ತುಮಕೂರು : ಬಿಜೆಪಿಯ ಜನ ಸೇವಕ ಸಮಾವೇಶದಲ್ಲಿ ಸಚಿವರ ದಂಡು

ತುಮಕೂರು: 

      ಗ್ರಾಮ ಪಂಚಾಯ್ತಿಗಳಿಗೆ ಆಯ್ಕೆಯಾಗಿರುವ ಸದಸ್ಯರು ದ್ವೇಷ, ಜಿದ್ದು ಮರೆತು ಎಲ್ಲರಳಗೊಂದಾಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು. ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಲು ನೆರವಾಗಬೇಕು. ಸದಸ್ಯರ ಸೇವಾಕಾರ್ಯಗಳಿಗೆ ಬಿಜೆಪಿ ಶಾಸಕರು, ಮುಖಂಡರ ಸಹಕಾರ ಇದ್ದೇಇರುತ್ತದೆ. ಗ್ರಾಮಗಳಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬಿ ಪಂಚಾಯ್ತಿಯಿಂದ ಪಾರ್ಲಿಮೆಂಟ್‍ವರೆಗೂ ಬಿಜೆಪಿ ಅಧಿಕಾರ ಹಿಡಿಯಲು ಸಹಕರಿಸಬೇಕು ಎಂದು ರಾಜ್ಯ ಸರ್ಕಾರದ ವಿವಿಧ ಸಚಿವರು, ಬಿಜೆಪಿ ಮುಖಂಡರು ನೂತನ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಸಲಹೆ ಮಾಡಿದರು.

      ಜಿಲ್ಲಾ ಬಿಜೆಪಿವತಿಯಿಂದ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯರನ್ನು ಅಭಿನಂದಿಸುವ ಜನ ಸೇವಕ ಸಮಾವೇಶದಲ್ಲಿ ಮಾತನಾಡಿದರು.

      ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಮಾತನಾಡಿ, ಗ್ರಾಮ ಪಂಚಾಯ್ತಿ ಸದಸ್ಯರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು, ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರಯತ್ನ ಮಾಡಬಾರದು. ಜನರ ವಿಶ್ವಾಸ ಗಳಿಸಿ, ಅವರಿಗೆ ಸರ್ಕಾರದಿಂದ ಆಗಬೇಕಾದ ಕೆಲಸ-ಕಾರ್ಯಗಳು, ಯೋಜನೆಗಳು ದೊರೆಯುವಂತೆ ಸಹಕರಿಸಬೇಕು. ಉತ್ತಮ ನಡವಳಿಕೆ ಇಟ್ಟುಕೊಂಡು ಎಲ್ಲರ ವಿಶ್ವಾಸಗಳಿಸಬೇಕು ಎಂದು ಹೇಳಿದರು.

      ಚುನಾವಣೆ ಗೆದ್ದವರಿಗೆ ಅಧಿಕಾರದ ಅಹಂ ನೆತ್ತಿಗೇರಬಾರದು. ಪಕ್ಷದ ನಾಯಕರ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ತಮ್ಮ ಗ್ರಾಮದ ಅಭಿವೃದ್ಧಿಗೆ ಶಾಸಕರು, ಮುಖಂಡರ ಸಲಹೆ, ಸಹಕಾರ ಪಡೆದುಕೊಂಡು ನೀವೂ ಉನ್ನತ ಮಟ್ಟದಲ್ಲಿ ನಾಯಕರಾಗಿ ಬೆಳೆಯಲು ಅವಕಾಶವಿದೆ ಎಂದು ತಿಳಿಸಿದರು.

      ಪ್ರಧಾನಿ ಮೋದಿಯವರು ಪೌರಕಾರ್ಮಿಕರ ಪಾದ ತೊಳೆದು ಅವರ ಸೇವೆ ಮಾಡಿದ ಕಾರ್ಯ ಎಲ್ಲರಿಗೂ ಮಾದರಿಯಾಗಬೇಕು. ಅಂತಹ ಸೇವಾ ಮನೋಭಾವವನ್ನು ಗ್ರಾಮ ಪಂಚಾಯ್ತಿ ಸದಸ್ಯರು ಬೆಳೆಸಿಕೊಳ್ಳಬೇಕು. ಗ್ರಾಮದ ಅಭಿವೃದ್ಧಿಗೆ ಸಂಪನ್ಮೂಲ ಹೊಂದಬೇಕು ಅಂತೇನೂ ಅಲ್ಲ, ಜನರೊಂದಿಗೆ ಬೆರೆತು ಸೌಹಾರ್ದತೆಯಿಂದ ಕಾರ್ಯನಿರ್ವಹಿಸಿದರೆ ಎಷ್ಟೋ ಕಾರ್ಯಗಳನ್ನು ಮಾಡಬಹುದು ಎಂದು ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದರು.

      ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ಮಧ್ಯಪ್ರದೇಶದ ಗ್ರಾಮ ಪಂಚಾಯ್ತಿಯೊಂದರ ಅಧ್ಯಕ್ಷೆ ಐದು ವರ್ಷದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದನ್ನು ಗಮನಿಸಿದ ಪ್ರಧಾನಿ ಮೋದಿಯವರು ಆಕೆಯನ್ನು ನೇರವಾಗಿ ರಾಜ್ಯಸಭಾ ಸದಸ್ಯೆಯಾಗಿ ಮಾಡಿದರು. ಬಿಜೆಪಿಯಿಂದ ಮಾತ್ರ ಸಾಮಾನ್ಯ ಕಾರ್ಯಕರ್ತ ಉನ್ನತ ಸ್ಥಾನಪಡೆಯಲು ಅವಕಾಶವಿದೆ. ಗ್ರಾಮ ಪಂಚಾಯ್ತಿ ಸದಸ್ಯರು ಆ ನಿಟ್ಟಿನಲ್ಲಿ ಮಾದರಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

      ಗ್ರಾಮಗಳ ಮಟ್ಟದಲ್ಲಿ ಪಕ್ಷ ಬಲಾಢ್ಯವಾದರೆ ಮುಂದಿನ 25 ವರ್ಷ ದೇಶದಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆ ನಿಂತು, ಪಂಚಾಯ್ತಿಯಿಂದ ಪಾರ್ಲಿಮೆಂಟ್‍ವರೆಗೆ ಆಡಳಿತ ಹಿಡಿಯಲಿದೆ ಎಂದರು.

       ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಅಧಿಕಾರವನ್ನು ಸಮರ್ಪಕವಾಗಿ ಬಳಕೆ ಮಾಡಿದರೆ ದೇಶ, ನಾಡನ್ನು ಕಟ್ಟಲು ಸಾಧ್ಯವಾಗತ್ತದೆ. ಇದು ರಾಜಕೀಯ ಪಕ್ಷಗಳ ಜವಾಬ್ದಾರಿ ಕೂಡಾ. ಕಾಂಗ್ರೆಸ್, ಜೆಡಿಎಸ್‍ನಿಂದ ಇದು ಸಾಧ್ಯವಾಗುವುದಿಲ್ಲ, ಕಾರಣ ಆ ಪಕ್ಷದವರಿಗೆ ಒಳ್ಳೆಯ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಇಲ್ಲ. ಮುಂದಿನ ಜನಾಂಗಕ್ಕಾಗಿ ಸಮಾಜ ಕಟ್ಟುವ ಪಕ್ಷವೆಂದರೆ ಅದು ಬಿಜೆಪಿ ಮಾತ್ರ ಎಂದರು.

      ಸಮಾಜ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು ಮಾತನಾಡಿ, ಗ್ರಾಮಗಳ ಅಭಿವೃದ್ಧಿಗಾಗಿ ಗ್ರಾಮ ಪಂಚಾಯ್ತಿಗಳಿಗೆ ವಿಶೇಷ ಅನುದಾನ ತರುವ ಕೆಲಸವನ್ನು ನಾವೆಲ್ಲಾ ಮಾಡೋಣ, ಗ್ರಾಮಗಳ ಮಟ್ಟದ ಅಭಿವೃದ್ಧಿಯ ಮೂಲಕ ಬಿಜೆಪಿಯನ್ನು ಸದೃಢಗೊಳಿಸಿ ಕಾಂಗ್ರೆಸ್ ಮುಕ್ತ ದೇಶ, ಕಾಂಗ್ರೆಸ್ ಮುಕ್ತ ರಾಜ್ಯವನ್ನು ನಿರ್ಮಾಣ ಮಾಡೋಣ ಎಂದರು.

      ಮುಂದೆ ಬರುವ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು. 2023ರ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲಬೇಕು. ಪ್ರಧಾನಿ ಮೋದಿಯರು ಗ್ರಾಮದ ಅಭಿವೃದ್ಧಿಗೆ, ರೈತರ ಅಭಿವೃದ್ಧಿಗೆ ಹಲವಾರು ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗಳನ್ನು ಜನರಿಗೆ ಪರಿಚಯಿಸಿ, ಅದರ ಪ್ರಯೋಜನ ಅವರಿಗೆ ತಲುಪುವಂತೆ ಮಾಡಬೇಕು ಎಂದು ಹೇಳಿದರು.

      ಪ್ರಧಾನ ಮಂತ್ರಿಗೂ ಇಲ್ಲದಂತಹ ಹಲವು ಮಹತ್ವದ ಅಧಿಕಾರವನ್ನು ನಮ್ಮ ಕಾನೂನು ಗ್ರಾಮ ಪಂಚಾಯ್ತಿ ಪ್ರತಿನಿಧಿಗಳಿಗೆ ನೀಡಿದೆ. ಗ್ರಾಮ ಪಂಚಾಯ್ತಿ ಆಡಳಿತ ನಡೆಸುವವರು ಅಧಿಕಾರಿಗಳ ಬಗ್ಗೆ ಎಚ್ಚರ ವಹಿಸಬೇಕು. ಚೆಕ್‍ಗಳಿಗೆ ಸಹಿ ಹಾಕುವ ಅವಕಾಶವಿದೆ ಎಂದು ಆಗದೇಇರುವ ಕೆಲಸಗಳಿಗೆ ಬಿಲ್ಲು ಪಾವತಿ ಮಾಡಲು ಚೆಕ್‍ಗಳಿಗೆ ಸಹಿ ಹಾಕಿದರೆ ಜೈಲು ಸೇರಬೇಕಾಗುತ್ತದೆ. ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

      ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಬೇರೆ ಪಕ್ಷದವರು ಆಮಿಷವೊಡ್ಡಿ ತಮ್ಮನ್ನು ಸೆಳೆಯಬಹುದು. ಅಂತಹವರ ಬಗ್ಗೆ ಎಚ್ಚರವಹಿಸಿ, ಆಮಿಷಗಳಿಗೆ ಬಲಿಯಾಗಿ ಬೇರೆ ಪಕ್ಷಕ್ಕೆ ಹೋದರೆ ಹಾಲುಣಿಸಿದ ಹೆತ್ತ ತಾಯಿಯ ಕತ್ತು ಕೊಯ್ದಂತಾಗುತ್ತದೆ ಎಂದರು.

      ಜಿಲ್ಲಾ ಉಸ್ತುವರಿ ಸಚಿವ ಜೆ.ಸಿ.ಮಾಧುಸ್ವಾಮಿ, ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್‍ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಬಿ.ಸಿ.ನಾಗೇಶ್, ಜಿ.ಬಿ.ಜ್ಯೋತಿಗಣೇಶ್, ಮಸಾಲ ಜಯರಾಮ್, ಡಾ.ರಾಜೇಶ್‍ಗೌಡ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದಗೌಡ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರಾದ ಕಿರಣ್‍ಕುಮಾರ್, ಬಿ.ಕೆ.ಮಂಜುನಾಥ್, ಎಸ್.ಆರ್.ಗೌಡ, ಕೃಷಿ ಮತ್ತು ಗ್ರಾಮೀಣಾಬೀವೃದ್ಧಿ ಬ್ಯಾಂಕ್ ಅಧ್ಯಕ್ಷ ಡಿ.ಕೃಷ್ಣಕುಮಾರ್, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಮಾಜಿ ಶಾಸಕ ಗಂಗಹನುಮಯ್ಯ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಸದಸ್ಯ ವೈ.ಹೆಚ್.ಹುಚ್ಚಯ್ಯ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಮುಖಂಡರಾದ ಎಂ.ಬಿ.ನಂದಿಶ್, ವಿನಯ್ ಬಿದರೆ, ಲಕ್ಷೀಶ್, ಜಿ.ಎನ್.ಬೆಟ್ಟಸ್ವಾಮಿ, ಜೆ.ಎಸ್.ನವೀನ್ ಮತ್ತಿತರರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap