ತುಮಕೂರು :

ಯುಗಾದಿ ಹಬ್ಬ ಮುಗಿಸಿ ತಮ್ಮ ತಮ್ಮ ಕೆಲಸಗಳಿಗೆ ಹಾಜರಾಗುವ ಸಲುವಾಗಿ ನೌಕರರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ದೃಶ್ಯ ಬುಧವಾರ ಸಂಜೆ ಕಂಡು ಬಂದಿತು.
ಮಂಗಳವಾರ ಹಾಗೂ ಬುಧವಾರ ಎರಡು ದಿನ ರಜೆ ಇತ್ತು. ಗುರುವಾರ ಎಂದಿನಂತೆ ಕಚೇರಿ ಕಾರ್ಯಗಳು ಆರಂಭವಾಗಲಿವೆ. ಈಗಾಗಲೆ ರಜೆಯ ಹಿನ್ನೆಲೆಯಲ್ಲಿ ಊರು ಸೇರಿಕೊಂಡಿದ್ದವರು ಮರಳಿ ನಗರಗಳಿಗೆ ವಾಪಸ್ ಆಗಲು ಬಸ್‍ಗಳ ಕೊರತೆ ಇದೆ. ಇದರಿಂದಾಗಿ ಬುಧವಾರ ಮಧ್ಯಾಹ್ನದ ನಂತರ ಬಸ್‍ಗಳತ್ತ ಮುಖ ಮಾಡುತ್ತಿದ್ದ ದೃಶ್ಯ ಕಂಡುಬಂದಿತು.
ತುಮಕೂರಿನಿಂದ ಗ್ರಾಮೀಣ ಪ್ರದೇಶಗಳಿಗೆ ಹೋಗುವವರ ಸಂಖ್ಯೆ ಕಡಿಮೆಯಾಗಿತ್ತು. ಬದಲಾಗಿ ಮಧ್ಯಾಹ್ನದ ನಂತರ ಬೆಂಗಳೂರಿನ ಕಡೆಗೆ ಹೋಗುವ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಾಗತೊಡಗಿತು. ತುಮಕೂರಿನಿಂದ ಶಿರಾ, ಕೆ.ಬಿ.ಕ್ರಾಸ್, ತುರುವೇಕೆರೆ, ಕುಣಿಗಲ್ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರೂ ಸಹ ಬಸ್ ನಿಲ್ದಾಣದಲ್ಲಿ ಕಂಡು ಬಂದರು. ಶಿರಾ ಮಾರ್ಗವಾಗಿ ಬಸ್‍ಗಳು ಹೆಚ್ಚು ಓಡಾಡಿದವು. ಆದರೆ ತಿಪಟೂರು ಹಾಗೂ ಇತರೆ ಮಾರ್ಗಗಳಿಗೆ ಬಸ್‍ಗಳ ಕೊರತೆ ಕಂಡುಬಂದಿತು. ಬಸ್ ನಿಲ್ದಾಣದಲ್ಲಿ ಕೆಲವು ಕೆ.ಎಸ್.ಆರ್.ಟಿ.ಸಿ. ಬಸ್‍ಗಳು ಸಂಚರಿಸಿದವು. ಖಾಸಗಿ ಬಸ್‍ಗಳು ಸಹ ಕೆ.ಎಸ್.ಆರ್.ಟಿ.ಸಿ. ನಿಲ್ದಾಣದಿಂದಲೆ ಪ್ರಯಾಣ ಬೆಳೆಸಿದವು. ಪ್ರಯಾಣಿಕರ ಸಂಖ್ಯೆ ಅಷ್ಟೇನು ಹೆಚ್ಚು ಕಂಡುಬರಲಿಲ್ಲ. ಇದರಿಂದಾಗಿ ಬಸ್‍ಗಳ ಸೀಟು ಭರ್ತಿಯಾದ ನಂತರವೆ ಬಸ್‍ಗಳನ್ನು ಚಾಲನೆಗೆ ಬಿಡಲಾಗುತ್ತಿತ್ತು.
ಒಂದು ಕಡೆ ಕೆ.ಎಸ್.ಆರ್.ಟಿ.ಸಿ. ನೌಕರರ ಮುಷ್ಕರ. ಇನ್ನೊಂದು ಕಡೆ ಕೊರೋನಾ ಅಟ್ಟಹಾಸದ ನಡುವೆಯೂ ಅಂತೂ ಇಂತೂ ಹಬ್ಬ ಮುಗಿಸಲಾಯಿತು. ಯುಗಾದಿ ನಂತರ ವರ್ಷದೊಡಕು ಹಬ್ಬ ಮುಗಿಯುತ್ತಿದ್ದಂತೆಯೇ ಬೆಂಗಳೂರಿನಿಂದ ಊರುಗಳಿಗೆ ಆಗಮಿಸಿದ್ದ ಅನೇಕ ಮಂದಿ ತಮ್ಮ ವಿವಿಧ ಕೆಲಸ ಕಾರ್ಯಗಳಿಗೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.
ಹೆಚ್ಚು ಜನಸಂದಣಿ ಇರಬಾರದು, ಮುಖಕ್ಕೆ ಮಾಸ್ಕ್ ಧರಿಸದೆ ಓಡಾಡಬಾರದು ಎಂಬುದು ಬರೀ ಆದೇಶವಾಗಿದೆ. ಆದೇಶ ಕಟ್ಟುನಿಟ್ಟಾಗಿ ಪಾಲಿಸದೆ, ಮುಖಕ್ಕೆ ಮಾಸ್ಕ್ ಇಲ್ಲದೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ದೃಶ್ಯವಿತ್ತು. ಈ ರೀತಿಯ ಜನಸಂದಣಿ ಸೇರುವುದನ್ನು ಮೊದಲು ಕಂಟ್ರೋಲ್ ಮಾಡಬೇಕು. ಹಬ್ಬ ಹರಿದಿನಗಳ ನೆಪದಲ್ಲಿ ಜನ ಮೈಮರೆತರೆ ಕೋರೊನಾ ವಕ್ಕರಿಸದೆ ಇನ್ನೇನು? ದಯವಿಟ್ಟು ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಿದರೆ ಮಾತ್ರ ಕೊರೊನಾ ನಿಯಂತ್ರಿಸಬಹುದು. ಇಲ್ಲವಾದರೆ ಇನ್ನಷ್ಟು ಮಂದಿ ಕೊರೊನಾಗೆ ಬಲಿಯಾಗುವುದಂತೂ ಕಟುಸತ್ಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








