ಹುಳಿಯಾರು : ಕೋವಿಡ್‍ನಲ್ಲೂ ಭಕ್ತರಿಂದ ದುರ್ಗಮ್ಮನ ಬಾನ  

  ಹುಳಿಯಾರು : 

      ಕೋರೊನಾ ಕಫ್ರ್ಯೂ ಹಿನ್ನೆಲೆಯಲ್ಲಿ ದೇವರ ಜಾತ್ರೆ, ಧಾರ್ಮಿಕ ಕೈಂಕರ್ಯಗಳನ್ನು ಸರ್ಕಾರ ಸ್ಥಗಿತಗೊಳಿಸಿದೆ. ಆದರೂ ಹುಳಿಯಾರಿನಲ್ಲಿ ಗ್ರಾಮ ದೇವತೆ ಶ್ರೀ ದುರ್ಗಮ್ಮನ ಬಾನವನ್ನು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ನೆರವೇರಿಸಿದ್ದಾರೆ.

      ಯುಗಾದಿ ಹಬ್ಬವಾದ 15 ದಿನಗಳ ನಂತರ ಹುಳಿಯಾರು ಗ್ರಾಮದೇವತೆ ಶ್ರೀದುರ್ಗಮ್ಮನವರ ಜಾತ್ರಾ ಮಹೋತ್ಸವವು ನಡೆಯುತ್ತದೆ. ಕಳೆದ ವರ್ಷ ಕೊರೊನಾ ಲಾಕ್‍ಡೌನ್‍ನಿಂದಾಗಿ ಜಾತ್ರಾ ಮಹೋತ್ಸವವನ್ನು ಸ್ಥಗಿತಗೊಳಿಸಲಾಗಿತ್ತು. ಈ ವರ್ಷವೂ ಸಹ ಲಾಕ್‍ಡೌನ್‍ನಿಂದಾಗಿ ದೇವಾಲಯ ಸಮಿತಿ ಜಾತ್ರಾ ಮಹೋತ್ಸವವನ್ನು ಸ್ಥಗಿತಗೊಳಿಸಿದೆ. ಹಾಗಾಗಿಯೇ ದೇವಸ್ಥಾನ ಸಮಿತಿಯ ಧರ್ಮದರ್ಶಿಗಳು, ಕನ್ವೀನರ್, ಗುಂಜುಗೌಡರುಗಳು, ಅರ್ಚಕರು ದೇವಸ್ಥಾನಕ್ಕೆ ಬೀಗ ಹಾಕಿಸಿದ್ದಾರೆ.

ಆದರೂ ಭಕ್ತರು ಮಾತ್ರ ಜಾತ್ರೆಯ ಆರಂಭದಲ್ಲಿ ನಡೆಯುವ ವಿಶೇಷ ಧಾರ್ಮಿಕ ಕೈಂಕರ್ಯಗಳಲ್ಲೊಂದಾದ ಆರತಿ ಬಾನವನ್ನು ಮಂಗಳವಾರ ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ದೇವಸ್ಥಾನದ ಬಳಿ ಪೂಜಾ ಕೈಂಕರ್ಯ ಮಾಡಿಕೊಡುವವರಾರು ಇಲ್ಲದಿದ್ದರೂ ಸಹ ಭಕ್ತರೆ ಪೂಜೆ ಮಾಡಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮನೆಯಲ್ಲೇ ಆರತಿ ಸಿದ್ಧ ಮಾಡಿಕೊಂಡು ಬಂದು ದೇವಸ್ಥಾನದ ಬೀಗ ಹಾಕಿರುವ ಬಾಗಿಲಿಗೆ ಹೂವು, ಹಣ್ಣು, ಕಾಯಿ ಇಟ್ಟು ಆರತಿ ಬೆಳಗಿ ಕೈಮುಗಿದು ಪ್ರಾರ್ಥಿಸಿದರು. ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ಹಿಂದಿರುಗಿದರು.

      ಇನ್ನು ಆರತಿ ಬಾನಕ್ಕೆ ಮಾಂಸಾಹಾರಿಗಳು ಬಾಡೂಟ ಮಾಡುವುದು ವಾಡಿಕೆಯಾಗಿದ್ದು, ಕೋಳಿ ಮತ್ತು ಕುರಿ ಮಾಂಸದ ಖರೀದಿಗಾಗಿ ಅಂಗಡಿ ಬಳಿ ಜನ ಜಾತ್ರೆ ಸೇರಿತ್ತು. 10 ಗಂಟೆಗೆ ಅಂಗಡಿಗಳ ಬಾಗಿಲು ಹಾಕುತ್ತಾರೆಂದು ಮುಂಜಾನೆ 6 ಗಂಟೆಯಿಂದಲೇ ಮಾಂಸ ಖರೀದಿಗೆ ಮುಗಿಬಿದ್ದಿದ್ದರು. ಲಾಕ್‍ಡೌನ್ ಸಂಕಷ್ಟದ ಕಾಲದಲ್ಲಿ ಕೋಳಿ ವ್ಯಾಪಾರಿಗಳಿಗೆ ಶುಕ್ರದೆಸೆ ತಿರುಗಿತ್ತು. ಒಟ್ಟಾರೆ ಕೋವಿಡ್ ಆತಂಕದ ನಡುವೆ ಭಕ್ತರು ಧಾರ್ಮಿಕ ಕೈಂಕರ್ಯಗಳನ್ನು ಬಿಡದೆ ನಡೆಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link