ತುಮಕೂರು :

ವಾಹನ ಸವಾರರೇ ಹೆಲ್ಮೆಟ್ ಧರಿಸಿದೆ, ನಿಗದಿಗಿಂತ ಹೆಚ್ಚು ಜನರನ್ನು ಕೂರಿಸಿಕೊಂಡು ಪೊಲೀಸರ ಕಣ್ತಪ್ಪಿಸಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರೆ, ಅಂತಹ ದುಸ್ಸಾಹಸಕ್ಕೆ ಇನ್ನಾದರೂ ಮುಂದಾಗದಿರಿ. ಪೊಲೀಸರ ಕಣ್ತಪ್ಪಿಸಿದರೂ ನಗರದ ಪ್ರಮುಖ ವೃತ್ತಗಳಲ್ಲಿನ ಸಿಸಿ ಕ್ಯಾಮೆರಾಗಳಲ್ಲಿ ನಿಮ್ಮ ಸಂಚಾರಿ ಉಲ್ಲಂಘನೆ ಸೆರೆಯಾಗಿ ಮನೆಗೆ ದಂಡದ ನೋಟಿಸ್ ರವಾನೆಯಾಗುತ್ತಿದೆ.
ಫೆ.11ರಿಂದ ನಗರದಲ್ಲಿ ಸ್ಮಾಟ್ ಸಿಟಿ ಮಿಷನ್, ಪೊಲೀಸ್ ಇಲಾಖೆ ಜಂಟಿಯಾಗಿ ಈ ವ್ಯವಸ್ಥೆಯನ್ನು ಚಾಲೂಗೊಳಿಸಿದ್ದು ಸದ್ಯ ಪ್ರಾಯೋಗಿಕ ಹಂತದಲ್ಲಿ ನಗರದ ಟೌನ್ಹಾಲ್(ಬಿಜಿಎಸ್) ವೃತ್ತ, ಬಟವಾಡಿ ವೃತ್ತ, ಡಾ.ಶ್ರೀ.ಶಿವಕುಮಾರಸ್ವಾಮೀಜಿ ವೃತ್ತ, ಕೋಡಿಬಸವೇಶ್ವರ ವೃತ್ತ, ಹಾಗೂ ಗುಬ್ಬಿಗೇಟ್ ಸರ್ಕಲ್ ಬಳಿ ಅತ್ಯಾಧುನಿಕ ಸಿಸಿ ಕ್ಯಾಮೆರಾ ಅಳವಡಿಸಿ ಹದ್ದಿನ ಕಣ್ಣಿನಂತೆ ವಾಹನ ಸವಾರರ ತಪ್ಪುಗಳನ್ನು ದಾಖಲಿಸಿ, ಸ್ವಯಂಚಾಲಿತ ದಂಡ ಪಾವತಿ ಚಲನ್ಗಳನ್ನು ವಾಹನ ಮಾಲೀಕರ ಮನೆಗೆ ರವಾನಿಸಲಾಗುತ್ತಿದೆ. ಕಳೆದ 15 ದಿನಗಳಲ್ಲಿ 500ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಮನೆಗೆ ತಲುಪಿದ ನೋಟಿಸ್ ಹಿಡಿದು ಈವರೆಗೆ ಮೂವತ್ತಕ್ಕೂ ಅಧಿಕ ಮಂದಿ ಕಮಾಂಡ್ ಸೆಂಟರ್, ಸಂಚಾರಿ ಠಾಣೆಗೆ ಬಂದು 15 ಸಾವಿರಕ್ಕೂ ಅಧಿಕ ಮೊತ್ತದ ದಂಡ ತೆತ್ತಿದ್ದಾರೆ.

ದಿನದ 24 ತಾಸು ಸ್ವಯಂಚಾಲಿತ ದಂಡ ವ್ಯವಸ್ಥೆ ಮಾ.1ರಿಂದ ಜಾರಿಗೆ ಬರುವುದಾಗಿ ಅಧಿಕಾರಿಗಳು ಹೇಳುತ್ತಿದ್ದು, ಸದ್ಯಕ್ಕೆ ಬೆಳಿಗ್ಗೆ 10 ರಿಂದ ಸಂಜೆ 6ರವರೆಗಿನ ಅವಧಿಯಲ್ಲಿನ ಸಂಚಾರಿ ನಿಯಮ ಉಲ್ಲಂಘನೆಗೆ ದಂಡ ವಿಧಿಸಲಾಗುತ್ತಿದೆ. ಹೆಲ್ಮೆಟ್ ಧರಿಸದೆ ವಾಹನ ಸವಾರ ಮಾಡುವವರಿಗೆ 500 ರೂ., ಮೂವರು ಬೈಕ್ನಲ್ಲಿ ಪ್ರಯಾಣಿಸುವ ಅಪರಾಧಕ್ಕೆ 1000 ರೂ. ದಂಡ ಕಟ್ಟಿಸಿಕೊಳ್ಳಲಾಗುತ್ತಿದ್ದು, ಸಿಗ್ನಲ್ ಜಂಪ್ ಮತ್ತಿತರ ಸಂಚಾರಿ ನಿಯಮ ಉಲ್ಲಂಘನೆಗೂ ಮುಂದಿನ ದಿನಗಳಲ್ಲಿ ದಂಡ ಬೀಳುವುದು ಪಕ್ಕಾವಾಗಲಿದೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಕಡೆ ಸಿಸಿ ಕ್ಯಾಮೆರಾ: ಸದ್ಯ ತುಮಕೂರು ನಗರದ 6 ವೃತ್ತಗಳಲ್ಲಿ ಸದ್ಯ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಉಳಿದ 5-6 ಆಯಕಟ್ಟಿನ ಸ್ಥಳಗಳಲ್ಲೂ ಅಳವಡಿಸಲು ಚಿಂತನೆ ನಡೆಸಲಾಗಿದೆ. ಯೋಜನೆ ಜಾರಿಯಾದ ಮೊದಲ ದಿನ ಫೆ.11ರಂದು 52 ಕೇಸ್ ದಾಖಲಾಗಿದ್ದು, ಇದರಲ್ಲಿ 48 ನೋ ಹೆಲ್ಮೆಟ್, 4 ಟ್ರಿಪಲ್ ರೈಡಿಂಗ್ ಕೇಸ್ಗಳಿದ್ದವು. ಪ್ರತಿದಿನ ಸರಾಸರಿ 50 ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿದ್ದು, ದಿನದ 24 ತಾಸು ಜಾರಿಗೊಳಿಸಿದರೆ ಪ್ರಕರಣಗಳ ಸಂಖ್ಯೆ ದುಪ್ಪಟಾಗುವುದರಲ್ಲಿ ಸಂಶಯವಿಲ್ಲ.
ವಿದ್ಯಾವಂತರು, ಯುವಜನರೇ ಹೆಚ್ಚು:
ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ವಿದ್ಯಾವಂತರು, ಯುವಜನರೇ ಹೆಚ್ಚಿನವರಾಗಿದ್ದು, ನಿಯಮಗಳ ಪರಿಪಾಲನೆಯಿಲ್ಲದೇ ಜೋಶ್ನಲ್ಲಿ ಬೈಕ್ ರೈಡಿಂಗ್ ಮಾಡಿ ದಂಡಕ್ಕೆ ಗುರಿಯಾಗುತ್ತಿದ್ದಾರೆ. ಸಿಸಿಟಿವಿಯಲ್ಲಿ ನಿಯಮ ಉಲ್ಲಂಘನೆ ಸೆರೆಯಾದ ಕೂಡಲೇ ಅವರ ವಾಹನ ಸಂಖ್ಯೆ ವಿವರವನ್ನು ಪತ್ತೆ ಹಚ್ಚಿ ಆಟೊಮೆಟಿಕ್ ಚಾಲೆಂಜಿಗ್ ಸಿಸ್ಟಮ್ ಮೂಲಕ ವಿಧಿಸಲಾದ ದಂಡದ ಚಲನ್ ನೇರವಾಗಿ ವಾಹನ ಮಾಲೀಕರ ಸ್ವಂತ ವಿಳಾಸಕ್ಕೆ ರವಾನೆಯಾಗುತ್ತಿದೆ. ನೋಂದಾಯಿತ ಮೊಬೈಲ್ ಸಂಖ್ಯೆಗೂ ಮಾಹಿತಿ ರವಾನೆಯಾಗುತ್ತಿದೆ.
ಚಲನ್ನಲ್ಲಿ ವಾಹನ ನೋಂದಾವಣಿ ; ಇಂಟಿಗ್ರೇಟೆಡ್ ಕಂಟ್ರೋಲ್ ಸೆಂಟರ್ನಲ್ಲಿ ನಿಗಾ
ಸ್ವಯಂ ಚಾಲಿತ ದಂಡ ವಿಧಿಸುವ ಈ ಪ್ರಕ್ರಿಯೆಯನ್ನು ನಗರದ ಪಾಲಿಕೆ ಆವರಣದ ಸ್ಮಾರ್ಟ್ ಸಿಟಿ ಇಂಟಿಗ್ರೇಟೆಡ್ ಸಿಟಿ ಮ್ಯಾನೇಜ್ಮೆಂಟ್ ಕಂಟ್ರೋಲ್ನಲ್ಲಿ ನಿರ್ವಹಿಸುತ್ತಿದ್ದು, ಅಲ್ಲಿ ಅಳವಡಿಸಲಾಗಿರುವ ದೊಡ್ಡ ಪರದೆಯಲ್ಲಿ ಸಿಸಿ ಟಿವಿ ದೃಶ್ಯಾವಳಿಗಳನ್ನು ಸ್ಮಾರ್ಟ್ಸಿಟಿ, ಪೊಲೀಸರು ಪರಿಶೀಲಿಸುತ್ತಿರುತ್ತಾರೆ. ದಂಡ ಶುಲ್ಕವನ್ನು ಈ ಕಮಾಂಡ್ ಸೆಂಟರ್, ಸಂಚಾರಿ ಠಾಣೆಯಲ್ಲಿ ಕಟ್ಟಲು ಸದ್ಯ ಅವಕಾಶ ಕಲ್ಪಿಸಲಾಗಿದೆ.
ನಿರ್ಲಕ್ಷಿಸಿದರೆ ನಿರಾಪೇಕ್ಷಣಾ ಪತ್ರಸಿಗೋಲ್ಲ
ಮನೆಗೆ ಬಂದ ದಂಡ ಪಾವತಿಯ ಇ-ಚಲನ್ ಅನ್ನು ವಾಹನ ಸವಾರರು ನಿರ್ಲಕ್ಷಿಸಿದರೆ, ಮುಂದೆ ಆರ್ಟಿಒ ಕಚೇರಿಯಲ್ಲಿ ಎಫ್ಸಿ, ಇನ್ಶೂರೆನ್ಸ್, ವರ್ಗಾವಣೆ ಮೊದಲಾದ ಪ್ರಕ್ರಿಯೆಗೆ ಅಡಚಣೆಯಾಗಲಿದೆ. ದಂಡ ಪಾವತಿಸಿದೆ ಹಾಗೆ ಉಳಿಸಿಕೊಂಡರೆ ವಾಹನ ಸಂಖ್ಯೆಯ ದಾಖಲೆಯಲ್ಲಿ ಅದು ಬಾಕಿ ಉಳಿಯಲಿದ್ದು, ಸಾರಿಗೆ ಇಲಾಖೆಯವರು ನಿರಾಪೇಕ್ಷಣ ಪತ್ರ (ಎನ್ಒಸಿ)ವನ್ನು ನೀಡುವುದೇ ಇಲ್ಲ.
ದಂಡ ಪಾವತಿಗಿಂತ ಜೀವ ಉಳಿಸಿಕೊಳ್ಳುವುದು ಮುಖ್ಯ
ಸ್ವಯಂಚಾಲಿತ ದಂಡ ವ್ಯವಸ್ಥೆ ವಾಹನ ಸವಾರರು ಸಂಚಾರಿ ನಿಯಮ ಪಾಲನೆ ಮಾಡಿ, ತಮ್ಮ ಅಮೂಲ್ಯ ಜೀವ ಉಳಿಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ಜಾರಿಗೆ ತಂದಿದ್ದು, ಅಪರಾಧ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಸ್ಮಾರ್ಟ್ ಸಿಟಿಯಾಗುತ್ತಿರುವ ತುಮಕೂರು ನಗರದಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯು ಅತೀಮುಖ್ಯವಾಗಿದೆ. ದಂಡ ಪಾವತಿಗಿಂತ ಹೆಚ್ಚಾಗಿ ನಿಯಮ ಪಾಲನೆ ಮಾಡುವ ಮೂಲಕ ಅಪಘಾತ ತಪ್ಪಿಸಿ, ತಮ್ಮ ಹಾಗೂ ಇತರರ ಜೀವರಕ್ಷಣೆ ಮಾಡಬೇಕಿದೆ ಎಂದು ಎಸ್ಪಿ ಡಾ.ಕೆ.ವಂಸಿಕೃಷ್ಣ ಹಾಗೂ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ರಂಗಸ್ವಾಮಿ ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
ಎಸ್.ಹರೀಶ್ ಆಚಾರ್ಯ
