ಕುಣಿಗಲ್ :
ಇತ್ತೀಚಿನ ದಿನಗಳಲ್ಲಿ ಒಕ್ಕಲಿಗ ಸಮುದಾಯಕ್ಕೆ ಆಳುವ ಸರ್ಕಾರದಿಂದ ಏರುಪೇರುಗಳಾಗುತ್ತಿದ್ದು ಮುಂದಿನ ದಿನಗಳಲ್ಲೇನಾದರೂ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾದರೆ ಎಚ್ಚೆತ್ತ ಒಕ್ಕಲಿಗ ಸಮುದಾಯದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲನಂದನಾಥ ಮಹಾಸ್ವಾಮೀಜಿಗಳು ತಿಳಿಸಿದರು.
ನಗರದ ಜಿ.ಕೆ.ಬಿ.ಎಂ.ಎಸ್. ರಂಗ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಡಾ.ಬಾಲಗಂಗಾದರನಾಥ ಮಹಾಸ್ವಾಮೀಜಿಗಳ ಪುಣ್ಯಸ್ಮರಣೆ ಹಾಗೂ ಒಕ್ಕಲಿಗ ಧರ್ಮ ಸಮಾವೇಶದ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವಹಿಸಿ ಮಾತನಾಡಿ, ಕೆಲ ತಿಂಗಳಿಂದೀಚೆಗೆ ಇಲ್ಲಿನ ಆಳುವ ವ್ಯವಸ್ಥೆಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತ ಬಂದಿದ್ದು ರಾಜ್ಯವನ್ನಾಳುವ ವ್ಯವಸ್ಥೆಗಳಿಂದ ಒಕ್ಕಲಿಗ ಸಮುದಾಯದ ಮೇಲೆ ಅನ್ಯಾಯವಾಗಬಾರದು ಜಾತಿ ವ್ಯವಸ್ಥೆ ಎಷ್ಟು ಸರಿ ತಪ್ಪು ಎನ್ನುವುದನ್ನು ಮನಗಾಣುವ ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಾಣುವುದು ರಾಜ್ಯ ಆಳುವ ವ್ಯವಸ್ಥೆಯ ಧರ್ಮ. ಅದನ್ನು ತಪ್ಪಿ ಸಮುದಾಯದ ಮೇಲೆ ಒಂದು ವೇಳೆ ಅನ್ಯಾಯವಾದರೆ ಸಹಿಸಲು ಸಾಧ್ಯವಾಗದು ಎಂದರು.
ಇಂದು ಮಗುವಿಗೆ ಹಾಲುಣಿಸಬೇಕಾದರೂ ತಾಯಿ ಮಗು ಅಳುವುದನ್ನೇ ಗಮನಿಸುತ್ತಾಳೆ, ಆದ ಕಾರಣ ಸಮಾಜದ ಅಭಿವೃದ್ಧಿಗಾಗಿ ಇಂದು ಅಸಂಘಟಿತವಾಗಿರುವ ಒಕ್ಕಲಿಗರ ಸಮುದಾಯ ಒಗ್ಗಟ್ಟಿನ ಮಂತ್ರದೊಂದಿಗೆ ಒಂದಾಗಬೇಕು. ರಾಜಕಾರಣಿಗಳಿಂದ ಸಮುದಾಯದ ಒಗ್ಗಟ್ಟು ಮೂಡಿಸಲು ಅಸಾಧ್ಯ ಅದಕ್ಕಾಗಿ ಈ ಕುಣಿಗಲ್ ತಾಲ್ಲೂಕಿನ ಸಮುದಾಯದವರು ಶ್ರೀ ಸಿದ್ದರಾಮ ಚೈತನ್ಯಸ್ವಾಮಿಗಳ ನೆರವು ಮುಖ್ಯ ಎಂದ ಅವರು, ಒಕ್ಕಲಿಗ ಸಮುದಾಯವನ್ನು ಒಂದುಗೂಡಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಕೀರ್ತಿ ಇವರಿಗೆ ಸಲ್ಲಬೇಕು ಎಂದರು.
ಈ ಒಕ್ಕಲಿಗ ಸಮುದಾಯಕ್ಕೆ ಒಂಟಿ ಬಾಳಿ ಬದುಕಿದ ಅಭ್ಯಾಸವಿಲ್ಲ, ಒಟ್ಟೊಟ್ಟಿಗೆ ಇತರೆ ಸಮಾಜವನ್ನು ತನ್ನೊಟ್ಟಿಗೆ ಕರೆದುಕೊಂಡು ಹೋಗುವ ಗುಣವಿದೆ. ಇಂತಹ ಸಮಾಜವನ್ನು ಕಟ್ಟಿಬೆಳೆಸಿದ ಕೀರ್ತಿ ಶತಮಾನಗಳ ಹಿಂದೆ ರಾಜ್ಯವನ್ನಾಳಿದ ಗಂಗ ಮನೆತನದ ರಾಜರುಗಳು. ಅಲ್ಲದೆ ಇಂದು ರಾಜ್ಯದ ಬೊಕ್ಕಸಕ್ಕೆ ಹೆಚ್ಚುಪಾಲು ಬರುವ ಆದಾಯದ ಮೂಲಕ್ಕೆ ಬೆಂಗಳೂರು, ಇದನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರ ಸಾಧನೆ ಹಾಗೂ ವಿಧಾನಸೌಧ ನಿರ್ಮಿಸಿದ ಕೆಂಗಲ್ ಹನುಮಂತಯ್ಯನವರ ಸಾಧನೆ ಅಪಾರ ಇಂತಹವ ಕೀರ್ತಿಗೆ ಪಾತ್ರರಾಗಿದ್ದು ಈ ಸಮುದಾಯವಾಗಿದೆ. ರಾಜ್ಯದಲ್ಲಿ ಶೇ.18 ರಷ್ಟು ಒಕ್ಕಲಿಗರು ಇದ್ದರೂ ಪ್ರಯೋಜನವಾಗಿಲ್ಲ. ಈ ಸಮುದಾಯದಿಂದ ಗೆದ್ದ ಶಾಸಕರು ಸಮುದಾಯದ ಪ್ರತಿನಿಧಿಯೂ ಹೌದು ಆದ್ದರಿಂದ ಮೊದಲ ಆದ್ಯತೆ ನೀಡಬೇಕು. ಆನಂತರ ಕ್ಷೇತ್ರದ ಎಲ್ಲರ ಅಭಿವೃದ್ದಿಗೆ ಒತ್ತುಕೊಡುವ ಕೆಲಸ ಮಾಡಿದರೆ ಸಮುದಾಯದ ಬಡವರಿಗೆ ನೆರವಾಗುತ್ತದೆ ಎಂದರು.
ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ಜಾತಿ ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ಈ ಸಮಾದಲ್ಲಿ ಹೆಚ್ವು ಬಡವರೇ ಇದ್ದಾರೆ. ಅವರಿಗೆ ನ್ಯಾಯಸಿಬೇಕಾದರೆ ಒಳಮೀಸಲಾತಿ ನೀಡಬೇಕೆಂದ ಆಗ್ರಹಿಸಿದರು. ಒಕ್ಕಲಿಗ ನಾಯಕರಿಗೆ ಸಂಪೂರ್ಣ ಅಧಿಕಾರ ಆಳ್ವಿಕೆ ಮಾಡಲು ಬಿಡದೇ ಇರುವುದು ಇಲ್ಲಿನ ರಾಜಕೀಯದ ವಿಪರ್ಯಾಸ ಎಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ರಾಜ್ಯದಲ್ಲಿ ಹೆಚ್ಚು ಜನಾಂಗವಿದ್ದರೂ ರಾಜಕೀಯ ಸೇರಿದಂತೆ ಇತರೆ ರಂಗದಲ್ಲಿ ಸ್ಥಾನಮಾನ ಪಡೆಯಲು ವಿಫಲವಾಗುತ್ತಿರುವುದಕ್ಕೆ ಒಗ್ಗಟ್ಟಿನ ಕೊರತೆಯೇ ಮುಖ್ಯ ಆದ್ದರಿಂದ ಯಾವುದೇ ಪಕ್ಷದಲ್ಲಿರಲಿ ಸಮುದಾಯದ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಿ ಸಮುದಾಯಕ್ಕೆ ಒಳಿತು ಮಾಡಬೇಕೆಂದರು.
ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡರು, ಅಂದಿನ ಇಂದಿನ ಇಬ್ಬರು ಶ್ರೀಗಳ ಕಾರ್ಯಸಾಧನೆಯನ್ನು ಕೊಂಡಾಡಿ ದೇಶ ವಿದೇಶದಲ್ಲಿಯೂ ಒಕ್ಕಲಿಗರ ಸಮುದಾಯದ ಕೀರ್ತಿ ಬೆಳಗಿಸಿದ್ದಾರೆ ಸಮುದಾಯ ಸದಾ ಶ್ರೀಗಳನ್ನು ನೆನೆಯಬೇಕೆಂದರು.
ರಾಜ್ಯ ಪಿಎಲ್ ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಮಾತನಾಡಿ, ಸಮುದಾಯದ ಶ್ರೀಮಠ ಇರುವುದು ಒಂದೇ ಇಂತಹ ಮಠದ ಶ್ರೀಗಳು ಬರುತ್ತಿದ್ದಾರೆ ಎಂದರೆ ಒಕ್ಕಲಿಗ ಜನಾಂಗದಲ್ಲಿ ಸಹಸ್ರಾರು ಜನರು ಒಗ್ಗಟ್ಟಿನಿಂದ ಬಂದು ಯಶಸ್ವಿಗೊಳಿಸಬೇಕೆಂದರು.
ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿಗೌಡರು ಹಾಗೂ ನೇತೃತ್ವವಹಿಸಿದ್ದ ಅರೇಶಂಕರ ಮಠದ ಸಿದ್ದರಾಮಚೈತನ್ಯಸ್ವಾಮೀಜಿಗಳು ಮಾತನಾಡಿದರು.
ಇದಕ್ಕೂ ಮೊದಲು ಪ್ರವಾಸಿ ಮಂದಿರದಿಂದ ವೇದಿಕೆಯವರೆಗೆ ಭವ್ಯ ಮರವಣಿಗೆಯೊಂದಿಗೆ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಮಹಿಳೆಯರು ಮತ್ತು ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಕರೆತರಲಾಯಿತು.
ಕಾರ್ಯಕ್ರಮದಲ್ಲಿ ತುಮಕೂರು ಶಾಖ ಮಠದ ಶ್ರೀಮಂಗಳನಾಥಸ್ವಾಮೀಜಿ, ಪುರಸಭಾ ಅಧ್ಯಕ್ಷ ನಾಗೇಂದ್ರ, ಒಕ್ಕಲಿಗ ಮಹಾಸಭಾದ ಅಧ್ಯಕ್ಷ ಕೃಷ್ಣೇಗೌಡ, ಕಾರ್ಯದರ್ಶಿ, ಭೈರವೇಶ್ವರ ಮಹಿಳಾ ಸಂಘದ ಅಧ್ಯಕ್ಷೆ ಸುಜಾತ ನಂಜೇಗೌಡ, ಕಪನಿಪಾಳ್ಯ ರಮೇಶ್, ಜೆಸಿಬಿ ನಾಗರಾಜು, ಡಾ.ರೇವಣ್ಣಗೌಡ, ಕರಿಗೌಡ, ಮಹಾಲಿಂಗಯ್ಯ, ಬೆಟ್ಟಸ್ವಾಮಿ, ಶಿವರಾಮಯ್ಯ ಸೇರಿದಂತೆ ವಿವಿಧ ಪಕ್ಷಗಳ ಹಲವು ಮುಖಂಡರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ