ತುಮಕೂರು :
ಆಕ್ಸಿಜನ್ ಬೆಡ್, ಆಮ್ಲಜನಕ ಕೊರತೆ ನಡುವೆಯೇ ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನ್‍ಗೆ ಹಾಹಾಕಾರ ಮುಂದುವರಿದಿದ್ದು, ನಿರೀಕ್ಷಿತ ಸಂಖ್ಯೆಯ ವ್ಯಾಕ್ಸಿನ್ ಬಾರದೆ ಜಿಲ್ಲಾ, ತಾಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಜನತೆ ವ್ಯಾಕ್ಸಿನ್‍ಗಾಗಿ ಪರದಾಡುವಂತಾಗಿದೆ.
ಮೇ 1ರಿಂದಲೇ 18 ವರ್ಷ ಮೇಲ್ಪಟ್ಟವರಿಗೂ ಕೋವಿಡ್ ನಿಯಂತ್ರಣ ವ್ಯಾಕ್ಸಿನ್ ಹಾಕಲಾಗುತ್ತದೆ ಎಂದು ಪ್ರಚುರಪಡಿಸಿದ್ದ ಸರಕಾರ ವ್ಯಾಕ್ಸಿನ್ ಕೊರತೆಯ ಕಾರಣಕ್ಕೆ ಮೇ ಕೊನೆಯ ವಾರದವರೆಗೆ ಸಾಧ್ಯವಿಲ್ಲ ಎಂದು ಸಾರಿತ್ತು. ಕೋವಿನ್ ವ್ಯಾಕ್ಸಿನ್ ಪೋರ್ಟಲ್‍ನಲ್ಲೂ 18 ರಿಂದ 44 ವರ್ಷದವರೆಗೆ ಸಹ ವ್ಯಾಕ್ಸಿನ್ ಸ್ಥಳ ಆಯ್ಕೆಯೇ ಸಾಧ್ಯವಾಗದೆ ಯುವಜನರು ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕವಾಗಿ ವ್ಯಾಪಕ ಟೀಕೆಗಳು ಎದುರಾದ್ದರಿಂದ ಹತ್ತು ದಿನಗಳ ಬಳಿಕ ಮತ್ತೆ ಮೇ 10ರಿಂದ ಆನ್‍ಲೈನ್ ನೊಂದಾವಣಿ ಮಾಡಿಕೊಂಡು ಸಮಯ, ಸ್ಥಳ ಅಲಾಟ್ ಆದ 18 ರಿಂದ 44 ವರ್ಷದವರಿಗೆ ವ್ಯಾಕ್ಸಿನ್ ಹಾಕುವುದಾಗಿ ಸರಕಾರ ಘೋಷಿಸಿತು. ಅದರಂತೆ ಸೋಮವಾರ ಜಿಲ್ಲೆಯ ಎಷ್ಟೋ ಮಂದಿ ಲಸಿಕಾ ಕೇಂದ್ರಗಳತ್ತ ಎಡತಾಕಿದರೂ ಲಸಿಕೆ ಲಭ್ಯವಿಲ್ಲದೆ ಮರಳುವಂತಾಯಿತು. ಜಿಲ್ಲಾಸ್ಪತ್ರೆಯಲ್ಲಿ ಸೀಮಿತ ಮಂದಿಗೆ ಮಾತ್ರ ಲಸಿಕೆ ಹಾಕಲಾಯಿತು.
18+ ರವರಿಗೆ ಕೊಡಲು 10,500 ಡೋಜ್ ಅಷ್ಟೇ ಲಸಿಕೆ ಲಭ್ಯ:
ಜಿಲ್ಲೆಗೆ 18+ನವರಿಗೆ ಮೊದಲ ಡೋಜ್ ಲಸಿಕೆ ಹಾಕಲು 10,500 ವ್ಯಾಕ್ಸಿನ್ ಡೋಸ್ ಮಾತ್ರ ಬಂದಿದ್ದು, ಸೋಮವಾರ ಜಿಲ್ಲೆಯಲ್ಲಿ 18 ರಿಂದ 44 ವರ್ಷದೊಳಗಿನ 90 ಮಂದಿಗೆ, ಮಂಗಳವಾರ 960 ಮಂದಿಗೆ ಮಾತ್ರ ಲಸಿಕೆ ಹಾಕಲಾಗಿದೆ. ಮಂಗಳವಾರ ಎಲ್ಲಾ ತಾಲೂಕು ಆಸ್ಪತ್ರೆಗಳಿಗೂ ಮುಂದಿನ ಸೋಮವಾರದವರೆಗೆ ತಲಾ 100 ರಂತೆ ಲಸಿಕೆ ಹಂಚಿಕೆ ಮಾಡಿದ್ದು, ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮಾತ್ರ 50 ಹೆಚ್ಚುವರಿ 150 ಡೋಜ್ ಅಲಾಟ್ ಮಾಡಲಾಗಿದೆ. 18+ನವರ ಆನ್‍ಲೈನ್ ನೋಂದಣಿ ಹೆಚ್ಚಿದ್ದು, ಮೇ.17ರ ತನಕ ಫುಲ್ ಬುಕ್ ಆಗಿದೆ. ಕೋವಿನ್ ಪೋರ್ಟನ್‍ನಲ್ಲಿ ಹೊಸದಾಗಿ ನೋಂದಣಿ ಮಾಡುವವರಿಗೆ 17ರೊಳಗೆ ವ್ಯಾಕ್ಸಿನ್ ಷೆಡ್ಯೂಲ್ ಸಿಗದಂತಾಗಿದ್ದು, ಆರೋಗ್ಯ ಇಲಾಖೆಯವರನ್ನು ಕೇಳಿದರೆ ಮೇ.18ರ ನಂತರ ಟ್ರೈ ಮಾಡಿ ಎಂಬ ಉತ್ತರ ದೊರೆಯುತ್ತಿದೆ.
2ನೇ ಡೋಜ್‍ಗೆ ಕೋವ್ಯಾಕ್ಸಿನ್ ಕೊರತೆ :
ಈಗಾಗಲೇ ಮೊದಲ ಡೋಜ್ ಲಸಿಕೆ ಹಾಕಿಸಿಕೊಂಡಿರುವ ಕೊರೊನಾ ವಾರಿಯರ್ಸ್ ಹಾಗೂ 45 ವರ್ಷ ಮೇಲ್ಪಟ್ಟವರಿಗೂ 2ನೇ ಡೋಜ್ ಲಸಿಕೆ ಹಾಕಲು ಕೋವಿಶೀಲ್ಡ್ 20 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಲಭ್ಯವಿದ್ದು, ಕೋವ್ಯಾಕ್ಸಿನ್ ಕೊರತೆ ಎದುರಾಗಿದೆ. ಸೋಮವಾರದ ಅಂಕಿ ಅಂಶದಂತೆ ಜಿಲ್ಲೆಯಲ್ಲಿ 1310 ಸಂಖ್ಯೆಯಲ್ಲಿ ಮಾತ್ರ ಕೋವ್ಯಾಕ್ಸಿನ್ ಲಭ್ಯವಿದ್ದು, ಮೊದಲ ಡೋಜ್‍ನಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದವರು ಎರಡನೇ ಡೋಜ್‍ನಲ್ಲಿ ಇದೇ ವ್ಯಾಕ್ಸಿನ್ ಪಡೆಯಲು ಪರದಾಡುವಂತಾಗಿದೆ.
ಸಾವಿನ ಸರಣಿ, ಸೋಂಕು ಹೆಚ್ಚಳ ಕಂಡು ಲಸಿಕೆಗೆ ದುಂಬಾಲು: ಕೋವಿಡ್ ಲಸಿಕೆ ಅಭಿಯಾನ ಪ್ರಾರಂಭದಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂಜರಿದ ಮಂದಿ ಹೆಚ್ಚುತ್ತಿರುವ ಸೋಂಕು, ಸಾವಿನ ಸರಣಿ ಕಂಡು ಬೆಚ್ಚಿಬಿದ್ದಿದ್ದಾರೆ. ಎರಡು ಡೋಜ್ ಲಸಿಕೆ ಪಡೆದವರಲ್ಲಿ ಕೋವಿಡ್ ತಗುಲಿದರೂ ಪ್ರಾಣಾಪಾಯದಿಂದ ಪಾರಾಗಬಹುದು ಎಂಬುದು ಹಲವು ಪ್ರಕರಣಗಳಲ್ಲಿ ದೃಢಪಡುತ್ತಿರುವುದು ಜನರಲ್ಲೂ ಲಸಿಕೆ ಬಗ್ಗೆ ವಿಶ್ವಾಸ, ನಂಬಿಕೆ ಮೂಡಿ ಲಸಿಕೆಗೆ ದುಂಬಾಲು ಬೀಳುತ್ತಿರುವುದು ಕಂಡುಬಂದಿದೆ. ಭವಿಷ್ಯದ ಹಲವು ಕನಸಗಳನ್ನು ಮನೆಯ ಜವಾಬ್ದಾರಿ ಹೊತ್ತಿರುವ ವಯಸ್ಕರು ಲಸಿಕೆ ಹಾಕಿಸಿಕೊಂಡು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ. ಆದರೆ ಸೂಕ್ತ ಪ್ರಮಾಣದ ಲಸಿಕೆಯೇ ಕೇಂದ್ರದಿಂದ ರಾಜ್ಯಕ್ಕೆ ಬಾರದಿರುವುದು ಲಸಿಕೆಗಾಗಿ ಜನತೆ ಜಾತಕ ಪಕ್ಷಿಯಂತೆ ಕಾಯುವಂತಾಗಿದೆ
ವ್ಯಾಕ್ಸಿನ್‍ಗಾಗಿ ಕಾದಿರುವ 12 ಲಕ್ಷ ಯುವಜನರು :
ಕೋವಿಡ್ ಎರಡನೇ ಅಲೆಯಲ್ಲಿ ಹೆಚ್ಚಾಗಿ ಯುವಜನರು, ವಯಸ್ಕರು ಬಲಿಯಾಗುತ್ತಿರುವುದು ಬಹಿರಂಗವಾಗಿ ಗೋಚರವಾಗುತ್ತಿದೆ. ಇಂತಹ ಸಂದರ್ಭದಲ್ಲಿ 18 ರಿಂದ 44 ವರ್ಷ ವಯಸ್ಸಿನವರಿಗೆ ಲಸಿಕೆ ಹಾಕುವುದಾಗಿ ಘೋಷಿಸಿ ಸರಕಾರ ಲಸಿಕೆಯನ್ನೇ ಅಗತ್ಯಪ್ರಮಾಣದಲ್ಲಿ ಪೂರೈಸದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.ತುಮಕೂರು ಜಿಲ್ಲೆಯೊಂದರಲ್ಲೇ 12 ಲಕ್ಷ ಮಂದಿ 18 ರಿಂದ 44 ವರ್ಷದವರಿದ್ದಾರೆಂದು ಅಂದಾಜಿಸಿದ್ದು, ದಿನಕ್ಕೆ ನೂರು ಸಾವಿರ ಲೆಕ್ಕದಲ್ಲಿ ಲಸಿಕೆ ಹಾಕಿದರೆ ಇಷ್ಟು ಮಂದಿಗೆ ವ್ಯಾಕ್ಸಿನ್ ಹಾಕಿ ಮುಗಿಸುವುದು ಯಾವಾಗ ಎಂಬ ಪ್ರಶ್ನೆ ಮೂಡಿಸಿದೆ.
ಒಂದೆಡೆ ಸೋಂಕಿನ ಲಕ್ಷಣ ಕಂಡುಬಂದವರೂ ಪರೀಕ್ಷೆಗೊಳಗಾದರೆ ಫಲಿತಾಂಶ ಬರುವುದು ಐದಾರು ದಿನ ತಗಲುತ್ತಿದೆ. ಈ ಸಂದರ್ಭದಲ್ಲಿ ಪಾಸಿಟಿವ್ ಬಂದವರೂ ಆಸ್ಪತ್ರೆಗಳಲ್ಲಿ ಅವಶ್ಯಕ ಬೆಡ್ ಸಿಗದೆ ಪ್ರಾಣ ಕಳೆದುಕೊಳ್ಳುವ ಸ್ಥಿತಿಗಳು ಎದುರಾಗಿದ್ದು, ಮುಂಜಾಗ್ರತೆಯಾಗಿ ಲಸಿಕೆ ನೀಡಿ ಜನರ ಪ್ರಾಣ ಉಳಿಸಬೇಕೆಂಬ ಆಗ್ರಹ ಪ್ರಬಲವಾಗಿ ಕೇಳಿಬಂದಿದೆ.
ಗುರಿ ತಲುಪುವುದರಲ್ಲಿ ಪ್ರಾಣ ಪಕ್ಷಿಯೇ ಹಾರಿಹೋಗುತ್ತದೆ…!
ತುಮಕೂರು ನಗರದಲ್ಲಿ ಜಿಲ್ಲಾಸ್ಪತ್ರೆ ಸೇರಿ 7 ಆರೋಗ್ಯಕೇಂದ್ರದಲ್ಲಿ ಸದ್ಯ ವ್ಯಾಕ್ಸಿನ್ ಹಾಕಲಾಗುತ್ತಿದ್ದು, ಪ್ರತೀಕೇಂದ್ರದಲ್ಲಿ ದಿನವೊಂದಕ್ಕೆ ಗರಿಷ್ಠ 100-150 ಮಂದಿಗೆ ಮಾತ್ರ ವ್ಯಾಕ್ಸಿನ್ ಹಾಕಬಹುದಾಗಿದೆ. ತುಮಕೂರು ನಗರದ ಜನಸಂಖ್ಯೆಯೇ 3 ಲಕ್ಷ ಮೇಲಿದ್ದು, ದಿನವೊಂದಕ್ಕೆ ನಗರ ಎಲ್ಲಾ ಕೇಂದ್ರಗಳು ಸೇರಿ 700 ಮಂದಿಗೆ ಮಾತ್ರ ಲಸಿಕೆ ಹಾಕಿದರೆ ವ್ಯಾಕ್ಸಿನ್ ಗುರಿ ತಲುಪುವುದೆಂದು ಅಷ್ಟರಲ್ಲಿ ಎಷ್ಟು ಪ್ರಾಣ ಪಕ್ಷಿ ಹಾರಿಹೋಗುವುದು? ವಾರ್ಡ್‍ಗೆ 4ರಂತೆ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ತ್ವರಿತ ಲಸಿಕೆ ಹಾಕಬೇಕೆಂದು ಮುಖಂಡ ಧನಿಯಾಕುಮಾರ್ ಸೇರಿದಂತೆ ಹಲವು ನಾಗರಿಕರು ಒತ್ತಾಯಿಸಿದ್ದಾರೆ.
ಜಿಲ್ಲೆಗೆ 18 ರಿಂದ 44 ವರ್ಷದವರಿಗೆ ವ್ಯಾಕ್ಸಿನ್ ಹಾಕಲು 10, 500 ಡೋಸ್ ಲಸಿಕೆ ಹಂಚಿಕೆಯಾಗಿದ್ದು, ಅದನ್ನು ಮುಂದಿನಸೋಮವಾರದವರೆಗೆ 9 ತಾಲೂಕುಗಳಿಗೆ ತಲಾ ಸಾವಿರ ಡೋಸ್‍ನಂತೆ ವ್ಯಾಕ್ಸಿನ್ ಹಂಚಿಕೆ ಮಾಡಲಾಗಿದೆ. ಜಿಲ್ಲಾಕೇಂದ್ರವಾದ ತುಮಕೂರು ತಾಲೂಕಿಗೆ 500 ಹೆಚ್ಚುವರಿಯಾಗಿ 1,500 ಡೋಜ್ ಲಭ್ಯವಾಗಿದೆ. ಇದನ್ನು ಆಧರಿಸಿ ದಿನವೊಂದಕ್ಕೆ ನೂರರ ಪ್ರಮಾಣದಲ್ಲಿ ಆನ್‍ಲೈನ್ ನೋಂದಣಿ ಮಾಡಿಕೊಂಡು ಷೆಡ್ಯೂಲ್ ನಿಗದಿ ಮಾಡಿಕೊಂಡವರಿಗೆ ಲಸಿಕೆ ಹಾಕಲಾಗುತ್ತಿದೆ. ಹೆಚ್ಚು ಲಸಿಕೆ ಪೂರೈಕೆಯಾದಲ್ಲಿ ವ್ಯಾಕ್ಸಿನ್ ಸೆಂಟರ್‍ಗಳ ಪ್ರಮಾಣ, ಲಸಿಕೆ ಪ್ರಮಾಣವನ್ನು ಹೆಚ್ಚಿಸಲಾಗುವುದು.
-ಡಾ.ಕೇಶವರಾಜು, ಜಿಲ್ಲಾ ಆರ್‍ಸಿಎಚ್ ಅಧಿಕಾರಿ.
ಎಸ್.ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ