ಮಧುಗಿರಿ :
ಪತ್ರಕರ್ತರು ತಮ್ಮ ಆರೋಗ್ಯ ಹಾಗೂ ಕುಟುಂಬದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಅವರು ಪಟ್ಟಣದ ತಮ್ಮ ಗೃಹದಲ್ಲಿ ತಾಲ್ಲೂಕಿನ ವರದಿಗಾರರಿಗೆ ಅಗತ್ಯ ಆಹಾರ ಕಿಟ್‍ಗಳನ್ನು ವಿತರಿಸಿ ಮಾತನಾಡಿದರು. ಸರಕಾರ ಲಾಕ್‍ಡೌನ್‍ಗೆ ಕರೆ ನೀಡಿದರೂ ಪತ್ರಕರ್ತರು ಸುದ್ದಿಗಳ ಅನ್ವೇಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವುದು ಕಂಡು ಬರುತ್ತಿದೆ. ತಮಗೂ ಒಂದು ಕುಟುಂಬವಿದೆ ಎಂಬುವ ಜವಬ್ಧಾರಿ ಅರಿತು ನೀವು ಕೆಲಸ ನಿರ್ವಹಿಸಬೇಕಾಗಿದೆ. ಇಂದಿನ ವಿಷಮ ಪರಿಸ್ಥಿತಿಯಲ್ಲಿ ನಮ್ಮ ಸಂವಿಧಾನದ 4 ಅಂಗವಾಗಿರುವ ಮುದ್ರಣ ಮಾಧ್ಯಮ ಅತ್ಯಂತ ಕಷ್ಟ ಪರಿಸ್ಥಿತಿಯಲ್ಲಿರುವುದು ಸೇರಿದಂತೆ ಮತ್ತಿತರ ಸಣ್ಣ ಪುಟ್ಟ ಕ್ಷೇತ್ರಗಳು ಸೊರಗುತ್ತಿವೆ. ಅತಿ ಹೆಚ್ಚು ಪ್ರಸಾರವುಳ್ಳ ಪತ್ರಿಕೆಗಳಲ್ಲಿ ಸಂಬಳ ನೀಡಲು ಆಗದೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.
ಮಾಧ್ಯಮ ಕ್ಷೇತ್ರದಲ್ಲಿ ಕೆಲವು ಕಾರ್ಪೋರೇಟ್ ಸಂಸ್ಥೆಗಳ ಅಡಿಯಲ್ಲಿ ನಡೆಯುತ್ತಿದ್ದರೆ ಮುದ್ರಣ ಮಾಧ್ಯಮದವರು ಇಂದೂ ಕಷ್ಟಕರವಾದ ವಾತಾವರಣದಲ್ಲಿರುವುದು ಕಂಡು ಬರುತ್ತಿದೆ. ಮಾಧ್ಯಮದವರು ಜನ ಸಾಮಾನ್ಯರ ಸಮಸ್ಯೆಗಳನ್ನು ತುಂಬಾ ಹತ್ತಿರ ದಿಂದ ಬಲ್ಲವರಾಗಿದ್ದಾರೆ. ಸಮಾಜದ ಆಗು-ಹೋಗುಗಳ ಬಗ್ಗೆ ಜನ ಸಾಮಾನ್ಯರನ್ನು ಹಾಗೂ ಜನಪ್ರತಿನಿಧಿಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಎಚ್ಚರಿಸುವ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ.
ತಾಲ್ಲೂಕು ಆಡಳಿತ ವರ್ಗ ಕೊರೋನಾ ಸೋಂಕಿತರ ಹಾಗೂ ಇದರಿಂದ ಮೃತ ಪಟ್ಟವರ ಸ್ಪಷ್ಟ ಮಾಹಿತಿಯನ್ನು ನೀಡುತ್ತಿಲ್ಲ. ಅಧಿಕಾರಿಗಳು ಸರಕಾರದ ಒತ್ತಡಕ್ಕೆ ಮಣಿದಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ ಅವರು, ಈಸ್ಟ್ ಇಂಡಿಯಾ ಕಂಪನಿಯವರು ನಮ್ಮ ದೇಶವನ್ನು ಒಂದು ಶತಮಾನ ಕಾಲ ಆಳ್ವಿಕೆ ನಡೆಸಿದರೆ, ಈಗಿರುವ ಸರಕಾರ ಅನೇಕ ಕಂಪನಿಗಳೊಂದಿಗೆ ಕೈ ಜೋಡಿಸಿ ನಮ್ಮನ್ನು ಆಳುತ್ತ ದೋಚುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಇಂದಿನ ವಿದ್ಯಾವಂತ ಯುವಕರು ತಮ್ಮ ಸ್ವಾರ್ಥತೆಯನ್ನು ಬಿಟ್ಟು ಗ್ರಾಮೀಣ ಪ್ರದೇಶದಲ್ಲಿ ಅಸಹಾಯಕ ಮತ್ತು ಅನಕ್ಷರಸ್ಥರಿಗೆ ಈ ಕೊರೋನಾ ಮಾಹಮಾರಿಯ ಬಗ್ಗೆ ತಿಳಿವಳಿಕೆ ನೀಡಿ ಅವರಲ್ಲಿ ಜಾಗೃತಿ ಮೂಡಿಸಿ ಸಾಮಾಜಿಕ ಅಂತರ ಮತ್ತು ಶುಚಿತ್ವದ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.
ಈ ಹಿಂದೆ ಹಿರಿಯರು ಗ್ರಾಮಕ್ಕೆ ನೀರಿಗಾಗಿ ಬಾವಿ ತೋಡಿಸಿ, ಶಾಲೆಯೊಂದನ್ನು ಕಟ್ಟಿಸಿ ಕೊಟ್ಟರೆ ಅಂದಿನ ಜನರು ಆ ಮುಖಂಡರುನ್ನು ಗೌರವಿಸುತ್ತಿದ್ದರು. ಆದರೆ ಇಂದಿನ ಯುವಕರು ಪ್ರಶ್ನಿಸುವ ಪ್ರವೃತ್ತಿ ಯನ್ನು ಬೆಳೆಸಿಕೊಂಡಿದ್ದಾರೆ ಹೊರತು ಅವರ ಮಾರ್ಗದರ್ಶನ ಸಲಹೆ ಸೂಚನೆಗಳನ್ನು ಪಾಲಿಸದೆ ಇರುವುದು ಬೇಸರದ ಸಂಗತಿಯಾಗಿದೆ. ಲಾಕ್ ಡೌನ್ ಸಂಕಷ್ಟದಿಂದ ಮಧ್ಯಮ ಮತ್ತು ಕೂಲಿ ಕಾರ್ಮಿಕರ, ದಿನಗೂಲಿ ನೌಕರರ ಶ್ರಮಿಕರ ಬದುಕು ದುಸ್ತರವಾಗಿದ್ದು, ಸರಕಾರ ಇಂತಹವರ ನೆರವಿಗೆ ಧಾವಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ರಿಬ್ಕೋ ನಿರ್ದೇಶಕ ಆರ್. ರಾಜೇಂದ್ರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ದಾಪುರ ರಂಗಾಶಾಮಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗೇಶ್ ಬಾಬು, ಹಿರಿಯ ವರದಿಗಾರರಾದ ಮಿಡಿಗೇಶಿ ಆಂಜಿನಪ್ಪ, ಚಂದ್ರಕಾಂತ್, ನಾರಾಯಣರಾಜು, ತಾಲ್ಲೂಕು ಅಧ್ಯಕ್ಷ ಪ್ರಸನ್ನ ಕುಮಾರ್ ಹಾಗೂ ತಾಲ್ಲೂಕಿನ ಹೋಬಳಿಯ ವರದಿಗಾರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ