ತುಮಕೂರು : ಬ್ಯಾಂಕ್/ಎಟಿಎಂ ಹೊರಗೂ ಸಿಸಿ ಕ್ಯಾಮೆರಾ ಅಳವಡಿಸಿ

 ತುಮಕೂರು:

      ಗ್ರಾಹಕರ ಹಣದ ಭದ್ರತಾ ದೃಷ್ಟಿಯಿಂದ ಬ್ಯಾಂಕು/ಎಟಿಎಂ ಕೇಂದ್ರಗಳ ಒಳ ಭಾಗದಲ್ಲಲ್ಲದೆ ಹೊರ ಭಾಗದಲ್ಲಿಯೂ ಸಹ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಬ್ಯಾಂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಮಟ್ಟದ ಭದ್ರತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಬ್ಯಾಂಕ್ ಅಧಿಕಾರಿಗಳು ಪ್ರತಿದಿನ ಸಿಸಿಕ್ಯಾಮೆರಾ ರೆಕಾರ್ಡಿಂಗ್ ಅನ್ನು ಪರಿಶೀಲಿಸಬೇಕು. ಬ್ಯಾಂಕು ಹಾಗೂ ಎಟಿಎಂಗಳ ಸುತ್ತ-ಮುತ್ತ ಗಿಡಗಂಟೆಗಳಿದ್ದರೆ ಸ್ವಚ್ಛತೆ ಮಾಡಿ ರಾತ್ರಿ ಹೊತ್ತು ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸಿರಬೇಕು ಎಂದು ಸೂಚಿಸಿದರಲ್ಲದೆ ಇತ್ತೀಚೆಗೆ ಮೊಬೈಲ್/ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರು ಹಣದ ವಂಚನೆಗೊಳಗಾಗುತ್ತಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವುದರಿಂದ ಗ್ರಾಹಕರು ವಂಚಕರಿಂದ ಎಚ್ಚರಿಕೆ ವಹಿಸುವ ಕುರಿತು ಬ್ಯಾಂಕುಗಳು ಅರಿವು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕೆಂದು ನಿರ್ದೇಶನ ನೀಡಿದರು.

      ಅಗ್ನಿಶಾಮಕ ಇಲಾಖೆಯಿಂದ ಜಿಲ್ಲೆಯಲ್ಲಿರುವ 5 ನಗದು ಕೋಶ(ಕರೆನ್ಸಿ ಚೆಸ್ಟ್)ಗಳ ಅಧಿಕಾರಿ/ಸಿಬ್ಬಂದಿಗಳಿಗೆ ಬೆಂಕಿ-ಅವಘಡ ಸಂಭವಿಸಿದಾಗ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತರಬೇತಿ ನೀಡಬೇಕು ಹಾಗೂ ಎಲ್ಲ ಎಟಿಎಂಗಳಲ್ಲಿ ಅಗ್ನಿ ನಂದಕಗಳನ್ನು ಅಳವಡಿಸಬೇಕೆಂದು ಸೂಚಿಸಿದರು.

     ಲೀಡ್ ಬ್ಯಾಂಕ್ ಮ್ಯಾನೇಜರ್ ನಾ. ನಾರಾಯಣಸ್ವಾಮಿ ಮಾತನಾಡಿ ಬ್ಯಾಂಕಿನ ಆರ್ಥಿಕ ಸಾಕ್ಷರತಾ ಸಲಹೆಗಾರರ ಮೂಲಕ ಈಗಾಗಲೇ ವಿವಿಧ ಗ್ರಾಮಗಳಲ್ಲಿ ಗ್ರಾಹಕರಿಗಾಗಿ ಅರಿವು ಕಾರ್ಯಕ್ರಮಗಳನ್ನು ಹಮಿಕೊಳ್ಳಲಾಗಿದ್ದು, ಮುಂದೆಯೂ ಹಮ್ಮಿಕೊಳ್ಳಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಮುಖ್ಯ ವ್ಯವಸ್ಥಾಪಕ ಜ್ಯೋತಿಗಣೇಶ್ ಮಾತನಾಡಿ ಯಾವುದೇ ಬ್ಯಾಂಕ್ ಅಧಿಕಾರಿಗಳು ಫೋನ್ ಮೂಲಕ ಕಾರ್ಡ್ ನಂಬರ್/ಸಿವಿವಿ ನಂಬರ್/ಓಟಿಪಿ ಸಂಖ್ಯೆಯನ್ನು ಪಡೆಯುವುದಿಲ್ಲ. ಗ್ರಾಹಕರು ತಮ್ಮ ಮೊಬೈಲ್‍ನಲ್ಲಿ ಯಾವುದೇ ಡೆಸ್ಕ್ ಆಪ್‍ಗಳನ್ನು ಡೌನ್‍ಲೋಡ್ ಮಾಡಬೇಡಿ ಎಂದು ಮನವಿ ಮಾಡಿದರು.

      ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹಾಲಿಂಗ್ ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿರುವ ಎಲ್ಲ ನಗದು ಕೋಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿ ಸಂರಕ್ಷಣಾ ನಕ್ಷೆಯನ್ನು ಅಳವಡಿಸಲಾಗಿದ್ದು, ನಗದು ಕೋಶದ ಅಧಿಕಾರಿ/ಸಿಬ್ಬಂದಿಗಳಿಗೆ ಅಗ್ನಿ ನಂದಿಸುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅಗತ್ಯ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ. ವಂಶಿಕೃಷ್ಣ ಮಾತನಾಡಿ ವಂಚಕರು ಮೊಬೈಲ್ ಮೂಲಕ ಬ್ಯಾಂಕ್ ಅಧಿಕಾರಿಗಳೆಂದು/ ಇನ್ಷುರೆನ್ಸ್ ಕಂಪನಿಯವರೆಂದು ನಂಬಿಸಿ ವಾಟ್ಸ್ ಆಪ್ ಸಂದೇಶ ಕಳುಹಿಸಿ ಮೋಸದಿಂದ ಹಣ ವಂಚನೆ ಮಾಡುತ್ತಿದ್ದಾರೆ. ನಕಲಿ ಕಾರ್ಡುಗಳನ್ನು ತಯಾರಿಸುವ, ಎಟಿಎಂ ಯಂತ್ರಗಳನ್ನೆ ಕದ್ದೊಯ್ಯುವ ಕಳ್ಳರಿದ್ದು, ಬ್ಯಾಂಕುಗಳು ಇಂಥವರ ಮೇಲೆ ನಿಗಾವಹಿಸಬೇಕೆಂದು ಸೂಚಿಸಿದರು.

     ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಎಂ.ವಿ. ಶೇಷಾದ್ರಿ ಮಾತನಾಡಿ ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಜನ್ಮದಿನಾಂಕ, ಬ್ಯಾಂಕ್ ಮಾಹಿತಿ, ಓಟಿಪಿ ಸಂಖ್ಯೆ, ಮತ್ತಿತರ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು. ಆನ್‍ಲೈನ್ ಮೂಲಕ ವಂಚನೆಗೊಳಗಾದವರು ಕೂಡಲೇ ಪೊಲೀಸ್ ಇನ್ಸ್‍ಪೆಕ್ಟರ್, ಸಿಇಎನ್ ಪೊಲೀಸ್ ಠಾಣೆ(ದೂ.ಸಂ. 0816-2271479)ಗೆ ದೂರು ನೀಡಬಹುದಾಗಿದೆ ಎಂದು ತಿಳಿಸಿದರು.

     ಈ ಸಂದರ್ಭದಲ್ಲಿ ವಿವಿಧ ಬ್ಯಾಂಕುಗಳ ಅಧಿಕಾರಿಗಳು, ಮತ್ತಿತರರು ಉಪಸ್ಥತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link