ತುರುವೇಕೆರೆ :
ತಾಲ್ಲೂಕಿನ ಕೋವಿಡ್ ಹಾಟ್ ಸ್ಪಾಟ್ ಕೇಂದ್ರಗಳಲ್ಲಿ ಸೋಂಕಿತ ವ್ಯಕ್ತಿಯಿಂದ ಮನೆಯವರಿಗೆಲ್ಲ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಪಿ.ಡಿ.ಓ.ಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಕೋವಿಡ್ ನಿಯಂತ್ರಣ ಕುರಿತಂತೆ ಸಭೆಯಲ್ಲಿ ಮಾತನಾಡಿದ ಅವರು ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರನ್ನು ಹೋಮ್ ಕ್ವಾರಂಟೈನ್ ಮಾಡುವ ಬದಲು ಅವರನ್ನೆಲ್ಲಾ ಕೋವಿಡ್ ಕೇಂದ್ರಗಳಿಗೆ ಕಟ್ಟುನಿಟ್ಟಾಗಿ ದಾಖಲಿಸಬೇಕು. ಕೋವಿಡ್ ನಿಯಂತ್ರಣಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಪಕ್ಷಬೇಧ ಮರೆತು ಕೆಲಸ ಮಾಡಿದಾಗ ಮಾತ್ರ ಕೊರೋನಾ ನಿಯಂತ್ರಣ ಸಾದ್ಯ. ಆ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಗ್ರಾ.ಪಂ.ಅಧ್ಯಕ್ಷರು, ಸದಸ್ಯರುಗಳು ಸಹ ಕೈಜೋಡಿಸಿದಾಗ ಮಾತ್ರ ಪ್ರಗತಿ ಕಾಣಲು ಸಾಧ್ಯ ಎಂದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಔಷಧಿ, ಸ್ಟಾಫ್ ನರ್ಸ್ಗಳು ಮತ್ತು ಸಿಬ್ಬಂದಿಯ ಕೊರತೆ ಇದೆ ಎಂದು ಡಾ.ಸುಪ್ರಿಯಾ ಅವರ ಮನವಿಗೆ ಸಭೆಯಲ್ಲಿದ್ದ ಡಿ.ಎಚ್.ಒ. ಡಾ.ನಾಗೇಂದ್ರಪ್ಪ ಅವರಿಗೆ ಈ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದರು.
ತಾಲ್ಲೂಕಿನ ಕೋವಿಡ್ ಸೋಂಕಿತರು ನೆಗೆಟಿವ್ ಬಂದವರು ಹೋಮ್ ಕ್ವಾರಂಟೈನ್ ಟೆಸ್ಟ್ ಆದವರುಗಳ ನಡುವೆ ಒಂದಕ್ಕೊಂದು ಮಾಹಿತಿ ತಾಳೆಯಾಗುತ್ತಿಲ್ಲ. ಏನ್ ಕೆಲಸ ಮಾಡುತ್ತೀರಿ ಮೊದಲು ಅರ್ಥಮಾಡಿಕೊಂಡು ಕೆಲಸ ಮಾಡಿ ಗಂಟೆಗೊಂಥರ ಮಾಹಿತಿ ನೀಡಬೇಡಿ ಎಂದು ತಹಸೀಲ್ದಾರ್ ಮತ್ತು ಟಿ.ಎಚ್.ಒ. ಅವರಿಗೆ ಸಚಿವರು ನಯವಾಗಿಚಾಟಿ ಬೀಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾಕುಮಾರಿ ಮಾತನಾಡಿ ತಾಲ್ಲೂಕಿನ ಕೋವಿಡ್ ಹಾಟ್ ಸ್ಪಾಟ್ ವ್ಯಾಪ್ತಿ ಕೋವಿಡ್ ಹೆಚ್ಚಾದರೆ ತಹಸೀಲ್ದಾರ್ ಮತ್ತು ಇ.ಒ. ಹಾಗು ಗ್ರಾಮಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದರೆ ಅದಕ್ಕೆ ನೇರ ಹೊಣೆ ಪಿ.ಡಿ.ಒ.ಗಳಾಗಿರುತ್ತಾರೆಂದು ಖಡಕ್ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಡಿ.ಎಚ್.ಒ. ಡಾ.ನಾಗೇಂದ್ರಪ್ಪ, ಜಿಲ್ಲಾಪಂಚಾಯಿತಿ ಉಪಕಾರ್ಯದರ್ಶಿ ರಮೇಶ್,ತಿಪಟೂರುಉಪವಿಭಾಗಾಧಿಕಾರಿ ದಿಗ್ವಿಯ್ಬೋಡ್ಕೆ, ತಹಸೀಲ್ದಾರ್ ಆರ್.ನಯಿಂಉನ್ನೀಸಾ, ಇ.ಒ. ಜಯಕುಮಾರ್, ಡಾ.ಸುಪ್ರಿಯಾ, ಡಾ.ಶ್ರೀಧರ್ ಸೇರಿದಂತೆ ತಾಲ್ಲೂಕು ಅಧಿಕಾರಿಗಳು ಹಾಗೂ ಪಿ.ಡಿ.ಓ. ಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ