿಪ್ರಾಯಿಸಿದ ಮಾಜಿ ಶಾಸಕ ಡಾ.ರಫೀಕ್ ಅಹಮದ್, ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪಕ್ಷಾತೀತವಾಗಿ ಒಟ್ಟಿಗೆ ಹೋಗೋಣ. ನಾಗರಿಕರ ಸಲಹೆಗಳು ಈ ವಿಷಯದಲ್ಲಿ ಪ್ರಮುಖವಾಗಿ ಪರಿಗಣಿಸಬೇಕಾಗುತ್ತದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link