ತುಮಕೂರು :  ದಲಿತರ ಜಮೀನು ತೆರವಿಗೆ ಆಗ್ರಹಿಸಿ ಪ್ರತಿಭಟನೆ

ತುಮಕೂರು : 

ತಮ್ಮ ಹೆಸರಿನ ಇನಾಂ ಜಮೀನಿನಲ್ಲಿ ಬಲಾಢ್ಯ ಸಮುದಾಯದವರು ಅತಿಕ್ರಮಿಸಿ ಮನೆ ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದು, ತಮಗೆ ಆ ಜಮೀನು ಬಿಡಿಸಿಕೊಡಬೇಕು ಎಂದು ನಗರದ ಜಯರಾಮಯ್ಯ ಎಂಬುವವರು ಕುಟುಂಬದ ಸದಸ್ಯರೊಂದಿಗೆ ಬುಧವಾರ ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಿದರು.

      ನಗರದ ಜಯಪುರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆಯಲ್ಲಿ ಬಂದ ನೂರಾರು ಜನರು, ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಜಯರಾಮಯ್ಯ, ತುಮಕೂರು ಅಮಾನಿಕೆರೆ ಸರ್ವೆ ನಂ 269ರಲ್ಲಿ 1973-74ರಲ್ಲಿ ಕೋಲ್ಕಾರಿಕೆ ಇನಾಂ ಜಮೀನನ್ನು ಜಯರಾಮಯ್ಯ ಬಿನ್ ಮುನಿಸಿದ್ಧಲಿಂಗಯ್ಯ ಅವರಿಗೆ 3 ಎಕರೆ 04 ಗುಂಟೆ ಜಮೀನನ್ನು ತುಮಕೂರು ವಿಭಾಗಾಧಿಕಾರಿಗಳು ಮಂಜೂರು ಮಾಡಿದ್ದು, ಮಂಜೂರಾತಿ ಪತ್ರ ನೀಡಿರುತ್ತಾರೆ. ಅಂದಿನಿಂದ ಇಂದಿನವರೆಗೆ ಸದರಿ ಭೂಮಿಗೆ ಸಂಬಂಧಿಸಿದ ಕಂದಾಯವನ್ನು ಕಟ್ಟಿಕೊಂಡು ಬಂದಿದ್ದು, ಇಂದಿಗೂ ಖಾತೆ, ಪಹಣಿ ನಮ್ಮ ಹೆಸರಿನಲ್ಲಿದೆ ಎಂದು ಹೇಳಿದ್ದಾರೆ.

     ಸದರಿ ಭೂಮಿಯನ್ನು ಬಲಾಢ್ಯ ಸಮುದಾಯಕ್ಕೆ ಸೇರಿದವರು ಅತಿಕ್ರಮಿಸಿಕೊಂಡು ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಸದರಿ ಜಮೀನಿನಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಿ, ತಿಳುವಳಿಕೆ ನೀಡಲು ನಮ್ಮ ಅಣ್ಣತಮ್ಮಂದಿರುಗಳು ಹೋದಾಗ ತುಮಕೂರು ನಗರ ಠಾಣೆ ಪೊಲೀಸರು ನಮ್ಮಗಳ ಮೇಲೆಯೇ ಶಾಂತಿ ಭಂಗ ಪ್ರಕರಣ ದಾಖಲಿಸಿ, ತಾಲ್ಲೂಕು ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ನಾವು ಭೂಮಿಯ ಹತ್ತಿರ ಹೋಗದಂತೆ ತಡೆಯುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

      ಸದರಿ ಭೂಮಿಯನ್ನು ದಲಿತರಿಗೆ ಉಳಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳದೇ ಹೋದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link