ತುಮಕೂರು :
ಡಿ. 22, 27ರಂದು ಎರಡು ಹಂತದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಆಯಾ ತಾಲೂಕು ಕೇಂದ್ರಗಳಲ್ಲಿ ಇಂದು ಬೆಳಿಗ್ಗೆ 8 ರಿಂದ ನಡೆಯಲಿದ್ದು, ಅವಿರೋಧ ಆಯ್ಕೆ, ಚುನಾವಣೆ ಬಹಿಷ್ಕರಿಸಿದ ಎರಡು ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ ಜಿಲ್ಲೆಯ 327 ಗ್ರಾಮ ಪಂಚಾಯಿತಿಗಳ 2661 ಮತ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರವಾಗಲಿದೆ.
ತುಮಕೂರು ತಾಲೂಕಿನ 41 ಗುಬ್ಬಿ-34, ಕುಣಿಗಲ್-36, ತಿಪಟೂರು-25, ತುರುವೇಕೆರೆ-27, ಚಿಕ್ಕನಾಯಕನಹಳ್ಳಿ-27, ಮಧುಗಿರಿ-39, ಶಿರಾ-41, ಕೊರಟಗೆರೆ-24 ಹಾಗೂ ಪಾವಗಡ ತಾಲೂಕಿನ 33 ಗ್ರಾಮ ಪಂಚಾಯಿತಿಗಳು ಸೇರಿದಂತೆ ಒಟ್ಟು ಜಿಲ್ಲೆಯ 327 ಗ್ರಾಮ ಪಂಚಾಯಿತಿಗಳ ಮತ ಎಣಿಕೆಯು ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ.
ಮತ ಎಣಿಕೆಗಾಗಿ ಆಯಾ ತಾಲೂಕು ಡಿ. ಮಸ್ಟರಿಂಗ್ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು, 167 ಕೊಠಡಿಗಳಲ್ಲಿ 762 ಟೇಬಲ್ಗಳಲ್ಲಿ ಎಣಿಕೆ ನಡೆಯಲಿದೆ. ಇದಕ್ಕಾಗಿಯೇ 817 ಮಂದಿ ಎಣಿಕೆ ಮೇಲ್ವಿಚಾರಕರು, 1624 ಮಂದಿ ಸಹಾಯಕರನ್ನು ನೇಮಿಸಲಾಗಿದೆ.
ನಿಷೇಧಾಜ್ಞೆ, 5 ಜನರ ಮೇಲೆ ಗುಂಪು ಸೇರುವಂತಿಲ್ಲ :
ಮತ ಎಣಿಕೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮತ ಎಣಿಕಾ ಕೇಂದ್ರದ ಸುತ್ತಮುತ್ತಲಿನ 500 ಮೀ. ವ್ಯಾಪ್ತಿಯಲ್ಲಿ ಡಿಸೆಂಬರ್ 30ರ ಬೆಳಿಗ್ಗೆ 6 ರಿಂದ ಡಿಸೆಂಬರ್ 31ರ ಬೆಳಿಗ್ಗೆ 8 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆ ಅವಧಿಯಲ್ಲಿ ಐದು ಜನರ ಮೇಲ್ಪಟ್ಟು ಗುಂಪುಗಾರಿಕೆ ಮಾಡುವುದಾಗಲಿ ಇತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಮೆರವಣಿಗೆ, ಅಕ್ರಮ ಗುಂಪು ಸೇರುವಿಕೆ, ಪಟಾಕಿ ಸಿಡಿಸುವಂತಿಲ್ಲ. ಯಾವುದೇ ರೀತಿಯ ಮತೀಯ ಭಾವನೆಗಳನ್ನು ಕೆರಳಿಸುವಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು, ಘೋಷಣೆ ಕೂಗುವುದು ಹಾಗೂ ಭಿತ್ತಿ ಪತ್ರಗಳನ್ನು ಪ್ರಕಟಿಸುವುದು ಮಾಡತಕ್ಕದ್ದಲ್ಲ. ಶಾಂತಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಭಂಗವುಂಟು ಮಾಡುವ ಸುಳ್ಳು ವದಂತಿಗಳನ್ನು ಹಬ್ಬಿಸಬಾರದು, ಸಾರ್ವಜನಿಕ ಪ್ರಾಣ ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟಾಗುವ ರೀತಿಯಲ್ಲಿ ವರ್ತಿಸತಕ್ಕದ್ದಲ್ಲ. ನಿಷೇಧಾಜ್ಞೆ ಅವಧಿಯಲ್ಲಿ ಶವಸಂಸ್ಕಾರ, ಮದುವೆ ಮತ್ತು ಧಾರ್ಮಿಕ ಕಾರ್ಯ ಹೊರತುಪಡಿಸಿ ಯಾವುದೇ ಸಭೆ ಸಮಾರಂಭ ಮತ್ತು ಮೆರವಣಿಗೆ ಮಾಡುವಂತಿಲ್ಲ. ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
ಇವುಗಳನ್ನು ತರುವುದು ನಿಷಿದ್ಧ:
ಮೊಬೈಲ್ಗಳು, ಬ್ಲೇಡ್/ಚಾಕು ಇತ್ಯಾದಿ ಆಯುಧಗಳು, ಪಟಾಕಿ/ಸ್ಪೋಟಕ ವಸ್ತುಗಳು, ಸಿಗರೇಟ್/ಬೀಡಿ, ಬೆಂಕಿ ಪೊಟ್ಟಣ, ಕ್ಯಾಂಡಲ್ಗಳು, ನೀರು, ನೀರಿನ ಬಾಟಲ್, ಇಂಕ್ಪೆನ್, ಜೆಲ್ಪೆನ್, ಇಂಕ್ಪ್ಯಾಡ್, ಆಹಾರ ಪದಾರ್ಥಗಳು, ಹಣ್ಣು ಹಂಪಲುಗಳು, ತರಕಾರಿ ಇತ್ಯಾದಿ ಮತ ಎಣಿಕೆ ಕಾರ್ಯಕ್ಕೆ ಅಡಚಣೆ ಉಂಟು ಮಾಡುವ ಯಾವುದೇ ರೀತಿಯ ಸಾಮಗ್ರಿಗಳನ್ನು ಮತ ಎಣಿಕೆ ಕಟ್ಟಡ/ಕೇಂದ್ರದ ಒಳಗೆ ತರುವುದನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳು/ಮತ ಎಣಿಕೆ ಏಜೆಂಟರುಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿರತಕ್ಕದ್ದು. ಅವರ ಕ್ಷೇತ್ರಕ್ಕೆ ಮೀಸಲಾದ ಕೊಠಡಿ/ಎಣಿಕೆ ಟೇಬಲ್ಗಳಲ್ಲಿ ಮಾತ್ರ ಉಪಸ್ಥಿತರಿರುವುದು. ಅನಗತ್ಯ ತಿರುಗಾಟಕ್ಕೆ ಅವಕಾಶವಿರುವುದಿಲ್ಲ.
ಗ್ರಾಪಂ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ
ಮತ ಎಣಿಕೆ ದಿನವಾದ ಇಂದು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಆದೇಶಿಸಿದ್ದಾರೆ. ಈ ನಿಷೇಧಾವಧಿಯಲ್ಲಿ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಿಸಿ ಮದ್ಯ ಮಾರಾಟ/ ಹಂಚಿಕೆ/ ಶೇಖರಣೆಯನ್ನು ನಿಷೇಧಿಸಿ ಒಣ ದಿನ(ಆಡಿಥಿ ಜಚಿಥಿ) ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಮತ ಎಣಿಕೆ ಸ್ಥಳಗಳು
- ತುಮಕೂರು -ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು
- ಗುಬ್ಬಿ-ಸರ್ಕಾರಿ ಪ್ರಥಮ ದರ್ಜೆ ಕಾಲೇಜು.
- ತಿಪಟೂರು-ಪಲ್ಲಗಟ್ಟಿ ಅಡವಪ್ಪ ಕಾಲೇಜು,
- ತುರುವೇಕೆರೆ-ಸರ್ಕಾರಿ ಪದವಿಪೂರ್ವ ಕಾಲೇಜು,
- ಚಿಕ್ಕನಾಯಕನಹಳ್ಳಿ-ಸರ್ಕಾರಿ ಪದವಿ ಪೂರ್ವ ಕಾಲೇಜು
- ಮಧುಗಿರಿ-ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
- ಶಿರಾ-ಸರ್ಕಾರಿ ಪದವಿಪೂರ್ವ ಕಾಲೇಜು,
- ಪಾವಗಡ-ಸರ್ಕಾರಿ ಪ್ರಥಮದರ್ಜೆ ಕಾಲೇಜು.
- ಕೊರಟಗೆರೆ- ಸರಕಾರಿ ಜೂನಿಯರ್ ಕಾಲೇಜು.
- ಕುಣಿಗಲ್-ಮಹಾತ್ಮಗಾಂಧಿ ಪ.ಪೂ ಕಾಲೇಜು.
ಅಭ್ಯರ್ಥಿಗಳಲ್ಲಿ ಡವಡವ, ಬೆಂಬಲಿಗರಿಂದ ಮೇಕೆ, ಕುರಿ, ಕೋಳಿ ಬಾಜಿ
ಜಿಲ್ಲೆಯ 327 ಗ್ರಾಮ ಪಂಚಾಯ್ತಿಗಳಲ್ಲಿ ಹತ್ತು ಸಾವಿರಕ್ಕೂ ಮೇಲ್ಪಟ್ಟು ಅಭ್ಯರ್ಥಿಗಳು ಕಣದಲ್ಲಿದ್ದು, ಮತ ಎಣಿಕೆ ಕ್ಷಣ ಸಮೀಪಿಸುತ್ತಿರುವಂತೆ ಅಭ್ಯರ್ಥಿಗಳ ಎದೆಯಲ್ಲಿ ಡವಡವ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಎಣಿಕೆ ಮುನ್ನಾದಿನವೇ ಗೆಲುವು ತಮ್ಮದಾಗಲಿ ಎಂದು ದೇಗುಲಗಳಿಗೆ ಭೇಟಿ, ಹರಿಕೆ ಹೊರುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಇನ್ನೂ ಹಳ್ಳಿಹಳ್ಳಿಗಳಲ್ಲಿ ಯಾರು ಗೆಲ್ತಾರೆ, ಸೋಲ್ತಾರೆ ಅನ್ನುವ ಚರ್ಚೆಯೇ ಜೋರಾಗಿದ್ದು, ಮೇಕೆ, ಕುರಿ, ಕೋಳಿ, ನಗದು ಕಟ್ಟಿ ಬಾಜಿ ನಡೆಸುತ್ತಿರುವುದು ಕಂಡುಬಂದಿದೆ. ಗೆದ್ದರೆ ಅಲ್ಲಿ ಪಾರ್ಟಿ, ಇಲ್ಲಿ ಪಾರ್ಟಿ ಕೊಡಿಸ್ಬೇಕು ಎಂಬ ಚರ್ಚೆಯೇ ಹೆಚ್ಚಾಗಿ ಸಾಗುತ್ತಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ