ಮಧುಗಿರಿ :
11 ದಿನಗಳ ಕಾಲ ನಡೆಯ ಬೇಕಾಗಿದ್ದ ದಂಡಿನ ಮಾರಮ್ಮನ ಜಾತ್ರಾ ಮಹೋತ್ಸವವು ಈ ಬಾರಿ 3 ದಿನಗಳ ಮಾತ್ರ ನಡೆದಿದ್ದು ಕೊರೊನಾ ಹಿನ್ನೆಲೆಯಲ್ಲಿ ಉಳಿದ 8 ದಿನಗಳ ಮುಂಚೆಯೇ ಜಾತ್ರೆಯನ್ನು ಸರ್ಕಾರದ ಆದೇಶದ ಮೇರೆಗೆ ರದ್ಧುಗೊಳಿಸಲಾಗಿದೆ.
ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯುವ ಸಲುವಾಗಿ ನಾಗರೀಕರ ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮಾ.23 ರಿಂದ ಏ.2 ರವರೆಗೆ ನಡೆಯ ಬೇಕಾಗಿದ್ದ ಇತಿಹಾಸ ಪ್ರಸಿದ್ದ ಮಧುಗಿರಿಯ ಶ್ರೀ ದಂಡಿನ ಮಾರಮ್ಮನ ಜಾತ್ರಾ ಮಹೋತ್ಸವ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಸಭೆ ಸಮಾರಂಭಗಳು, ಧಾರ್ಮಿಕ ಹಬ್ಬಗಳನ್ನು ಮೇಲಾಧಿಕಾರಿಗಳ ಆದೇಶದಂತೆ ರದ್ಧುಪಡಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಸೋಮಪ್ಪ ಕಡಕೋಳ ತಿಳಿಸಿದ್ದಾರೆ.
ದಂಡಿನ ಮಾರಮ್ಮನ ಜಾತ್ರೆ ಮಾ.23ರ ಮಂಗಳವಾರ ದಿಂದ ಪ್ರಾರಂಭವಾಗಿ ಹಳ್ಳಿಕಾರರಿಂದ ಪಂಚ ಕಳಸ ಸ್ಥಾಪನೆ ಹಾಗೂ ಗೌಡರಿಂದ ಬಾನ ಕಾರ್ಯಕ್ರಮ, ಮಾ.24ರಂದು ಸಾರ್ವಜನಿಕವಾಗಿ ಗ್ರಾಮಸ್ಥರಿಂದ ಆರತಿ, ಮಾ.25ರಂದು ಸಾರ್ವಜನಿಕವಾಗಿ ಗುಗ್ಗರಿ ಗಾಡಿಗಳ ಸೇವೆ, ಮಾರ್ಚ್.26ರಂದು ದೇವಸ್ಥಾನದ ವತಿಯಿಂದ ರಥೋತ್ಸವ ಹಾಗೂ ಪೂಜಾ ಕೈಂಕರ್ಯಗಳು ಈಗಾಗಲೇ ನಡೆದಿವೆ.
ಆದರೆ ಮಾ.26ರ ಮಧ್ಯಾಹ್ನ ದಂದು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಮುಂದಿನ ದಿನಗಳಲ್ಲಿ ನಡೆಯ ಬೇಕಾಗಿದ್ದ ಹಳ್ಳಿಕಾರರಿಂದ ಉಯ್ಯಾಲೆ ಉತ್ಸವ, ಕುಂಚಿಟಿಗ ಒಕ್ಕಲಿಗರಿಂದ ಸಿಂಹವಾಹನ ಸೇವೆ, ಕುರುಬ ಸಮುದಾಯದಿಂದ ಚಂದ್ರಮಂಡಲ ವಾಹನ, ನವಿಲು ವಾಹನ, ಭಂಡಾರದ ಉತ್ಸವ ಹಾಗೂ ದೇವಸ್ಥಾನದ ವತಿಯಿಂದ ಬೆಳ್ಳಿ ಪಲ್ಲಕ್ಕಿ ಉತ್ಸವ, ದೇವಸ್ಥಾನದ ವತಿಯಿಂದ ಆಗ್ನಿಕುಂಡ ಕಾರ್ಯಕ್ರಮ, ಚಿನಕವಜ್ರ, ಕೆರೆಗಳ ಪಾಳ್ಯ ಹಾಗೂ ಕವಾಡಿಗರಪಾಳ್ಯ ಗ್ರಾಮಸ್ಥರಿಂದ ಮಡಿಲಕ್ಕಿ ಸೇವೆ ನಂತರ ದೇವರನ್ನು ಗುಡಿ ತುಂಬಿಸುವುದರೊಂದಿಗೆ ಜಾತ್ರಾ ಮುಕ್ತಾಯಗೊಳ್ಳಬೇಕಾಗಿತ್ತು.
ಕಳೆದ ವರ್ಷವೂ ಇದೇ ದಿನ ಜಾತ್ರಾಮಹೋತ್ಸವ ರದ್ದಾಗಿತ್ತು. ಜಾತ್ರೆಯಲ್ಲಿನ ಅಂಗಡಿಗಳ ಮತ್ತು ವಿವಿಧ ಪ್ರದರ್ಶನಗಳಿಗೆ ನೆಲವಳಿ ಸುಂಕದ ಹರಾಜು ಪ್ರಕ್ರಿಯೆಯು ಈ ಬಾರಿ 11 ಲಕ್ಷ 50 ಸಾವಿರಕ್ಕೆ, 11 ದಿನಗಳ ಕಾಲ ತೆಗೆಯುವ ಪೋಟೋ ಒಂದಕ್ಕೆ 20 ರೂ, ಒಂದು ದಿನದ ವಿಡಿಯೋ ಚಿತ್ರೀಕರಣಕ್ಕಾಗಿ 1450 ರೂಗಳು, ಸ್ವಾಗತ ಕಮಾನು ಗೋಪುರಗಳು ಹಾಗೂ ದೇವಾಲಯಕ್ಕೆ ಬಣ್ಣ ಬಳೆಯಲು 6 ಲಕ್ಷ ರೂ, ಜಾತ್ರೆಯಲ್ಲಿ ವಿದ್ಯುತ್ ದೀಪಗಳು ಆಲಂಕಾರಕ್ಕಾಗಿ 3 ಲಕ್ಷ 60 ಸಾವಿರಕ್ಕೆ ನಿಗಧಿ ಪಡಿಸಲಾಗಿದೆ ಎನ್ನಲಾಗಿದೆ.
ಅಂದಾಜು ಸುಮಾರು 9 ಲಕ್ಷ ರೂಗಳ ಖರ್ಚು ವೆಚ್ಚದಲ್ಲಿ ಜಾತ್ರೆಯೇ ಮುಗಿದೆ ಹೋಗುತ್ತಿತ್ತು. ಕಳೆದ ವರ್ಷದ ನೆಲವಳಿ ಸುಂಕ ಹರಾಜು ಪಡೆದವರು ಅಂಗಡಿ ಮಾಲೀಕರಿಂದ ಒಂದು ಸಾವಿರ ರೂಗಳನ್ನು ಮುಂಗಡವಾಗಿ ಪಡೆಯಲಾಗಿದ್ದು ಈಗ ಮತ್ತೆ ಅಂತವರಿಂದ 5 ಸಾವಿರ ದಿಂದ 10 ಸಾವಿರದವರೆವಿಗೂ ಅಂಗಡಿಗಳಿಗೆ ದರ ನಿಗಧಿಪಡಿಸಿದ್ದರು ಆದರೆ ಜಾತ್ರೆಯ ರದ್ಧಿನಿಂದಾಗಿ ಬಂಡವಾಳ ಹೂಡಿರುವ ಮಾಲೀಕರ ಗೋಳು ಹೇಳತೀರದಾಗಿದೆ. ಜಾತ್ರೆ ರದ್ದಾಗಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಯುತ್ತಿದ್ದಂತೆ ಸಂಜೆಯ ವೇಳೆಗೆ ಜನ ಸಾಗರವೇ ಜಾತ್ರೆಗೆ ಹರಿದು ಬಂದ ದೃಶ್ಯಗಳು ಕಂಡು ಬಂದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ