ಗುಬ್ಬಿ : ಮುಚ್ಚಿದ್ದ ಶಾಲೆಗಳನ್ನು ಮರು ಆರಂಭಿಸಲು ಕ್ರಮ

 ಗುಬ್ಬಿ :

      ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಯಾದ ವಿದ್ಯಾಗಮ ಯೋಜನೆಯಿಂದ ಪ್ರೇರಿತರಾದ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು ತಮ್ಮೂರಿನ ಶಾಲೆಗೆ ದಾಖಲಿಸಿ ಶಿಕ್ಷಣ ಕೊಡಿಸಬೇಕೆಂಬ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ಮಕ್ಕಳಿಲ್ಲದೆ ತಾತ್ಕಾಲಿಕವಾಗಿ ಮುಚ್ಚಿದ್ದ ಸರ್ಕಾರಿ ಶಾಲೆಗಳನ್ನು ಮತ್ತೆ ಪ್ರಾರಂಭಿಸಲು ಪೋಷಕರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ತಾಲ್ಲೂಕಿನ ಜನಕದೇವನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗೊಲ್ಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ತಿಮ್ಲಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರಗೆ ಪ್ರಸಕ್ತ ಸಾಲಿನಿಂದ ಪ್ರಾರಂಭಿಸಲು ಅನುಮತಿ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ತಿಳಿಸಿದರು.

      ತಾಲ್ಲೂಕಿನ ಅಮ್ಮನಘಟ್ಟ ಸರ್ಕಾರಿ ಪ್ರೌಢಶಾಲೆಯನ್ನು ತುಮಕೂರು ವಿಶ್ವ ವಿದ್ಯಾಲಯ ಗುಬ್ಬಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಶೈಕ್ಷಣಿಕವಾಗಿ ಮತ್ತು ಬೌದ್ಧಿಕವಾಗಿ ಅಭಿವೃದ್ಧಿಪಡಿಸಲು ದತ್ತು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಕಾಲೇಜಿನ ಎನ್.ಎಸ್.ಎಸ್.ಅಧಿಕಾರಿಗಳ ತಂಡದೊಂದಿಗೆ ಪೂರ್ವಭಾವಿಯಾಗಿ ವೀಕ್ಷಕಿಸಲು ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ವಿದ್ಯಾಗಮ ಯೋಜನೆ ಯಶಸ್ವಿಯಾಗಿ ನಡೆಯುತ್ತಿದ್ದು ಈಗಾಗಲೇ ತಾಲ್ಲೂಕಿನ ಹಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ, ಅಲ್ಲದೆ ಇಲಖೆಯ ನಿರ್ದೇಶನದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮಿಂಚು ಸಂಚಾರಿ ಕಾರ್ಯಕ್ರಮದಂತೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಭೇಟಿ ನೀಡಿ ಶಾಲೆಗಳಲ್ಲಿನ ಶೈಕ್ಷಣಿಕ ಪ್ರಗತಿ, ಕೋವಿಡ್ ನಿಯಮ ಪಾಲನೆ ಸೇರಿದಂತೆ ಶಾಲೆಗಳ ಸ್ವಚ್ಚತೆ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಶಾಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.

      ಈಗಾಗಲೇ ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರಿಗೆ ಕೊರೊನಾ ಪರೀಕ್ಷೆ ನಡೆಸಿ ವರದಿ ಸಂಗ್ರಹಿಸಲಾಗಿದೆ ಪಾಸಿಟೀವ್ ಬಂದ ಶಿಕ್ಷಕರನ್ನು ಐಸೋಲೇಷನ್ ಮಾಡಲಾಗಿದೆ. ಪ್ರತಿ ಶಾಲೆಯಲ್ಲಿ ಕೋವಿಡ್ ನಿಯಮಾವಳಿಯಂತೆ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನ್, ಸೋಪಿನಿಂದ ಕೈತೊಳೆಯುವ ವ್ಯವಸ್ಥೆ ಮತ್ತು ಮಕ್ಕಳಿಗೆ ಕುಡಿಯಲು ಬಿಸಿನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಈಗಾಗಲೆ ಎಲ್ಲಾ ಪೋಷಕರಿಂದ ಒಪ್ಪಿಗೆ ಪತ್ರ ಪಡೆಯಲಾಗಿದ್ದು ಶಾಲೆಯ ಪೋಷಕರು ಮತ್ತು ಎಸ್.ಡಿ.ಎಂ.ಸಿ ಸಭೆಗಳನ್ನು ನಡೆಸಿ ದಾಖಲೆ ಇಡಲಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳಿಗೆ ಹಾಜರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಯಾವುದೆ ಭಯವಿಲ್ಲದೆ ಶಾಲೆಗಳಿಗೆ ತೆರಳಬಹುದಾಗಿದ್ದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರದ ನಿರ್ಧೇಶನದಂತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಕಾಲೇಜಿನ ಎಸ್.ಎಸ್.ಎಸ್ ಅಧಿಕಾರಿಗಳಾದ ಅನಿತಾಲಕ್ಷ್ಮೀ, ಲಿಂಗರಾಜು, ಮುಖ್ಯ ಶಿಕ್ಷಕ ಎಸ್.ಆರ್.ರುದ್ರೇಶ್, ಅಧ್ಯಾಪಕರಾದ ಗಿರಿರಾಜು, ನಟರಾಜು, ಮಹಾಲಿಂಗಯ್ಯ, ಸಂಜೀವಯ್ಯ, ಪ್ರಸನ್ನ, ಚೇತನ, ಜಯಶ್ರೀ ಯಂಡೀಗೇರಿ, ವಾಣಿ ಮುಂತಾದವರು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link