ಗ್ರಾಪಂ ಚುನಾವಣೆ : ತೀವ್ರ ಕುತೂಹಲ ಕೆರಳಿಸಿದ್ದ ಸಿದ್ದಾಪುರ ವೀರಣ್ಣ ಆಯ್ಕೆ

ಮಧುಗಿರಿ : 

      ತಾಲ್ಲೂಕಿನ 39 ಗ್ರಾಪಂಗಳ 600 ಸದಸ್ಯ ಸ್ಥಾನಗಳಿಗೆ 1794 ಅಭ್ಯರ್ಥಿಗಳ ಮತ ಎಣಿಕೆ ಕಾರ್ಯ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಬುಧವಾರ ಬೆಳಗ್ಗೆ 7 ಗಂಟೆಗೆ ಚುನಾವಣಾ ಮತ ಎಣಿಕೆ ಸಿಬ್ಬಂದಿಯನ್ನು ಮತ ಎಣಿಕೆ ಕೇಂದ್ರಕ್ಕೆ ಬಿಡಲಾಯಿತು. ನಂತರ ಅಭ್ಯರ್ಥಿಗಳು ಮತ್ತು ಏಜೆಂಟರನ್ನು ಬಿಡಲಾಯಿತು.

      ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿ ಮೊದಲಿಗೆ 78 ಏಕ ಸದಸ್ಯ ಸ್ಥಾನಗಳು, 124 ದ್ವಿ ಸದಸ್ಯ ಕ್ಷೇತ್ರಗಳು, 67 ಮೂರು ಸದಸ್ಯ ಕ್ಷೇತ್ರಗಳು ಮತ್ತು 22 ನಾಲ್ಕು ಸದಸ್ಯ ಕ್ಷೇತ್ರಗಳಂತೆ ಹಂತ ಹಂತವಾಗಿ 25 ಟೇಬಲ್‍ಗಳಲ್ಲಿ ಗ್ರಾಪಂಗೆ 2 ಕ್ಷೇತ್ರಗಳಂತೆ ಮತ ಎಣಿಕೆ ಕಾರ್ಯ ಕೈಗೊಳ್ಳಲಾಯಿತು.

ಗೆದ್ದ ಮೊದಲ ಅಭ್ಯರ್ಥಿ :

     ತಾಲ್ಲೂಕಿನ ಬ್ಯಾಲ್ಯ ಗ್ರಾಪಂ ವ್ಯಾಪ್ತಿಯ ಹನುಮಂತಪುರ ಕ್ಷೇತ್ರದ ಪಿಎಲ್‍ಡಿ ಬ್ಯಾಂಕ್ ಉಪಾಧ್ಯಕ್ಷ ಬೈರಪ್ಪನವರ ಪತ್ನಿ ಗಂಗರತ್ನಮ್ಮನವರನ್ನು ಪ್ರಥಮ ವಿಜೇತೆಯನ್ನಾಗಿ ಘೋಷಿಸಲಾಯಿತು.

     ತೀವ್ರ ಕುತೂಹಲ ಕೆರಳಿಸಿದ್ದ ಸಿದ್ದಾಪುರ ಗ್ರಾಪಂ ಕ್ಷೇತ್ರದ ವ್ಯಾಪ್ತಿಯ ಕಸಬಾ ವಿಎಸ್‍ಎಸ್‍ಎನ್ ಅಧ್ಯಕ್ಷ ವೀರಣ್ಣನವರನ್ನು ಸೋಲಿಸಲು ಪಟ್ಟಣದ ಕೆಲ ರಾಜಕೀಯ ಮುಖಂಡರು ಟೊಂಕ ಕಟ್ಟಿದ್ದು, ಇವೆಲ್ಲವನ್ನೂ ಮೆಟ್ಟಿ ನಿಂತ ವೀರಣ್ಣ 300 ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದು, ಅದೇ ರೀತಿ ಸಿದ್ದಾಪುರ ಗ್ರಾಪಂ ಮಾಜಿ ಅಧ್ಯಕ್ಷೆಯ ಪತಿ ಅಶ್ವತ್ಥಪ್ಪ ಮತ್ತು ಪದ್ಮಾವತಿ ಕೃಷ್ಣಮೂರ್ತಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದು ಪದ್ಮಾವತಿ ಕೃಷ್ಣಮೂರ್ತಿ 480 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವಿನ ಕೇಕೆ ಹಾಕಿದರು. ಗೆದ್ದ ಇಬ್ಬರೂ ಅಭ್ಯರ್ಥಿಗಳು ಕಾಂಗ್ರೆಸ್ ಬೆಂಬಲಿತರಾಗಿರುವುದು ವಿಶೇಷ.

5 ಬಾರಿ ಜಯ ಗಳಿಸಿದ ಕುಟುಂಬ :

      ಇನ್ನು ಚಂದ್ರಗಿರಿ ಗ್ರಾಪಂ ಸೋದೇನಹಳ್ಳಿ ಕ್ಷೇತ್ರದಿಂದ ಸತತವಾಗಿ 5 ಬಾರಿ ಒಂದೇ ಕುಟುಂಬದ ಅಭ್ಯರ್ಥಿಗಳು ಆಯ್ಕೆಯಾಗಿರುವುದು ವಿಶೇಷವಾಗಿದ್ದು, ಗ್ರಾ.ಪಂ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ್ 3 ಬಾರಿ ಮತ್ತು ಇವರ ಪತ್ನಿ ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ 2 ಬಾರಿ ಸಾಮಾನ್ಯ ಕ್ಷೇತ್ರದಿಂದ ಗೆಲುವು ಸಾಧಿಸಿರುವುದು ವಿಶೇಷ.

      ಡಿ.ವಿ. ಹಳ್ಳಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಆರ್.ಟಿ.ಪ್ರಭು, ಗುತ್ತಿಗೆದಾರ ಡಿ.ಹೆಚ್. ನಾಗರಾಜುರವರ ಪತ್ನಿ ಸರೋಜಮ್ಮ ದೊಡ್ಡಹಟ್ಟಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಪುರವರ ಗ್ರಾ.ಪಂ ಸಂಕಾಪುರ ಕ್ಷೇತ್ರದಿಂದ ಯುವಕ ದಿಲೀಪ್ ಕುಮಾರ್ ಆಯ್ಕೆಯಾಗಿದ್ದು, ಈ ಹಿಂದೆ ಇವರ ತಂದೆ, ತಾಯಿ ಸಹ ಗ್ರಾ.ಪಂ ಸದಸ್ಯರಾಗಿದ್ದರು.

      ಕಸಬಾ ವ್ಯಾಪ್ತಿಯ ಮರುವೇಕೆರೆ ಗ್ರಾಪಂ ತವಕದಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಾಗಭೂಷಣ್ ಪ್ರಥಮ ಬಾರಿಗೆ ಆಯ್ಕೆಯಾಗಿದ್ದು, ಇವರ ತಂದೆ ಬಿ.ವಿ. ನಾಗರಾಜಪ್ಪ 35 ವರ್ಷಗಳ ಕಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಇವರ ಸಹೋದರ ಬಿ. ನಾಗೇಶ್ ಬಾಬು ತುಮುಲ್ ಮಾಜಿ ಅಧ್ಯಕ್ಷರಾಗಿದ್ದು, ಈಗ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದಾರೆ.ಪುರವರ ಗ್ರಾಪಂ ಮಾಜಿ ಅಧ್ಯಕ್ಷೆ ಕಮಲ ರವಿಕುಮಾರ್ ಪುನರಾಯ್ಕೆಯಾಗಿದ್ದಾರೆ. ಮಧುಗಿರಿ ಪುರಸಭಾಧ್ಯಕ್ಷ ತಿಮ್ಮರಾಜು ಪುತ್ರ ಗಿರೀಶ್ ಚಿನಕವಜ್ರ ಗ್ರಾಪಂನ ಕಮ್ಮನಕೋಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ತಾ.ಪಂ ಮಾಜಿ ಅಧ್ಯಕ್ಷ ಕೆ. ಮಹಲಿಂಗಯ್ಯನವರ ಪುತ್ರ ಮಲ್ಲೇಶ್ ಪ್ರಥಮ ಬಾರಿಗೆ ಮಾದೇನಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

     ಗರಣಿ ಗ್ರಾಪಂ ವ್ಯಾಪ್ತಿಯ ಚೀಲನಹಳ್ಳಿ ಮತ್ತು ಕಲುವೀರನಹಳ್ಳಿ ಕ್ಷೇತ್ರದಿಂದ ಯುವಕ ಜೆ. ಶಂಕರರಾಜು ಪ್ರಥಮ ಬಾರಿಗೆ ಗ್ರಾಪಂ ಪ್ರವೇಶಿಸಿದ್ದಾರೆ.  ದೊಡ್ಡಮಾಲೂರು ಗ್ರಾಪಂ ಕ್ಷೇತ್ರವೊಂದರಲ್ಲಿ ಲಕ್ಷ್ಮಮ್ಮ ಮತ್ತು ಸಂಜೀವಮ್ಮ ತಲಾ 350 ಮತಗಳನ್ನು ಪಡೆದಿದ್ದು, ಸಮಬಲದ ಫಲಿತಾಂಶ ಕಂಡು ಬಂದಿದ್ದು, ಲಾಟರಿ ಮೂಲಕ ಅಭ್ಯರ್ಥಿಯ ಆಯ್ಕೆ ನಡೆಯಬೇಕಿದೆ.

1 ಮತದ ಅಂತರದಿಂದ ಆಯ್ಕೆ :

      ಬೇಡತ್ತೂರು ಗ್ರಾಪಂ ಚಂದ್ರಬಾವಿ ಕ್ಷೇತ್ರದ ಗೌರಮ್ಮ, ಚಿಕ್ಕದಾಳವಟ್ಟ ಗ್ರಾಪಂ ಕ್ಷೇತ್ರದ ನರಸಪ್ಪ 1 ಮತದ ಅಂತರದಿಂದ ಆಯ್ಕೆಯಾಗಿದ್ದು, ಈ ಕ್ಷೇತ್ರದ ಫಲಿತಾಂಶದ ಎಣಿಕೆಯಲ್ಲಿ ಅಂಚೆ ಮತ ಪತ್ರ ಪರಿಗಣಿಸಿಲ್ಲ ಎಂದು ಪರಾಜಿತ ಅಭ್ಯರ್ಥಿ ತಹಸೀಲ್ದಾರ್‍ಗೆ ಮನವಿ ಪತ್ರ ನೀಡಿದ್ದು, ಎರಡು ಗಂಟೆಗಳ ಕಾಲ ಕಾಲಾವಕಾಶ ನೀಡುವಂತೆ ಚುನಾವಣಾಧಿಕಾರಿಗಳು ಸಮಯಾವಕಾಶ ಕೋರಿದ್ದಾರೆ ಎನ್ನಲಾಗುತ್ತಿದೆ.

      ಸಂಜೆ ವೇಳೆಗೆ 600 ಕ್ಷೇತ್ರಗಳಲ್ಲಿ ಮೂಕ್ಕಾಲು ಭಾಗ ಮಾತ್ರ ಫಲಿತಾಂಶ ಪ್ರಕಟವಾಗಿತ್ತು. ಇನ್ನುಳಿದ ಕ್ಷೇತ್ರಗಳಿಗೆ ರಾತ್ರಿ 10:30ರ ನಂತರ ಪೂರ್ಣ ಪ್ರಮಾಣದ ಫಲಿತಾಂಶ ದೊರೆಯಲಿದೆ. ಮತಗಟ್ಟೆ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಕೆ. ರಾಕೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಮತಗಟ್ಟೆಯ ಸುತ್ತ ಬಿಗಿ ಪೊಲಿಸ್ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಲಾಗಿತ್ತು.

     ಅತಿ ಹೆಚ್ಚಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಮಾಜಿ ಶಾಸಕ ಕೆ.ಎನ್.ರಾಜಣ್ಣ, ರಾಜೇಂದ್ರ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರನ್ನು ಮಧುಗಿರಿಯ ಸ್ವಗೃಹದಲ್ಲಿ ಭೇಟಿ ಮಾಡಿ, ಸಾಮಾಜಿಕ ಜಾಲ ತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡು ರಾಜಣ್ಣನವರನ್ನು ಬೆಂಬಲಿಸುವ ದೃಶ್ಯಗಳು ಕಂಡು ಬಂದವು.

      ಉಪವಿಭಾಗಾಧಿಕಾರಿ ಸೋಮಣ್ಣ ಕಡಕೋಳ, ತಹಸೀಲ್ದಾರ್ ಡಾ.ಜಿ.ವಿಶ್ವನಾಥ್, ಡಿ.ವೈಎಸ್.ಪಿ ಎಂ.ಪ್ರವೀಣ್, ಸಿ.ಪಿ.ಐ ಸರ್ದಾರ್, ಆಹಾರ ಶಿರಸ್ತೇದಾರ್ ಗಣೇಶ್, ಬಡವನಹಳ್ಳಿ ಪಿ.ಐ ಹನುಮಂತರಾಯಪ್ಪ, ಪಿಎಸ್‍ಐ ಪಾಲಾಕ್ಷ ಪ್ರಭು ಮತ್ತು ಸಿಬ್ಬಂದಿಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link