ವಸತಿ ರಹಿತರಿಗೆ ಸ್ಪಂದಿಸದ ಅಧಿಕಾರಿಗಳ ಮೇಲೆ ಪರಮೇಶ್ವರ್ ಗರಂ

ಕೊರಟಗೆರೆ :

      ಏ… ನಿಮಗೆ ದೇವರು ಒಳ್ಳೇದು ಮಾಡುತ್ತಾನಾ? ಸರ್ಕಾರಿ ಸಂಬಳ ತಗೊಂಡು ಬಡವರಿಗೆ ಕೆಲಸ ಮಾಡದೇ ಕಾಲಹರಣ ಮಾಡಲು ಬರುತ್ತೀರಾ ಎಂದು ಶಾಸಕ ಡಾ.ಜಿ ಪರಮೇಶ್ವರ್ ಬುಕ್ಕಪಟ್ಟಣ ಗ್ರಾ.ಪಂ ನ ಪಿಡಿಒ, ಕಾರ್ಯದರ್ಶಿ ಹಾಗೂ ತಾ.ಪಂ ಕಾರ್ಯನಿರ್ವಹಣಾಧಿಕಾರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

      ತಾಲ್ಲೂಕಿನ ಚನ್ನರಾಯನದುರ್ಗ ಮತ್ತು ಕೋಳಾಲ ಹೋಬಳಿಯ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆಯ ಎಸ್‍ಸಿಪಿ, ಟಿಎಸ್‍ಪಿ ಯೋಜನೆಯ 2.80 ಕೋಟಿ ರೂಗಳ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಶಾಲಾ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎನ್ ದುರ್ಗ ಹೋಬಳಿಯ ಬುಕ್ಕಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಪರಿಶಿಷ್ಟ ಜಾತಿಯವರು ವಾಸಿಸುತ್ತಿರುವ ಗಾಂಧಿನಗರದಲ್ಲಿ 15 ಲಕ್ಷ ರೂ.ಗಳ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲು ಬಂದ ಡಾ.ಜಿ ಪರಮೇಶ್ವರ್, ಅಲ್ಲಿನ ಗುಡಿಸಲುಗಳನ್ನು ಕಂಡು ಚಿಕ್ಕಗುಡಿಸಿಲಿನಲ್ಲಿ ವಾಸವಾಗಿದ್ದ ಸಿದ್ದರಾಜು ಕುಟುಂಬದವರನ್ನು ಭೇಟಿ ಮಾಡಿ ಸರ್ಕಾರಕ್ಕೆ ಮನೆಗಾಗಿ ಅರ್ಜಿ ಸಲ್ಲಿಕೆಯನ್ನು ಪರಿಶೀಲಿಸಿದರು. ಅಲ್ಲಿನ ಪಿಡಿಒ ಸುನೀಲ್ ಮತ್ತು ಕಾರ್ಯದರ್ಶಿ ಚಿಕ್ಕರಂಗಯ್ಯ ಬಡಜನರಿಗೆ ಸಮರ್ಪಕವಾಗಿ ಮಾಹಿತಿ ನೀಡದೇ ಸ್ಪಂದಿಸದೇ ಇರುವುದು ಕಂಡು ಬಂದು ಸ್ಥಳದಲ್ಲಿ ಹಾಜರಿದ್ದ ಚಿಕ್ಕರಂಗಯ್ಯ ಮತ್ತು ತಾ.ಪಂ ಇಒ ಶಿವಪ್ರಕಾಶ್ ರವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಹಿಂದಿನ ಸರ್ಕಾರದಿಂದಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡವರಿಗೆ ಮನೆಗಳನ್ನು ಮಂಜೂರು ಮಾಡುತ್ತಿದೆ. ನೀವುಗಳು ಇಂತಹ ಬಡವರ ಮನೆಗಳನ್ನು ಪಟ್ಟಿ ಮಾಡಿಕೊಡಲು ನಿಮಗೇನು ಬಂದಿದೆ ರೋಗ? ದೇವರು ನಿಮಗೆ ಎಂದಿಗೂ ಒಳ್ಳೆಯದು ಮಾಡಲ್ಲ ಎಂದ ಅವರು ಕೂಡಲೇ ಈ ಕಾಲೋನಿಯ ಗುಡಿಸಿನಲ್ಲಿರುವ ಎಲ್ಲಾ ಕುಟುಂಬಗಳ ಪಟ್ಟಿ ಮಾಡಲು ಇ.ಒ ಗೆ ಆದೇಶಿಸಿದರು.

ನಂತರ ವಿವಿಧ ಕಾಮಗಾರಿಗಳನ್ನು ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಿದ ಶಾಸಕರು ಕೋಳಾಲ ಹೋಬಳಿಯ ಡಿ ನಾಗೇನಹಳ್ಳಿ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕ ರಾಜ್ಯವು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸುವುದರೊಂದಿಗೆ ಮೂಲಭೂತ ಸೌಕರ್ಯಗಳನ್ನು ಸಹ ಒದಗಿಸುತ್ತಿದೆ. ಮುಂಬರುವ ದಿನಗಳಲ್ಲಿ ನಾವುಗಳು ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕಾಗುತ್ತದೆ. ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲು ಸಹ ಪ್ರಾರಂಭಿಕ ಆಂಗ್ಲ ಶಿಕ್ಷಣಕ್ಕಾಗಿ ಬೇಡಿಕೆಗಳು ಸ್ಥಳೀಯರು ಮತ್ತು ವಿದ್ಯಾರ್ಥಿಗಳಿಂದ ಬರುತ್ತಿದ್ದು ಜಗತ್ತಿನ ಸಂಪರ್ಕ ಕಲ್ಪಿಸುವ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆಂಗ್ಲ ಮಾಧ್ಯಮ ಅತ್ಯವಶ್ಯಕವಿದೆ.

      ಇದಕ್ಕಾಗಿಯೇ ಹಿಂದಿನ ಸಮ್ಮಿಶ್ರ ಸಕಾರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಿ ಅವುಗಳನ್ನು ಖಾಸಗಿ ಶಾಲೆಗಳ ಪೈಪೋಟಿಗೆ ಸಮಾನಾಂತರವಾಗಿ ಮಾಡುವಂತಹ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿ ದೇಶದಲ್ಲಾಗಿದ್ದು, ಹೆಣ್ಣುಮಕ್ಕಳ ಶಿಕ್ಷಣಕ್ಕೆ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ರವರು ನೀಡಿದಂತಹ ಕೊಡುಗೆ, ಹೋರಾಟ ಮತ್ತು ತ್ಯಾಗ ಅತ್ಯಂತ ಸ್ಮರಣೀಯವಾದದ್ದು. ಅದರ ಫಲವೇ ಇಂದಿನ ಮಹಿಳೆಯರು ಎಲ್ಲಾ ರಂಗದಲ್ಲಿ ಸಾಧನೆ ಮಾಡುತ್ತಿರುವುದು ಎಂದ ಅವರು, ಗ್ರಾಮ ಪಂಚಾಯತಿಗಳು ಪಕ್ಷಾತೀತವಾಗಿ ಕೆಲಸ ಮಾಡಬೇಕಿದ್ದು, ಸಂವಿಧಾನ, ಸರ್ಕಾರ ಮತ್ತು ವ್ಯವಸ್ಥೆ ನೀಡಿರುವ ಅಧಿಕಾರ ಮತ್ತು ಆಡಳಿತಾತ್ಮಕ ಕೆಲಸಗಳನ್ನು ಕಾನೂನು ಬದ್ದವಾಗಿ ಜನರಿಗೆ ನೀಡಲು ಸರ್ಕಾರದಿಂದ ನೇರ ಶಕ್ತಿಯನ್ನು ತುಂಬುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಂಡು ಸಾರ್ವಜನಿಕರ ಸೇವೆ ಮಾಡಲು ಸಲಹೆ ನೀಡಿ ಅದಕ್ಕಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷ ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ತಹಶೀಲ್ದಾರ್ ಗೋವಿಂದರಾಜು,ಇಒ ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್, ಎಇಇ ಉಮಾಮಹೇಶ್, ಕೃಷಿ ಅಧಿಕಾರಿ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅರಕೆರೆ ಶಂಕರ್, ಅಶ್ವತ್ಥನಾರಾಯಣ್, ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್ ದಿನೇಶ್, ಜೆಡಿಎಸ್ ಕಾರ್ಯಾಧ್ಯಕ್ಷ ನರಸಿಂಹರಾಜು, ಯುವಕಾಂಗ್ರೆಸ್ ಅಧ್ಯಕ್ಷ ವಿನಯ್‍ಕುಮಾರ್, ಗ್ರಾ,ಪಂ ಅಧ್ಯಕ್ಷರುಗಳಾದ ನಿಂಗಮ್ಮ, ರತ್ನಮ್ಮ, ಉಪಾಧ್ಯಕ್ಷೆ ಸಿದ್ದಗಂಗಮ್ಮ, ಮುಖಂಡರುಗಳಾದ ಎಲ್ ರಾಜಣ್ಣ, ಚಂದ್ರಶೇಖರ್ ಗೌಡ, ಸೀಗೆಪಾಳ್ಯ ಮಲ್ಲಪ್ಪ, ಎ.ಡಿ.ಬಲರಾಮಯ್ಯ, ಚಿಕ್ಕರಂಗಯ್ಯ, ಸುರೇಶ್, ನರಸಿಂಹಯ್ಯ, ಗಟ್ಲಹಳ್ಳಿ ರವಿಕುಮಾರ್, ಗೊಂದಿಹಳ್ಳಿ ರಂಗರಾಜು, ದೇವರಾಜು ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link