ಕೊರಟಗೆರೆ : ಪ್ರತಿ ಗ್ರಾ.ಪಂ.ಗಳಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಗೆ ಆದೇಶ

ಕೊರಟಗೆರೆ :

      ಪ್ರತಿ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯುವಂತೆ ತಹಸೀಲ್ದಾರ್ ಗೋವಿಂದರಾಜು ಆದೇಶಿಸಿದ್ದಾರೆ.

      ಅವರು ತಾಲ್ಲೂಕು ಕಛೇರಿಯಲ್ಲಿ ಅಧಿಕಾರಿಗಳ ಕೋವಿಡ್ ವಿಶೇಷ ಸಭೆ ನಡೆಸಿ, ಪ್ರತಿ ಗ್ರಾಮಗಳಲ್ಲಿ ಕೊರೋನಾ ರೋಗಿಗಳು ಹೆಚ್ಚುತ್ತಿದ್ದಾರೆ. ಜನಗಳ ನಿರ್ಲಕ್ಷ್ಯತೆಯು ರೋಗಗಳ ಹರಡುವಿಕೆಗೆ ಕಾರಣವಾಗುತ್ತಿದೆ. ಆದ್ದರಿಂದ ಅಧಿಕಾರಿಗಳು ಮೊದಲು ಜನರಿಗೆ ಅರಿವು ಮೂಡಿಸಿ. ಅದಕ್ಕು ಮೀರಿದಾಗ ಅವರ ವಿರುದ್ದ ಕಾನೂನು ರೀತಿಯ ಕ್ರಮ ಮತ್ತು ದಂಡವನ್ನು ವಿಧಿಸಿ, ಸರ್ಕಾರದ ಲಾಕ್‍ಡೌನ್ ನಿಯಮವನ್ನು ಕಾರ್ಯರೂಪಕ್ಕೆ ತರುವಂತೆ ತಿಳಿಸಿದರು.

      ಪ್ರತಿ ಗ್ರಾಪಂ ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಅನ್ನು ಆರಂಭಿಸಬೇಕು. ಪಿಡಿಒ ಮತ್ತು ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ನಮೂದಿಸಿ ಜನರು ಕರೆ ಮಾಡಿದ ತಕ್ಷಣ ಸ್ಪಂದಿಸಬೇಕು. ಬಹುತೇಕ ಕೋರೋನಾ ರೋಗಿಗಳು ಹೋಂ ಐಸೋಲೇಷನ್‍ನಲ್ಲಿ ಇರುವುದರಿಂದ ಅವರುಗಳು ಎಲ್ಲಿಯು ಓಡಾಡದ ಹಾಗೆ ಎಚ್ಚರ ವಹಿಸಬೇಕು. ಸ್ಥಳೀಯ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಶುಶ್ರೂಕಿಯರು ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸುವುದರೊಂದಿಗೆ ಕೋವಿಡ್ ಸಹಾಯವಾಣಿಯ ಸಂಪರ್ಕವನ್ನು ಸಹ ಕಲ್ಪಿಸಿಕೊಡಬೇಕು. ಕೆಲವು ಗ್ರಾಮಗಳಲ್ಲಿ ಕೊರೋನಾ ರೋಗಿಗಳು 20ರ ಗಡಿ ದಾಟಿದ್ದು, ಅಂತಹ ಗ್ರಾಮಗಳನ್ನು ಅತಿ ಸೂಕ್ಷ್ಮ ಕೇಂದ್ರಗಳನ್ನಾಗಿ ಪರಿಗಣಿಸಿ ಅಲ್ಲಿ ಹೆಚ್ಚಿನ ಸ್ವಚ್ಛತಾ ಕಾರ್ಯ ಮತ್ತು ಜಾಗೃತಿ ಮೂಡಿಸಿ, ಉಳಿದ ಎಲ್ಲಾ ಗ್ರಾಮಗಳಿಗೂ ಸ್ವಚ್ಛತಾ ಕಾರ್ಯವನ್ನು ಮುಂದುವರಿಸಬೇಕು. ಕೊರೋನಾ ಸಂಕಷ್ಟ ಕಡಿಮೆಯಾಗುವವರೆಗೂ ತಾಲ್ಲೂಕು ಪಂಚಾಯತಿ, ಪಟ್ಟಣ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಕೋರೋನಾ ರೋಗದ ಕರ್ತವ್ಯ, ಕುಡಿಯುವ ನೀರು ಮತ್ತು ನರೇಗಾ ಕೆಲಸಗಳಿಗೆ ಮಾತ್ರ ಆದ್ಯತೆ ನೀಡಬೇಕು ಎಂದರು.

      ಕೆಲವು ಗ್ರಾಮಗಳಲ್ಲಿ ಕೊರೋನಾ ರೋಗ ಬಂದಿರುವ ವ್ಯಕ್ತಿಗಳು ಅಂಗಡಿಗಳಲ್ಲಿ ಗ್ರ್ರಾಹಕರಿಗೆ ಸರಕು ನೀಡುವ ವ್ಯಾಪಾರ ಮಾಡುತ್ತಿರುವ ದೂರುಗಳು ಬಂದಿವೆ. ಅಂತಹ ಅಂಗಡಿಗಳನ್ನು ಸೀಲ್ ಮಾಡುವಂತೆ ಆದೇಶಿಸಿದರು. ಪ್ರತಿ ಎರಡು ಗ್ರಾಮ ಪಂಚಾಯತಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಅಧಿಕಾರಿಗಳು ಸ್ಥಳಕ್ಕೆ ಹಾಜರಾದಾಗ ಹಾಗೂ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ ಅಲ್ಲಿನ ಅಧಿಕಾರಿಗಳಿಂದ ಲೋಪ ಕಂಡು ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ರೋಗ ಹೆಚ್ಚು ಹರಡದಂತೆ ಅಧಿಕಾರಿಗಳು ಮತ್ತು ವೈದ್ಯರು ಎಚ್ಚರ ವಹಿಸಬೇಕು. ಕಾನೂನು ಪಾಲಿಸದ ವ್ಯಕ್ತಿಗಳ ವಿರುದ್ದ ಯಾವುದೆ ಮುಲಾಜಿಲ್ಲದೆ ಕ್ರಮ ಮತ್ತು ದಂಡವನ್ನು ವಿಧಿಸಬೇಕು ಎಂದರು.

ಈ ಸಭೆಯಲ್ಲಿ ಇಒ ಶಿವಪ್ರಕಾಶ್, ಸಿಪಿಐ ಸಿದ್ದರಾಮೇಶ್ವರ್, ಪ್ರಭಾರ ತಾಲ್ಲೂಕು ವೈದ್ಯಾಧಿಕಾರಿ ರಾಜು, ಮುಖ್ಯಾಧಿಕಾರಿ ಲಕ್ಷ್ಮಣ್‍ಕುಮಾರ್, ಪಿಡಬ್ಲ್ಯೂಡಿ ಎಇಇ ಉಮಾಮಹೇಶ್, ಕೃಷಿ ಇಲಾಖಾ ಸಹಾಯಕ ನಿರ್ದೇಶಕ ನಾಗರಾಜು, ಬೆಸ್ಕಾಂ ಎಇಇ ವಿ. ಮಲ್ಲಣ್ಣ, ಹಿಂದುಳಿದ ವರ್ಗಗಳ ಕಲಾಣಾಧಿಕಾರಿ ಅನಂತರಾಜು, ಸಿಡಿಪಿಓ ಅಂಬಿಕಾ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಿಡಿಓಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap