ಕುಣಿಗಲ್ :  ಅವೈಜ್ಞಾನಿಕ ತೆರಿಗೆ ವಸೂಲಿ : ಸದಸ್ಯರ ಆರೋಪ

 ಕುಣಿಗಲ್ : 

      ಇಲ್ಲಿನ ಪುರಸಭೆಯವರು ಸರ್ಕಾರದ ಆದೇಶದ ಅನ್ವಯ ಆಸ್ತಿ ತೆರಿಗೆ ವಸೂಲಿ ಮಾಡದೆ ಮನಸೋ ಇಚ್ಛೆ ಪಟ್ಟಣದ ನಾಗರಿಕರಿಂದ ಕೋಟಿಗೂ ಹೆಚ್ಚು ಆಸ್ತಿ ತೆರಿಗೆ ವಸೂಲಿ ಮಾಡುವ ಮೂಲಕ ಹಗಲು ದರೋಡೆ ಮಾಡಿದ್ದಾರೆಂದು ಪುರಸಭೆಯ ಹಿರಿಯ ಸದಸ್ಯ ರಂಗಸ್ವಾಮಿ ಆರೋಪಿಸಿದರು.

      ಅವರು ಪಟ್ಟಣದ ಪುರಸಭೆಯ ವಿಶೇಷ ತುರ್ತು ಸಭೆಯನ್ನು ಕರೆದಿದ್ದ ಪುರಸಭಾಧ್ಯಕ್ಷರಾದ ಎಸ್.ಕೆ. ನಾಗೇಂದ್ರ ಅಧ್ಯಕ್ಷತೆಯಲ್ಲಿ ಜರುಗಿದ ವಿಶೇಷ ಸಭೆಯಲ್ಲಿ ಕಂದಾಯ ಪರಿಷ್ಕರಣೆಯ ಬಗ್ಗೆ ಇದ್ದ ವಿಷಯವನ್ನು ಕೈಗೆತ್ತಿಕೊಂಡು ಅಧಿಕಾರಿಗಳ ವರ್ತನೆಯನ್ನು ಖಂಡಿಸಿ ಅಧಿಕಾರಿಗಳು ತಮ್ಮ ಕೆಲಸ ಗೆಲ್ಲುವಾಗ ಸದಸ್ಯರನ್ನು ನಯವಾಗಿ ಬಳಸಿಕೊಂಡು ಮಾಡಬಾರದ ಕೆಲಸವನ್ನು ಮಾಡುತ್ತಾರೆ ಎಂದು ಆರೋಪಿಸಿದರು.

      2005-06ನೇ ಸಾಲಿನಲ್ಲಿ ಸರ್ಕಾರ 2.5 ಆಸ್ತಿ ತೆರಿಗೆಯನ್ನು ಏರಿಸುವಂತೆ ತಿಳಿಸಿ ತಮ್ಮ ತೆರಿಗೆಗಳನ್ನು ಕಾಲಕಾಲಕ್ಕೆ ಹೆಚ್ಚಿಸಿಕೊಂಡು ಸಂಪನ್ಮೂಲ ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರೂ ಸಹ ಪುರಸಭೆ 15ರಷ್ಟು ಆಸ್ತಿ ತೆರಿಗೆ ವಸೂಲು ಮಾಡುವಂತೆ ಸಭೆಯ ತೀರ್ಮಾನ ಕೈಗೊಂಡಿದ್ದರೂ ಕಂದಾಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಶೇಕಡಾ 50ರಷ್ಟು ಆಸ್ತಿ ತೆರಿಗೆಗಳನ್ನು ಜನರಿಂದ ವಸೂಲಿ ಮಾಡಿದ್ದಾರೆ. ಇದರಿಂದ ಬಡವರು ದುರ್ಬಲರಿಗೆ ತೊಂದರೆಯಾಗಿದೆ ಎಂದರು.

      ಬಿಜೆಪಿ ಸದಸ್ಯ ಕೃಷ್ಣ, ಶ್ರೀನಿವಾಸಮೂರ್ತಿ ಅರುಣ್ ಕುಮಾರ್ ರಾಮು ಸೇರಿದಂತೆ ಅನೇಕ ಸದಸ್ಯರು ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಪಂಪು ಮೋಟರ್ ರಿಪೇರಿಗೆಂದು ಈ ಸಾಲಿನಲ್ಲಿ 27 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಆರೋಪಿಸಿದರು. ಜೊತೆಗೆ 8ನೇ ವಾರ್ಡ್ 12 ಹಾಗೂ 23 ವಾರ್ಡ್‍ಗಳಲ್ಲಿ ಶುದ್ಧಕುಡಿಯುವ ನೀರಿನ ಘಟಕ ಆರಂಭಿಸಲು ಪ್ರತಿ ಘಟಕಕ್ಕೆ 8 ಲಕ್ಷ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು ಗುತ್ತಿಗೆದಾರರು ನಿಯಮ ಗಾಳಿಗೆ ತೂರಿ ತಮಗಿಷ್ಟ ಬಂದ ರೀತಿ ಕೆಲಸ ಮಾಡಿರುತ್ತಾರೆ ಎಂದು ದೂರಿ, ಈ ಟೆಂಡರ್ ಗುತ್ತಿಗೆಯನ್ನು ಸಾಮಾನ್ಯ ಸಭೆಯಲ್ಲಿ ವಜಾ ಮಾಡಿದ್ದು ಆದರೂ ಸಹ ಕೆಲಸ ಮಾಡಿರುವರು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

      ಸದಸ್ಯ ಕೃಷ್ಣ ಮಾತನಾಡಿ, ಶೇಕಡ 24 ಹಾಗೂ 7.2ರಲ್ಲಿ ಸಾಮಾನ್ಯ ಸಭೆಯ ಗಮನಕ್ಕೆ ತಾರದೆ ಕಾನೂನು ಅರಿವು ಕಾರ್ಯಾಗಾರ ನಡೆಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಕುಡಿಯುವ ನೀರಿಗೆ ಆಹಾಕಾರ ಉಂಟಾಗುವ ಪರಿಸ್ಥಿತಿ ಇದ್ದು ನೂರಕ್ಕೂ ಹೆಚ್ಚು ಬೋರ್ ವೆಲ್‍ಗಳು ಇದ್ದು ಇವುಗಳನ್ನು ಲಾಗ್ ಪುಸ್ತಕದಲ್ಲಿ ಬರೆದಿರಬೇಕೆಂದು ಒತ್ತಾಯಿಸಿದರು. ಆಸ್ತಿಯ ನಕಲ ಪ್ರತಿ ನೀಡಲು ಕ್ರಮಕೈಗೊಳ್ಳಬೇಕೆಂದು ಅರುಣ್ ಕುಮಾರ್ ಒತ್ತಾಯಿಸಿದರು.

ಮುಖ್ಯ ಅಧಿಕಾರಿ ರವಿಕುಮಾರ್ ಮಾತನಾಡಿ, 7950 ಆಸ್ತಿಗಳು ನೋಂದಣಿಯಾಗಿದ್ದು ಇದರಲ್ಲಿ 4200 ಅಧಿಕೃತ ಆಸ್ತಿಗಳಾಗಿದ್ದವು. ಉಳಿಕೆ ಖಾತೆಗಳು ಅಕ್ರಮದಿಂದ ಕೂಡಿರುವುದರಿಂದ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಂಡ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.

      ಸದಸ್ಯೆ ಜಯಲಕ್ಷ್ಮಿ ಅವರು, ಪುಟ್‍ಪಾತ್‍ನಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡ್ಡಿದ್ದರೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ಚರಂಡಿ ಕಟ್ಟಿಕೊಂಡು ದುರ್ನಾತ ಬೀರುತ್ತಿದ್ದರೂ ಕ್ರಮಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದರು.

      ಜೊತೆಗೆ ಆನಂದ್ ಕುಮಾರ್ ಕೋಟೆ ನಾಗಣ್ಣ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಉಪಾಧ್ಯಕ್ಷರಾದ ಮಂಜುಳಾರಂಗಪ್ಪ ಸ್ಥಾಯಿ ಸಮಿತಿ ಅಧ್ಯಕ್ಷ ಸಮಿಉಲ್ಲಾ, ಮುಖ್ಯಾಧಿಕಾರಿ ರವಿಕುಮಾರ್, ಪರಿಸರ ಇಂಜಿನಿಯರ್ ಚಂದ್ರಶೇಖರ್, ಇಂಜಿನಿಯರ್ ಸುಮಾ, ಸೇರಿದಂತೆ ನೌಕರರ ವರ್ಗ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap