ಬೆಂಗಳೂರು :
ಪಂಚಮಸಾಲಿ, ಕುರುಬ, ಗಂಗಾಮತಸ್ಥ ಮೊದಲಾದ ಸಮುದಾಯಗಳಿಗೆ ಮೀಸಲಾತಿಯನ್ನು ಯಾವಾಗ ಕೊಡಲಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ ಚಾಟಿ ಬೀಸಿದ ಘಟನೆ ನಡೆಯಿತು.
ಖಚಿತ ಉತ್ತರ ಬಾರದೇ ಇದ್ದುದರಿಂದ ಬಸನಗೌಡ ಪಾಟೀಲ ಯತ್ನಾಳರು ಬಾವಿಗೆ ಇಳಿದು ಧರಣಿ ನಡೆಸಿದ ಘಟನೆಯೂ ನಡೆಯಿತು. ಯತ್ನಾಳರಿಗೆ ಬಿಜೆಪಿಯ ಅರವಿಂದ ಬೆಲ್ಲದ ಹಾಗೂ ಜೆಡಿಎಸ್, ಕಾಂಗ್ರೆಸ್ನ ಕೆಲವು ಸದಸ್ಯರೂ ಜೊತೆ ನೀಡಿದರು.
ವಿಷಯ ಸೂಕ್ಷ್ಮವಾಗಿರುವುದರಿಂದ ಈ ಪಾದಯಾತ್ರೆಗಳು ಮತ್ತು ಮೀಸಲಾತಿ ಒತ್ತಾಯದ ಬಗ್ಗೆ ಚರ್ಚಿಸಲು ಪ್ರತ್ಯೇಕ ಅವಕಾಶ ಕಲ್ಪಿಸುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದ ನಂತರ ಯತ್ನಾಳ ಮತ್ತಿತರರು ಧರಣಿ ಹಿಂಪಡೆದರು.
ಆಡಳಿತ ಪಕ್ಷದ ಶಾಸಕ ಯತ್ನಾಳ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು. ವಿವಿಧ ಸಮುದಾಯಗಳವರು ಮೀಸಲಾತಿಗಾಗಿ ಪಾದಯಾತ್ರೆ ನಡೆಸಿದ್ದರೂ ಸರ್ಕಾರ ಇದುವರೆಗೆ ಸ್ಪಷ್ಟ ನಿಲುವು ಘೋಷಣೆ ಮಾಡಿಲ್ಲ ಎಂದು ಖಂಡಿಸಿದರು. ಕಳೆದ 20 ವರ್ಷಗಳಿಂದ ಬರೀ ಭರವಸೆಗಳನ್ನೇ ಕೇಳುವಂತಾಗಿದೆ ಎಂದೂ ಯತ್ನಾಳ ಸಿಟ್ಟಿನಿಂದ ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸದನದಲ್ಲಿ ಇರಲಿಲ್ಲ. ಯತ್ನಾಳರು ಸದನದ ಹೊರಗೆ ಭಿನ್ನಮತೀಯರಾಗಿ ಗುರುತಿಸಿಕೊಂಡಿರುವುದರಿಂದ ಸದನದ ಒಳಗಿನ ಈ ಸಂಗತಿ ಗಮನ ಸೆಳೆಯಿತು. ಯತ್ನಾಳರ ಜೊತೆ ತಮ್ಮ ಪಕ್ಷದ ಕೆಲವು ಸದಸ್ಯರು ಬಾವಿಗೆ ಇಳಿದ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೌನವಾಗಿ ತಮ್ಮ ಆಸನದಲ್ಲಿ ಕೂತಿದ್ದರು. ಈ ವಿಷಯವಾಗಿ ಅವರು ಏನನ್ನೂ ಮಾತನಾಡದೇ ಇದ್ದುದೂ ಕೂಡ ಗಮನ ಸೆಳೆಯಿತು. ಆಡಳಿತ ಪಕ್ಷಕ್ಕೆ ಸದನದ ಒಳಗೆ ಮುಜುಗರಕ್ಕೆ ಈಡು ಮಾಡಿರಬಹುದಾದ ಘಟನೆ ಇದಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ