ಚಿಕ್ಕನಾಯಕನಹಳ್ಳಿ :
ಸರ್ಕಾರ ಘೋಷಿಸಿದ 14 ದಿನಗಳ ಲಾಕ್ ಡೌನ್‍ಗೆ ಮೊದಲನೆ ದಿನ ಬಹುತೇಕರು ಸ್ವಯಂ ಪ್ರೇರಣೆಯಿಂದ ಓಡಾಟಕ್ಕೆ ದಿಗ್ಭಂದನ ಹಾಕಿಕೊಂಡಿದ್ದಾರೆ, ಮುಂಜಾನೆ 6 ರಿಂದ 10 ರವರೆಗೆ ಜನರು ಅಗತ್ಯ ವಸ್ತುಗಳಿಗಾಗಿ ಓಡಾಡಿದರು ನಂತರದಲ್ಲಿ ಜನರು ರಸ್ತೆಗೆ ಇಳಿದಿದ್ದು ವಿರಳ ರಸ್ತೆಗಳು ಪೂರ್ಣ ಬಿಕೋ ಎನ್ನುತ್ತಿದ್ದವು.
ಮಾರುಕಟ್ಟೆ, ಹಾಲು, ತರಕಾರಿ, ಪೇಪರ್, ಹಾಗೂ ಮಾಂಸದ ಅಂಗಡಿಗಳು ಸೇರಿದಂತೆ ಕೆಲ ಅಗತ್ಯ ವಸ್ತುಗಳು ಮಾತ್ರ ಮುಂಜಾನೆ ಬಾಗಿಲು ತೆರೆದಿದ್ದವು ಜನರು ಕೊರೋನಾ ವೈರಸ್ ಮಹಾಮರಿಯಾಗಿ ಕಾಡುತ್ತಿರುವುದರಿಂದ ಹೆದರಿ ಅಗತ್ಯ ವಸ್ತುಗಳನ್ನು ಕೊಳ್ಳಲು ಮಾತ್ರ ಅಂಗಡಿಗೆ ಆಗಮಿಸುತ್ತಿದ್ದರು. ಹತ್ತು ಗಂಟೆಯ ನಂತರ ಆಸ್ಪತ್ರೆ, ಮೆಡಿಕಲ್, ಷಾಪ್ ಗಳಿಗೆ ಹೋಗುವವರು ಹಾಗೂ ಕೃಷಿ ಚಟುವಟಿಕೆಗಳ ಕೆಲಸಕ್ಕಾಗಿ ಬಂದವರು ಬಿಟ್ಟರೆ ಬೇರೆ ಜನ ರಸ್ತೆಗಿಳಿಯಲಿಲ್ಲ.
ಬ್ಯಾಂಕ್ ನೌಕರರು, ಕೆಲವು ಕಚೇರಿಗಳ ನೌಕರರು, ಕಟ್ಟಡ ಕಾರ್ಮಿಕರು, ಗೊಬ್ಬರದ ಅಂಗಡಿ ಮಾಲೀಕರು, ಮೆಡಿಕಲ್ ಸ್ಟೋರ್ ನವರು, ಆಸ್ಪತ್ರೆಯವರು ಸರ್ಕಾರದ ಆದೇಶದಂತೆ ಕೆಲಸಗಳಿಗೆ ತೆರಳುತ್ತಿದ್ದರು. ಮಧ್ಯಾಹ್ನದ ವೇಳೆಗೆ ಪಟ್ಟಣದ ರಸ್ತೆಗಳಲ್ಲಿ ಜನರೆ ಇಲ್ಲದೆ ಪೂರ್ಣ ಖಾಲಿ ಹೊಡೆಯುತ್ತಿತ್ತು, ಜನರ ವಾಹನಗಳ ಸಂಚಾರವಿಲ್ಲದೆ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು,
ಇನ್ನು ಸರ್ಕಾರಿ ಅಧಿಕಾರಿಗಳು ತಾಲ್ಲೂಕಿನಲ್ಲಿ ತಮಗೆ ವಹಿಸಿದ ಕೊವಿಡ್ ಕೆಲಸಕ್ಕೆ ಆಸ್ಪತ್ರೆ, ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಕೊರೋನಾ ಬಗ್ಗೆ ತಾಲ್ಲೂಕಿನಲ್ಲಿ ಉಂಟಾಗುತ್ತಿರುವ ಏರುಪೇರಿನ ಮಾಹಿತಿಯನ್ನು ಪಡೆದು ಜನರು ಮಾಸ್ಕ್ ಧರಿಸುವಂತೆ ಸ್ಯಾನಿಟೈಸರ್ ಆಗಾಗ್ಗೆ ಬಳಸುವಂತೆ ಸಲಹೆ ನೀಡುತ್ತಿದ್ದರು.
ಮತ್ತೆ ಇನ್ನೂ ಕೆಲವರು ಟೈಂಪಾಸ್ ಗಾಗಿ ತಮ್ಮ ಮನೆಗಳಲ್ಲಿ ಟಿ.ವಿ.ಯಿಂದ ದೂರ ಉಳಿದು ಚೌಕಬಾರ, ಕೇರಂ ಬೋರ್ಡ್, ಸೇರಿದಂತೆ ಒಳಾಂಗಣ ಆಟಗಳಲ್ಲಿ ತಲ್ಲೀನರಾಗಿದ್ದರು. ಗ್ರಾಮೀಣ ಭಾಗಗಳಲ್ಲಿ ರೈತರು ಕೃಷಿ ಚಟುವಟಿಕೆಯತ್ತ ತೆರಳಿ ದಿನದ ಸಮಯ ಕಳೆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ