ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆ : ಪಕ್ಷಗಳೆಲ್ಲವೂ ಹಳಬರಿಗೆ ಮತ್ತೆ ಮಣೆ

 ಹುಳಿಯಾರು : 

      ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಈ ಮೂರು ಪಕ್ಷಗಳು ಹೊಸಬರನ್ನು ಗುರುತಿಸಿ ಬೆಳಸುವ ಸಾಹಸಕ್ಕೆ ಕೈ ಹಾಕದೆ ಹಳಬರಿಗೆ ಮತ್ತೆ ಮಣೆ ಹಾಕಿವೆ.

      ಹೊಸಮುಖಗಳಿಗೆ ಅವಕಾಶ ಕೊಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರಾಗಿರುವ ಬಿಜೆಪಿ ಸಹ ಹುಳಿಯಾರು ಪಂಚಾಯ್ತಿಗೆ ಹಳಬರಿಗೆ ಟಿಕೆಟ್ ನೀಡಿದೆ. 1 ನೇ ವಾರ್ಡ್‍ನಿಂದ ತಾಪಂ ಉಪಾಧ್ಯಕ್ಷರಾಗಿದ್ದ ಬೀಬೀಫಾತೀಮಾ, 3 ನೇ ವಾರ್ಡ್‍ನಿಂದ ಪಪಂ ಮಾಜಿ ಸದಸ್ಯ ಬಡ್ಡಿ ಪುಟ್ಟರಾಜು, 5 ನೇ ವಾರ್ಡ್‍ನಿಂದ ಗ್ರಾಪಂ ಮಾಜಿ ಸದಸ್ಯ ರೇವಣ್ಣ ಅವರ ಪತ್ನಿ ರತ್ನಮ್ಮ, 7 ನೇ ವಾರ್ಡ್‍ನಿಂದ ಪಪಂ ಮಾಜಿ ಸದಸ್ಯ ಹೇಮಂತ್, 8 ನೇ ವಾರ್ಡ್‍ನಿಂದ ಪಪಂ ಮಾಜಿ ಸದಸ್ಯ ಚಂದ್ರಶೇಖರ್ ರಾವ್, 12 ನೇ ವಾರ್ಡ್‍ನಿಂದ ಗ್ರಾಪಂ ಮಾಜಿ ಅಧ್ಯಕ್ಷ ಕಿಟ್ಟಪ್ಪ, 15 ನೇ ವಾರ್ಡ್‍ನಿಂದ ಪಪಂ ಮಾಜಿ ಸದಸ್ಯೆ ಸಿದ್ಧಗಂಗಮ್ಮ ಅವರನ್ನು ಕಣಕ್ಕಿಳಿಸಿದೆ

      ಇನ್ನು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹಳಬರ ಪಾದವೇ ಗತಿ ಎಂದು ಟೀಕೆಗೆ ಗುರಿಯಾಗುತ್ತಿರುವ ಕಾಂಗ್ರೆಸ್ ಪಕ್ಷವೂ ಸಹ ಹುಳಿಯಾರು ಪಂಚಾಯ್ತಿಗೆ ಹಳಬರನ್ನು ಕಣಕ್ಕಿಳಿಸಿದೆ. 2 ನೇ ವಾರ್ಡ್‍ನಿಂದ ತಾಪಂ ಮಾಜಿ ಉಪಾಧ್ಯಕ್ಷೆ ರಮಾದೇವಿ, 3 ನೇ ವಾರ್ಡ್‍ನಿಂದ ಗ್ರಾಪಂ ಮಾಜಿ ಸದಸ್ಯ ದಸ್ತಗಿರಿಸಾಬ್, 5 ನೇ ವಾರ್ಡ್‍ನಿಂದ ಪಪಂ ಮಾಜಿ ಸದಸ್ಯ ಶಶಿಕಲಾ, 10 ನೇ ವಾರ್ಡ್‍ನಿಂದ ಗ್ರಾಪಂ ಮಾಜಿ ಸದಸ್ಯ ಜಯಣ್ಣ ಅವರ ಪತ್ನಿ ಗಾಯಿತ್ರಿ, 11 ನೇ ವಾರ್ಡ್‍ನಿಂದ ಪಪಂ ಮಾಜಿ ಸದಸ್ಯ ದಯಾನಂದ್, 13 ನೇ ವಾರ್ಡ್‍ನಿಂದ ಪಪಂ ಮಾಜಿ ಸದಸ್ಯ ಧನುಷ್ ರಂಗನಾಥ್ ಪತ್ನಿ ವೀಣಾ, 16 ನೇ ವಾರ್ಡ್‍ನಿಂದ ಪಪಂ ಮಾಜಿ ಸದಸ್ಯೆ ದುರ್ಗಮ್ಮ ಅವರಿಗೆ ಟಿಕೆಟ್ ನೀಡಿದೆ.

      ಜೆಡಿಎಸ್ ಪಕ್ಷವೂ ಸಹ ರಾಷ್ಟ್ರೀಯ ಪಕ್ಷಗಳಿಗೆ ಹೊರತಾಗಿಲ್ಲ. ಹಳಬರನ್ನು ಬಿಟ್ಟರೆ ನಮಗಿನ್ಯಾರು ಗತಿ ಎಂದು ಹುಳಿಯಾರು ಪಂಚಾಯ್ತಿಗೆ ಹಳಬರು ಹುರಿಯಾಳುಗಳಾಗಿದ್ದಾರೆ. 1 ನೇ ವಾರ್ಡ್‍ನಿಂದ ಗ್ರಾಪಂ ಮಾಜಿ ಸದಸ್ಯ ಏಜಾಸ್ ಅವರ ನಾದನಿ ಸಲ್ಮಾಉನ್ನೀಸ್, 2 ನೇ ವಾರ್ಡ್‍ನಿಂದ ಪಪಂ ಮಾಜಿ ಸದಸ್ಯ ಡಿಶ್‍ಬಾಬು, 3 ನೇ ವಾರ್ಡ್‍ನಿಂದ ಪಪಂ ಮಾಜಿ ಉಪಾಧ್ಯಕ್ಷ ಗಣೇಶ್, 4 ನೇ ವಾರ್ಡ್‍ನಿಂದ ಅಹಮದ್ ಖಾನ್, 5 ನೇ ವಾರ್ಡ್‍ನಿಂದ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಅವರ ಅತ್ತೆ ಸಿದ್ಧಗಂಗಮ್ಮ, 7 ನೇ ಬ್ಲಾಕ್‍ನಿಂದ ತಾಪಂ ಸದಸ್ಯ ಎಚ್.ಎನ್.ಕುಮಾರ್, 9 ನೇ ಬ್ಲಾಕ್‍ನಿಂದ ಪಪಂ ಮಾಜಿ ಸದಸ್ಯ ರಿಯಾಜ್, 11 ನೇ ವಾರ್ಡ್‍ನಿಂದ ಗ್ರಾಪಂ ಮಾಜಿ ಸದಸ್ಯ ಬಾಲರಾಜು, 16 ನೇ ವಾರ್ಡ್‍ನಿಂದ ಪಪಂ ಮಾಜಿ ಸದಸ್ಯ ರಾಘವೇಂದ್ರ ಅವರ ಪತ್ನಿ ಪ್ರೀತಿ ಅವರಿಗೆ ಬಿ ಪಾರಂ ನೀಡಿದೆ.

      1 ನೇ ವಾರ್ಡ್, 2 ನೇ ವಾರ್ಡ್, 3 ನೇ ವಾರ್ಡ್, 5 ನೇ ವಾರ್ಡ್, 7 ನೇ ವಾರ್ಡ್, 11 ನೇ ವಾರ್ಡ್ ಹಾಗೂ 16 ನೇ ವಾರ್ಡ್‍ಗಳಲ್ಲಿ ಹಳಬರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಉಳಿದ ವಾರ್ಡ್‍ಗಳಲ್ಲಿ ಹಳಬರು ಮತ್ತು ಹೊಸಬರ ನಡುವೆ ಗೆಲುವಿನ ಪೈಪೋಟಿ ಇದೆ. 16 ವಾರ್ಡ್‍ಗಳ ಪೈಕಿ 8 ಹೆಚ್ಚು ವಾರ್ಡ್‍ಗಳಲ್ಲಿ ಹಳಬರು ಗೆಲ್ಲುವ ಸಾಧ್ಯತೆಯಿದೆ. ಹಾಗಾಗಿ ಹಿಂದಿನ ಆಡಳಿತದಂತೆ ಕಿತ್ತಾಟ, ಅವ್ಯವಹಾರಕ್ಕೆ ಅಧಿಕಾರ ಮೀಸಲಾಗುವುದೋ ಅಭಿವೃದ್ಧಿಯ ಕಡೆ ಗಮನ ಹರಿಸುವರೋ ಕಾದು ನೋಡಬೇಕಿದೆ ಎನ್ನುತ್ತಾರೆ ಮತದಾರ ಪ್ರಭುಗಳು.

ಮಗ, ಚಿಕ್ಕಮ್ಮನ ನಡುವೆ ಸ್ಪರ್ಧೆ :

      2 ನೇ ವಾರ್ಡ್‍ನಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಅವರು ತಮ್ಮ ಸ್ವಂತ ಚಿಕ್ಕಮ್ಮ ಕಾಂಗ್ರೆಸ್ ಅಭ್ಯರ್ಥಿ ರಮಾದೇವಿ ಅವರ ಎದುರಾಳಿಯಾಗಿದ್ದಾರೆ. ರಮಾದೇವಿ ಅವರು ಅನುಭವಸ್ಥ ರಾಜಕಾರಣಿಯಾಗಿದ್ದು ತಾಪಂ ಸದಸ್ಯೆಯಾಗಿ ವಿವಿಧ ಸಂಘಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಅಪಾರ ಜನಮನ್ನಣೆ ಗಳಿಸಿದ್ದಾರೆ. ಕಿರಣ್ ಇನ್ನೂ ರಾಜಕೀಯ ಶಿಶುವಾಗಿದ್ದರೂ ಜನಾನುರಾಗಿ ವ್ಯಕ್ತಿತ್ವ, ಧರ್ಮಬೇದವಿಲ್ಲದ ನಡೆ ಹಾಗೂ ಹಣವಂತ. ರಮಾದೇವಿಯವರ ಜನಪ್ರಿಯತೆ ಗೆಲ್ಲುವುದೋ, ಕಿರಣ್ ಅವರ ಸ್ನೇಹದ ಒಡನಾಟ ಗೆಲ್ಲುವುದೋ ಅಥವಾ ಇವರಿಬ್ಬರ ನಡುವೆ ಡಿಶ್‍ಬಾಬು ನುಸುಳುವರೋ ಕಾದು ನೋಡಬೇಕಿದೆ.

ಪತಿ-ಪತ್ನಿ ಸ್ಪರ್ಧೆ :

      ಜಿಜೆಪಿಯಲ್ಲಿ 2 ನೇ ವಾರ್ಡ್‍ನಿಂದ ಎಚ್.ಎನ್.ಕಿರಣ್‍ಕುಮಾರ್ ಹಾಗೂ 13 ನೇ ವಾರ್ಡ್‍ನಿಂದ ಪತ್ನಿ ಟಿ.ಸಂಧ್ಯಾ ಸ್ಪರ್ಧಿಸಿದ್ದಾರೆ. 3 ನೇ ವಾರ್ಡ್‍ನಿಂದ ಬಡ್ಡಿ ಪುಟ್ಟರಾಜು ಹಾಗೂ ಅತ್ತಿಗೆ ಸಿದ್ದಗಂಗಮ್ಮ 15 ನೇ ವಾರ್ಡ್‍ನಿಂದ ಸ್ಪರ್ಧಿಸಿ ಗಮನ ಸೆಳೆದಿದ್ದಾರೆ. ಇನ್ನೂ ಜೆಡಿಎಸ್‍ನಿಂದ 7 ನೇ ವಾರ್ಡ್‍ನಲ್ಲಿ ಹಾಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಎನ್.ಕುಮಾರ್ ಕಣಕ್ಕಿಳಿದಿದ್ದರೆ, ತಮ್ಮನ ಪತ್ನಿ ಪ್ರೀತಿ 16 ನೇ ವಾರ್ಡ್‍ನಿಂದ ಸ್ಪರ್ಧಿಸಿ ಕುತೂಹಲ ಮೂಡಿಸಿದ್ದಾರೆ. ಅಲ್ಲದೆ 14 ನೇ ವಾರ್ಡ್‍ನಿಂದ ಸಿನಿಮಾ ಹಾಗೂ ಕಿರುತೆರೆ ಕಲಾವಿದ ಗೌಡಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link