ಬೆಂಗಳೂರು:
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕಳೆದ 4 ವರ್ಷಗಳಿಂದ ಜೈಲುವಾಸ ಅನುಭವಿಸಿದ್ದ ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಇಂದು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
4 ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಶಿಕಲಾ ಅವರ ಶಿಕ್ಷೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಬಿಡುಗಡೆಯಾಗಿದ್ದಾರೆ. ಆದರೆ ಶಶಿಕಲಾ ಅವರಿಗೆ ಕೊರೊನಾ ಸೋಂಕು ಇರುವುದರಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಶಿಕಲಾ ಅವರು ಇಂದು ಬಿಡುಗಡೆಯಾಗಿದ್ದರೂ ಕೂಡ ಅವರು ಮನೆಗೆ ಮರಳಲು ಅವಕಾಶವಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಇನ್ನೂ 8 ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಇದೆ ಎನ್ನಲಾಗಿದೆ.
ಶಶಿಕಲಾ ಅವರನ್ನು ಅಪಾರ ಬೆಂಬಲಿಗರೊಂದಿಗೆ ಬೆಂಗಳೂರಿನಿಂದ ಚೆನ್ನೈಗೆ ಕರೆದುಕೊಂಡು ಹೋಗಲು ಅವರ ಸಂಬಂಧಿ ಹಾಗೂ ಸ್ವತಂತ್ರ ಶಾಸಕ ಟಿಟಿವಿ ದಿನಕರನ್ ನೇತೃತ್ವದಲ್ಲಿನ ಎಎಂಕೆ ಪಕ್ಷದ ಕಾರ್ಯಕರ್ತರು ಹಾಗೂ ಅವರ ಸಂಬಂಧಿಕರನ್ನೊಳಗೊಂಡಂತೆ ಸುಮಾರು 1 ಸಾವಿರ ಜನರು ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಕ್ಟೋರಿಯಾ ಆಸ್ಪತ್ರೆ ಮುಂಭಾಗ ಅವರ ಅಪಾರ ಅಭಿಮಾನಿಗಳು ನೆರೆದಿದ್ದು, ಆಸ್ಪತ್ರೆಯ ಸುತ್ತ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ