ದಬ್ಬೆಘಟ್ಟ ರಸ್ತೆ ಅಗಲೀಕರಣ : ಫೆ.10ರೊಳಗೆ ಕಟ್ಟಡ ತೆರವಿಗೆ ಗಡುವು!

ತುರುವೇಕೆರೆ : 

     ಫೆಬ್ರವರಿ 10ರೊಳಗೆ ಪಟ್ಟಣ ವ್ಯಾಪ್ತಿಯ ದಬ್ಬೆಘಟ್ಟ ರಸ್ತೆ ಅಗಲೀಕರಣ ಕುರಿತಂತೆ ರಸ್ತೆ ಬದಿ ಕಟ್ಟಡಗಳನ್ನು ತೆರವು ಮಾಡದಿದ್ದಲ್ಲಿ ಸಂಬಂಧಪಟ್ಟವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕಾದೀತು ಎಂದು ಶಾಸಕ ಮಸಾಲ ಜಯರಾಂ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

      ತಾಲೂಕು ಪಂಚಾಯ್ತಿಯ ಕೆಡಿಪಿ ವಿಶೇಷ ಸಭೆಯಲ್ಲಿ ಪ.ಪಂ. ಹಾಗೂ ಪಿಡಬ್ಯೂಡಿ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡ ಶಾಸಕರು, ದಬ್ಬೇಘಟ್ಟ ರಸ್ತೆ ಅಗಲೀಕರಣ ಪ್ರಾರಂಭಿಸಿ ಒಂದು ವರ್ಷವಾದರೂ ಇದುವರೆವಿಗೂ ರಸ್ತೆಯ ಅಕ್ಕಪಕ್ಕದ ಕಟ್ಟಡಗಳನ್ನು ತೆರವು ಮಾಡಲು ಸಂಬಂಧಿಸಿದ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿದ್ದೀರಾ. ಅಗಲೀಕರಣಕ್ಕೆ ಸಂಬಂಧಿಸಿದಂತೆ ರಸ್ತೆ ಬದಿ ಮರ ತೆರವುಗೊಳಿಸಿದ್ದು ಅಲ್ಪಸ್ವಲ್ಪ ರಸ್ತೆ ಮಾಡಲಾಗಿದ್ದು ಇದೀಗ ಆ ರಸ್ತೆಯೂ ಕಿತ್ತು ಹಾಳಾಗಿದೆ. ಆ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಹಿಡಿ ಶಾಪ ಹಾಕುತಿದ್ದಾರೆ ಎಂದರು.

      ಜಿಲ್ಲಾಧಿಕಾರಿಗಳೇ ಮುಂದೆ ನಿಂತು ಕಟ್ಟಡ ತೆರವುಗೊಳಿಸುವ ಭರವಸೆ ನೀಡಿದ್ದು ಫೆ.10 ರೊಳಗಾಗಿ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಮಧ್ಯಭಾಗದಿಂದ 12.5 ಮೀ. ಒಳಗಿನ ಕಟ್ಟಡ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ತಮ್ಮ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಏರು ದನಿಯಲ್ಲಿ ಎಚ್ಚರಿಸಿದರು.

      ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಅಸ್ಪೃಶ್ಯತಾ ನಿವಾರಣೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆದಿಲ್ಲದಿದ್ದರೂ ಲಕ್ಷಾಂತರ ರೂ. ಬಿಲ್ ಪಾಸಾಗಿದೆ ಹೇಗೆ..? ಎಂದು ತಾ.ಪಂ.ಉಪಾಧ್ಯಕ್ಷ ಬೈರಪ್ಪ, ಇಲಾಖಾಧಿಕಾರಿ ರೇಣುಕಾ ಅವರನ್ನು ಕೇಳಿದರು. ತಾವಿನ್ನು ಇತ್ತೀಚೆಗಷ್ಟೇ ಇಲಾಖೆಗೆ ಬಂದಿದ್ದು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ನಕಲಿ ಪೋಟೋಗಳನ್ನು ದಾಖಲಿಸಿ ಸರ್ಕಾರಕ್ಕೆ ಸುಳ್ಳು ಲೆಕ್ಕ ಸಲ್ಲಿಸಿ ಲಕ್ಷಾಂತರ ಹಣ ಡ್ರಾ ಮಾಡಿಕೊಂಡಿದ್ದು ಈ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.

      ಇನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ 1415 ಗರ್ಭಿಣಿಯರು 2020 ರಲ್ಲಿ ನೊಂದಣಿಯಾಗಿದ್ದು ಕೇವಲ 497 ಗರ್ಭಿಣಿಯರಿಗೆ ಮಾತ್ರ ತಾಲ್ಲೂಕಿನಲ್ಲಿ ಹೆರಿಗೆಯಾಗಿದ್ದು ನೊಂದಣಿಯಾಗಿದೆ. ತಿಪಟೂರು ತಾಲ್ಲೂಕಿನಲ್ಲಿ 650 ಗರ್ಭಿಣಿ ಸ್ತ್ರೀಯರಿಗೆ ಹೆರಿಗೆಯಾಗಿದೆ. ಬೇರೆ ಬೇರೆ ತಾಲ್ಲೂಕುಗಳಲ್ಲಿ ಹೆಚ್ಚು ಹೆರಿಗೆ ಪ್ರಮಾಣ ದಾಖಲಾಗಿದ್ದು ನಮ್ಮ ತಾಲ್ಲೂಕಿನಲ್ಲಿ ಕಡಿಮೆಯಾಗಲು ಕಾರಣ ಕೊಡಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಪ್ರಶ್ನೆ ಹಾಕಿದರು.

      ಪಟ್ಟಣದ ಏಕೈಕ ಕ್ರೀಡಾಂಗಣವಾದ ಜಿಜೆಸಿ ಕ್ರೀಡಾಂಗಣ ನವೀಕರಣ ಮಾಡಲು 50 ಲಕ್ಷ ರೂ. ಹಣ ಮಂಜೂರಾಗಿದ್ದು ಶೀಘ್ರದಲ್ಲೇ ಕಾಮಗಾರಿ ಕೈಗೊಳ್ಳಲಾಗುವುದು ಎಂದರಲ್ಲದೆ, ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲೆಡೆ ನೀರಿನ ಸಮಸ್ಯೆ ತಲೆದೋರಲಿದ್ದು ಸಂಬಂಧಿಸಿದ ಅಧಿಕಾರಿಗಳು ಜನಸಾಮಾನ್ಯರಿಗೆ ತೊಂದರೆ ಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಕಾರ್ಯಪಾಲಕ ಇಂಜಿನಿಯರ್‍ಗೆ ಹೇಳಿದರು.
ತಾಲ್ಲೂಕಿನಲ್ಲಿ 1092 ಮಕ್ಕಳು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ದಾಖಲಾಗಿದ್ದು ಪಟ್ಟಣದ ಸರ್ಕಾರಿ ಮಾದರಿ ಶಾಲೆಗೆ 123 ಮಕ್ಕಳು ಈ ಬಾರಿ ಸೇರ್ಪಡೆಯಾಗಿರುವುದು ಶಿಕ್ಷಣ ಇಲಾಖೆ ಉತ್ತಮ ಕಾರ್ಯ ರ್ನಿಹಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಬಿಇಓ ರಂಗದಾಮಯ್ಯ ಮಾಹಿತಿ ನೀಡಿದರು.

      ತಾ.ಪಂ.ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷ ಬೈರಪ್ಪ, ತಹಶೀಲ್ದಾರ್ ನಯೀಂಉನ್ನೀಸಾ, ಇಓ ಜಯಕುಮಾರ್, ನರಸಿಂಹಯ್ಯ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link