ಮಧುಗಿರಿ : ಸೋಂಕಿತರಿಗೆ ಊರ ಹೊರಗೆ ಐಸೋಲೇಷನ್

  ಮಧುಗಿರಿ : 

      ಕೆಎನ್‍ಆರ್, ಆರ್‍ಆರ್ ಅಭಿಮಾನಿಗಳು ಹಾಗೂ ಮರುವೇಕೆರೆ ಗ್ರಾಪಂ ವತಿಯಿಂದ ಕೊರೊನಾ ಸೋಂಕಿತರನ್ನು ಗ್ರಾಮದ ಹೊರ ವಲಯದಲ್ಲಿನ ದೇವಾಲಯದ ಸಮೀಪ ಪ್ರತ್ಯೇಕವಾಗಿರಿಸಿ ಕಾಲಕಾಲಕ್ಕೆ ಊಟ-ಔಷಧಿ ಉಪಚಾರವನ್ನು ಮಾಡುವ ಮೂಲಕ ಸೋಂಕಿತರನ್ನು ಆರೈಕೆ ಮಾಡಲು ವೀಶೇಷವಾಗಿ ಕೇಂದ್ರವನ್ನು ತೆರೆಯಲಾಗಿದೆ.

      ತಾಲ್ಲೂಕಿನ ಕಸಬಾ ವ್ಯಾಪ್ತಿಯ ಬಂದ್ರೆಹಳ್ಳಿ ಗ್ರಾಮದಲ್ಲಿ ಕೋವಿಡ್ ಪರೀಕ್ಷೆ ಮಾಡಿದಾಗ ಒಂದೇ ದಿನ ಹದಿನೇಳು ಸೋಂಕಿತರು ಪತ್ತೆಯಾಗಿದ್ದಾರೆ. ಇವರನ್ನು ಹೋಂ ಐಸೋಲೇಷನ್ ಮಾಡುವಂತೆ ಆರೋಗ್ಯ ಇಲಾಖೆಯವರು ಸೂಚಿಸಿದ್ದರ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯರು ಹಾಗೂ ಕೆಲ ಮುಖಂಡರು ಚರ್ಚಿಸಿ ಸೋಂಕಿತರು ಗ್ರಾಮದಲ್ಲಿ ಇದ್ದರೆ ಸೋಂಕು ಇತರರಿಗೆ ಗ್ರಾಮದಲ್ಲಿ ವೇಗವಾಗಿ ಹರಡಬಹುದೆಂದು ಅರಿತು. ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ, ಊರ ಹೊರಗಿರುವ ಬಂದ್ರೇಹಳ್ಳಿ ಮರುವೇಕೆರೆ ತೇರಿನ ಬೀದಿಯಲ್ಲಿನ ದೇವಸ್ಥಾನದ ತಪ್ಪಲಿನಲ್ಲಿ ಈ ಆರೈಕೆ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ.

      ಮರುವೇಕೆರೆ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು ಮತ್ತು ಗ್ರಾಮಸ್ಥರ ಸಹಕಾರದಿಂದ ಆಸ್ಪತ್ರೆ ಬದಲಾಗಿ ಪ್ರಕೃತಿಯ ಮಡಿಲಲ್ಲಿ ಚಿಕಿತ್ಸೆ ಕೊಡಿಸುತ್ತಿರುವುದರಿಂದ ಸೋಂಕಿತರು ಶೀಘ್ರವಾಗಿ ಗುಣಮುಖರಾಗುವ ಭರವಸೆ ಗ್ರಾಮಸ್ಥರಲ್ಲಿ ಹೆಚ್ಚಾಗಿದೆ.

      ಮೇ 5 ರಂದು ಆರಂಭವಾದ ಈ ಆರೋಗ್ಯ ಕೇಂದ್ರದಲ್ಲಿ ಪ್ರಸ್ತುತ 27 ಸೋಂಕಿತರಿದ್ದಾರೆ. ಸೋಂಕಿತರಿಗೆ ಪ್ರತಿನಿತ್ಯ ಬೆಳಗ್ಗೆ ಹಾಲಿನೊಂದಿಗೆ ಅರಿಶಿನ-ಬೆಲ್ಲ-ಶುಂಠಿಯನ್ನು ಹಾಕಿ ಕಾಯಿಸಿ ಕೊಡಲಾಗುತ್ತಿದೆ. ನಂತರ ಬಿಸಿನೀರಿನ ಜೊತೆಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಬಿಸಿಬಿಸಿ ಮುದ್ದೆ, ಬೇಯಿಸಿದ ಮೊಟ್ಟೆ, ಪ್ರೋಟೀನ್ಯುಕ್ತ ಕಾಳುಗಳ ಸಾರು ನೀಡಲಾಗುತ್ತಿದೆ. ಜೊತೆಗೆ ಮಾಂಸಾಹಾರ ತೆಗೆದುಕೊಳ್ಳುವವರಿಗೆ ಮಾಂಸಾಹಾರವನ್ನು ಸಹ ನೀಡಲಾಗುತ್ತಿದೆ. ದಾನದ ಮೂಲಕ ಅಕ್ಕಿ, ರಾಗಿ ಹಿಟ್ಟು, ತರಕಾರಿ, ಮಸಾಲೆ ಪದಾರ್ಥಗಳ ಶೇಖರಣೆ ಮಾಡಲಾಗಿದೆ.

     ಪ್ರತಿನಿತ್ಯ ಬೆಳಗ್ಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಬಂದು ಸೋಂಕಿತರ ತಪಾಸಣೆ ಮಾಡುತ್ತಿದ್ದಾರೆ. ಮರುವೇಕೆರೆ ಗ್ರಾಮ ಪಂಚಾಯಿತಿ ಪಿಡಿಓ ರವಿಚಂದ್ರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆಹಾರ ಪದಾರ್ಥಗಳ ತಯಾರಿಕೆಗೆ ಬೇಕಾದ ವಸ್ತುಗಳನ್ನು ವಿತರಣೆ ಮಾಡುತ್ತಿದ್ದಾರೆ. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್ ಬಾಬು ಮತ್ತು ಸ್ನೇಹಿತರ ಈ ಕಾರ್ಯಕ್ಕೆ ತಹಸೀಲ್ದಾರ್, ತಾಲ್ಲೂಕು ಆರೋಗ್ಯಾಧಿಕಾರಿಗಳು, ಪೊಲೀಸ್ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಹಕಾರ:

      ಈ ಆರೈಕೆ ಕೇಂದ್ರ ಪ್ರಾರಂಭವಾಗಲು ಮರುವೇಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭವ್ಯ ಕೇಶವಮೂರ್ತಿ, ಸದಸ್ಯರುಗಳಾದ ನಯಾಜ್, ಬಸವರಾಜು, ಗ್ರಾಮಸ್ಥರುಗಳಾದ ಅಶೋಕ, ಬಿ.ಪಿ.ರಾಮು, ರಂಗಣ್ಣ, ನಾಗಭೂಷಣ, ರಾಘವೇಂದ್ರ, ಬಿ.ಎಸ್.ಬಸವರಾಜು, ನವೀನ್‍ಕುಮಾರ್, ಬಿ.ಎಂ.ರಂಗನಾಥ, ತಾಪಂ ಮಾಜಿ ಅಧ್ಯಕ್ಷ ಎಂ.ಬಿ.ಮರಿಯಣ್ಣ, ಅಡುಗೆ ಭಟ್ಟರಾಗಿ ಹರೀಶ್ ಸಹಕಾರ ನೀಡುತ್ತಿದ್ದಾರೆ.

      ಸೋಂಕಿತರಿಗೆ ಪ್ರತಿನಿತ್ಯ ಪಲ್ಸ್ ರೇಟ್ ಅನ್ನು ಪರೀಕ್ಷೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ವತಿಯಿಂದ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಆಸ್ಪತ್ರೆಗಿಂತ ಈ ಆರೈಕೆ ಕೇಂದ್ರದಲ್ಲಿ ಸೋಂಕಿತರು ಬೇಗ ಗುಣಮುಖ ರಾಗುತ್ತಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮತ್ತು ಕ್ರಿಬ್ಕೋ ನಿರ್ದೇಶಕ ಆರ್.ರಾಜೇಂದ್ರ ರವರ ಮಾರ್ಗದರ್ಶನದಲ್ಲಿ ಈ ಆರೈಕೆ ಕೇಂದ್ರ ನಡೆಸಲಾಗುತ್ತಿದೆ.

-ಬಿ.ನಾಗೇಶ್ ಬಾಬು, ನಿರ್ದೇಶಕ, ಡಿಸಿಸಿ ಬ್ಯಾಂಕ್.

      ಈ ವಾತಾವರಣ ಆಸ್ಪತ್ರೆಗಿಂತ ಚೆನ್ನಾಗಿದೆ. ಆಸ್ಪತ್ರೆಯಲ್ಲಿ 6 ದಿನಕ್ಕೆ ಗುಣಮುಖರಾಗುವವರು ಇಲ್ಲಿ 3 ದಿನಕ್ಕೆ ಗುಣಮುಖರಾಗುತ್ತಿದ್ದೇವೆ. ಒಳ್ಳೆಯ ಗಾಳಿ-ವಾತಾವರಣ ಇದೆ. ನಮಗೆ ಈ ಮಲೆ ರಂಗನಾಥಸ್ವಾಮಿ ದೇವಸ್ಥಾನ ತಪ್ಪಲಲ್ಲಿ ಈ ವ್ಯವಸ್ಥೆ ಕಲ್ಪಿಸಿ ಕೊಟ್ಟಂತಹ ಮರುವೇಕೆರೆ ಗ್ರಾಮ ಪಂಚಾಯಿತಿಯವರು ಮತ್ತು ಬಂದ್ರೆಹಳ್ಳಿ ಗ್ರಾಮಸ್ಥರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

-ಪ್ರಸನ್ನಕುಮಾರ್, ಸೋಂಕಿತ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap