ಚಿಕ್ಕನಾಯಕನಹಳ್ಳಿ :
ಗುಡ್ಡಗಾಡು ಪ್ರದೇಶದಲ್ಲಿ ಕರಡಿ ಮತ್ತು ಕಿರುಬ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಇದರಿಂದ ಆ ಭಾಗದಲ್ಲಿ ವಾಸಿಸುವ, ಸಂಚರಿಸುವ ಜನರಿಗೆ, ಪ್ರಾಣಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ, ಅರಣ್ಯ ಇಲಾಖೆ ಈ ಬಗ್ಗೆ ಕ್ರಮಕೈಗೊಂಡು ಸಾರ್ವಜನಿಕರಿಗೆ ಪ್ರಾಣಿಗಳ ಭಯವಿಲ್ಲದೆ ನಿಶ್ಚಿಂತೆಯಂತೆ ಬದುಕಲು ಅನುಕೂಲ ಮಾಡಿಕೊಡಬೇಕು ಎಂದು ತಾ.ಪಂ.ಸದಸ್ಯ ಸಿಂಗದಹಳ್ಳಿ ರಾಜ್ ಕುಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಎಸ್.ಸಿ, ಎಸ್.ಟಿ ಸಭೆಯಲ್ಲಿ ಮಾತನಾಡಿದರು. ಬೇಸಿಗೆ ಬಂದರೆ ಹಳ್ಳಿಗಾಡಿನ ಜನರು ಗುಡ್ಡಕ್ಕೆ ಬೆಂಕಿ ಇಡುತ್ತಾರೆ, ಇದರಿಂದ ಎಷ್ಟೋ ಪ್ರಾಣಿ-ಪಕ್ಷಿಗಳ ಸಂತತಿ ಕಡಿಮೆಯಾಗುತ್ತದೆ ಆದ್ದರಿಂದ ಪ್ರಾಣಿ-ಪಕ್ಷಿಗಳ ರಕ್ಷಣೆಯಬಗ್ಗೆ ಆ ಸುತ್ತಮುತ್ತಲಿನ ಜನಕ್ಕೆ ಅರಿವು ಹಾಗೂ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದ ಅವರು, ಈಗ ನೆಟ್ಟಿರುವ ಗಿಡಗಳಿಗೆ ಬೇಸಿಗೆಯಲ್ಲಿ ನೀರು ಹಾಯಿಸುವ ಕೆಲಸವನ್ನೂ ಸಹ ಮಾಡಬೇಕಿದೆ ಎಂದರು.
ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ 16-17 ರಿಂದ 19-20 ಈ ವರ್ಷಗಳ ಮಾಹಿತಿ ಕೊಡಿ ಎಂದರೂ ಇಲ್ಲಿಯವರೆಗೆ ಸಲ್ಲಿಸಿಲ್ಲ, ಎಸ್.ಸಿ, ಎಸ್.ಟಿ ಮೀಸಲಾಗಿ ಇಟ್ಟಿದ್ದ ಹಣದಲ್ಲಿ ಬೇರೆ ಯಾವುದಕ್ಕೂ ಖರ್ಚು ಮಾಡದೆ, ಆ ಜನಾಂಗದವರಿಗೆ ಅನುಕೂಲವಾಗುವಂತಹ ಯೋಜನೆಗಳಿಗೆ ಉಪಯೋಗಿಸಬೇಕು ಎಂದರು.
ಪಶು ಇಲಾಖೆಯವರು ಅಕ್ಟೋಬರ್ 2ರಿಂದ ಲಸಿಕೆ ಹಾಕಲು ಪ್ರಾರಂಭಿಸಿ ನವಂಬರ್ 4ರವರೆಗೆ ಲಸಿಕೆ ಶೇ.86% ಲಸಿಕೆ ಹಾಕಲಾಗಿದೆ, ಮೊಬೈಲ್ ಯುನಿಟ್ ನಲ್ಲಿ ಬುಧವಾರ ಮತ್ತು ಶುಕ್ರವಾರ ಮಾತ್ರ ಹಳ್ಳಿಗಳಿಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಪಶು ಅಧಿಕಾರಿ ತಿಳಿಸಿದರು. ಹಳ್ಳಿಗಳ ಜನರು ರಾಸುಗಳನ್ನು ಕೆಲವೊಮ್ಮೆ ಆಸ್ಪತ್ರೆಗೆ ಕರೆತರಲು ಸಾಧ್ಯವಿಲ್ಲ, ಹಾಗಾಗಿ ಮೊಬೈಲ್ ಯುನಿಟ್ ನ್ನು ಹೆಚ್ಚು ಹಳ್ಳಿಗಳ ಕಡೆ ಹೋಗಲಿ ಎಂದು ರಾಜ್ ಕುಮಾರ್ ತಿಳಿಸಿದರು.
ಜಿ.ಪಂ.ಸದಸ್ಯ ಮಹಲಿಂಗಯ್ಯ ಮಾತನಾಡಿ, ತಾಲ್ಲೂಕಿನಲ್ಲಿರುವ ಎಷ್ಟೋ ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕವಿಲ್ಲ ಇದರಿಂದ ಬೇಸಿಗೆಯಲ್ಲಿ ಮಕ್ಕಳಿಗೆ ತೊಂದರೆಯಾಗುತ್ತದೆ ಮತ್ತು ಶೌಚಾಲಯದ ವ್ಯವಸ್ಥೆಗಳಿಲ್ಲ, ಕೆಲವು ಅಂಗನವಾಡಿಗಳಲ್ಲಿ ಅಕ್ಷರಗಳನ್ನೂ, ಪದಗಳನ್ನೂ ನೆಲದ ಮೇಲೆ ಬರೆದಿದ್ದಾರೆ ಇದರಿಂದ ಮಕ್ಕಳು ಪ್ರತಿನಿತ್ಯ ಓಡಾಡಿ ಕಾಲಕ್ರಮೇಣ ಬರೆದಿರುವುದು ಅಳಿಸಿ ಹೋಗುತ್ತದೆ ಆದ್ದರಿಂದ ಆದಷ್ಟೂ ಗೋಡೆಗಳ ಮೇಲೆ ಬರೆಸುವ ವ್ಯವಸ್ಥೆ ಮಾಡಿ ಎಂದರು.
ಪೌರ ಕಾರ್ಮಿಕರಿಗೆ ಅವರ ಆರೋಗ್ಯ ಮತ್ತು ಕಾರ್ಮಿಕರ ಉದ್ದಾರಕ್ಕಾಗಿ ಪೌರ ಕಾರ್ಮಿಕರಿಗೆ ಮೀಸಲಿಟ್ಟ ಹಣವನ್ನು ಉಪಯೋಗಿಸುವಂತೆ ಹೇಳಿದರು. ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಥಿಕ್ ಪಾಷ, ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ