ಹುಳಿಯಾರು :
ಹುಳಿಯಾರಿನ ಎಪಿಎಂಸಿಯಲ್ಲಿ ಸರ್ಕಾರದ ಬೆಂಬಲ ಬೆಲೆಯಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರಕ್ಕೆ ಚಿಕ್ಕನಾಯಕಹಳ್ಳಿ ತಹಸೀಲ್ದಾರ್ ಬಿ.ತೇಜಸ್ವಿನಿ ಬುಧವಾರ ಸಂಜೆ ದಿಢೀರ್ ಭೇಟಿ ನೀಡಿ ಖರೀದಿ ಪ್ರಕ್ರಿಯೆಯ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ರಾಗಿ ಬೆಳೆಗಾರರು ಭಾನುವಾರವೂ ಸಹ ಖರೀದಿ ಮಾಡುವಂತೆಯೂ, ಇರುವ ಕೌಂಟರ್ ಜೊತೆಗೆ ಮತ್ತೊಂದು ಕೌಂಟರ್ ತೆರೆಯುವಂತೆಯೂ ತಹಸೀಲ್ದಾರ್ ಬಳಿ ಮನವಿ ಮಾಡಿದರು. ಶಿರಾದಲ್ಲಿನ ವೇರ್‍ಹೌಸ್ ಲಭ್ಯತೆ ಮಾಹಿತಿ ಪಡೆದು ಹಾಗೂ ಹಮಾಲಿಗಳ ಸಹಕಾರ ಕೇಳಿ ಭಾನುವಾರವೂ ಖರೀದಿ ಜೊತೆಗೆ ನಿತ್ಯವೂ ಮತ್ತೊಂದು ಕೌಂಟರ್ ತೆರೆಯುವ ಭರವಸೆ ನೀಡಿದರು.
ಹುಳಿಯಾರು ಖರೀದಿ ಕೇಂದ್ರದಲ್ಲಿ 4150 ರೈತರು ನೊಂದಣಿ ಮಾಡಿಸಿದ್ದು ಇದುವರೆವಿಗೂ 2300 ರೈತರಿಂದ 57 ಸಾವಿರ ಕ್ವಿಂಟಲ್ ರಾಗಿ ಖರೀದಿಸಲಾಗಿದೆ. ಸರ್ವರ್ ಸಮಸ್ಯೆ ಇದ್ದಾಗ ಮಾತ್ರ ಸ್ವಲ್ಪ ಖರೀದಿ ಪ್ರಕ್ರಿಯೆ ನಿಧಾನ ಆಗುತ್ತದೆ. ಉಳಿದಂತೆ ಬಹಳ ವೇಗವಾಗಿ ಖರೀದಿ ಮಾಡಲಾಗುತ್ತಿದೆ. ನಿತ್ಯ ಐವತ್ತು ಅರವತ್ತು ರೈತರು ಬಂದರೆ ಗಡಿಬಿಡಿಯಿಲ್ಲದೆ ಖರೀದಿಸಬಹುದು. ಆದರೆ ನೂರಾರು ರೈತರು ಒಮ್ಮೆಲೆ ಟ್ರ್ಯಾಕ್ಟರ್, ಲಾರಿ, ಟಾಟಾ ಏಸ್ ವಾಹನಗಳಲ್ಲಿ ಬಂದು ಎಪಿಎಂಸಿ ಬಳಿ ನಿಲ್ಲಿಸುತ್ತಿರುವುದು ಖರೀದಿಗೆ ಸ್ವಲ್ಪ ತೊಂದರೆಯಾಗಿದೆ ಎಂದರು.
ಮೊದಲಿನಿಂದಲೂ ಟೋಕನ್ ಕೊಡದೆ ಮೊದಲು ಬಂದ ರೈತರಿಂದ ರಾಗಿ ಖರೀದಿ ಮಾಡುತ್ತಿರುವುದರಿಂದ ಈಗ ಟೊಕನ್ ಕೊಡಲು ಬರುವುದಿಲ್ಲ. ಹಾಗಾಗಿ ಖರೀದಿ ಕೇಂದ್ರಕ್ಕೆ ಬಂದ ರೈತರನ್ನು ಆದಷ್ಟು ಬೇಗ ಕ್ಲಿಯರ್ ಮಾಡಿ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ ಅವರು, ಈ ತಿಂಗಳ ಕೊನೆ ವಾರದವರೆವಿಗೂ ರಾಗಿ ಖರೀದಿ ಮಾಡಲಾಗುವುದು. ಅಲ್ಲದೆ ಈಗಾಗಲೇ ಅರ್ಧಕ್ಕಿಂತ ಹೆಚ್ಚು ರೈತರಿಂದ ರಾಗಿ ಖರೀದಿಸಲಾಗಿದೆ. ಹಾಗಾಗಿ ನೂರಾರು ರೈತರು ಒಮ್ಮೆಲೆ ಬಂದು ದಿನಗಟ್ಟಲೆ ಕಾಯುವ ಬದಲು ಖರೀದಿಯ ಸಾಮಥ್ರ್ಯಕ್ಕೆ ಅನುಗುಣವಾಗಿ ರೈತರು ಬಂದು ಸಹಕರಿಸುವಂತೆ ಅವರು ರೈತರಲ್ಲಿ ಮನವಿ ಮಾಡಿದರು.
ಖರೀದಿ ಅಧಿಕಾರಿ ಶಿವಶಂಕರ್, ಗ್ರೇಡರ್ ನಟರಾಜು ಸೇರಿದಂತೆ ಕೃಷಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು, ರೈತರು, ಹಮಾಲರು ಈ ಸಂದರ್ಬದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ