ಹುಳಿಯಾರು :
ಹುಳಿಯಾರು ಸಮೀಪದ ಕಾಮಶೆಟ್ಟಿಪಾಳ್ಯ ಮತ್ತು ಸೋಮಜ್ಜನಪಾಳ್ಯ ಗ್ರಾಮಗಳಿಂದ ಹಾದು ಹೋಗಿ ರಾಷ್ಟ್ರೀಯ ಹೆದ್ದಾರಿಗೆ ಸೇರುವ ರಸ್ತೆಯನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ಸೇರಿಸುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಹುಳಿಯಾರು ಪಟ್ಟಣದ ಎಪಿಎಂಸಿ ಬಳಿಯ ರಾಷ್ಟ್ರೀಯ ಹೆದ್ದಾರಿ 234 ಯಿಂದ ಸೋಮಜ್ಜನಪಾಳ್ಯ ಮತ್ತು ಕಾಮಶೆಟ್ಟಿಪಾಳ್ಯದ ಮೂಲಕ ಮತ್ತೊಂದು ರಾಷ್ಟ್ರೀಯ ಹೆದ್ದಾರಿ 150 ಎ ಗೆ ಸೇರುವ ಈ ರಸ್ತೆಯನ್ನು ದಶಕಗಳ ಹಿಂದೆ ಎಪಿಎಂಸಿ ನಿಧಿಯಿಂದ ಮಾಡಿಸಲಾಗಿತ್ತು.
ಅಲ್ಲಿಂದ ಇತ್ತ ಕಾಲಕಾಲಕ್ಕೆ ರಸ್ತೆ ದುರಸ್ತಿ ಮಾಡದ ಪರಿಣಾಮ ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನಗಳಿರಲಿ ನಡೆದಾಡುವುದು ಸಹ ಕಷ್ಟ ಎನ್ನುವಂತ್ತಾಗಿದೆ. ಮಳೆಗಾಲದಲ್ಲಿ ಕೆಸರು ಗದ್ದೆಯಾಗಿಯೂ, ಬೇಸಿಗೆಯಲ್ಲಿ ಜಲ್ಲಿ ಮತ್ತು ಧೂಳಿನ ರಸ್ತೆಯಾಗಿ ಪರಿವರ್ತನೆಯಾಗುತ್ತದೆ.
ಈ ರಸ್ತೆಯಲ್ಲಿ ನಿತ್ಯ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ, ಕೂಲಿಕಾರ್ಮಿಕರು ಪಟ್ಟಣಕ್ಕೆ ಕೆಲಸಕ್ಕೆ ಓಡಾಡುತ್ತಾರೆ. ಅಲ್ಲದೆ ಹಾಲಿನ ಡೇರಿ ವಾಹನಗಳು, ರೈತರ ಟ್ರ್ಯಾಕ್ಟರ್ಗಳು, ಬೀದಿಬದಿ ವ್ಯಾಪಾರಿಗಳ ವಾಹನಗಳು ನಿತ್ಯ ಸಂಚರಿಸುತ್ತವೆ.
ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ರಸ್ತೆ ದುರಸ್ತಿ ಮಾಡಿಸಲು ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪರಿಣಾಮ ದಿನದಿಂದ ದಿನಕ್ಕೆ ರಸ್ತೆ ತೀರ ಅಧ್ವಾನವಾಗುತ್ತಿದೆ. ಗುಂಡಿ ಬಿದ್ದಿರುವ ರಸ್ತೆಯಲ್ಲಿ ಈಗಾಗಲೇ ದ್ವಿಚಕ್ರ ವಾಹನಗಳ ಸವಾರರು ಬಿದ್ದು ಗಾಯಗೊಂಡಿದ್ದಾರೆ.
ಹಾಗಾಗಿ ಈ ರಸ್ತೆಯನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಸೇರಿಸಿ ಗುಣಮಟ್ಟದ ರಸ್ತೆ ಮಾಡಿ ಇಲ್ಲಿನ ಜನರ ಸುಗಮ ಸಂಚಾರಕ್ಕೆ ನೆರವಾಗುವಂತೆ ಕಾಮಶೆಟ್ಟಿಪಾಳ್ಯ ಮತ್ತು ಸೋಮಜ್ಜನಪಾಳ್ಯದ ನಿವಾಸಿಗಳು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
