ತುಮಕೂರು :
ಮಂಡಿಪೇಟೆ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಬದಿಯ ಚರಂಡಿ ಅಗೆತ ಕಾಮಗಾರಿಗಳ ವಿಳಂಬ ಗತಿಯಿಂದಾಗಿ ಅಲ್ಲಿ ಸಂಚರಿಸುವ ಸಾರ್ವಜನಿಕರಿಗೆ ನಿತ್ಯವೂ ಕಿರಿಕಿರಿ. ಮತ್ತೊಂದೆಡೆ ಪ್ರತಿದಿನ ಅಲ್ಲಿಯೇ ವ್ಯಾಪಾರ ವಹಿವಾಟು ನಡೆಸುವ ವರ್ತಕರಿಗೆ ಅನಾರೋಗ್ಯದ ಆತಂಕ. ಈ ಆತಂಕದಲ್ಲಿಯೇ ಅಲ್ಲಿನ ವರ್ತಕರು ದಿನಗಳನ್ನು ದೂಡುತ್ತಿದ್ದಾರೆ.
ಈಗ್ಗೆ ಸುಮಾರು 20 ದಿನಗಳ ಅವಧಿಯಲ್ಲಿ ಮಂಡಿಪೇಟೆ ಮುಖ್ಯರಸ್ತೆ ಚಿತ್ರಮಂದಿರದ ಮುಂಭಾಗದ ರಸ್ತೆ ಕಾಮಗಾರಿಗಾಗಿ ಚರಂಡಿಗಳನ್ನು ಅಗೆಯಲಾಗಿದೆ. ರಸ್ತೆ ಬದಿ ಹಾಗೂ ಚರಂಡಿಗಳ ಮಣ್ಣನ್ನು ಕೆಲವು ಕಡೆ ಗುಡ್ಡೆ ಹಾಕಲಾಗಿದೆ. ಇದು ಅಲ್ಲಿ ಸಂಚರಿಸುವವರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಮೊದಲೇ ಇದು ಜನನಿಬಿಡ ಮಂಡಿಪೇಟೆ ಪ್ರದೇಶ. ನಿತ್ಯವೂ ಸಾವಿರಾರು ಜನ ಈ ರಸ್ತೆಯಲ್ಲಿ ಬಂದು ಹೋಗುತ್ತಾರೆ. ನೋರಾರು ವಾಹನಗಳು ಇಲ್ಲಿಯೇ ಓಡಾಡಬೇಕು. ಅಗೆದಿರುವ ಕಾಮಗಾರಿಗಳನ್ನು ಹಾಗೆಯೇ ಬಿಟ್ಟಿರುವುದರ ಪರಿಣಾಮ ಇವರೆಲ್ಲರಿಗೂ ಈಗ ತೊಂದರೆ ಎದುರಾಗಿದೆ.
ಅಗೆದ ಚರಂಡಿಗಳನ್ನು ಇಂತಿಷ್ಟು ದಿನಗಳೊಳಗೆ ಮುಚ್ಚುವಂತಿರಬೇಕು. ಆದರೆ ಈ ಕಾಮಗಾರಿಗಳಿಗೆ ನಿಗದಿತ ಅವಧಿಯೇ ಇರುವುದಿಲ್ಲ. ಯಾವಾಗ ಅಗೆಯುತ್ತಾರೆ, ಯಾವಾಗ ಮುಚ್ಚುತ್ತಾರೆ ಎಂಬ ಮಾಹಿತಿ ಯಾರಿಗೂ ತಿಳಿದಿಲ್ಲ. ಮಂಡಿಪೇಟೆಯ ವರ್ತಕರೇ ಹೇಳುವ ಪ್ರಕಾರ ರಾತ್ರಿವೇಳೆ ಇಲ್ಲಿ ಬಂದು ಕೆಲಸ ಮಾಡುತ್ತಾರೆ. ಬೆಳಗ್ಗೆ ನಾವು ಬರುವ ವೇಳೆಗೆ ಯಾರೂ ಇರುವುದಿಲ್ಲ. ಕೇಳುವುದು ಯಾರನ್ನು ಎಂದು ಪ್ರಶ್ನಿಸುತ್ತಾರೆ. ರಾಜಕಾರಣಿಗಳಿಗೆ ದೂರು ನೀಡಿದರೆ ಒಂದಷ್ಟು ದಿನ ಸಮಾಧಾನವಾಗಿರಿ, ಕಾಮಗಾರಿ ಮುಗಿದ ಮೇಲೆ ಎಲ್ಲವೂ ಸರಿಹೋಗುತ್ತದೆ ಎನ್ನುತ್ತಾರೆ. ಆದರೆ ಸರಿ ಹೋಗುವುದು ಯಾವಾಗ ಎನ್ನುತ್ತಾರೆ ಮುಖಂಡರಾದ ನಟರಾಜ್, ರಾಮನಾಥ್ ಮುಂತಾದವರು.
ಈಗ ಯುಗಾದಿಯ ಸಮಯ. ಗ್ರಾಹಕರು ಬೇರೆ ಬೇರೆ ಖರೀದಿಗಾಗಿ ಬರುವವರು ಇರುತ್ತಾರೆ. ಹಬ್ಬ ಹರಿದಿನಗಳು, ಮದುವೆ ಇತ್ಯಾದಿ ಕಾರ್ಯಗಳಿಗೆ ಗ್ರಾಹಕರು ಅಂಗಡಿಗಳತ್ತ ಬರುತ್ತಾರೆ. ಆದರೆ ಇಲ್ಲಿ ನಡೆದಿರುವ ಕಾಮಗಾರಿಗಳ ಅಡಚಣೆಯಿಂದಾಗಿ ಇಲ್ಲಿ ಬರಲು ಯಾರೂ ಇಷ್ಟಪಡುತ್ತಿಲ್ಲ. ಬೇಸರಪಟ್ಟುಕೊಂಡು ಬೇರೆ ಕಡೆ ಹೋಗುತ್ತಿದ್ದಾರೆ ಎಂಬುದು ಅಲ್ಲಿನ ವರ್ತಕರ ಅಸಮಾಧಾನ.
ಚಿತ್ರಮಂದಿರದ ಎದುರು ನಾಲ್ಕು ಗಾಲಿ ಬಾವಿ ರಸ್ತೆಗೆ ಹೋಗುವ ಮಾರ್ಗದಲ್ಲಿ ಅಗೆದು ಗುಂಡಿ ಬಿದ್ದಿರುವ ಕಾರಣ ಇತ್ತೀಚೆಗೆ ಒಂದೆರಡು ವಾಹನಗಳು ಅಲ್ಲಿ ಬಿದ್ದು ಹೋಗಿರುವ ಘಟನೆಗಳೂ ವರದಿಯಾಗಿವೆ. ವಾಹನಗಳನ್ನು ನಿಲ್ಲಿಸಲು ಅಲ್ಲಿ ಕಷ್ಟಕರವಾಗುತ್ತಿದೆ. ಇದರಿಂದಾಗಿ ವಿಪರೀತ ವಾಹನಗಳ ದಟ್ಟಣೆ ದಿನೆ ದಿನೆ ಹೆಚ್ಚುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಗಮನಕ್ಕೆ ತಂದ ಪರಿಣಾಮವಾಗಿ ಗುರುವಾರ ರಾತ್ರಿ ಚರಂಡಿ ಬಳಿ ಒಂದಷ್ಟು ಮಣ್ಣನ್ನು ಸುರಿದು ಹೋಗಿದ್ದಾರೆ ಅಷ್ಟೇ ಎನ್ನುತ್ತಾರೆ ಅಲ್ಲಿನ ಸ್ಥಳೀಯರು.
ರೋಗಗಳ ಅಪಾಯ: ನಿತ್ಯವೂ ಧೂಳು ಆವರಿಸಿಕೊಳ್ಳುತ್ತಿರುವ ಪರಿಣಾಮವಾಗಿ ಇಲ್ಲಿರುವ ವರ್ತಕರು ಹಾಗೂ ನೌಕರ ಸಿಬ್ಬಂದಿಗಳಿಗೆ ಅನಾರೋಗ್ಯದ ಭೀತಿ ಎದುರಾಗಿದೆ. ಕೆಮ್ಮು ಮತ್ತು ನೆಗಡಿ ಸಾಧಾರಣ ಎನ್ನುವಂತಾಗಿದೆ. ಧೂಳಿನ ಕಣಗಳು ಮೈಗೆ ಹಾಗೂ ಶ್ವಾಸಕೋಶಕ್ಕೆ ಹರಡಿಕೊಳ್ಳುವ ಪರಿಣಾಮ ಚರ್ಮದ ರೋಗಗಳು ಎದುರಾಗುತ್ತವೆ. ಈಗ ಬೇಸಿಗೆ ಕಾಲ ಇರುವುದರಿಂದ ರೋಗಗಳು ಹರಡುವ ಅಪಾಯವೂ ಇದೆ. ಕೆಮ್ಮು, ಜ್ವರ ಎಂದು ಆಸ್ಪತ್ರೆಗಳಿಗೆ ಹೋದರೆ ಕೊರೊನಾ ಬಂದಿದೆ ಎಂದು ಹೇಳುವ ಸಾಧ್ಯತೆಗಳೂ ಇವೆ. ಈಗಾಗಲೇ ಬಹಳಷ್ಟು ಮಂದಿಗೆ ಕೊರೊನಾ ಒಕ್ಕರಿಸಿದೆ. ಕೆಲವು ಅಂಗಡಿಗಳ ಮಾಲೀಕರಿಗೆ ಅನಾರೋಗ್ಯ ಉಂಟಾಗಿ ಬಾಗಿಲು ಹಾಕಿದ್ದಾರೆ. ಈ ನಷ್ಟವನ್ನು ಭರಿಸುವವರು ಯಾರು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇರಬೇಕು. ಯಾವ ಕಾಮಗಾರಿ ಎಷ್ಟು ದಿನಗಳ ಕಾಲ ನಡೆಯುತ್ತದೆ. ಯಾವಾಗ ಮುಗಿಯುತ್ತದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಆದರೆ ಇಲಾಖೆಗಳು ಯಾವುದೇ ಮಾಹಿತಿ ನೀಡದಿರುವುದರಿಂದ ಎಲ್ಲವೂ ಗೊಂದಲಮಯವಾಗಿದೆ.
ಜೆ.ಸಿ.ರಸ್ತೆಯದ್ದೂ ಇದೇ ಸ್ಥಿತಿ:
ಮಂಡಿಪೇಟೆ ಸಂಪರ್ಕ ಹೊಂದುವ ಜೆ.ಸಿ.ರಸ್ತೆಯದ್ದೂ ಇದೇ ಸ್ಥಿತಿ. ಇಲ್ಲಿಯೂ ಸಹ ಕಳೆದ 20 ದಿನಗಳಿಂದ ರಸ್ತೆ ಬದಿಯಲ್ಲಿ ಅಗೆತ ಆರಂಭಿಸಿದ್ದಾರೆ. ಯುಜಿಡಿ ಸಂಪರ್ಕದ ಮ್ಯಾನ್ ಹೋಲ್ಗಳು ಎದ್ದು ಕಾಣುತ್ತಿವೆ. ರಸ್ತೆಯ ಬದಿಯಲ್ಲಿ ಮಣ್ಣನ್ನು ಅಗೆದು ಬಿಡಲಾಗಿದೆ. ಇದರಿಂದಾಗಿ ಅಂಗಡಿಗಳಿಗೆ ಹೋಗಿ ಬರಲಾಗದ ಪರಿಸ್ಥಿತಿ ಇದೆ.
ಸುಮಾರು 15 ದಿನಗಳಿಗೂ ಮೇಲ್ಪಟ್ಟು ಇಲ್ಲಿ ಅಗೆತ ಮಾಡಿದ್ದಾರೆ. ಮಣ್ಣನ್ನು ಗುಡ್ಡೆ ಹಾಕಿದ್ದಾರೆ. ಕೊನೇಪಕ್ಷ ಆ ಮಣ್ಣನ್ನಾದರೂ ತೆರವುಗೊಳಿಸಿದ್ದರೆ ವಾಹನಗಳ ಸಂಚಾರದ ಕಿರಿಕಿರಿ ತಪ್ಪುತ್ತಿತ್ತು. ಬಹಳ ದಿನಗಳ ನಂತರ ಗುರುವಾರ ರಾತ್ರಿ ಒಂದಷ್ಟು ಹಳ್ಳದ ಮಣ್ಣನ್ನು ತಂದು ಹಾಕಿದ್ದಾರೆ. ಇಲ್ಲಿ ವರ್ತಕರಿಗೂ ಸಮಸ್ಯೆ, ಸಾರ್ವಜನಿಕರಿಗೂ ಸಮಸ್ಯೆ. ವ್ಯಾಪಾರ ವಹಿವಾಟು ತುಂಬಾ ಕಷ್ಟಕರವಾಗಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಆಗುತ್ತಿರುವ ಕಿರಿಕಿರಿ ತಪ್ಪಿಸಲಿ.