ತುಮಕೂರು :

ನಗರ ಹೊರವಲಯದ ಬುಗುಡನಹಳ್ಳಿ ಹೇಮಾವತಿ ಕೆನಾಲ್ ಬಲಬದಿಯಲ್ಲಿ ಬಳ್ಳಾಪುರ ಸಂಪರ್ಕಿಸುವ ರಸ್ತೆ ತೀವ್ರ ಹದಗೆಟ್ಟಿದ್ದು, ಇದನ್ನು ಸರಿಪಡಿಸುವಂತೆ ಮಾಡಿದ ಮನವಿಗಳಿಗೆ ಸ್ಪಂದಿಸದ ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಬೇಸತ್ತು ಶ್ರೀಸಾಮಾನ್ಯರೊಬ್ಬರು ತಾವೇ ಖುದ್ದು ಮಣ್ಣಿನ ಕಚ್ಚಾ ರಸ್ತೆ ನಿರ್ಮಿಸಿ ಆಡಳಿತ ಕಣ್ತೆರೆಯುವ ಕಾರ್ಯ ಮಾಡಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪತ್ರಾಂಕಿತ ಸಹಾಯಕರಾಗಿ ನಿವೃತ್ತರಾಗಿರುವ ಅನಂತರಾಜು ಅವರು ವಿಶ್ರಾಂತ ಜೀವನವನ್ನು ಸೌಕರ್ಯಗಳುಳ್ಳ ನಗರ, ಪಟ್ಟಣ ಪ್ರದೇಶದಲ್ಲಿ ಸುಲಲಿತವಾಗಿ ಕಳೆಯಲಿಚ್ಚಿಸದೇ ಸ್ವಗ್ರಾಮ ನರಸಾಪುರಕ್ಕೆ ತೆರಳಿ ಪ್ರಗತಿಶೀಲ ರೈತನಾಗಿ ಹುಟ್ಟೂರಿನ ಜನರಿಗೆ ತಮ್ಮ ಕೈಲಾದ ಅನುಕೂಲ ಕಲ್ಪಿಸಲು ಮುಂದಾಗಿದ್ದಾರೆ.
ಸಡಿಲಗೊಂಡಿದ್ದ ಕೆನಾಲ್ ಏರಿ: ಬಳ್ಳಾಪುರ ರಸ್ತೆಯನ್ನು ಸಂಪರ್ಕಿಸುವ ಬುಗಡುನಹಳ್ಳಿ ಕೆರೆ, ಕೆನಾಲ್ ಬಲ ಬದಿಯ ರಸ್ತೆ ತೀವ್ರ ಹದಗೆಟ್ಟಿದ್ದು, ಮಳೆಗಾಲದಲ್ಲಂತೂ ಅಡ್ಡಾಡಲಾಗದ ಪರಿಸ್ಥಿತಿ ಇತ್ತು. ಕೆನಾಲ್ ಮಣ್ಣಿನ ಏರಿಯು ಸವಕಳಿಯಿಂದ ಸಡಿಲವಾಗುತ್ತಿದ್ದು, ಕುಸಿಯುವ ಅಪಾಯ ಸಹ ತಲೆದೋರಿತ್ತು. ಈಬಗ್ಗೆ ಮೊದಲಿಗೆ ಸ್ಥಳೀಯ ಪಂಚಾಯಿತಿ, ಇತರೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರಾದರೂ ಮಾಡಿಸೋಣ ಎಂಬ ಭರವಸೆ ಸಿಕ್ಕಿತೆ ಹೊರತು ಯಾವುದೇ ಫಲಿತಾಂಶ ಸಿಕ್ಕಿರಲಿಲ್ಲ.

ಇದರಿಂದ ರೋಸಿಹೋದ ಅನಂತರಾಜ್ ಅವರು ನಿತ್ಯ ನೂರಾರು ಜನರು ಜಮೀನು, ಮನೆಗಳಿಗೆ ತೆರಳಲು ಅನುಕೂಲವಾಗುವಂತೆ ತಾವೇ 35 ಲೋಡ್ ಟ್ರ್ಯಾಕ್ಟರ್ ಮಣ್ಣನ್ನು ತರಿಸಿ ರಸ್ತೆಗೆ ಸುರಿಸಿ ಇಟಾಜಿ, ಜೆಸಿಬಿಯನ್ನು ತರಿಸಿ ಗಿಡಗಂಟೆಗಳನ್ನು ತೆಗೆಸಿ ತಾತ್ಕಾಲಿಕವಾಗಿ ಓಡಾಡಲು ಯೋಗ್ಯವಾಗುವಂತಹ ಕಚ್ಚಾ ಮಣ್ಣಿನ ರಸ್ತೆಯನ್ನು ಅರ್ಧಕಿ.ಮೀ ನಷ್ಟಯು ರಸ್ತೆಯನ್ನು ತಮ್ಮ ಕುಟುಂಬದವರು, ಸ್ನೇಹಿತರ ಸಹಕಾರದೊಂದಿಗೆ ಮಾಡಿ ಮುಗಿಸಿದ್ದು, ಶಾಶ್ವತ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ.
ಕಳೆದ ಎರಡು ತಿಂಗಳಿಂದ ಹೋದ ಕಡೆಯಲ್ಲೆಲ್ಲ ಸಿಗುವ ಸೈಜುಗಲ್ಲುಗಳನ್ನೆಲ್ಲ ಸಂಗ್ರಹಿಸಿ ಸಡಿಲಗೊಳ್ಳುತ್ತಿದ್ದ ಕೆನಾಲ್ ಏರಿ ಸಮದಟ್ಟು ಮಾಡಿರುವ ಅನಂತರಾಜ್ ಅವರು ತಾವೇ ಗುದ್ದಲಿ ಪಿಕಾಸಿ ಹಿಡಿದು ಪತ್ನಿ, ಪುತ್ರ ಕಿರಣ್, ಸಹೋದರ ಲಕ್ಷ್ಮೀನಾರಾಯಣ್ ಮತ್ತಿತರರ ಸಹಾಯದೊಂದಿಗೆ ಮಣ್ಣು ಹರಡುವ ಕಾರ್ಯ ಮಾಡಿದ್ದಾರೆ. ಜೊತೆಗೆ ಕೆನಾಲ್ ಉದ್ದಕ್ಕೂ ಹನಿನೀರಾವರಿ ಪದ್ದತಿಯಡಿ ಹೂವ್ವು, ಹಣ್ಣಿನ ಗಿಡಗಳನ್ನು ನಾಟಿ ಮಾಡಿರುವ ಶ್ರೀಯುತರು ಇರುವ ಒಂದು ಎಕರೆಯಲ್ಲೇ ಸಮೃದ್ಧ ಕೃಷಿಯ ಕನಸನ್ನು ಸಾಕಾರಗೊಳಿಸುವತ್ತಾ ಹೆಜ್ಜೆ ಇಟ್ಟಿದ್ದಾರೆ.

ಹೇಮಾವತಿ ಕೆನಾಲ್ ಬಲ ಬದಿಯ ರಸ್ತೆ ತುಂಬಾ ಹಾಳಾಗಿತ್ತು.ರೈತರು ತಮ್ಮ ಜಮೀನಿಗೆ ಹೋಗಲು ಪರದಾಡುತ್ತಿದ್ದು ಹಿಂದೆ ಸರಕಾರಿ ನೌಕರಿಯಲ್ಲಿದ್ದ ಕಾರಣಕ್ಕೆ ಸಮಸ್ಯೆ ಬಗ್ಗೆ ಮೊದಲು ಆಡಳಿತದ ಗಮನ ಸೆಳೆದೆ. ಸೂಕ್ತ ಸ್ಪಂದನೆ ಸಿಗಲಿಲ್ಲ. ಎಲ್ಲದಕ್ಕೂ ಸರಕಾರವನ್ನೂ ಕಾಯುತಾ ಕೂತರೆ ಆಗದು. ಸಮುದಾಯದ ಸಹಭಾಗಿತ್ವಬೇಕೆಂದು ನಾನೇ ಖುದ್ದು 35 ಲೋಡ್ ಮಣ್ಣು ತರಿಸಿ ಕುಟುಂಬಸ್ಥರ ಸಹಕಾರದಿಂದ ಹರಡಿ ರಸ್ತೆ ಸಮದಟ್ಟು ಮಾಡಿದ್ದೇನೆ. ಆದರೆ ಇದು ತಾತ್ಕಾಲಿಕ ಕಾರ್ಯ. ನೂತನ ಗ್ರಾಮ ಪಂಚಾಯಿತಿಯವರಾಗಲೀ, ಜಿಪಂ ನವರಾಗಲೀ ಬಂದು ಸ್ಥಳಪರಿಶೀಲಿಸಿ ಕೆನಾಲ್‍ನ ಎರಡು ಬದಿ ಜಲ್ಲಿ ಕಾಂಕ್ರೀಟ್ ಹಾಕಿ ಉತ್ತಮ ರಸ್ತೆ ನಿರ್ಮಿಸಿಕೊಡಬೇಕು.
-ಅನಂತರಾಜು, ರಸ್ತೆ ನಿರ್ಮಿಸಿದವರು.








