ಚಿಕ್ಕನಾಯಕನಹಳ್ಳಿ :
ತಾಲ್ಲೂಕಿನಲ್ಲಿ ಶಾಲಾ-ಕಾಲೇಜು ಆರಂಭಗೊಳ್ಳುತ್ತಿದ್ದಂತೆ ಮಕ್ಕಳು ಉತ್ಸಾಹದಿಂದಲೇ ತರಗತಿಗಳಿಗೆ ಹಾಜರಾದರು. ಶಾಲೆಗಳ ಬಗ್ಗೆ ವಸ್ತುಸ್ಥಿತಿ ಅರಿಯಲು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಾಲ್ಲೂಕಿನ ಜೆ.ಸಿ.ಪುರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಶಿಕ್ಷಕರು ಮಕ್ಕಳಿಗೆ ಮಾಸ್ಕ್ ಧರಿಸುವ ಬಗ್ಗೆ, ಸಾಮಾಜಿಕ ಅಂತರ ಕಾಪಾಡುವ ಬಗ್ಗೆ ತಿಳಿ ಹೇಳಿದರು. ಮಕ್ಕಳ ಹಾಜರಾತಿ, ತರಗತಿಗಳ ಬಗ್ಗೆ ಮಾಹಿತಿ ಪಡೆದು ತೆರಳಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ತೇಜಸ್ವಿನಿ, ಬಿಇಓ ಕಾತ್ಯಾಯಿನಿ ಇದ್ದರು.
ಖುಷಿಯಿಂದ ಹಾಜರಾದ ಮಕ್ಕಳು :
ಇಷ್ಟು ದಿನಗಳ ಕಾಲ ಶಾಲೆ-ಕಾಲೇಜುಗಳಿಲ್ಲದೆ ಮನೆಯಲ್ಲಿ ಕೂತು ಸಮಯ ಕಳೆಯುತ್ತಿದ್ದ ವಿದ್ಯಾರ್ಥಿಗಳು ಶಾಲಾರಂಭದ ಮೊದಲ ದಿನವೇ ಹೊಸ ವರ್ಷಾಚಾರಣೆಯನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡು ಸಂತಸದಿಂದ ಶಾಲೆ ಪ್ರವೇಶಿಸಿದ್ದು ತಾಲ್ಲೂಕಿನಲ್ಲಿ ಕಂಡುಬಂದಿತು.
ಶಾಲೆಗಳಲ್ಲಿ ಶಿಕ್ಷಕರೇ ಮುಂದೆ ನಿಂತು ಶಾಲೆಗೆ ಬರುವ ಪ್ರತಿಯೊಬ್ಬರನ್ನೂ ಸ್ಯಾನಿಟೈಸರ್ ಮಾಡುತ್ತಿದ್ದರು, ಮಕ್ಕಳಿಗೆ ಮಾಸ್ಕ್ ಧರಿಸುವಂತೆ, ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡುವಂತೆ ಸೂಕ್ಷ್ಮವಾಗಿ ತಿಳಿ ಹೇಳುತ್ತಿರುವುದು ಪಟ್ಟಣದ ಶಾಲೆಗಳಲ್ಲಿ ಕಾಣಲಾಯಿತು.
ಕೊರೊನಾ ಕಾಟದಿಂದ 9 ತಿಂಗಳುಗಳ ಕಾಲ ಪ್ರತಿಯೊಬ್ಬರೂ ನರಳಿದ್ದರು ಅದರಲ್ಲೂ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಲ್ಲದೆ ಶಿಕ್ಷಕರ, ಶಾಲಾ ಸ್ನೇಹಿತರ ಸಂಪರ್ಕ ದೊರೆಯದೆ ಯಾವುದೇ ವಿಷಯಗಳನ್ನು ಚರ್ಚಿಸಲು ಅನುಮಾನವಿದ್ದ ಪ್ರಶ್ನೆಗಳಿಗೆ ಯಾರ ಬಳಿಯೂ ಮಾಹಿತಿ ದೊರೆಯದೆ ನರಳಿದ್ದರು, ಈಗ ಶಾಲೆ ತೆರೆದಿದೆ ವಿದ್ಯಾರ್ಥಿಗಳ ಸಮಸ್ಯೆಯೂ ಸಣ್ಣದಾಗಿ ಬಗೆಹರಿದಿದೆ.
ಹೊಸ ಉಡುಗೆಯಲ್ಲಿ ಬಂದಿದ್ದರು:
ಇನ್ನೂ ವಿದ್ಯಾರ್ಥಿಗಳು ಶಾಲೆ ಆರಂಭ ಎಂದು ಹೊಸ ವರ್ಷಾಚರಣೆ ಜೊತೆಗೆ ಹೊಸ ಉಡುಗೆ, ತೊಡುಗೆ ಬಟ್ಟೆಗಳನ್ನು ಧರಿಸಿಕೊಂಡು ಶಾಲಾ, ಕಾಲೇಜುಗಳಿಗೆ ತೆರಳಿದರು. ಶಿಕ್ಷಕರು ಶಾಲಾ-ಕಾಲೇಜಿಗೆ ಬರುವ ಎಲ್ಲರಲ್ಲೂ ಕೋವಿಡ್-19 ಬಗ್ಗೆ ಅರಿವು ಮೂಡಿಸುತ್ತಿದ್ದರು.
ಶಾಲೆಗಳು ಆರಂಭವಾದ್ದರಿಂದ ಮಕ್ಕಳು ಖುಷಿಯಿಂದಲೇ ಶಾಲಾ ತರಗತಿಗಳತ್ತ ತೆರಳಿದರು, ಪೋಷಕರು ತಮ್ಮ ಮಕ್ಕಳಿಗೆ ಶಾಲೆಗೆ ಕಳುಹಿಸಿ ಅವರ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುತ್ತಿದ್ದದ್ದು ಕಂಡುಬಂದಿತು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿಯೂ ಕಾಲೇಜು ವಿದ್ಯಾರ್ಥಿಗಳು ಸಾಮಾಜಿಕ ಅಂತರ ಪಾಲಿಸಿಕೊಂಡು ತರಗತಿ ಕೊಠಡಿಗಳಿಗೆ ಪ್ರವೇಶಿಸಿದರು, ಈ ವೇಳೆ ಕಡ್ಡಾಯ ಮಾಸ್ಕ್ ಧರಿಸುವಂತೆ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ತಿಳಿಸಿದರು.
