ತುಮಕೂರು :
ಸರ್ಕಾರದ ಮಾರ್ಗಸೂಚಿಯಂತೆ ಖಾಸಗಿ ಆಸ್ಪತ್ರೆಗಳು ಶೇಕಡ 50ರಷ್ಟು ಹಾಸಿಗೆ ಮತ್ತು ಐಸಿಯುಗಳನ್ನು ಮೀಸಲಿಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು. ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸಿ ಎಲ್ಲಾ ಆಸ್ಪತ್ರೆಗಳೂ ಶೇ.50%ರಷ್ಟು ಐಸಿಯು ಮತ್ತು ಹಾಸಿಗೆಗಳನ್ನು ಮೀಸಲಿಡಬೇಕು, ಮೀಸಲಿಡದ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಳೆದ ವರ್ಷ ಕೋವಿಡ್ ಸೋಂಕಿತರಿಗೆ ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿಆರ್‍ಕೆ) ಯೋಜನೆ’ಯಡಿ ನೀಡಿದ್ದ ಚಿಕಿತ್ಸೆಯ ಹಣ ಇನ್ನೂ ಪಾವತಿಯಾಗಿಲ್ಲ. ಇದರಿಂದ ಆಸ್ಪತ್ರೆ ನಡೆಸುವುದೇ ಕಷ್ಟ ಎನ್ನುವಂತಾಗಿದ್ದು, ಬಾಕಿ ಇರುವ ಬಿಲ್ಲುಗಳ ಪಾವತಿಗಾಗಿ ಕ್ರಮ ಕೈಗೊಳ್ಳಬೇಕು ಎಂದು ವೈದ್ಯರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಜಿಲ್ಲೆಯು ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಜನರ ಆರೋಗ್ಯಕ್ಕಾಗಿ ಸೇವೆ ಸಲ್ಲಿಸಬೇಕು. ‘ಎಬಿಆರ್‍ಕೆ ಯೋಜನೆ’ಯಡಿ ಕಳೆದ ವರ್ಷ ಕೋವಿಡ್ ಸೋಂಕಿತರಿಗೆ ನೀಡಿದ್ದ ಚಿಕಿತ್ಸೆಗೆ ಸಂಬಂಧಿಸಿದಂತೆ ಬಾಕಿ ಇರುವ ಬಿಲ್ಲುಗಳ ಪಾವತಿಗಾಗಿ ಸಂಬಂಧಪಟ್ಟವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದ ಅವರು ಖಾಸಗಿ ಆಸ್ಪತ್ರೆಗಳಿಗೆ ಖುದ್ದಾಗಿ ಭೇಟಿ ನೀಡಿ ಎಬಿಆರ್‍ಕೆಯಡಿ ಬಿಲ್ಲುಗಳ ಪಾವತಿಯಲ್ಲಿನ ದೋಷಗಳನ್ನು ಸರಿಪಡಿಸುವಂತೆ ಸಂಬಂಧಿಸಿದ ನೋಡಲ್ ಅಧಿಕಾರಿಗೆ ನಿರ್ದೇಶಿಸಿದರು.
ಖಾಸಗಿ ಆಸ್ಪತ್ರೆಗಳ ವೈದ್ಯರು ‘ಎಬಿಆರ್‍ಕೆ ಯೋಜನೆ’ಯಡಿ ನೀಡಲಾಗುವ ಔಷಧಗಳನ್ನು ಲಾಗಿಸ್ಟಿಕ್ಸ್ ಮೂಲಕ ಸರಬರಾಜು ಮಾಡಿದರೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದಾಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಪ್ರತಿಕ್ರಿಯಿಸಿ ಇಲಾಖೆಯಲ್ಲಿ ಲಾಗಿಸ್ಟಿಕ್ಸ್ ಮೂಲಕ ಸರಬರಾಜು ಮಾಡಲು ಅವಕಾಶವಿಲ್ಲ ಆದ್ದರಿಂದ ಈಗಿರುವ ವ್ಯವಸ್ಥೆಯಲ್ಲಿಯೇ ಚಿಕಿತ್ಸೆ ನೀಡುವಂತೆ ತಿಳಿಸಿದರು. ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ದಾಖಲಾಗುವ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಟ್ಟ ಹಾಸಿಗೆಗಳು ಭರ್ತಿಯಾದ ನಂತರ ಉಳಿದ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ಮಮತಾ, ನೋಡಲ್ ಡೆಪ್ಯುಟಿ ಡೈರೆಕ್ಟರ್ ಡಾ.ಚಂದ್ರಕಲಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್‍ಬಾಬು, ಆರ್‍ಎಂಒ ಡಾ.ವೀಣಾ, ಡಾ.ಚೇತನ್, ಡಾ.ಮಹಿಮಾ, ಡಾ. ಕೇಶವರಾಜ್, ಡಾ.ಸನತ್ ಸೇರಿದಂತೆ ಖಾಸಗಿ ಆಸ್ಪತ್ರೆಗಳ ವೈದ್ಯರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ