ಶಿರಾ :

ಇಲ್ಲಿನ ನಗರಸಭೆಯ ಚುನಾವಣೆಗೆ ಕೊನೆಗೂ ಮುಹೂರ್ತ ಕೂಡಿ ಬಾರಲೇ ಇಲ್ಲ. ಈಗ ಬಂತು, ನಾಳೆ ಬಂತು, ಇನ್ನೇನು ಚುನಾವಣಾ ದಿನಾಂಕ ಪ್ರಕಟಗೊಂಡೇ ಬಿಟ್ಟಿತು, ಅಂದುಕೊಳ್ಳುವಷ್ಟರಲ್ಲಿ ಚುನಾವಣೆಗೆ ಒದಗಿ ಬರುವ ಅಡೆ-ತಡೆಗಳಂತೂ ಈವರೆಗೂ ತಪ್ಪಿಯೇ ಇಲ್ಲ.
ರಾಜ್ಯದ ಬಹುತೇಕ ಜಿಲ್ಲೆಗಳ ಪಟ್ಟಣ ಪಂಚಾಯ್ತಿ, ನಗರಸಭೆ, ಮಹಾ ನಗರ ಪಾಲಿಕೆಗಳ ಚುನಾವಣೆಗಳು ಪೂರ್ಣಗೊಂಡು ಎರಡೂವರೆ ವರ್ಷಗಳು ಕಳೆಯುತ್ತಾ ಬಂತು. ರಾಜ್ಯದ ಅನೇಕ ಸ್ಥಳೀಯ ಸಂಸ್ಥೆಗಳು ಆಡಳಿತಾರೂಢ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡಿದ್ದರೂ ಕೂಡ ಶಿರಾ ನಗರದ ಜನತೆಗೆ ಆ ಭಾಗ್ಯವಿನ್ನೂ ಕೂಡಿ ಬಂದಿಲ್ಲ.
ಇಷ್ಟಕ್ಕೂ ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ನಗರಸಭೆ, ಪಟ್ಟಣ ಪಂಚಾಯ್ತಿಗಳ ಚುನಾವಣೆಗಳು ನಡೆದು ಜನ ಪ್ರತಿನಿಧಿಗಳು ಅಧಿಕಾರದ ಗದ್ದುಗೆ ಹಿಡಿದು ಕೂತಿದ್ದರೂ, ಜಿಲ್ಲೆಯ ಶಿರಾ ನಗರಸಭೆಯ ಚುನಾವಣೆಗಂತೂ ಇನ್ನೂ ಮುಹೂತರ್ ಕೂಡಿ ಬಂದೇ ಇಲ್ಲ.
ಕಳೆದ ವಾರದ ಹಿಂದೆ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಗೊಂಡಿತು, ಮತ್ತೊಮ್ಮೆಯೂ ಮೀಸಲಾತಿ ನಿಗದಿಯಲ್ಲಿ ನಿಯಮ ಪಾಲಿಸಲಿಲ್ಲವೆಂಬ ಕಾರಣಕ್ಕೆ ಕೆಲ ವಾರ್ಡುಗಳ ಆಕಾಂಕ್ಷಿಗಳು ನ್ಯಾಯಾಲಯದ ಮೊರೆ ಹೋದರು. ಒಂದಲ್ಲಾ ಎರಡಲ್ಲ ಅನೇಕ ಬಾರಿ ಮೀಸಲಾತಿಯನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗುತ್ತಲೇ ಸಾಗಿದ್ದಾರೆ.
ನ್ಯಾಯಾಲಯಕ್ಕೂ, ಶಿರಾ ನಗರಸಭೆಯ ಚುನಾವಣೆಗೂ ಅವಿನಾಭಾವ ಸಂಬಂಧವೇ ಮೂಡಿ ಬಿಟ್ಟಿದೆ. ಕಳೆದ ಎರಡು ವರ್ಷದಿಂದಲೂ ರಾಜ್ಯ ಚುನಾವಣಾ ಆಯೋಗ ಪ್ರಕಟಿಸುವ ವಾರ್ಡುವಾರು ಮೀಸಲಾತಿ ಪಟ್ಟಿಗೆ ವಿರುದ್ಧ ನ್ಯಾಯಾಲಯಕ್ಕೆ ದೂರುಗಳು ಸಲ್ಲುತ್ತಲೇ ಸಾಗಿವೆ.
ಅತ್ಯಂತ ಅಚ್ಚರಿಯ ಸಂಗತಿ ಎಂದರೆ ನ್ಯಾಯಾಲಯದ ಪ್ರಕರಣ ಇತ್ಯರ್ಥಗೊಳ್ಳುವ ಮುನ್ನವೇ ಮಾ.29 ರಂದು ರಾಜ್ಯ ಚುನಾವಣಾ ಆಯೋಗ ಚುನಾವಣೆಯ ಅಧಿಸೂಚನೆಯನ್ನು ಹೊರಡಿಸಿಯೇ ಬಿಟ್ಟಿತು. ಪ್ರಕರಣವೇ ಇತ್ಯರ್ಥಗೊಳ್ಳದಿರುವಾಗ ಚುನಾವಣೆಯ ಅಧಿಸೂಚನೆ ಹೊರಡಿಸಿದ್ದನ್ನು ಕಂಡು ದೂರು ಹೋಗಿದ್ದವರು ಅಚ್ಚರಿಪಟ್ಟಿದ್ದೂ ಉಂಟು.
ರಾಜ್ಯ ಚುನಾವಣಾ ಆಯೋಗವು ಮಾ.29 ರಂದು ಹೊರಡಿಸಿದ ಅಧಿಸೂಚನೆಯಂತೆ ದೊಡ್ಡಬಳ್ಳಾಪುರ, ವಿಜಯಪುರ, ರಾಮನಗರ, ಚೆನ್ನಪಟ್ಟಣ, ಶಿರಾ, ಗುಡಿಬಂಡೆ, ಭದ್ರಾವತಿ, ತೀರ್ಥಹಳ್ಳಿ, ಬೇಲೂರು, ಮಡಿಕೇರಿ, ಬೀದರ್ ಹಾಗೂ ತರಿಕೆರೆ ಸ್ಥಳೀಯ ಸಂಸ್ಥೆಗಳಿಗೆ ಏ.8 ರಿಂದ ಚುನಾವಣಾ ಪ್ರಕ್ರಿಯೆ ಆರಂಭಗೊಂಡು ಏ.27 ರಂದು ಚುನಾವಣೆ ನಡೆಸಲು ಆದೇಶ ಹೊರಡಿಸಿತು.
ಈ ಆದೇಶ ಹೊರ ಬಿದ್ದ ಕೂಡಲೇ ಶಿರಾ ನಗರದ ಜನತೆ ಸದ್ಯ ಚುನಾವಣೆ ನಡೆದರೆ ಸಾಕಪ್ಪ ಎಂದು ಸಂತಸಪಟ್ಟ ಕೆಲವೇ ಗಂಟೆಗಳಲ್ಲಿ ಇದೇ ರಾಜ್ಯ ಚುನಾವಣಾ ಆಯೋಗವು ಮತ್ತೊಂದು ಅಧಿಸೂಚನೆಯನ್ನು ಮಾ.29 ರ ಸಂಜೆಯೇ ಹೊರಡಿಸಿದೆ.
ದೊಡ್ಡಬಳ್ಳಾಪುರ ನಗರಸಭೆಯ 31, ತರಿಕೆರೆ ಪುರಸಭೆಯ 23 ಹಾಗೂ ಶಿರಾ ನಗರಸಭೆಯ 31 ವಾರ್ಡುಗಳ ಚುನಾವಣೆಯನ್ನು ತಾಂತ್ರಿಕ ಕಾರಣಗಳಿಂದ ಮುಂದಿನ ಆದೇಶದವರೆಗೆ ಹಿಂಪಡೆಯಲಾಗಿದೆ ಎಂಬ ಮತ್ತೊಂದು ಆದೇಶ ಶಿರಾ ನಗರದ ಜನತೆಯ ಸಂತಸಕ್ಕೆ ಮತ್ತೊಮ್ಮೆ ಬರೆ ಎಳೆದಂತಾಗಿದೆ.
ಚುನಾವಣಾ ಹಿನ್ನೋಟ:
ಶಿರಾ ನಗರಸಭೆಯ ಈ ಹಿಂದಿನ ಚುನಾವಣೆ ನಡೆದದ್ದು 2013 ರಲ್ಲಿ. 7-3-2013 ರಂದು ಸದಸ್ಯರ ಚುನಾವಣೆ ನಡೆಯಿತು. 11-3-2013 ರಂದು ಮತ ಎಣಿಕೆ ನಡೆದು ಜನಪ್ರತಿನಿಧಿಗಳ ಆಯ್ಕೆಯೂ ಆಯಿತು. ಈ ನಡುವೆ ಆಗ ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದೂರು ದಾಖಲಾದ ಪರಿಣಾಮ ದೂರು ಇತ್ಯರ್ಥಗೊಂಡು 12-3-2014ರಂದು ಅಧ್ಯಕ್ಷರ ಚುನಾವಣೆ ನಡೆದು, ಆಗ ಮೊದಲ ಕೌನ್ಸಿಲ್ ಸಭೆಯು 19-5-2014ರಂದು ನಡೆಯಿತು. 12-3-2019ಕ್ಕೆ ಆಗಿನ ಆಡಳಿತ ಮಂಡಳಿಯ ಅಧಿಕಾರ ಪೂರ್ಣಗೊಂಡು ಇಂದಿಗೆ ಎರಡು ವರ್ಷದ ಮೇಲಾದರೂ ಇನ್ನೂ ಕೂಡ ನಗರಸಭೆಯ ಚುನಾವಣೆಗೆ ಮುಹೂರ್ತ ಕೂಡಿ ಬಂದೇ ಇಲ್ಲ….!.
ಅಂದರೆ 7-3-2013 ರಂದು ನಗರಸಭೆಯ ಚುನಾವಣೆ ನಡೆದದ್ದು ಎಂದು ಅಂಕಿ-ಅಂಶಗಳನ್ನು ನೋಡುವುದಾದರೆ ಶಿರಾ ನಗರಸಭೆಗೆ ಚುನಾವಣೆ ನಡೆದು 7 ವರ್ಷಗಳೇ ಸಂದು ಹೋಗಿವೆ. 7 ವರ್ಷಗಳಿಂದಲೂ ಈ ನಗರಸಭೆಗೆ ಮತ್ತೊಮ್ಮೆ ಚುನಾವಣೆಯ ವಾಸನೆಯೇ ಕಾಣಬರದಿರುವುದು ನಿಜಕ್ಕೂ ದುರಂತವೇ ಸರಿ.
ನಗರದಲ್ಲಿ 31 ವಾರ್ಡುಗಳಲ್ಲಲ್ಲೂ ಬೆಟ್ಟದಷ್ಟು ಜ್ವಲಂತ ಸಮಸ್ಯೆಗಳು ದಿನ ದಿನಕ್ಕೂ ಹೆಚ್ಚಾಗುತ್ತಲೇ ಇವೆ. ಚರಂಡಿ, ಕುಡಿಯುವ ನೀರು, ಪೈಪ್ ಲೈನ್ ದುರಸ್ತಿ, ಖಾತೆ ಬದಲಾವಣೆ ಸೇರಿದಂತೆ ಸಣ್ಣಪುಟ್ಟ ಕೆಲಸಗಳಿಗೂ ನಗರಸಭೆಯನ್ನು ಎಡತಾಕಿ ನಗರದ ಜನತೆಗೂ ಸಾಕು ಸಾಕಾಗಿ ಹೋಗಿದೆ.
ಕೆಲ ವಾರ್ಡುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿ ಬಿಗಡಾಯಿಸಿದ್ದರೆ, ಮತ್ತೆ ಹಲವು ವಾರ್ಡುಗಳಲ್ಲಿ ಸಾರ್ವಜನಿಕ ನಲ್ಲಿಗಳಿಗೆ ಮುಚ್ಚಳಿಕೆಯೇ ಇಲ್ಲದೆ ನೀರು ಹರಿದು ಚರಂಡಿಯ ಪಾಲಾಗುತ್ತಿದೆ. ದೊಡ್ಡ ಚರಂಡಿಗಳಲ್ಲಿ ಅನೈರ್ಮಲ್ಯ ತುಂಬಿಕೊಂಡಿದ್ದು ತೆಗೆಯುವವರೇ ಇಲ್ಲವಾಗಿದೆ. ಕೆರೆಯಲ್ಲಿನ ಕುಡಿಯುವ ನೀರಿನ ಶುದ್ಧೀಕರಣ ಸರಿಯಾಗಿ ಆಗುತ್ತಿಲ್ಲವೆಂಬ ಆರೋಪಗಳಿದ್ದರೂ ಕ್ರಮ ಕೈಗೊಳ್ಳುವ ಅಧಿಕಾರಿಗಳೇ ಇಲ್ಲವಾಗಿದ್ದಾರೆ.
ನಗರದ ಜನತೆಯು ಕುಡಿಯುತ್ತಿರುವ ಹೇಮಾವತಿಯ ನೀರು ಸರಿಯಾಗಿ ಶುದ್ಧೀಕರಣಗೊಳ್ಳುತ್ತಿಲ್ಲವಾದರೂ ಪ್ರಶ್ನಿಸುವ ಹಕ್ಕು ಕೂಡ ಹಿಂದಿನ ಜನಪ್ರತಿನಿಧಿಗಳಿಗೆ ಇಲ್ಲವಾಗಿದೆ. ನಗರದ ಬಹುತೇಕ ರಸ್ತೆ, ವೃತ್ತಗಳು ಒತ್ತುವರಿಯಾಗುತ್ತಿದ್ದರೂ ಕೇಳುವಂತಹ ಮಹಾನುಭಾವರೇ ಇಲ್ಲಿ ಇಲ್ಲವಾಗಿದೆ.
ಪ್ರವಾಸಿ ಮಂದಿರದ ವೃತ್ತದ ಮಾರ್ಗಸೂಚಿ ದೀಪಗಳು ಕೆಟ್ಟುಕೂತು ವರ್ಷಗಳೇ ಉರುಳಿದರೂ ಅವುಗಳನ್ನು ಬೆಳಗಿಸಬೇಕೆಂಬ ಉಸಾಬರಿಯೂ ಇಲ್ಲವಾಗಿದೆ. ಅಂಬೇಡ್ಕರ್ ಉದ್ಯಾನವನನ್ನು ಅಭಿವೃದ್ಧಿಯ ನೆಪದಲ್ಲಿ ಕಿತ್ತು ಹಾಕಿ ಉದ್ಯಾನವನದಲ್ಲಿದ್ದ ಡಾ.ಅಂಬೇಡ್ಕರ್ ಪುತ್ಥಳಿಯನ್ನು ಬಟ್ಟೆಯಲ್ಲಿ ಮುಚ್ಚಿಟ್ಟು ವರ್ಷಗಳೇ ಉರುಳಿದರೂ ಕ್ರಮ ಕೈಗೊಳ್ಳುವ ಸೌಜನ್ಯವೂ ನಗರಸಭೆಗೆ ಇಲ್ಲವಾಗಿದೆ.
ಜನನ-ಮರಣ ಪ್ರಮಾಣ ಪತ್ರ, ನಿವೇಶನಗಳಿಗಾಗಿ ಅರ್ಜಿಗಳು, ಕಂದಾಯ ಪಾವತಿ, ಮನೆ ನಿರ್ಮಾಣಕ್ಕಾಗಿ ಪರವಾನಗಿ ಪತ್ರ ಸೇರಿದಂತೆ ಒಂದಲ್ಲಾ ಎರಡಲ್ಲ ಹತ್ತು ಹಲವು ಸಮಸ್ಯೆಗಳನ್ನೊತ್ತು ಕೆಲಸಗಳು ಆಗದೆ ಬೇಸತ್ತವರನ್ನು ಸಂತೈಸುವ ಜನಪ್ರತಿನಿಧಿಗಳೇ ಇಲ್ಲಿ ಇಲ್ಲವಾಗಿದ್ದಾರೆ.
ಗೆದ್ದು ಗದ್ದುಗೆಯಲ್ಲಿ ಕೂತವರನ್ನು ಪ್ರಶ್ನಿಸೋಣ ಎಂದರೆ ಚುನಾವಣೆಯೇ ನಡೆಯದೆ ನಗರದ ಜನತೆಯ ಪಾಡು ಅಡಕತ್ತರಿಗೆ ಸಿಕ್ಕಿದಂತಾಗಿದೆ. ಒಟ್ಟಾರೆ ಕಳೆದ ಎರಡು ವರ್ಷ ಮೂರು ತಿಂಗಳಿಂದಲೂ ನಗರಸಭೆಯಲ್ಲಿ ಜನಪ್ರತಿನಿಧಿಗಳೇ ಇಲ್ಲದೆ ನಗರದ ಅಭಿವೃದ್ಧಿಯೂ ಕುಂಠಿತಗೊಂಡಿದ್ದು ನಗರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








