ಪಾವಗಡ :

ಕೋವಿಡ್ ಭಯಾನಕ ಸ್ಥಿತಿಯಲ್ಲಿ 2020 ಏಪ್ರಿಲ್ ತಿಂಗಳಿನಿಂದ ಸ್ಥಗಿತಗೊಂಡಿದ್ದ ಕುಷ್ಠರೋಗಿಗಳ ಅಂಗವಿಕಲತೆಯ ಪುನರ್ ನಿರ್ಮಾಣ ಶಸ್ತ್ರ ಚಿಕಿತ್ಸೆಗಳು ಆರಂಭವಾಗುತ್ತಿರುವುದು ನಿಜಕ್ಕೂ ಸಂತೋಷಕರವಾದ ವಿಚಾರವೇ ಸರಿ. ಈ ಶಸ್ತ್ರ ಚಿಕಿತ್ಸೆ ಅತ್ಯಂತ ಸೂಕ್ಷ್ಮತರವಾಗಿದ್ದು ಮತ್ತು ದುಬಾರಿ ವೆಚ್ಚವಾಗುವ ನಿಟ್ಟಿನಲ್ಲಿ ಕಳೆದ 28 ವರ್ಷಗಳಿಂದ ಏಕಪ್ರಕಾರವಾಗಿ ಮೂರು ತಿಂಗಳಿಗೊಮ್ಮೆ ಸತತವಾಗಿ ಈ ಶಸ್ತ್ರ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನಡೆಸಿಕೊಂಡು ಬರುತ್ತಿರುವುದು ಎಲ್ಲರಿಗೂ ತಿಳಿದ ಅಂಶವೇ ಸರಿ.
ಈ ನಿಟ್ಟಿನಲ್ಲಿ ಇದೀಗ ಸರಿಸುಮಾರು 12 ಜನರಿಗೆ ಕುಷ್ಠ ರೋಗಿಗಳ ಶಸ್ತ್ರ ಚಿಕಿತ್ಸೆಗೆ ಕೋವಿಡ್ ನೀತಿ ನಿಯಮಗಳ ಪ್ರಕಾರ ಆಸ್ಪತ್ರೆಯು ಅಣಿಯಾಗಿದೆ ಎಂದು ಸ್ವಾಮಿ ಜಪಾನಂದಜೀ ತಿಳಿಸಿರುತ್ತಾರೆ. ಇಡೀ ರಾಜ್ಯದಲ್ಲಿಯೇ ಈ ತೆರನಾದ ಸಂಪೂರ್ಣ ಉಚಿತವಾಗಿ ಅತ್ಯಂತ ದುಬಾರಿಯಾದ ಅಂದರೆ ಲಕ್ಷಾಂತರ ರೂಪಾಯಿಯ ಶಸ್ತ್ರ ಚಿಕಿತ್ಸೆಗಳನ್ನು ಉಚಿತವಾಗಿ ಹಾಗೂ ನಿರಂತರವಾಗಿ ನಡೆಸುತ್ತಿರುವ ಏಕೈಕ ಸಂಸ್ಥೆ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಪಾವಗಡ. ಈ ಯೋಜನೆಗೆ ನುರಿತ, ಅನುಭವಿ ಶಸ್ತ್ರ ಚಿಕಿತ್ಸಕರನ್ನು ಹಾಗೂ ಔಷಧೋಪಚಾರಗಳಿಗೆ ಸಹಾಯ ಹಸ್ತ ನೀಡುತ್ತಿರುವ ಡೇಮಿಯನ್ ಫೌಂಡೇಷನ್ ಕಳೆದ 25 ವರ್ಷಗಳಿಂದ ನಿರಂತರವಾಗಿ ಸಹಕಾರ ನೀಡುತ್ತಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ಶಸ್ತ್ರ ಚಿಕಿತ್ಸೆಯು ನಾಡಿನ ಪ್ರಸಿದ್ಧ ಅಂಗವಿಕಲತೆಯ ಪುನರ್ ಜೋಡಣಾ ತಜ್ಞರಾದ ಡಾ. ಪ್ರಮೋದ್, ಕೀಲು ಮತ್ತು ಮೂಳೆ ತಜ್ಞರು, ಮಣಿಪಾಲ್ ಆಸ್ಪತ್ರೆ, ಬೆಂಗಳೂರು ರವರು ಹಾಗೂ ಡಾ.ಚಂದ್ರಕಲಾ ಜಿ.ಆರ್., ಒಃಃS ಆಐಔ ಆಓಃ, ಮುಖ್ಯ ವೈದ್ಯಾಧಿಕಾರಿಗಳು ಮತ್ತು ತಂಡದವರು ಈಗಾಗಲೇ ಸರಿಸುಮಾರು 542 ಅಂಗವಿಕಲ ಪುನರ್ ಜೋಡಣಾ ಶಸ್ತ್ರ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನಡೆಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ಶಸ್ತ್ರಚಿಕಿತ್ಸೆಗೆ ಒಳಗಾಗುವರು ಸರಿಸುಮಾರು 2 ತಿಂಗಳು ಆಸ್ಪತ್ರೆಯಲ್ಲಿಯೇ ಒಳರೋಗಿಗಳಾಗಿ ಉಳಿದುಕೊಂಡು ಊಟ, ವಸತಿ, ಔಷಧೋಪಚಾರ ಹಾಗೂ ಫಿಜಿಯೋಥೆರಪಿ ಮುಂತಾದ ಸೌಲಭ್ಯಗಳನ್ನು ಸಂಪೂರ್ಣ ಉಚಿತವಾಗಿ ಪಡೆಯುತ್ತಾರೆ. ಈ ಎಲ್ಲ ಸೌಕರ್ಯಗಳು ಆಶ್ರಮದ ಸಹಕಾರದಿಂದ ನೀಡಲಾಗುತ್ತದೆ ಎಂದರು.
ಈ ಬಾರಿಯ ರೋಗಿಗಳು ದಾವಣಗೆರೆ, ಬಳ್ಳಾರಿ, ಸಿಂಧನೂರು, ಸಿರಗುಪ್ಪ, ಹೂವಿನಹಡಗಲಿ, ಹೊಸಪೇಟೆ, ಪಾವಗಡ ಹಾಗೂ ತುಮಕೂರಿನಿಂದ ಬಂದಿರುತ್ತಾರೆ. ಸಾಮಾನ್ಯವಾಗಿ ರಾಜ್ಯದ ಹಾಗೂ ನೆರೆ ರಾಜ್ಯದ ರೋಗಿಗಳು ಈ ಯೋಜನೆಗೆ ಒಳಪಟ್ಟು ಬರುತ್ತಿರುವುದನ್ನು ಕಳೆದ ಮೂರು ದಶಕಗಳಿಂದ ಕಂಡಿರುತ್ತೇವೆ. ಈ ಬಾರಿಯ ವಿಶೇಷತೆ ಎಂದರೆ ಕೇವಲ ಹತ್ತು ವರ್ಷದ ಬಾಲಕನೊಬ್ಬನು ಕುಷ್ಠರೋಗದಿಂದ ತನ್ನ ಕೈಯ ಬೆರಳುಗಳ ವಿಕಲತೆಯನ್ನು ಪಡೆದುಕೊಂಡು ಅದನ್ನು ಸರಿಪಡಿಸಿಕೊಳ್ಳಲು ತನ್ನ ತಾಯಿಯ ಜೊತೆ ಸಂಡೂರಿನಿಂದ ಬಂದಿರುವುದು ನಿಜಕ್ಕೂ ಆಶ್ಚರ್ಯಕರವಾದ ವಿಚಾರ. ಕಾರಣ, ಈ ಬಾಲಕನಿಗೆ ಕಾಯಿಲೆ ಬಂದ ಕೂಡಲೇ ಸ್ಥಳೀಯ ವೈದ್ಯಾಧಿಕಾರಿಗಳು ಕಂಡು ಹಿಡಿದು ಔಷಧೋಪಚಾರವನ್ನು ನೀಡಿದ್ದಲ್ಲಿ ಈ ಅಂಗವಿಕಲತೆ ಬರುತ್ತಿರಲಿಲ್ಲ. ಭಾರತ ದೇಶದಲ್ಲಿ ಅದರಲ್ಲಿಯೂ ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ಈ ಭಯಾನಕ ಸ್ಥಿತಿ ಅಲ್ಲಲ್ಲಿ ಗೋಚರವಾಗುತ್ತಿರುವುದು ಈ ದೇಶದ ದುರದೃಷ್ಟಕರ. ಕೇಂದ್ರದ ಮೂಲಕ ಈವರೆವಿಗೆ ಸುಮಾರು 3850ಕ್ಕೂ ಮಿಗಿಲಾದ ರೋಗಿಗಳಿಗೆ ಕುಷ್ಠರೋಗದ ಸಂಪೂರ್ಣ ನಿರ್ಮೂಲನೆ ಮಾಡಿದ್ದು ಈ ಸಂಸ್ಥೆಯ ಮತ್ತೊಂದು ಹೆಗ್ಗಳಿಕೆ ಎಂದರು.
ಈ ಎಲ್ಲ ಔಷಧೋಪಚಾರಗಳು, ಊಟ ವಸತಿ, ವಸ್ತ್ರ, ಎಲ್ಲವನ್ನೂ ಉಚಿತವಾಗಿ ನೀಡುತ್ತಿರುವುದು ಈ ಸಂಸ್ಥೆಯ ವಿಶೇಷತೆ ಎನ್ನಬಹುದಾಗಿದೆ. ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರ, ಪಾವಗಡ ರಾಜ್ಯದಲ್ಲಿ ಹಾಗೂ ನೆರೆ ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು ಅದರಲ್ಲಿಯೂ ಸೇವಾ ಯೋಜನೆಗಳಿಗೆ ಹೆಸರುವಾಸಿಯಾಗಿರುವುದು ಅತ್ಯಂತ ಸಂತೋಷಕರವಾದ ವಿಚಾರವೇ ಸರಿ. ಈ ನಿಟ್ಟಿನಲ್ಲಿ ಈ ತೆರನಾದ ಸೇವಾ ಯಜ್ಞ ನಿರಂತರವಾಗಿ ನಡೆಯಲು ಸಹಕಾರ ನೀಡುತ್ತಿರುವ ಕೇಂದ್ರ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತುಮಕೂರು ಜಿಲ್ಲೆ ಕ್ಷಯರೋಗ ನಿಯಂತ್ರಣಾಧಿಕಾರಿಗಳು ಹಾಗೂ ಎಲ್ಲ ವೈದ್ಯಾಧಿಕಾರಿಗಳ ಸಹಕಾರ ಅತ್ಯಂತ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಇಲ್ಲಿ ಮರೆಯಬಾರದು. ಈ ನಿಟ್ಟಿನಲ್ಲಿ ಸ್ವಾಮೀಜಿಯವರು ಸಾರ್ವಜನಿಕರ ಹಾಗೂ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ ವರ್ಗದವರಿಗೆ ತಮ್ಮ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








