ಕೋವಿಡ್ ಹಿನ್ನೋಟ -ಮುನ್ನೋಟ
ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ 2020 ಮಾ.24ರ ರಾತ್ರಿ 8ರ ಸಮಯಕ್ಕೆ ಸರಿಯಾಗಿ ಭಾರತದಲ್ಲಿ ಕೋವಿಡ್ ಹೆಚ್ಚಳದ ಕಾರಣಕ್ಕೆ ಧಾನಿ ನರೇಂದ್ರ ಮೋದಿ ದೇಶಾದ್ಯಂತ ಮೊದಲ ಹಂತದಲ್ಲಿ 21 ದಿನಗಳ ಲಾಕ್‍ಡೌನ್ ಘೋಷಿಸಿ ಅಂದು ಮಧ್ಯರಾತ್ರಿ 12ರಿಂದಲೇ ಜಾರಿಗೆ ಬರುವಂತೆ ಆದೇಶಿಸಿದರು. ಈ ಘೋಷಣೆ ಮಾಡಿ ಮಾ.25ಕ್ಕೆ ಸರಿಯಾಗಿ ಒಂದು ವರ್ಷ ಪೂರೈಸುತ್ತದೆ. ಮಾ.25ರಿಂದ ಮೇ 31ರವರೆಗೆ ಘೋಷಿಸಿದ ನಾಲ್ಕು ಹಂತದ ಲಾಕ್‍ಡೌನ್, ಜೂನ್‍ನಿಂದ ಶುರುವಾದ ಅನ್‍ಲಾಕ್ ಸರಣಿ ದೇಶದಲ್ಲಿ ಹಲವು ತಲ್ಲಣ, ಬದುಕಿನ ಪಾಠಗಳಿಗೆ ಸಾಕ್ಷಿಯಾಗಿದೆ.
ಈ ಒಂದು ವರ್ಷದಲ್ಲಿ ಭಾರತ, ಅದರಲ್ಲೂ ನಮ್ಮ ಕರ್ನಾಟಕ, ವಿಶೇಷವಾಗಿ ತುಮಕೂರು ಜಿಲ್ಲೆ ಹಲವು ವಿಧದಲ್ಲಿ ಸಂಕಷ್ಟವನ್ನು ಎದುರಿಸಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು, ಸಂಘ ಸಂಸ್ಥೆಗಳವರು, ಸ್ವಯಂಸೇವಕರು, ದಾನಿಗಳು ನಾನಾ ವಿಧದಲ್ಲಿ ಲಾಕ್‍ಡೌನ್‍ನಲ್ಲಿ ಜನ ಸಾಮಾನ್ಯರಿಗೆ ನೆರವಾದರೂ ಜನಜೀವನವನ್ನು ಸಹಜ ಸ್ಥಿತಿಗೆ ತರಲು ಸಾಧ್ಯವಾಗಿಲ್ಲ. ಏತನ್ಮಧ್ಯೆ ಲಸಿಕೆ ಬಂದರೂ ಮತ್ತೆ ಕೋವಿಡ್2ನೇ ಅಲೆಯ ಭೀತಿ ಜನರನ್ನು ಕಾಡತೊಡಗಿದೆ. ಸೋಂಕಿತರ ಸಂಖ್ಯೆ ಮತ್ತೆ ಏರಿಕೆ ಆಗ ತೊಡಗಿದ್ದು, ರಾಜ್ಯದಲ್ಲಿ ಏರಿಕೆ ಪ್ರಮಾಣ ಶೇ.2.3ರಷ್ಟು ಹೆಚ್ಚಾಗಿದೆ ಎಂಬುದು ಸರಕಾರದ ಅಂಕಿ ಅಂಶಗಳಲ್ಲೇ ಬೆಳಕಿಗೆ ಬಂದಿದೆ.
ಸೋಂಕಿತರ ಸಂಖ್ಯೆ 1.16 ಕೋಟಿಗೆ ಏರಿಕೆ!
ದೇಶದಲ್ಲಿ ಮಾ.23ರವರೆಗೆ 1.16 ಕೋಟಿ ಮಂದಿಗೆ ಕೋವಿಡ್ ಸೋಂಕು ತಗುಲಿದ್ದರೆ, ರಾಜ್ಯದಲ್ಲಿ 9.73 ಲಕ್ಷ ಮಂದಿಗೆ, ಜಿಲ್ಲೆಯಲ್ಲಿ 24,991 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಇಡೀ ದೇಶಾದ್ಯಂತ 1.60 ಲಕ್ಷ ಮಂದಿ ಕೋವಿಡ್‍ಗೆ ಈವರೆಗೆ ಬಲಿಯಾಗಿದ್ದರೆ, ರಾಜ್ಯದಲ್ಲಿ 12,449 ಮಂದಿ, ತುಮಕೂರು ಜಿಲ್ಲೆಯಲ್ಲಿ 266 ಮಂದಿ ಜೀವಬಿಟ್ಟಿದ್ದಾರೆ.
ಯಾರಿಗೆಲ್ಲ ಸಂಕಷ್ಟ:
ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಕೃಷಿ, ಶಿಕ್ಷಣ, ಸಾರಿಗೆ, ಕೈಗಾರಿಕೆಗಳು, ಸಿನಿಮಾ, ಐಟಿ ಬಿಟಿ, ನಿರ್ಮಾಣ ವಲಯ, ಅಸಂಘಟಿತ ಕಾರ್ಮಿಕರು ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸೇವಾ ವಲಯದಲ್ಲಿ ದುಡಿಯುತ್ತಿದ್ದ ಕಾರ್ಮಿಕರು, ಸಿಬ್ಬಂದಿ, ಹೊರರಾಜ್ಯಗಳಿಂದ ಬಂದಿದ್ದ ವಲಸೆ ಕಾರ್ಮಿಕರು, ವಿದೇಶದಲ್ಲಿ ಉದ್ಯೋಗ ಹರಸಿ ನೆಲೆಸಿದ್ದ ಭಾರತೀಯರು ಹೀಗೆ ಎಲ್ಲಾ ವಲಯದ ಜನರು ಕೋವಿಡ್ ಸಂಕಷ್ಟಕ್ಕೆ ಸಿಲುಕಿ, ಆರೋಗ್ಯ, ಉದ್ಯೋಗ, ಆದಾಯ ಕಳೆದುಕೊಂಡು ಬದುಕಿನ ಅಸ್ಮಿತೆಯ ಸವಾಲುಗಳನ್ನು ಎದುರಿಸಿದರು, ಇನ್ನೂ ಕೊರೊನಾ ವಾರಿಯರ್ಸ್‍ಗಳು ತಮ್ಮ ಪ್ರಾಣ ಪಣಕ್ಕಿಟ್ಟು ಕೋವಿಡ್ ನಿಯಂತ್ರಣಕ್ಕೆ ದುಡಿದಿದ್ದು, ಅನೇಕರು ಪ್ರಾಣವನ್ನು ತೆತ್ತಿದ್ದಾರೆ. ಜಿಲ್ಲೆಯಲ್ಲಿ ಮೃತರಾದವರಲ್ಲಿ ಇಬ್ಬರು ವೈದ್ಯರು, ಹತ್ತುಮಂದಿ ಶಿಕ್ಷಕರು, ಪೊಲೀಸರು, ಸಮಾಜಸೇವಕರು, ವರ್ತಕರು, ಸಮಾಜದ ವಿವಿಧ ಕ್ಷೇತ್ರದ ಗಣ್ಯರು, ಜನಪ್ರತಿನಿಧಿಗಳು, ರೈತರು, ಕಾರ್ಮಿಕರು ಹೀಗೆ ಎಲ್ಲಾ ವರ್ಗದವರು ಸೇರಿದ್ದು, ಮೃತರ ಕುಟುಂಬಗಳಷ್ಟೇ ಅಲ್ಲ, ಸಾಮಾಜಿಕ ಸಂರಚನೆಯಲ್ಲಿ ಬಿಗಿ ಕೊಂಡಿಗಳೇ ಕಳಚಿದಂತಾಗಿದೆ.
ಗಾಯದ ಮೇಲೆ ಬರೆ:
ಲಾಕ್‍ಡೌನ್‍ನಿಂದ ಅನ್‍ಲಾಕ್‍ಗೆ ಜೂ.1ರಿಂದ ಮರಳಿದರೂ ಜನ ಜೀವನ ಸಹಜ ಸ್ಥಿತಿಗೆ ಬರಲು ಸರಕಾರದ ಕೆಲವು ನಿಲುವುಗಳು ಅಡ್ಡಿಯಾಗಿವೆ. ಹಣದುಬ್ಬರದಿಂದ ಅಗತ್ಯವಸ್ತುಗಳು, ತೈಲಬೆಲೆ, ಕೃಷಿ, ನಿರ್ಮಾಣ ವಲಯದ ಪರಿಕರಗಳು ಹೀಗೆ ಅವಶ್ಯಕ ವಸ್ತುಗಳು ದುಬಾರಿಯಾಗಿದ್ದು ಗಾಯದ ಮೇಲೆ ಬರೆಯೆಂಬಂತೆ ತಂದ ಕರಾಳ ಕೃಷಿ ಕಾಯ್ದೆಗಳು, ನಿರುದ್ಯೋಗ, ಸಂಪನ್ಮೂಲ ಸಂಗ್ರಹಣೆಯಲ್ಲಾಗಿರುವ ಕುಸಿತ, ಅನುದಾನ ಕೊರತೆಯಿಂದಾಗಿ ಅಭಿವೃದ್ಧಿಯಲ್ಲಾದ ಹಿನ್ನಡೆ.., ಜನಸಾಮಾನ್ಯರು, ಮಧ್ಯಮವರ್ಗದವರು ಬದುಕನ್ನು ಯಥಾಸ್ಥಿತಿಗೆ ಮರಳಲು ಬಿಡುತ್ತಿಲ್ಲ. ಉದ್ದಿಮೆದಾರರು, ವರ್ತಕರು ಸಹ ಆದಾಯ, ವಹಿವಾಟು ಕಳೆದುಕೊಂಡಿರುವುದು ಮಾತ್ರವಲ್ಲದೆ ಜಿಎಸ್‍ಟಿ ಗೋಜಲು, ಅವೈಜ್ಞಾನಿಕ ತೆರಿಗೆ ನಿಯಮಗಳಿಂದಾಗಿ ಬಸವಳಿದಿದ್ದಾರೆ.
ಜಿಡಿಪಿ ಇಳಿಮುಖ, 20 ಲಕ್ಷ ಪ್ಯಾಕೇಜ್ ಲಾಭ ಯಾರಿಗೆ :
ಆರ್ಥಿಕ, ಅಭಿವೃದ್ಧಿ ಹಿನ್ನಡೆಯಿಂದಾಗಿ 2020-21ನೇ ಸಾಲಿನಲ್ಲಿ ಅಭಿವೃದ್ಧಿ ಸೂಚ್ಯಂಕ(ಜಿಡಿಪಿ) ಮೈನಸ್ 7.7ಕ್ಕೆ ದಾಖಲೆಯ ಕುಸಿತ ಕಂಡಿತ ಕಂಡಿದ್ದು, ಹಣದುಬ್ಬರಕ್ಕೆ ಕಾರಣವಾಗಿದೆ. 2021-22ನೇ ಸಾಲಿಗೆ ಜಿಡಿಪಿಯನ್ವಯ ಶೇ.10.5 ಪ್ರಮಾಣಕ್ಕೆ ಏರಿಕೆ ಮಾಡುವ ಗುರಿಹೊಂದಿರುವುದಾಗಿ ಆರ್‍ಬಿಐ ಗವರ್ನರ್ ಹೇಳಿಕೆ ನೀಡಿದ್ದಾರೆ. ಆದರೆ ಕೇಂದ್ರ 20 ಲಕ್ಷ ಕೋಟಿ ಸುಧಾರಣಾ ಪ್ಯಾಕೇಜ್ ಘೋಷಿಸಿದರೂ ಅಭಿವೃದ್ಧಿ ಸೂಚ್ಯಂಕದ ಮೇಲೇಳಲು ತಿಣಕಾಡುತ್ತಿದೆ. ಮತ್ತೆ ಕೋವಿಡ್ ಭೀತಿಯೂ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಜಿಡಿಪಿ ಮೇಲೇತ್ತಲು ಹೇರಲಾಗುತ್ತಿರುವ ಕರಾಳ ಕಾಯ್ದೆಗಳನ್ನು ಹಿಂಪಡೆದು ಜನಸ್ನೇಹಿ ಸುಧಾರಣಾ ಕ್ರಮಗಳು, ಸರಕಾರದ ನೆರವುಗಳು ನೇರ ಫಲಾನುಭವಿಗಳಿಗೆ ಮುಟ್ಟುವ ವ್ಯವಸ್ಥೆ ಜಾರಿಯಾಗಬೇಕಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಜಿಲ್ಲೆಗೆ ಹಲವು ವಿಧದ ನಷ್ಟ, ಪ್ರಗತಿ ಕುಂಠಿತ :
ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ತುಮಕೂರು ಜಿಲ್ಲೆಯಲ್ಲಿ ಬೆಲೆ ಕಟ್ಟಲಾದ ಸಾವು-ನೋವಿನ ಜತೆಗೆ ಅನೇಕ ಶಿಕ್ಷಣ ಸಂಸ್ಥೆಗಳು, ಉದ್ದಿಮೆಗಳು, ಕೃಷಿ, ಸಾರಿಗೆ ವಲಯಕ್ಕೆ ಆರ್ಥಿಕ ನಷ್ಟಗಳಾದವು. ಪ್ರಮುಖವಾಗಿ ಸಾರಿಗೆ ಸಂಪರ್ಕದ ಪ್ರಮುಖ ಕೊಂಡಿ ಕೆಎಸ್‍ಆರ್‍ಟಿಸಿ ತುಮಕೂರು ವಲಯ ಮಾರ್ಚ್ 22ರಿಂದ ಮೇ ಅಂತ್ಯದವರೆಗೆ 58.68 ಕೋಟಿ ನಷ್ಟಕ್ಕೆ ಗುರಿಯಾದರೆ, 18,738 ಹೂವ್ವು ತೋಟಗಾರಿಕೆ ಬೆಳೆಗಾರರು ನೂರಾರು ಕೋಟಿ ನಷ್ಟಕ್ಕೆ ಗುರಿಯಾದರು. ಅಂತರಸನಹಳ್ಳಿ, ವಸಂತಾ ನರಸಾಪುರ, ಹಿರೇಹಳ್ಳಿ ಸೇರಿ ಜಿಲ್ಲೆಯ ಕೈಗಾರಿಕಾ ವಲಯದಲ್ಲೂ ಕೈಗಾರಿಕೆಗಳು ಶೆಡ್‍ಡೌನ್ ಆಗಿ ಸಾವಿರಾರು ಕಾರ್ಮಿಕರು ಕೆಲಸವಿಲ್ಲದೆ ಅರ್ಧವೇತನ, ಕೆಲವೆಡೆ ವೇತನವೇ ಇಲ್ಲದೆ ಕೆಲಸಬಿಟ್ಟು ಹಳ್ಳಿಗೆ ಮರಳಿದವರು ಅಲ್ಲೇ ಕೃಷಿ, ನರೇಗಾ ಯೋಜನೆ ಕೆಲಸದಲ್ಲಿ ತೊಡಗಿಕೊಂಡರು. ಹೋಟೆಲ್, ಪ್ರವಾಸೋದ್ಯಮ, ಕಲ್ಯಾಣ ಮಂಟಪ, ಆಟೊ, ಟ್ಯಾಕ್ಸಿ ಚಾಲಕರು, ರಿಯಲ್ ಎಸ್ಟೇಟ್.., ಹೀಗೆ ವಿವಿಧ ಸಮುದಾಯದ ಜನವರ್ಗಗಳು, ಸಂಸ್ಥೆಗಳಿಗೆ ಕೋವಿಡ್ ಲಾಕ್‍ಡೌನ್ ದೊಡ್ಡ ಪೆಟ್ಟು ನೀಡಿತು. ಅಂತರ್‍ರಾಜ್ಯ ಗಡಿಗಳು, ಸಂಚಾರಗಳು ಬಂದ್ ಆಗಿ ಸರಕು-ಸಾಗಾಣೆ ವಲಯಕ್ಕೆ ಅಧಿಕ ನಷ್ಟ ಉಂಟಾಯಿತು.
ಪ್ರಮುಖ ಯೋಜನೆಗಳಿಗೆ ಅನುದಾನ ಕೊರತೆ :
ಆಡಳಿತ ಅಭಿವೃದ್ಧಿ ವಿಷಯಕ್ಕೆ ಬಂದರೆ ಜಿಲ್ಲೆಯಲ್ಲಿ ಪ್ರಮುಖವಾಗಿ ನಡೆಯುತ್ತಿದ್ದ ಎತ್ತಿನಹೊಳೆ, ತುಮಕೂರು-ದಾವಣಗೆರೆ, ತುಮಕೂರು-ರಾಯದುರ್ಗ ರೈಲ್ವೇ ಮಾರ್ಗ ಯೋಜನೆ, ಸ್ಮಾರ್ಟ್ ಸಿಟಿ ಅಭಿವೃದ್ಧಿ ಯೋಜನೆ, ಭದ್ರಾ ಮೇಲ್ದಂಡೆ, ಹೇಮಾವತಿ ನಾಲೆ ಆಧುನೀಕರಣ, ಹೆದ್ದಾರಿ ಅಭಿವೃದ್ಧಿ ಕಾಮಗಾರಿ, ರೈಲ್ವೇ ಅಂಡರ್‍ಪಾಸ್, ಮೇಲ್ಸುತೆವೆ, ಮಹಾನಗರಪಾಲಿಕೆಯ 125 ಕೋಟಿ ವಿಶೇಷ ಅನುದಾನದ ಯೋಜನೆ, ಪಿಡಬ್ಲೂಡಿ, ನಗರಾಭಿವೃದ್ಧಿ, ಕಾಲೇಜು ಶಿಕ್ಷಣ ಇಲಾಖೆಯಡಿ ಹೊಸ ಕಾಲೇಜು ಕಟ್ಟಡ ನಿರ್ಮಾಣ, ವಿವಿ ಕ್ಯಾಂಪಸ್ ಅಭಿವೃದ್ಧಿ ಹೀಗೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಅನುದಾನ, ಕಾರ್ಮಿಕರ ಕೊರತೆ ಉಂಟಾಗಿ ಸ್ಥಗಿತಗೊಂಡು ಅಭಿವೃದ್ಧಿಗೆ ಹಿನ್ನಡೆಯಾಯಿತು.ತುಮಕೂರು ಉಪನೋಂದಾಣಾಧಿಕಾರಿ ಕಚೇರಿಯೊಂದರಲ್ಲಿ ಸರಕಾರಿ ರಾಜಸ್ವಕ್ಕೆ ಪ್ರತಿ ತಿಂಗಳು 7-8 ಕೋಟಿ ಸಂಗ್ರಹವಾಗುತ್ತಿದ್ದು, ಏಪ್ರಿಲ್ ತಿಂಗಳಲ್ಲಿ 24 ಲಕ್ಷಕ್ಕೆ ಕುಸಿದಿತ್ತು.
ಕೋವಿಡ್ ಕಲಿಸಿದ ಜೀವನ ಪಾಠ :
ಕೋವಿಡ್ 19 ಹಲವು ಸಂಕಷ್ಟಗಳು ತಂದೊಡ್ಡುವ ಜತೆಗೆ ಹಲವು ಜೀವನಪಾಠಗಳನ್ನು ಕಲಿಸಿದೆ. ಮಾನವೀಯತೆ, ಸಹಾಯಪರತೆ, ಸ್ವಚ್ಛತೆಯ ಅರಿವು ಸಾಮಾಜಿಕ ಅಂತರದ ನೀತಿ ಸಂಹಿತೆಯನ್ನು ಪ್ರಜೆಗಳಲ್ಲಿ ಜಾಗೃತಗೊಳಿಸಿದೆ. ಸೀಮಿತ ವರ್ಗಗಳಿಗೆ ಸರಕಾರದ ಸಹಾಯಧನದ ಜತೆಗೆ ತುಮಕೂರಿನಲ್ಲಿ ರೆಡ್‍ಕ್ರಾಸ್ ಸೇರಿ ಹಲವು ಸಂಘ ಸಂಸ್ಥೆಗಳವರು, ಜನಪ್ರತಿನಿಧಿಗಳು ಮಠ-ಮಾನ್ಯಗಳು ಕಷ್ಟದಲ್ಲಿದ್ದ ಜನರಿಗೆ ಆಹಾರ, ಕಿಟ್, ಔಷಧಿ ಹೀಗೆ ಹಲವು ವಿಧದಲ್ಲಿ ನೆರವಾಗಿ ಹಂಚಿ ತಿನ್ನುವ ಸಂದೇಶವನ್ನು ಸಾರಿದರು.
ಪ್ರಮುಖಾಂಶಗಳು
ಲಾಕ್‍ಡೌನ್ –ಅನ್‍ಲಾಕ್ ಹೆಜ್ಜೆಗಳು :
- 2020 ಜ.30 ದೇಶದ ಮೊದಲ ಕೋವಿಡ್ ಕೇಸ್ ಕೇರಳದಲ್ಲಿ ಪತ್ತೆ, ಚೀನಾದ ವ್ಯೂಹಾನ್‍ನಿಂದ ಮರಳಿದ್ದ ವಿದ್ಯಾರ್ಥಿಯಲ್ಲಿ ಸೋಂಕುದೃಢ.
- 2020ಮಾರ್ಚ್ 19ರ ವೇಳೆಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 500ಕ್ಕೆ ಹೆಚ್ಚಳ, ಕರ್ನಾಟಕದ ಗೌರಿಬಿದನೂರಲ್ಲಿ ರಾಜ್ಯದ ಮೊದಲ ಕೋವಿಡ್ ಸೋಂಕು ದೃಢ.
- 2020 ಮಾ.22 ಜನತಾ ಕರ್ಪ್ಯೂ ಜಾರಿ, ಲಾಕ್‍ಡೌನ್‍ಗೆ ಮುನ್ನುಡಿ
- 2020 ಮಾ.24 ರಾತ್ರಿ 8ಕ್ಕೆ ಪ್ರಧಾನಿ ಭಾಷಣ, 25ರಿಂದ ಏ.14ರವರೆಗೆ ಮೊದಲ ಹಂತದ ಲಾಕ್‍ಡೌನ್ ಘೋಷಣೆ.
- ಏ.15ರಿಂದ ಮೇ 3ರವರೆಗೆ 2ನೇ ಹಂತ, ಮೇ 4 ರಿಂದ 17 ಮೂರನೇ ಹಂತ, 18 ರಿಂದ 31ರವರೆಗೆ ನಾಲ್ಕು ಹಂತದಲ್ಲಿ ಮುಂದುವರಿಕೆ.
- ಜೂ.1ರಿಂದ 30ರವರೆಗೆ ಮೊದಲ ಹಂತದ ಅನ್‍ಲಾಕ್, ಕಂಟೋನ್ಮೆಟ್ ಜೋನ್‍ಗಳಿಗೆ ಲಾಕ್‍ಡೌನ್ ನಿಯಮ ಸೀಮಿತ. ಜೂ.8ರಿಂದ ಸೀಮಿತ ಅವಧಿಗೆ ಹೋಟೆಲ್ ಉಪಹಾರ ಮಂದಿರ ತೆರೆಯಲು ಅನುಮತಿ. ರಾತ್ರಿ ಕರ್ಪ್ಯೂ ಜಾರಿ.
- ಜು.1 ರಿಂದ 31 2ನೇ ಹಂತದ ಅನ್‍ಲಾಕ್‍ನಲ್ಲಿ ಅಂತರ್‍ರಾಜ್ಯ ಪ್ರಯಾಣಕ್ಕೆ , ವಂದೇ ಭಾರತ್ ಮಿಷನ್‍ನಡಿ ಸೀಮಿತ ವಿದೇಶಿ ವಿಮಾನಯಾನಕ್ಕೂ ಅವಕಾಶ.
- ಆ.1 ರಿಂದ 30 3ನೇ ಹಂತದ ಅನ್‍ಲಾಕ್‍ನಲ್ಲಿ ನೈಟ್ ಕಪ್ರ್ಯೂ ತೆರವು.
- ಸೆಪ್ಟೆಂಬರ್ 1 ರಿಂದ 30 ಅನ್‍ಲಾಕ್ 4ನೇ ಹಂತದ 50 ಮಂದಿಗೆ ಸೀಮಿತರಾಗಿ ಮದುವೆ ಕಾರ್ಯಕ್ರಮಗಳನ್ನು ಕಲ್ಯಾಣ ಮಂಟಪ, ಮಿನಿಹಾಲ್‍ನಲ್ಲಿ ನಡೆಸಲು ಅವಕಾಶ.
- ಅ.1 ರಿಂದ 31 5ನೇ ಹಂತದ ಅನ್‍ಲಾಕ್‍ನಲ್ಲಿ ಸಿನಿಮಾಮಂದಿರಗಳಲ್ಲಿ ಶೇ.50ರಷ್ಟು ವೀಕ್ಷಕರ ಅವಕಾಶದೊಂದಿಗೆ ತೆರೆಯಲು ಅನುಮತಿ. ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ರಾಜ್ಯ ಸರಕಾರಕ್ಕೆ.
- ನ.1ರಿಂದ 31ರವರೆಗೆ 6ನೇ ಹಂತದ ಅನ್‍ಲಾಕ್‍ನಲ್ಲಿ ಕಾಲೇಜುಗಳು ತೆರೆಯಲು ರಾಜ್ಯ ಸರಕಾರಗಳಿಗೆ ಅನುಮತಿ.
ಕೋವಿಡ್ ಅಂಕಿ-ಅಂಶ
ಮಾ.23ರವರೆಗೆ ಒಟ್ಟುಸೋಂಕಿತರು ಸತ್ತವರು
ಭಾರತ 1,16,97,665 1,60,295
ಕರ್ನಾಟಕ 9,73,657 12,449
ತುಮಕೂರು ಜಿಲ್ಲೆ 24,991 266
ಎಸ್.ಹರೀಶ್ ಆಚಾರ್ಯ
