ಶಿರಾ :
ನಗರದ ಸರ್ಕಾರಿ ಪ್ರ.ದ. ಕಾಲೇಜಿನ ಆವರಣವಷ್ಟೇ ಅಲ್ಲದೆ ಶಿರಾ-ಅಮರಾಪುರ ರಸ್ತೆಯ ಉದ್ದಕ್ಕೂ ಹಾಗೂ ಇಡೀ ಜ್ಯೋತಿ ನಗರ ಬಡಾವಣೆಯ ತುಂಬಲೂ ಬುಧವಾರ ಎತ್ತ ನೋಡಿದರತ್ತ ಜನವೋ ಜನ. ಕೋವಿಡ್ ಭಯವನ್ನೂ ಮರೆತು ಗುಂಪು ಗುಂಪಾಗಿ ಸೇರಿದ್ದ ಜನರಿಗೆ ಮತ ಎಣಿಕೆಯದ್ದೆ ಹೃದಯ ಬಡಿತದ ತರಾತುರಿ ಇದ್ದಿತೇ ಹೊರತು ಕೋವಿಡ್ ಭಯವಂತೂ ಯಾರಲ್ಲೂ ಇದ್ದಂತೆ ಕಾಣಲೆ ಇಲ್ಲ.
ಎರಡನೆ ಹಂತದ ಗ್ರಾ.ಪಂ. ಚುನಾವಣೆಯ ಹಿನ್ನೆಲೆಯಲ್ಲಿ ತಾಲ್ಲೂಕಿನ 42 ಗ್ರಾಮ ಪಂಚಾಯ್ತಿಗಳ ಪೈಕಿ 41 ಗ್ರಾಪಂಗಳ 660 ಸ್ಥಾನಗಳಿಗೆ ಡಿ.27 ರಂದು ಚುನಾವಣೆ ನಡೆದಿದ್ದು, 1921 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತ ಎಣಿಕೆಯನ್ನು ಡಿ.30 ರಂದು ನಗರದ ಸರ್ಕಾರಿ ಪ್ರ.ದ. ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಬೆಳಗ್ಗೆ 8 ಗಂಟೆಗೆ ಮತದಾನ ಆರಂಭಗೊಳ್ಳುವ ಮುನ್ನವೆ ಕಾಲೇಜಿನ ಪ್ರಾಂಗಣಕ್ಕೆ ಚುನಾವಣೆಗೆ ನಿಂತ ಅಭ್ಯರ್ಥಿಗಳು, ಅಭ್ಯರ್ಥಿ ಪರ ಏಜೆಂಟರು ಹಾಗೂ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ತಾಲ್ಲೂಕು ಆಡಳಿತ ಎರಡು ದಿನ ಮುಂಚಿತವಾಗಿಯೆ ಮತ ಎಣಿಕೆ ಯಶಸ್ವಿಗೊಳಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸಿತ್ತಾದರೂ ಹಂತ ಹಂತವಾಗಿ ಮತ ಎಣಿಕೆಯ ಕೇಂದ್ರಕ್ಕೆ ಅಭ್ಯರ್ಥಿಗಳನ್ನು ಹಾಗೂ ಏಜೆಂಟ್ಗಳನ್ನು ಒಳ ಕಳಿಸುವ ವ್ಯವಸ್ಥೆಯಲ್ಲಿ ಮಾತ್ರ ಎಡವಿತ್ತು.
ಮತ ಎಣಿಕಾ ಕೇಂದ್ರದ ಹೊರ ಭಾಗದಲ್ಲಿ ಜನ ಜಮಾಯಿಸಿ ಒಳ ಹೋಗಲು ತವಕ ಪಡುತ್ತಿದ್ದರು. ಆರಕ್ಷಕ ಸಿಬ್ಬಂದಿ ಜನರ ಗುಂಪನ್ನು ಚದುರಿಸುವ ಪ್ರಯತ್ನವನ್ನೂ ಮಾಡಿದರು. ವಿವಿಧ ಸುತ್ತುಗಳಲ್ಲಿ ಮತ ಎಣಿಕೆ ಆರಂಭಗೊಂಡಾಗ ಅಭ್ಯರ್ಥಿಗಳು ತಮ್ಮ ಸರದಿಯ ಸುತ್ತು ಬಂದಾಗಲೆ ಎಣಿಕಾ ಕೇಂದ್ರದೊಳಗೆ ಹೋಗಲು ಹರ ಸಾಹಸ ಪಡಬೇಕಾಯಿತು.
ಬಹುತೇಕ ಆರಕ್ಷಕ ಸಿಬ್ಬಂದಿ ಚುನಾವಣಾಧಿಕಾರಿಗಳು ಕೈಗೊಂಡಿದ್ದ ವ್ಯವಸ್ಥೆಯನ್ನು ಶಪಿಸಿಕೊಂಡಿದ್ದೂ ಉಂಟು. ಮೊದಲ ಸುತ್ತಿನ ಮತ ಎಣಿಕೆ ಆರಂಭಗೊಂಡಾಗಲಂತೂ ಸರದಿಯಲ್ಲಿದ್ದವರು ಕೂಡ ಒಳ ಹೋಗಲಾಗದೆ ಪೊಲೀಸರು ಲಾಠಿ ರುಚಿಗೂ ತುತ್ತಾಗಬೇಕಾಯಿತು.
ಈ ಎಲ್ಲಾ ಅವ್ಯವಸ್ಥೆಗಳ ನಡುವೆಯೂ ಮತ ಎಣಿಕೆಯು ಆರಂಭಗೊಂಡಾಗ ಗೆದ್ದ ಅಭ್ಯರ್ಥಿಗಳು ಜೈಕಾರ ಹಾಕಿಕೊಂಡು ಮೆರವಣಿಗೆಯಲ್ಲಿ ತೆರಳಿದರೆ ಪರಾಜಯಗೊಂಡವರು, ಹಣೆ ಬರಹ ಶಪಿಸಿಕೊಂಡು ತೆರಳುತ್ತಿದ್ದರು. ಮತ್ತೂ ಕೆಲವರು ಹಣ, ಹೆಂಡ ಸುರಿದರೂ ಗ್ರಾಮದಲ್ಲಿ ಕೆಲವರು ಮೋಸ ಮಾಡಿದರೆಂದು ಶಪಿಸಿಕೊಳ್ಳುತ್ತಾ ಹೋಗುವುದು ಸಾಮಾನ್ಯವಾಗಿತ್ತು.
ಎರಡು ಮೂರು ಮತಗಳಲ್ಲಿ ಪರಾಜಿತಗೊಂಡವರಂತೂ ಮೈ ಮೇಲಿನ ಬೆವರಿನ ನೀರನ್ನು ಇಳಿಸಿಕೊಂಡು ಹೊರ ಬಂದರೆ ಎರಡು ಮೂರು ಮತಗಳಲ್ಲಿ ಸೋತವರು ಸಪ್ಪೆ ಮೋರೆ ಹಾಕಿಕೊಂಡು ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ತಾಲ್ಲೂಕಿನ ತಡಕಲೂರು, ಹುಲಿಕುಂಟೆ, ಬರಗೂರು, ಬೂವನಹಳ್ಳಿ, ಹೆಂದೊರೆ, ನಾದೂರು, ಹಂದಿಕುಂಟೆ, ಬಂದಕುಂಟೆ, ಮದಲೂರು, ಕೊಟ್ಟ, ಮಾಗೋಡು, ಕಳ್ಳಂಬೆಳ್ಳ, ಸೀಬಿ ಸೇರಿದಂತೆ ಬಹುತೇಕ ಪಂಚಾಯ್ತಿಗಳ ಫಲಿತಾಂಶ ಮೂರು ಸುತ್ತುಗಳಲ್ಲಿ ಹೊರ ಬಂದಾಗ ಸಂಜೆಯೇ ಆಗಿತ್ತು. ಉಳಿದ ಅನೇಕ ಪಂಚಾಯ್ತಿಗಳ ಮತ ಎಣಿಕೆ ತಡ ರಾತ್ರಿಯವರೆಗೂ ನಡೆಯುತ್ತಲೇ ಇತ್ತು.
ಲಾಟರಿಯಲ್ಲಿ ಆಯ್ಕೆ :
ತಾಲ್ಲೂಕಿನ ಎಂದೊರೆ ಗ್ರಾಮ ಪಂಚಾಯ್ತಿಯ ಸಿದ್ಧನಹಳ್ಳಿ ಗ್ರಾಮದ ಮತ ಪೆಟ್ಟಿಗೆಯನ್ನು ತೆರೆದು ಮತ ಎಣಿಕೆ ಮಾಡಿದ ನಂತರ ಸದರಿ ಬ್ಲಾಕ್ಗೆ ಸ್ಪರ್ಧಿಸಿದ್ದ ಸುಧಾ ಮತ್ತು ಗಿರಿಜಮ್ಮ ಎಂಬ ಅಭ್ಯರ್ಥಿಗಳಿಬ್ಬರೂ ತಲಾ 283 ಮತಗಳನ್ನು ಪಡೆದಾಗ ಇಬ್ಬರಿಗೂ ಸಮನಾದ ಮತಗಳು ಲಭಿಸಿದ್ದರಿಂದ ಇಬ್ಬರ ಹೆಸರನ್ನು ಚೀಟಿಯಲ್ಲಿ ಬರೆದು ಲಾಟರಿ ಹಾಕಲಾಯಿತು. ಗಿರಿಜಮ್ಮ ಲಾಟರಿ ಮೂಲಕ ಆಯ್ಕೆಗೊಂಡರು.
ಪತ್ರಕರ್ತರ ಕಡೆಗಣನೆ :
ಈವರೆಗೆ ಶಿರಾ ತಾಲ್ಲೂಕಿನಲ್ಲಿ ನಡೆದ ಗ್ರಾ.ಪಂ, ತಾ.ಪಂ. ಹಾಗೂ ಜಿ.ಪಂ. ಸ್ಥಳೀಯ ಚುನಾವಣೆಯ ಮತ ಎಣಿಕೆಯ ಸಂದರ್ಭದಲ್ಲಿ ಪತ್ರಕರ್ತರಿಗೆ ಮತ ಎಣಿಕೆಯ ಕೇಂದ್ರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಗ್ರಾ.ಪಂ. ಚುನಾವಣೆಯಲ್ಲಿ ಪತ್ರಕರ್ತರಿಗೆ ಚುನಾವಣಾ ಅಧಿಕಾರಿಗಳು ಪಾಸ್ ವ್ಯವಸ್ಥೆ ಕಲ್ಪಿಸುವ ಗೋಜಿಗೂ ಹೋಗಲಿಲ್ಲ.
ಕೊನೆಯ ಕ್ಷಣದಲ್ಲಿ ಪತ್ರಕರ್ತರ ಸಂಘದ ಗುರುತಿನ ಚೀಟಿಗೆ ಅವಕಾಶ ಕಲ್ಪಿಸಿ ಎಣಿಕಾ ಕೇಂದ್ರದ ಒಳಗೆ ಶಾಮಿಯಾನದಡಿ ಕೂರುವ ವ್ಯವಸ್ಥೆ ಕಲ್ಪಿಸಲಾಗಿತ್ತಾದರೂ, ಪತ್ರಕರ್ತರು ಕೂರುವ ಕುರ್ಚಿಗಳನ್ನೂ ಕೂಡ ಒಂದೂ ಬಿಡದೆ ಚುನಾವಣಾ ಸಿಬ್ಬಂದಿ ಒಳಗೆ ಹೊತ್ತೊಯ್ದು ಪತ್ರಕರ್ತರನ್ನು ಅವಮಾನಿಸುವ ಕೆಲಸವನ್ನು ಮಾಡಿದರು.
ಪತ್ರಕರ್ತರ ಗ್ಯಾಲರಿಯಲ್ಲಿ ಕೂತಿದ್ದ ಪತ್ರಕರ್ತರಿಗೆ ಚುನಾವಣಾ ಸಿಬ್ಬಂದಿ ಮಾಹಿತಿ ನೀಡುವ ಗೋಜಿಗೂ ಹೋಗದ ಪರಿಣಾಮ ಅನೇಕ ಪತ್ರಕರ್ತರು ಎಣಿಕಾ ಕೇಂದ್ರದ ಹೊರಗಡೆಯೇ ಇದ್ದು ಕ್ಷಣ ಕ್ಷಣದ ಮಾಹಿತಿ ಪಡೆಯುವುದು ಅನಿವಾರ್ಯವಾಗಿತ್ತು. ಸ್ಥಳೀಯ ತಾಲ್ಲೂಕು ಆಡಳಿತ ಪತ್ರಕರ್ತರ ಜವಾಬ್ದಾರಿಯನ್ನೂ ಕೂಡ ಮರೆತಂತೆ ಕಾಣುತ್ತಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ