ಬರಗೂರು :
ಕೆರೆಯಲ್ಲಿ ಮೇಯುತ್ತಿದ್ದ ಎರಡು ಕುರಿಗಳು ಬೀದಿ ನಾಯಿಗಳಿಗೆ ಬಲಿಯಾದ ಘಟನೆ ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ಕದಿರೇಹಳ್ಳಿ ಗ್ರಾಮದ ಕೆರೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿ ಬರಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕದಿರೇಹಳ್ಳಿ ಗ್ರಾಮದ ಗೊಲ್ಲರ ಹಟ್ಟಿಯ ಮುಕುಂದಪ್ಪ ಎಂಬುವರು ಗ್ರಾಮದ ಕೆರೆಯಲ್ಲಿ ಕುರಿ ಮೇಯಿಸಲು ಹೋದಾಗ, ಬೀದಿ ನಾಯಿಗಳು ಎರಡು ಕುರಿಗಳನ್ನು ಕಚ್ಚಿದ ಪರಿಣಾಮ ಕುರಿಗಳು ಸಾವನ್ನಪ್ಪಿವೆ. ಒಬ್ಬರೆ ಕುರಿಗಾಹಿ ನಾಯಿಗಳನ್ನು ಓಡಿಸಲು ಎಷ್ಟೇ ಪ್ರಯತ್ನ ಮಾಡಿದರೂ ಪ್ರಯತ್ನ ವಿಫಲವಾಗಿದೆ. ಈಗಾಗಲೆ ಕಳೆದ ಒಂದು ವಾರದಿಂದಲೂ ಮುಕುಂದಪ್ಪನವರ 10 ಕ್ಕೂ ಹೆಚ್ಚು ಕುರಿಗಳು ನಾಯಿಕಚ್ಚಿ ಸಾವನ್ನಪ್ಪಿರುವುದಾಗಿ ಕುರಿಗಾಹಿ ಮುಕುಂದಪ್ಪ ಅಳಲು ತೋಡಿಕೊಂಡಿದ್ದಾರೆ.
ಕೆರೆಯಲ್ಲಿ ಪ್ರತಿದಿನ 5 ರಿಂದ 10 ಬೀದಿ ನಾಯಿಗಳು ಕುರಿಗಾಹಿಗಳಿಗೆ ತೀವ್ರ ತೊಂದರೆ ಕೊಡುತ್ತಿವೆ. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಬೀದಿ ನಾಯಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳದಿದ್ದರೆ ಕುರಿಗಳನ್ನೇ ನಂಬಿ ಜೀವನ ಸಾಗಿಸುವವರ ಸ್ಥಿತಿ ಕಷ್ಟದಾಯಕವಾಗುತ್ತದೆ.
ಇದಷ್ಟೆ ಅಲ್ಲದೆ ಕದಿರೇಹಳ್ಳಿ ಗ್ರಾಮದ ಗೋವಿಂದರಾಜು, ಜುಂಜಣ್ಣ, ಕೆಂಪಣ್ಣರವರಿಗೆ ಸೇರಿದ ಸುಮಾರು 10ಕ್ಕೂ ಹೆಚ್ಚು ಕುರಿಗಳು ನಾಯಿಗಳು ಕಚ್ಚಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಕೆರೆಯಲ್ಲಿ ಕುರಿ, ಕೋಳಿ ಮಾಂಸದ ಕಸವನ್ನು ಎಸೆಯುತ್ತಿರುವುದರಿಂದ ನಾಯಿಗಳು ಮಾಂಸದ ರುಚಿ ಕಂಡು ಅಲ್ಲಿಗೆ ಬಂದು ಕುರಿಗಳನ್ನು ಕಚ್ಚಿ ತಿನ್ನಲು ಆರಂಭಿಸಿವೆ ಎಂದು ಕುರಿಗಾಹಿಗಳು ಅಲವತ್ತುಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ