‘ಕೈಗಾರಿಕಾ ಉದ್ಯಮಿಗಳ ಸಮಸ್ಯೆ ಬಗೆಹರಿಸಲಾಗುವುದು’ – ಜಗದೀಶ್ ಶೆಟ್ಟರ್

 ತುಮಕೂರು : 

      ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಅಭಿವೃದ್ದಿ ಪಡಿಸಿದ ನಂತರ ನಿಗದಿಪಡಿಸುವ ದರ ಬಹಳ ಜಾಸ್ತಿಯಿರುವ ಕುರಿತು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶೀಘ್ರದಲ್ಲೇ ರಾಜ್ಯದ ಕೈಗಾರಿಕಾ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಜೊತೆ ಸಭೆಯನ್ನು ನಡೆಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.

     ತುಮಕೂರು ಜಿಲ್ಲೆಯ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಉದ್ಯೋಗ ಭವನದ ಶಂಕುಸ್ಥಾಪನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದಲ್ಲಿ ಬೆಂಗಳೂರು ನಗರವನ್ನು ಹೊರತುಪಡಿಸಿದರೆ ತುಮಕೂರು ಜಿಲ್ಲೆಯಲ್ಲಿ ಕೈಗಾರಿಕೆಗಳು ಬಂಡವಾಳ ಹೂಡಲು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿವೆ. ಈಗಾಗಲೇ ಜಿಲ್ಲೆಯಲ್ಲಿ ತುಮಕೂರು ಮಷಿನ್ ಟೂಲ್ಸ್ ಪಾರ್ಕ್, ಫುಡ್ ಪಾರ್ಕ್, ಜಪಾನೀಸ್ ಕೈಗಾರಿಕಾ ಪ್ರದೇಶ ಹೀಗೆ ಹಲವಾರು ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ದಿಪಡಿಸಲಾಗಿದ್ದು, ಪ್ರಮುಖ ಕೈಗಾರಿಕೆಗಳು ತಮ್ಮ ಕಾರ್ಖಾನೆಗಳನ್ನು ಪ್ರಾರಂಭಿಸಿವೆ ಎಂದರು.

      ಈ ಕೈಗಾರಿಕಾ ಪ್ರದೇಶದಲ್ಲಿ ಇರುವ ಹಲವಾರು ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಈಗಾಗಲೇ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದು, ಶೀಘ್ರ ಇದನ್ನು ಪರಿಹರಿಸಲಾಗುವುದು. ಕೈಗಾರಿಕಾಭಿವೃದ್ದಿ ಮಂಡಳಿಯ ವತಿಯಿಂದ ನಿಗದಿಪಡಿಸಲಾಗುವ ಕೈಗಾರಿಕಾ ನಿವೇಶನಗಳ ದರದ ಬಗ್ಗೆ ರಾಜ್ಯಾದ್ಯಂತ ಬಹಳಷ್ಟು ದೂರುಗಳು ಬಂದಿವೆ. ನಿವೇಶನಗಳನ್ನು ಮಂಜೂರು ಮಾಡುವ ಸಂದರ್ಭದಲ್ಲಿ ತಗೆದುಕೊಳ್ಳುವ ದರ ಹಾಗೂ ಅಂತಿಮವಾಗಿ ನಿರ್ಧರಿಸುವ ದರ ಬಹಳಷ್ಟು ಜಾಸ್ತಿ ಎನ್ನುವುದು ಕೈಗಾರಿಕೋದ್ಯಮಿಗಳ ದೂರಾಗಿದೆ. ಇದು ನನ್ನ ಗಮನಕ್ಕೆ ಬಂದಿದೆ. ಜಮೀನಿನ ಮಾಲೀಕರಿಗೆ ನೀಡುವ ಪರಿಹಾರ ಹಾಗೂ ಅಭಿವೃದ್ದಿಗೆ ಆಗುವ ಖರ್ಚು ಸೇರಿಕೊಳ್ಳುವ ಹಿನ್ನಲೆಯಲ್ಲಿ ದರ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಭಾಗಗಳ ಕೈಗಾರಿಕಾ ಸಂಘಗಳ ಪದಾಧಿಕಾರಿಗಳ ಜೊತೆ ಸಭೆಯನ್ನು ನಡೆಸುವುದಾಗಿ ಅವರು ಹೇಳಿದರು.

      ನೂತನವಾಗಿ ನಿರ್ಮಿಸಲಾಗುವ ಕೈಗಾರಿಕಾ ಪ್ರದೇಶಗಳಲ್ಲಿ ಈ ರೀತಿಯ ಸಮಸ್ಯೆಗಳು ಬರದ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಂತಿಮ ಹಂತದಲ್ಲಿ ನಿಗದಿಪಡಿಸುವ ದರ ಶೇಕಡ 20 ಕ್ಕಿಂತ ಹೆಚ್ಚಾಗಿರಬಾರದು ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ಅವರು ಹೇಳಿದರು.

      ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಜಿಲ್ಲೆಯ ವಸಂತನರಸಾಪುರ ಕೈಗಾರಿಕಾ ಪ್ರದೇಶವು ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾಗಿದೆ. ಇಲ್ಲಿನ ರೈತರು ಜಮೀನನ್ನು ನೀಡಿದ್ದು, ಅವರಿಗೆ ಯಾವುದೇ ಅನ್ಯಾಯವಾಗದೇ ಜಮೀನಿಗೆ ತಕ್ಕ ಪರಿಹಾರ ನೀಡಲಾಗಿದೆ. ಈಗಾಗಲೇ ರೈಲ್ವೆ ಅಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಗತ್ಯವಿದೆ. ಇದರಿಂದ ಬೆಳಗಾವಿ, ದಾವಣಗೆರೆ ಈ ಭಾಗದ ಜನರಿಗೆ ಹಾಗೂ ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಅನುಕೂಲವಾಗಲಿದೆ ಎಂದರು.
ಉದ್ಯೋಗ ಭವನಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಕೇಂದ್ರ ರಾಜ್ಯ ಸಚಿವ ಪ್ರತಾಪ್ ಚಂದ್ರ ಸಾರಂಗಿ ಅವರು, ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಸೂಕ್ತ ವೇತನ, ಊಟದ ವ್ಯವಸ್ಥೆಯನ್ನು ಕಲ್ಪಿಸಬೇಕು.

      ಜಿಲ್ಲೆಯ ವಂಸತನರಸಾಪುರದಲ್ಲಿ ಉದ್ಯೋಗ ಭವನ ಕೈಗಾರಿಕೆ ವಲಯದಲ್ಲಿ ಮಾಡುತ್ತಿರುವುದು ಖುಷಿ ತಂದಿದೆ ನಗರದಿಂದ 20 ಕಿ.ಮೀ ಇದ್ದು, ಸುಮಾರು 2 ಸಾವಿರ ಕಾರ್ಮಿಕರಿಗೆ ಸೂಕ್ತ ಸೌಲಭ್ಯಗಳ ವ್ಯವಸ್ಥೆ ಮಾಡಬೇಕಾಗಿದೆ ಎಂದರು. ಇಲ್ಲಿನ ಹಲವಾರು ಕಂಪನಿಗಳ ಲೀಸ್ ಕಾಲಾವಧಿ ಮುಗಿದಿದ್ದು, ಕೆಲವು ಬ್ಯಾಂಕ್ ಗಳು ಸಾಲ ಸೌಲಭ್ಯ ನೀಡಲಾಗುವುದಿಲ್ಲ ಎನ್ನುತ್ತಿವೆ. ಆದ್ದರಿಂದ ಲೀಸ್ ಕಾಲಾವಧಿಯನ್ನು ಕೆಲವು ವರ್ಷಗಳ ವರೆಗೆ ಮುಂದುವರಿಸುವ ಕುರಿತು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡುವುದಾಗಿ ಅವರು ತಿಳಿಸಿದರು.

      ಕೈಗಾರಿಕೆಗಳಿಗೆ ಅವಶ್ಯವಿರುವ ವಿದ್ಯುತ್‍ಗಾಗಿ ಸೋಲಾರ್ ಪ್ಲಾಂಟ್‍ಗಳ ಮೂಲಕ ವಿದ್ಯುತ್ ಸಂಗ್ರಹಣಾಗಾರಗಳನ್ನು ನಿರ್ಮಿಸಿಕೊಳ್ಳಿ, ನೀರಿನ ಸಮಸ್ಯೆ ಬಗೆಹರಿಸಲು ಜಲ ಮೂಲಗಳನ್ನು ಸಂರಕ್ಷಣೆ ಮಾಡಿಕೊಳ್ಳಿ ಎಂದು ಕೈಗಾರಿಕೋದ್ಯಮಿಗಳಿಗೆ ಅವರು ಸಲಹೆ ನೀಡಿದರು.

      ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾಧುಸ್ವಾಮಿ, ಶಾಸಕ ಡಾ|| ಜಿ.ಪರಮೇಶ್ವರ್, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ್, ವಸಂತನರಸಾಪುರ ಕೈಗಾರಿಕಾ ಪ್ರದೇಶದ ಅಸೋಸಿಶೇಷನ್ ಅಧ್ಯಕ್ಷ ಕೆ.ಎನ್.ಶಿವಶಂಕರ್, ಉಪಾಧ್ಯಕ್ಷ ರಾಮಮೂರ್ತಿ, ಕಾರ್ಯದರ್ಶಿಗಳಾದ ಹರೀಶ್, ಸತ್ಯನಾರಾಯಣ್, ಎಫ್‍ಕೆಸಿಸಿ ಗೋಪಾಲರೆಡ್ಡಿ, ಕೆಎಸ್‍ಎಸ್‍ಐಡಿಸಿ ದತ್ತಾತ್ರೇಯ, ಕೆಐಎಡಿಬಿಯ ಸಿಇಓ ಶಿವಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap