ತುಮಕೂರು :
ರೈತ ಸಮುದಾಯಕ್ಕೆ, ದೇಶಕ್ಕೆ ಮರಣ ಶಾಸನವಾಗಿರುವ ಮಾರಕ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ರೈತರು ಹೋರಾಟ ನಡೆಸುತ್ತಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ದೊಡ್ಡ ಹೋರಾಟ ಇದು. ರೈತರ ಹೋರಾಟ ಬೆಂಬಲಿಸಿ ಕಾಂಗ್ರೆಸ್ ಪಕ್ಷ ಈ ತಿಂಗಳ 20ರಂದು ಸಮಾನ ಮನಸ್ಕ ರೈತಪರ ಪರ ಸಂಘಟನೆಗಳ ಜೊತೆಗೂಡಿ ರಾಜಭವನ ಚಲೋ ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಭಾನುವಾರ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿದ್ದ ಅವರು, ಶ್ರೀ ಸಿದ್ಧಲಿಂಗಸ್ವಾಮಿಗಳ ಆಶೀರ್ವಾದ ಪಡೆದರು. ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಮ್ಮ ಕುಟುಂಬದ ಕಾರ್ಯಕ್ರಮಕ್ಕೆ ಶ್ರೀಗಳಿಗೆ ಆಮಂತ್ರಣ ನೀಡಲು ಬಂದಿದ್ದಾಗಿ ಹೇಳಿದರು.
20ರಂದು ಬೆಂಗಳೂರಿನ ಸಂಗೊಳ್ಳಿರಾಯಣ್ಣ ವೃತ್ತದಿಂದ ಹೊರಟು ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾರಕ ಮಸೂದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಈ ಸಂಬಂಧ ಸರ್ಕಾರ ರಸಚಿಸಿರುವ ಸಮಿತಿಯನ್ನು ಧಿಕ್ಕರಿಸಿ ರೈತರು ಹೋರಾಟ ಮುಂದುವರೆಸಿದ್ದಾರೆ. ರೈತರ ಈ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಆಡಳಿತದಲ್ಲಿ ಅನ್ಯಾಯಗಳು ನಡೆಯುತ್ತಿವೆ. ದಿನಬಳಕೆ ವಸ್ತುಗಳು, ಪೆಟ್ರೋಲ್, ಡೀಸೆಲ್‍ಗಳ ಬೇಲೆ ಏರಿಕೆ, ಆಸ್ತಿ ತೆರಿಗೆಯನ್ನು ಕೊರೊನಾ ಸಂದರ್ಭದಲ್ಲೂ ಹೆಚ್ಚಳ ಮಾಡಿದ್ದನ್ನು ಗಮನಿಸಿದ್ದೇವೆ. ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ, ಸಾರ್ವಜನಿಕರ ಅಭಿಪ್ರಾಯ ಪಡೆದು ಆಡಳಿತ ನಡೆಸುತ್ತಿಲ್ಲ. ಈ ಸರ್ಕಾರ ಸ್ವಂತ ಅಜೆಂಡಾ ಮೇಲೆ ನಡೆಯುತ್ತಿದೆ ಎಂದು ಟೀಕಿಸಿದರು.
ಯಾರು ಏನೇ ಹೇಳಲಿ, ಕಾಂಗ್ರೆಸ್ ಅನ್ನು ಏನೂ ಮಾಡಲಾಗುವುದಿಲ್ಲ. 2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುವುದು ಖಚಿತ ಎಂದ ಡಿ.ಕೆ.ಶಿವಕುಮಾರ್, ಕೇಂದ್ರ ಸರ್ಕಾರಕ್ಕೆ ಪ್ರಾದೇಶಿಕ ಭಾಷೆ, ಸಂಸ್ಕøತಿ ಬಗ್ಗೆ ಗೌರವವಿಲ್ಲ. ಇದನ್ನು ಪ್ರಶ್ನೆ ಮಾಡಬೇಕಾದ ರಾಜ್ಯದ ಸಂಸದರು ಅಧಿಕಾರಕ್ಕಾಗಿ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಆಪಾದಿಸಿದರು.
ಮುಖಂಡ ಮುರಳಿಧರ ಹಾಲಪ್ಪ ಮಾತನಾಡಿ, ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಆರಂಭವಾಗಿ ನಾಲ್ಕು ವರ್ಷಗಳಾದರೂ, ಸಿಕ್ಕಿರುವ ಅಂಕಿಅಂಶಗಳ ಪ್ರಕಾರ ಕೇವಲ ಶೇಕಡ 32ರಷ್ಟು ಕಾಮಗಾರಿ ಮುಗಿದಿದೆ. ಯಾವ ಕಾಮಗಾರಿಯೂ ಯೋಜನಾಬದ್ದವಾಗಿಲ್ಲ, ಗುಣಮಟ್ಟದಿಂದ ಕೂಡಿಲ್ಲ ಎಂಬುದು ಸಾರ್ವಜನಿಕರ ಆರೋಪ. ಈ ಯೋಜನೆಗಳ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಜಿಲ್ಲಾ ಪಂಚಾಯ್ತಿ ಸದಸ್ಯ ಕೆಂಚಮಾರಯ್ಯ, ಮುಖಂಡರಾದ ಮರಿಚೆನ್ನಮ್ಮ, ನಟರಾಜ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
