ತುಮಕೂರು :
ಕೋವಿಡ್ ವಿರುದ್ಧ ಲಸಿಕೆ ಅಭಿಯಾನವನ್ನು ತೀವ್ರಗತಿಯಲ್ಲಿ ನಡೆಸಬೇಕೆಂದು ಕೇಂದ್ರ ಸರಕಾರ ಸೂಚಿಸಿ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಬೇಕೆಂದು ಕರೆಕೊಟ್ಟಿದೆ. ಆದರೆ ರಾಜ್ಯದಲ್ಲಿ ಮಾತ್ರ ಲಸಿಕೆಯ ಕೊರತೆಯಿಂದ ಲಸಿಕಾ ಕೇಂದ್ರಗಳಿಗೆ ತೆರಳಿದವರಿಗೆ ಲಸಿಕೆ ಸಿಗುವುದೇ ದುರ್ಲಭವಾಗಿದ್ದು, ಇಂದು ರಾತ್ರಿಯಿಂದ ಜಾರಿಯಾಗಲಿರುವ ಲಾಕ್ಡೌನ್ ಮಾದರಿಯ 14 ದಿನಗಳ ಬಿಗಿ ನಿರ್ಬಂಧಗಳು ಲಸಿಕಾ ಅಭಿಯಾನಕ್ಕೆ ಬ್ರೇಕ್ ಹಾಕಿದ್ದು, ಈ ನಿರ್ಬಂಧದ ಅವಧಿಯಲ್ಲಿ ಲಸಿಕೆ ಹಾಕುವುದಿಲ್ಲ ಎಂದು ಆರೋಗ್ಯ ಸಚಿವರೇ ಹೇಳಿಕೆ ನೀಡಿರುವುದು ಕೋವಿಡ್ ನಿಯಂತ್ರಣಕ್ಕೆ ಹಿನ್ನೆಡೆಯೆನಿಸಿದೆ.
ವರ್ಷಾರಂಭದಿಂದ ಶುರುವಾದ ಅಭಿಯಾನ:
ಜ.16ರಿಂದ ಕೋವಿಡ್ ನಿಯಂತ್ರಣ ಲಸಿಕೆ ಅಭಿಯಾನ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ ಆರೋಗ್ಯ ವೈದ್ಯಕೀಯ ಸಿಬ್ಬಂದಿ, ನಂತರದಲ್ಲಿ ಕೋವಿಡ್ ನಿಯಂತ್ರಣದ ಮುಂಚೂಣಿ ಸೇವೆಯಲ್ಲಿ ನಿರತರಾದ ಪೊಲೀಸರು, ಸರಕಾರಿನೌಕರರು, ಶಿಕ್ಷಕರು, ಸೇನಾ ಸಿಬ್ಬಂದಿಗೆ ನೀಡಲಾಯಿತು. ಮಾ.1 ರಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ 45 ರಿಂದ 60 ವರ್ಷದವರೆಗಿನ ಬಿಪಿ, ಮಧುಮೇಹ ಮತ್ತಿತರ ಗಂಭೀರ ಸಮಸ್ಯೆಯುಳ್ಳುವರಿಗೆ ಮಾತ್ರ ಚುಚ್ಚುಮದ್ದನ್ನು ನೀಡಲು ಸೂಚಿಸಲಾಯಿತು. ಗೊಂದಲ, ಅನುಮಾನಗಳ ನಡುವೆಯೇ ಹಿರಿಯರು ಲಸಿಕೆ ಪಡೆಯಲು ಮುಂದಾದರು.
ಲಸಿಕೆಗೆ ಹಾಹಾಕಾರ:
ಮಾ.31ರ ಬಳಿಕ ಆ ನಿರ್ಬಂಧವನ್ನು ತೆಗೆದು ಹಾಕಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಕೊಡಬೇಕೆಂದು ಸರಕಾರ ಮಾರ್ಗಸೂಚಿ ಹೊರಡಿಸಿತು. ಏತನ್ಮಧ್ಯೆ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುವ ಜೊತೆಗೆ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಯಿತು. ಆದರೆ ಲಸಿಕಾ ಕೇಂದ್ರಗಳಿಗೆ ಅಗತ್ಯವಾದ ಬೇಡಿಕೆಯಷ್ಟು ವ್ಯಾಕ್ಸಿನ್ ಪೂರೈಕೆಯಾಗದೆ ಲಸಿಕೆ ಹಾಹಾಕಾರ ತಲೆದೋರಿದೆ. ಇದರ ನಡುವೆ ಮೇ 1ರಿಂದ 18 ರಿಂದ 45 ವರ್ಷದವರಿಗೂ ಉಚಿತ ಲಸಿಕೆ ಹಾಕುವುದಾಗಿ ಸರಕಾರ ಘೋಷಿಸಿರುವುದು, ಲಸಿಕೆ ಕೊರತೆಯ ನಡುವೆ ಇದು ಸಾಧ್ಯವೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಮತ್ತೊಂದೆಡೆ ಇಂದು ರಾತ್ರಿಯಿಂದ ಜಾರಿಯಾಗಲಿರುವ ಲಾಕ್‍ಡೌನ್ ಮಾದರಿ ನಿರ್ಬಂಧಗಳು ಲಸಿಕಾ ಅಭಿಯಾನಕ್ಕೆ ಹಿನ್ನಡೆ ಉಂಟುಮಾಡುವುದರಲ್ಲಿ ಸಂದೇಹವಿಲ್ಲ. ನಿರ್ಬಂಧ ಮುಗಿಯವರೆಗೂ ಲಸಿಕೆ ಹಾಕುವುದನ್ನು ಸ್ಥಗಿತಗೊಳಿಸುವುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿರುವುದು ಮೊದಲ ಡೋಜ್ ಪಡೆದು, 2ನೇ ಡೋಜ್ ಹಾಕಿಸಿಕೊಳ್ಳಲು ಕಾದಿದ್ದವರಲ್ಲಿ ಗೊಂದಲ, ನಿರಾಶೆಗೆ ಕಾರಣವಾಗಿದೆ.
ಆರೋಗ್ಯ, ಮುಂಚೂಣಿ ಸಿಬ್ಬಂದಿಗೆ ಇನ್ನೂ 2ನೇ ಡೋಜ್ ಪೂರ್ಣ ಸಿಕ್ಕಿಲ್ಲ :
ತುಮಕೂರು ಜಿಲ್ಲೆಯ ಕೋವಿಡ್ ಲಸಿಕಾ ಅಂಕಿ ಅಂಶವನ್ನೇ ಅವಲೋಕಿಸಿದರೆ 20646 ವೈದ್ಯಕೀಯ ಸಿಬ್ಬಂದಿಗೆ ಮೊದಲ ಡೋಜ್ ವ್ಯಾಕ್ಸಿನ್ ಮಾಡಲಾಗಿದ್ದು, 2ನೇ ಡೋಜ್ ಲಸಿಕೆಯನ್ನು ಈವರೆಗೆ 15667 ಮಂದಿಗೆ ಮಾಡಲಾಗಿದೆ. ಮುಂಚೂಣಿ ಸೇವಾ ಸಿಬ್ಬಂದಿಗಳ ವಿಭಾಗದಲ್ಲಿ 12970 ಮಂದಿಗೆ ಮೊದಲ ಡೋಜ್ ಲಸಿಕೆ ಹಾಕಿದ್ದರೆ 2ನೇ ಡೋಜ್ ಲಸಿಕೆಯನ್ನು 6051 ಮಂದಿಗೆ ಹಾಕಲಾಗಿದೆ. ಇನ್ನೂ 6919 ಮಂದಿಗೆ ಲಸಿಕೆ ಹಾಕುವುದು ಬಾಕಿಯಿದೆ. 45 ರಿಂದ 60 ವರ್ಷದೊಳಗಿನ 1,09,577 ಮಂದಿಗೆ ಮೊದಲ ಡೋಜ್ ಲಸಿಕೆ ಹಾಕಿದ್ದರೆ, 2ನೇ ಡೋಜ್ ಹಾಕಿಸಿಕೊಂಡವರ ಪ್ರಮಾಣ ಕೇವಲ 12,770 ಸಂಖ್ಯೆಯಲ್ಲಿದೆ. 60 ವರ್ಷ ಮೇಲ್ಪಟ್ಟ 1,49,524 ಮಂದಿಗೆ ಕೋವಿಡ್ ನಿಯಂತ್ರಣ ಮೊದಲ ಡೋಜ್ ಹಾಕಿದ್ದರೆ, 24954 ಮಂದಿ ಮಾತ್ರ ಎರಡನೇಡೋಜ್ ಹಾಕಿಸಿಕೊಂಡಿದ್ದಾರೆ. ಏ.25ರವರೆಗೆ ಜಿಲ್ಲೆಯಲ್ಲಿ 2,92,717 ಮಂದಿ ಮೊದಲ ಡೋಜ್ ಲಸಿಕೆ ಹಾಕಿಸಿಕೊಂಡಿದ್ದರೆ, ಎರಡನೇ ಡೋಜ್ ಹಾಕಿಸಿಕೊಂಡಿರುವವರ ಪ್ರಮಾಣ 59,442 ಸಂಖ್ಯೆಯಲ್ಲಿದೆ.
ಒಂದು ದಿನಕ್ಕೆ ಸಾಕಾಗುವಷ್ಟು ವ್ಯಾಕ್ಸಿನ್ ದಾಸ್ತಾನಿಲ್ಲ:
ಆರಂಭದಲ್ಲಿ ಲಕ್ಷಡೋಜ್‍ಗಳಷ್ಟು ವ್ಯಾಕ್ಸಿನ್ ಒದಗಿಸಿದ ಸರಕಾರ ಈಗ ಪೂರೈಸುವಲ್ಲಿ ವಿಫಲವಾಗಿರುವ ಪರಿಣಾಮ ಆಯಾ ದಿನಕ್ಕಾಗುವಷ್ಟು ಲಸಿಕೆ ಸಿಗದಂತಹ ಪರಿಸ್ಥಿತಿ ಉದ್ಬವಿಸಿದೆ. 15000 ಡೋಜ್‍ಗಳಷ್ಟು ಮಾತ್ರ ದಿನವೊಂದಕ್ಕೆ ಲಸಿಕೆ ಜಿಲ್ಲೆಗೆ ಪೂರೈಕೆಯಾಗುತ್ತಿದ್ದು, ಅದನ್ನೂ ಬೆಂಗಳೂರಿಗೆ ಹೋಗಿ ಸಿಬ್ಬಂದಿ ತರಬೇಕಿದೆ. ಅದರಲ್ಲೇ ಜಿಲ್ಲೆಯ 240 ಲಸಿಕಾ ಸೆಂಟರ್‍ಗಳಿಗೂ ಆರೋಗ್ಯ ಇಲಾಖೆಯವರು ಹಂಚಿಕೆ ಮಾಡಬೇಕಿದೆ. ಇಷ್ಟು ಕಡಿಮೆ ಪ್ರಮಾಣದಲ್ಲಿ ಲಸಿಕೆ ಪೂರೈಸಿದರೆ26 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಜಿಲ್ಲೆಯಲ್ಲಿ ಅಂದಾಜು ನಾಲ್ಕು ಲಕ್ಷ 18 ವರ್ಷದೊಳಗಿನವರನ್ನು ಹೊರತುಪಡಿಸಿದರೂ 22 ಲಕ್ಷ ಜನರಿಗೆ ಲಸಿಕೆ ಗುರಿ ಸಾಧಿಸುವುದು ಯಾವಾಗ ಎನ್ನುವ ಪ್ರಶ್ನೆ ಉದ್ಬವಿಸಿದೆ.
ಜಿಲ್ಲೆಯಲ್ಲಿ ಏ.25ರವರೆಗೆ 3,52,159 ಮಂದಿಗೆ ಲಸಿಕೆ
ತಾಲೂಕು 1ನೇ ಡೋಜ್ 2ನೇಡೋಜ್
ಚಿ.ನಾ.ಹಳ್ಳಿ 19,937 3,169
ಗುಬ್ಬಿ 30,964 3,253
ಕೊರಟಗೆರೆ 16,040 4,348
ಕುಣಿಗಲ್ 22,967 4,868
ಮಧುಗಿರಿ 25,672 4,151
ಪಾವಗಡ 19707 3,181
ಶಿರಾ 29,572 5,576
ತಿಪಟೂರು 24,042 6,234
ತುಮಕೂರು 83,287 20,935
ತುರುವೇಕೆರೆ 20,529 3,727
ಒಟ್ಟು 2,92,717 59,442
ಸದ್ಯ ಸರಕಾರದಿಂದ ಪೂರೈಕೆಯಾಗುವಷ್ಟು ಕೋವಿಡ್ ವ್ಯಾಕ್ಸಿನ್ ಡೋಸೆಜ್ ಅನ್ನು ಜಿಲ್ಲೆಯ 240 ಸೆಂಟರ್‍ಗಳಿಗೆ ಹಂಚಿಕೆ ಮಾಡಿ ಅರ್ಹರಿಗೆ ಲಸಿಕೆ ಹಾಕಲಾಗುತ್ತಿದ್ದು, ಯಾವುದೇ ಹೆಚ್ಚುವರಿ ದಾಸ್ತಾನು ಇಲ್ಲ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಸಂಬಂಧ ಸರಕಾರದ ಆದೇಶ, ಪೂರೈಕೆ ಆಧರಿಸಿ ಕ್ರಮ ವಹಿಸಲಾಗುವುದು.
-ಡಾ.ಕೇಶವರಾಜು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ.
ರಾಜ್ಯದಲ್ಲಿ ಕಠಿಣ ರೂಲ್ಸ್ ಮಗಿಯುವವರೆಗೂ ವ್ಯಾಕ್ಸಿನ್ ಹಾಕುವುದಿಲ್ಲ. 8-10 ವಾರಗಳ ಬಳಿಕವೂ ವ್ಯಾಕ್ಸಿನ್ ಪಡೆಯಬಹುದು. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಮೊದಲ ಡೋಜ್ ಪಡೆದವರೂ ಆತಂಕ ಪಡಬೇಕಿಲ್ಲ.
-ಡಾ.ಕೆ.ಸುಧಾಕರ್ ಆರೋಗ್ಯ ಸಚಿವ.
2ನೇ ಡೋಜ್ ಹಾಕಿಸಿಕೊಳ್ಳಲು ಹಿರಿಯ ನಾಗರಿಕರು ಪರದಾಡುವಂತಾಗಿದೆ. ನಾನು ಮೊದಲ ಡೋಜ್ ಹಾಕಿಕೊಂಡು ಏ.24ಕ್ಕೆ 6 ವಾರ ಕಳೆದಿದ್ದು, ಸರಕಾರ ಲಾಕ್‍ಡೌನ್ ಘೋಷಿಸಿದರೆ 2ನೇ ಡೋಜ್ ಹಾಕಿಸಿಕೊಳ್ಳಲು ಸಾಧ್ಯವಾಗುತ್ತದೋ ಇಲ್ಲವೋ ಎಂಬ ಆತಂಕದಿಂದ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಕೆಲವು ಕೇಂದ್ರಗಳನ್ನು ಸಂಪರ್ಕಿಸಿದಾಗ ವ್ಯಾಕ್ಸಿನ್ ಲಭ್ಯವಿಲ್ಲದ ಉತ್ತರಗಳು ಬಂತು. ಅಲ್ಲದೇ ಕೆಲವು ಕೇಂದ್ರಗಳಲ್ಲಿ ಸಾಮಾಜಿಕ ಅಂತರವೇ ಇಲ್ಲದೇ ವ್ಯಾಕ್ಸಿನ್, ಸೋಂಕಿತರ ಪರೀಕ್ಷೆ ಎಲ್ಲವೂ ಮಾಡಲಾಗುತ್ತಿದೆ. ವ್ಯಾಕ್ಸಿನ್ ಪಡೆಯಲು ಹೋಗಿ ಮತ್ತೆ ಸೋಂಕು ಅಂಟಿಸಿಕೊಳ್ಳಬೇಕೇ ಎಂಬ ಭಯ ಹಿರಿಯ ನಾಗರಿಕರನ್ನು ಕಾಡುತ್ತಿದೆ. ಹಿರಿಯ ನಾಗರಿಕರಿಗೆ ಆದ್ಯತೆ ಮೇರೆಗೆ ಪ್ರತ್ಯೇಕ ಸರತಿ ಸಾಲಲ್ಲಿ ವ್ಯಾಕ್ಸಿನ್ ಕೊಡುವ ವ್ಯವಸ್ಥೆಯಾಗಬೇಕು.
-ಕ್ಯಾಲೆಂಡರ್ ಶಿವಕುಮಾರ್, ಹಿರಿಯ ನಾಗರಿಕರು, ತುಮಕೂರು.
ಎಸ್.ಹರೀಶ್ ಆಚಾರ್ಯ
