ಹುಳಿಯಾರು:

ಜೀವನ ಹಂಗು ತೊರೆದು ಕೊರೊನಾ ವಾರಿಯರ್ಸ್‍ಗಳಾಗಿ ಕೆಲಸ ಮಾಡುತ್ತಿರುವ ನಮಗೆ ಸೂಕ್ತ ರಕ್ಷಣೆ ಕೊಡಿ ಇಲ್ಲವಾದಲ್ಲಿ ಕೊರೊನಾ ಕೆಲಸದಿಂದ ವಿಮುಖರಾಗುವುದಾಗಿ ಹುಳಿಯಾರಿನ ಆಶಾ ಕಾರ್ಯಕರ್ತೆಯರು ಭಾನುವಾರ ಒತ್ತಾಯಿಸಿದ್ದಾರೆ.
ಕೊರೊನಾ ಪಾಸಿಟಿವ್ ಬಂದಿರುವ ವ್ಯಕ್ತಿ ಮತ್ತು ಆತನ ಕುಟುಂಬದವರು ಹುಳಿಯಾರಿನ ಆಶಾ ಕಾರ್ಯಕರ್ತೆಯೊಬ್ಬರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದರಲ್ಲದೆ ಮನೆಯ ಬಳಿ ಬಂದು ಗಲಾಟೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹುಳಿಯಾರಿನ ಎಲ್ಲಾ ಆಶಾ ಕಾರ್ಯಕರ್ತೆಯರು ಸೂಕ್ತ ರಕ್ಷಣೆ ಕೊಟ್ಟರೆ ಮಾತ್ರ ಕೋವಿಡ್-19 ಕರ್ತವ್ಯ ನಿರ್ವಹಿಸುವುದಾಗಿ ಪೊಲೀಸ್ ಠಾಣೆ ಬಳಿ ಬಂದು ಮನವಿ ಮಾಡಿದರು.
ಕೊರೊನಾ ಪಾಸಿಟಿವ್ ಬಂದಿರುವವರನ್ನು ಹೋಂ ಐಸೋಲೇಶನ್ ಮಾಡುತ್ತಿದ್ದಾರೆ. ಆದರೆ ಬಹುತೇಕ ಮಂದಿ ಮನೆಯಲ್ಲಿರದೆ ರಾಜಾರೋಷವಾಗಿ ಹೊರಗಡೆ ತಿರುಗುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಆತಂಕ ಪಟ್ಟು ದೂರು ನೀಡಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪಾಸಿಟಿವ್ ಬಂದಿರುವವರ ಚಲನವಲನ ಗಮನಿಸುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಹುಳಿಯಾರಿನ ವಿನಾಯಕ ನಗರದ ಕೊರೊನಾ ಪಾಸಿಟಿವ್ ವ್ಯಕ್ತಿಯೊಬ್ಬರು ಮನೆಯಲ್ಲಿಲ್ಲದ ಬಗ್ಗೆ ಅಲ್ಲಿನ ಆಶಾ ಕಾರ್ಯಕರ್ತೆ ದೂರವಾಣಿ ಕರೆ ಮಾಡಿ ಎಲ್ಲಿರುವೆ ಎಂದು ಪ್ರಶ್ನಿಸಿದ್ದೆ ಈ ಗಲಾಟೆಗೆ ಕಾರಣ ಎನ್ನಲಾಗಿದೆ.
ಅಲ್ಲದೆ ಕೊರೊನಾ ಪಾಸಿಟಿವ್ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರ ಮಾಹಿತಿ ಸಂಗ್ರಹಿಸಲು ಇಲ್ಲಿನ ಆಶಾ ಕಾರ್ಯಕರ್ತೆ ನೆರೆಹೊರೆಯ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿರುವುದು ಪಾಸಿಟಿವ್ ಬಂದಿರುವ ವ್ಯಕ್ತಿಯ ಮನೆಯವರಿಗೆ ತಪ್ಪಾಗಿ ಕಂಡಿದೆ. ಹಾಗಾಗಿ ಏಕಾಏಕಿ ದೂರವಾಣಿ ಮೂಲಕ ಪಾಸಿಟಿವ್ ಬಂದಿರುವ ವ್ಯಕ್ತಿ ಅವಾಚ್ಯ ಶಬ್ಧಗಳಿಂದ ನಿಂದಿಸಿದರಲ್ಲದೆ, ಆತನ ತಾಯಿ ಕಾರ್ಯಕರ್ತೆಯ ಮನೆಯ ಬಳಿಗೆ ಬಂದು ಬಾಯಿಗೆ ಬಂದಂತೆ ಏರು ಧ್ವನಿಯಲ್ಲಿ ಬೈದು ಗಲಾಟೆ ಮಾಡಿದ್ದಾರೆ.
ಈ ಸಂಬಂಧ ಆರೋಗ್ಯ ಇಲಾಖೆಯವರಿಗೆ ಕರೆ ಮಾಡಿ ಗಲಾಟೆಯ ವಿಷಯ ಮುಟ್ಟಿಸಿದರೂ ಸಹ ಆಶಾ ಕಾರ್ಯಕರ್ತೆಯರ ಸಹಾಯಕ್ಕೆ ಯಾರೊಬ್ಬರೂ ಬಾರದೆ, ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಪುಕ್ಕಟೆ ಸಲಹೆ ನೀಡಿ ತಮ್ಮ ಜಾಬಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳಿಗೆ ತಿಳಿಸಿದರೆ ನಾನು ಊರಲ್ಲಿಲ್ಲ ಎಂದಿದ್ದಾರೆ. ಪರಿಣಾಮ ಹುಳಿಯಾರು ಪಟ್ಟಣದ ಎಲ್ಲಾ ಆಶಾ ಕಾರ್ಯಕರ್ತೆಯರು ಹುಳಿಯಾರು ಪೊಲೀಸ್ ಠಾಣೆಯ ಮೆಟ್ಟಿಲೇರಿ ನಮಗೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








