ಗ್ರಾಮ ಪಂಚಾಯತಿ ಚುನಾವಣೆ ಜಿಲ್ಲೆಯಲ್ಲಿ ನಡೆದು ಮೊದಲ 30 ತಿಂಗಳ ಅವಧಿಗೆ ಅಧ್ಯಕ್ಷರು, ಉಪಾಧ್ಯಕ್ಷರುಗಳು ಆಯ್ಕೆಯಾಗಿ ತಿಂಗಳುಗಳೆ ಕಳೆದರೂ ಇನ್ನೂ ಸಂಬಂಧಪಟ್ಟ ಪಂಚಮಿತ್ರ ತಂತ್ರಾಂಶದಲ್ಲಿ ನೂತನ ಸದಸ್ಯರ ಹೆಸರುಗಳಾಗಲಿ ಹಾಗೂ ಸಾರ್ವಜನಿಕರಿಗೆ ನೀಡಬೇಕಾದ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಾಗಲಿ ಅಪ್‍ಡೇಟ್ ಮಾಡದಿರುವುದು ವಿಪರ್ಯಾಸ.
ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನದಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಾಜ್ಯ ಹಾಗೂ ಜಿಲ್ಲೆಯಲ್ಲಿನ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಸಿರಾ, ತಿಪಟೂರು, ತುಮಕೂರು, ತುರವೇಕೆರೆ ಸೇರಿದಂತೆ ಎಲ್ಲಾ ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯತಿಗಳು ಕಾರ್ಯನಿರ್ವಹಿಸುತ್ತಿವೆ. ಕೆಲವು ಕಡೆ ಸಾಮಾನ್ಯ ಸಭೆಗಳು ನಡೆದು ಹೋಗಿದ್ದರೂ ಸಹ ತಮ್ಮ ಗ್ರಾಪಂನ ಅಂತರ್ಜಾಲ ತಾಣದಲ್ಲಿ ಸಂಬಂಧಿಸಿದ ಪಂಚಮಿತ್ರ ತಂತ್ರಾಂಶದ ಲಿಂಕ್‍ನಲ್ಲಿ ಸೂಕ್ತವಾದ ಮಾಹಿತಿಗಳು ಲಭ್ಯವಿಲ್ಲ.
panchamitra.kar.nic.in ಲಿಂಕ್‍ನಲ್ಲಿ ತಮ್ಮ ಜಿಲ್ಲೆ ನಂತರ ತಾಲ್ಲೂಕುಗಳನ್ನು ಆಯ್ಕೆ ಮಾಡಿಕೊಂಡು ನಂತರ ಅವಶ್ಯವಿರುವ ಗ್ರಾಪಂ ಬಗ್ಗೆ ಕ್ಲಿಕ್ ಮಾಡಿದರೆ ಗ್ರಾಪಂನ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಗ್ರಾಪಂನ ಅಂತರ್ಜಾಲದ ಮುಖ ಪುಟದಲ್ಲಿ ಮೊದಲಿಗೆ ಸದಸ್ಯರು, ಸೇವೆಗಳು, ಯೋಜನೆಗಳು, ಪ್ರಗತಿ ಕಾಮಗಾರಿಗಳು, ಫಲಾನುಭವಿಗಳು ಹಾಗೂ ಎರಡನೇ ಸಾಲಿನಲ್ಲಿ ಸಾಮಾನ್ಯ ಮಾಹಿತಿ, ನರೇಗಾ, ಅಧಿಕಾರಿಗಳು, ಸಭಾ ನಡಾವಳಿಕೆಗಳು, ಆಸ್ತಿ ತೆರಿಗೆಗಳು, ಮೂರನೇ ಸಾಲಿನಲ್ಲಿ ಪಂಚಾಯತಿಯ ಆಸ್ತಿಗಳು, ಹೊಣೆಗಾರಿಕೆಗಳು, ಬ್ಯಾಲೆನ್ಸ್ ಶೀಟ್, ವೋಚರ್ ವರದಿಗಳು, ಟೆಂಡರ್‍ಗಳು, ನಾಲ್ಕನೇ ಸಾಲಿನಲ್ಲಿ ಅರ್ಜಿಯ ಸ್ಥಿತಿ, ಇ-ಸ್ವತ್ತು, ಎನ್‍ಬಿಎ/ಎಸ್‍ಬಿಎಂ, ಚಿತ್ರಗಳು, ಘಟನೆಗಳು, ಸಂಪರ್ಕಿಸಿ, ನಮ್ಮ ಗ್ರಾಮ ನಮ್ಮ ಯೋಜನೆ ಎಂಬ ಮಾಹಿತಿ ಗ್ರಾಪಂಗಳ ಅಂತರ್ಜಾಲದ ಮುಖಪುಟದಲ್ಲಿ ಈ ಸೇವೆಗಳು ದೊರೆಯುತ್ತವೆ. ಆದರೆ ಅವುಗಳ ಜೊತೆಗೆ ಇನ್ನೂ ಇತ್ತೀಚೆಗೆ ಆಯ್ಕೆಯಾದ ಸದಸ್ಯರ ಹೆಸರಾಗಲಿ ಅವರ ಭಾವಚಿತ್ರಗಳಾಗಲಿ, ದೂರವಾಣಿ ಸಂಖ್ಯೆಗಳಾಗಲಿ ಇದೂವರೆವಿಗೂ ಸರಿಯಾಗಿ ಅಪ್‍ಡೇಟ್ ಮಾಡಿಲ್ಲ.
ಈ ತಂತ್ರಾಂಶವನ್ನು ಪೂರ್ಣಗೊಳಿಸುವ ಜವಾಬ್ದಾರಿ ಹೊತ್ತಿರುವ ಪಿಡಿಓ ಮತ್ತು ಕಂಪ್ಯೂಟರ್ ಆಪರೇಟರ್‍ಗಳು ಈ ಸೇವೆಗಳನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಬೇಕಾಗಿತ್ತು. ಆದರೂ ಇದೂವರೆವಿಗೂ ಪೂರ್ಣಗೊಳಿಸಿಲ್ಲ. ಕೆಲ ಗ್ರಾಪಂಗಳಲ್ಲಿ ಸದಸ್ಯರ ಹೆಸರುಗಳಿದ್ದರೆ ಅವರ ಭಾವಚಿತ್ರ, ದೂರವಾಣಿ ಸಂಖ್ಯೆಗಳನ್ನು ಮಾತ್ರ ನಮೂದಿಸಿಲ್ಲ. ಇನ್ನೂ ಕೆಲ ಗ್ರಾಪಂ ಸಿಬ್ಬಂದಿ ಇದರ ಗೋಜಿಗೆ ಹೋಗಿಲ್ಲ. ಗ್ರಾಮ ಪಂಚಾಯತಿ ಸಮಗ್ರ ಮಾಹಿತಿ ಮತ್ತು ಚಟುವಟಿಕೆಗಳ ಬಗ್ಗೆ ಮಾಹಿತಿಗಳನ್ನು ಲಗತ್ತಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದು ಕಾಣಬಹುದಾಗಿದೆ.
ಕೇವಲ ತಂತ್ರಾಂಶದ ಮುಖಪುಟಗಳಲ್ಲಿ ನಮ್ಮ ಪಂಚಾಯತಿಯ ಬಗ್ಗೆ ಒಂದಿಷ್ಟು ಮಾಹಿತಿಯು ಲಭ್ಯವಿದ್ದು, ಇನ್ನುಳಿದ ಸೇವೆಗಳು ಓಬಿರಾಯನ ಕಾಲಕ್ಕೆ ಸೇರಿರುವ ಮಾಹಿತಿಗಳು ಇವೆ. ಕಾಲಕ್ಕೆ ತಕ್ಕಂತೆ ಮಾಹಿತಿ ನೀಡುವಲ್ಲಿ ಸಂಬಂಧಪಟ್ಟವರು ವಿಫಲರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಅಂಗೈಯಲ್ಲಿ ಮಾಹಿತಿ ಪಡೆದು ಕೊಳ್ಳಬಹುದೆಂದು ಕೆಲ ಅಧಿಕಾರಿಗಳು ಅಲ್ಲಲ್ಲಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಬಡಾಯಿ ಕೊಚ್ಚಿಕೊಳ್ಳುತ್ತಾರೆ ವಿನಹ, ಅವರೆ ಕಾರ್ಯ ನಿರ್ವಹಿಸುವ ಗ್ರಾಮ ಪಂಚಾಯತಿಗಳ ಮಾಹಿತಿಗಳು ಲಭ್ಯವಾಗಿಲ್ಲದಿರುವುದು ಕಂಡು ಬರುತ್ತಿದ್ದು, ಪಾರದರ್ಶಕವಾದ ಆಡಳಿತ ನೀಡಲು ಸಂಪೂರ್ಣ ವಿಫಲರಾಗುತ್ತಿದ್ದಾರೆ.
ಇನ್ನೂ ಕೆಲ ಪಂಚಾಯತಿಗಳಲ್ಲಿ ಬುದ್ದಿವಂತರು, ಪದವೀಧರರು ಆಯ್ಕೆಯಾಗಿದ್ದು, ಅವರ ಗ್ರಾಮ ಪಂಚಾಯತಿಗಳ ತಂತ್ರಾಂಶದ ಕಡೆ ಗಮನಹರಿಸಬೇಕಾಗಿದ್ದು, ಇತರ ಸದಸ್ಯರಿಗೂ ಮಾದರಿಯಾಗಬೇಕಿದೆ. ಇತ್ತೀಚೆಗೆ ನೂತನವಾಗಿ ಆಯ್ಕೆಯಾದ ಕೆಲ ಸದಸ್ಯರು ತಮ್ಮ ತಮ್ಮ ಗ್ರಾಪಂಗಳಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ತಮಗೆ ಮತ ನೀಡಿದ ಮತದಾರ ಪ್ರಭುಗಳಿಗೆ ಕಿಂಚಿತ್ತಾದರೂ ಸರ್ಕಾರಿ ಸೌಲಭ್ಯ ದೊರಕಿಸಿಕೊಡುವಲ್ಲಿ ಮುಂದಾಗುತ್ತಿದ್ದಾರೆ. ಇವರ ಜೊತೆಯಲ್ಲಿ ಪಿಡಿಓಗಳು ಸಹ ಕೈ ಜೋಡಿಸುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 2715 ಗ್ರಾಮಗಳಿಂದ ಒಟ್ಟಾರೆ ಶೇ. 75.14 ಸಾಕ್ಷರರಿದ್ದಾರೆ.
ಪ್ರಮುಖವಾಗಿ ಗ್ರಾಮಗಳು ಅಭಿವೃದ್ಧಿಯಾದರೆ ದೇಶವೆ ಅಭಿವೃದ್ಧಿಯಾಗುತ್ತದೆ ಎಂಬ ಉದ್ದೇಶವನ್ನು ಹೊಂದಿದ್ದರೂ ಸಹ ಸರ್ಕಾರ ಮೊದಲ ಹೆಜ್ಜೆಯಲ್ಲಿಯೇ ಎಡುವುತ್ತಿರುವುದು ಕಂಡು ಬರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯತಿಗಳ ಮಾಹಿತಿಗಳನ್ನು ಪಂಚಮಿತ್ರ ಅಂತರ್ಜಾಲದಲ್ಲಿ ಸೂಕ್ತ ಸಮಯಕ್ಕೆ ನೀಡಿದರೆ ಸಣ್ಣಪುಟ್ಟ ಅರ್ಜಿಗಳನ್ನು ಹಾಕುವುದು ತಪ್ಪುತ್ತದೆ. ಗ್ರಾಮಸ್ಥರ ಕಛೇರಿ ಅಲೆದಾಟವು ಕಡಿಮೆಯಾಗುತ್ತದೆ.
ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಗ್ರಾಪಂಗಳಿಗೆ ಆಯ್ಕೆಯಾದ ಸದಸ್ಯರಿಗೆ ಕಾರ್ಯ ನಿರ್ವಹಣೆಯ ತರಬೇತಿ ನೀಡಲಾಗುತ್ತಿದೆ. ಇವರುಗಳು ಪಂಚಮಿತ್ರ ತಂತ್ರಾಂಶದ ಮೂಲಕ ಸೌಲಭ್ಯಗಳನ್ನು ಸಾರ್ವಜನಿಕರಿಗೆ ದೊರಕಿಸಿ ಕೊಡಲು ಮುಂದಾಗುತ್ತಾರೆಯೊ ಅಥವಾ ಈ ತಂತ್ರಾಂಶವನ್ನು ಮೂಲೆಗುಂಪು ಮಾಡುತ್ತಾರೆಯೊ ಎಂಬುದನ್ನು ಕಾದು ನೋಡಬೇಕಾಗಿದೆ.
ಪಂಚಮಿತ್ರ ತಂತ್ರಾಂಶದಲ್ಲಿ ಇನ್ನೂ ಅಪ್‍ಡೇಟ್ ಮಾಡಿಲ್ಲದ ಸದಸ್ಯರು ಆಯ್ಕೆಯಾದ ತಕ್ಷಣ ಮಾಡಬೇಕಾಗಿತ್ತು. ಪಂಚಮಿತ್ರದಲ್ಲಿ ಸಂಪೂರ್ಣ ಮಾಹಿತಿಗಳನ್ನು ನಿರಂತರವಾಗಿ ಅಪ್‍ಡೇಟ್ ಮಾಡಿದರೆ ಮಾತ್ರ ಈ ತಂತ್ರಾಂಶ ಸದ್ಬಳಕೆಯಾಗಲು ಸಾಧ್ಯ.
– ಕಾಡ ಶೆಟ್ಟಿಹಳ್ಳಿ ಸತೀಶ್, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪಂಚಾಯತ್ ರಾಜ್ ಪರಿಷತ್.
ತಾಲ್ಲೂಕಿನ ವ್ಯಾಪ್ತಿಯ 39 ಗ್ರಾಮ ಪಂಚಾಯತಿಗಳ ಪಂಚಮಿತ್ರ ತಂತ್ರಾಂಶದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಹಾಗೂ ಕೂಡಲೆ ಸಂಪೂರ್ಣ ಮಾಹಿತಿಗಳನ್ನು ಅಪ್‍ಡೇಟ್ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗುವುದು.
– ಡಿ.ದೊಡ್ಡಸಿದ್ದಯ್ಯ, ತಾ.ಪಂ ಇಓ, ಮಧುಗಿರಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ