ಹಬ್ಬದೂಟ.. ನಿಯಂತ್ರಣವಿಲ್ಲದ ವಿವಾಹ ; ಮನೆ ಮನೆಯನ್ನು ತಾಕುತ್ತಿರುವ ವೈರಸ್

  ತುಮಕೂರು :

      ಯುಗಾದಿಯೂ ಸೇರಿಕೊಂಡಂತೆ ಗ್ರಾಮೀಣ ಪ್ರದೇಶಗಳಲ್ಲಿ ಬಗೆ ಬಗೆಯ ಹಬ್ಬ, ಜಾತ್ರೆಗಳಿಗೆ ಲೆಕ್ಕವಿಲ್ಲ. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವುದರೊಳಗೆ ಸಾಮೂಹಿಕ ಸಮಾರಂಭಗಳೆ ಹೆಚ್ಚು. ಇದರಲ್ಲಿ ವಿವಾಹಗಳೂ ಸೇರುತ್ತವೆ. ಯುಗಾದಿ ನಂತರ ಲಾಕ್ ಡೌನ್ ಘೋಷಣೆಯಾದ ಪರಿಣಾಮ ಇದೆಲ್ಲದಕ್ಕೂ ಬ್ರೇಕ್ ಬಿದ್ದಿತು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಕದ್ದು ಮುಚ್ಚಿ ನಡೆಯುವ ಸಮಾರಂಭಗಳಿಗೆ ಕೊರತೆಯಿಲ್ಲ. ಈಗಲೂ ಸಹ ಕೆಲವು ಸಮಾರಂಭಗಳು ನಡೆಯುತ್ತಲೇ ಇವೆ.

ನಗರ ಪ್ರದೇಶಗಳಲ್ಲಿ ವಿವಾಹಗಳಿಗೆ ಕಡಿವಾಣ ಬಿದ್ದ ಕಾರಣ ಕೆಲವರು ತಮ್ಮ ತಮ್ಮ ಊರುಗಳಲ್ಲಿಯೇ ವಿವಾಹಗಳನ್ನು ನೆರವೇರಿಸಲು ಮುಂದಾದರು. ತಮ್ಮು ಮನೆಗಳ ಮುಂದೆ, ದೇವಸ್ಥಾನದ ಸಮುದಾಯ ಭವನಗಳು ಹೋಬಳಿ ಮಟ್ಟದಲ್ಲಿರುವ ಕಲ್ಯಾಣ ಮಂಟಪಗಳು ಹೀಗೆ ಎಲ್ಲೆಲ್ಲಿ ಅವಕಾಶ ಸಿಗುವುದೋ ಅಲ್ಲೆಲ್ಲ ವಿವಾಹಗಳನ್ನು ನೆರವೇರಿಸಲಾಗುತ್ತಿದೆ. ಈ ಸಮಾರಂಭಗಳಿಗೆ ಜನರ ಮಿತಿಯೇ ಇಲ್ಲ. ನೂರಾರು ಜನ ಸೇರುತ್ತಿರುವುದರಿಂದ ಸೋಂಕು ಒಬ್ಬರಿಂದ ಒಬ್ಬರಿಗೆ ಬಹು ಬೇಗನೇ ಹರಡುತ್ತಿದೆ. ನಗರ ಪ್ರದೇಶದಿಂದ ಬಂದ ಹಲವಾರು ಮಂದಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾ ಸೋಂಕನ್ನು ಇತರರಿಗೂ ಹರಡಿಬಿಟ್ಟಿದ್ದಾರೆ.

      ಆರಂಭದ ಹಂತದಲ್ಲಿಯೇ ಗ್ರಾಮೀಣ ಪ್ರದೇಶಗಳಲ್ಲಿ ಸಭೆ ಸಮಾರಂಭ, ಧಾರ್ಮಿಕ ಕಾರ್ಯಕ್ರಮ, ವಿವಾಹ ಇತ್ಯಾದಿಗಳಿಗೆ ಕಡಿವಾಣ ಹಾಕಿದ್ದರೆ ಪರಿಸ್ಥಿತಿ ಇಷ್ಟು ಬಿಗಡಾಯಿಸುತ್ತಿರಲಿಲ್ಲ. ಕೆಲವುಕಡೆ ಜಾತ್ರೆಗಳನ್ನೂ ನಡೆಸಿದ್ದಾರೆ, ದೇವಸ್ಥಾನಗಳಲ್ಲಿ ಜನ ಗುಂಪುಗೂಡಿದ್ದಾರೆ. ಒಬ್ಬರಿಂದ ಒಬ್ಬರಿಗೆ ಸೋಂಕನ್ನೂ ಹರಡಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ :

      ನಗರ ಪ್ರದೇಶಗಳಲ್ಲಿ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಜಾರಿಯಾಗುತ್ತಿಲ್ಲ. ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ನಿಗಾ ವಹಿಸಿದ್ದರೆ ಪರಿಸ್ಥಿತಿ ಇಷ್ಟು ಕೈಮೀರುತ್ತಿರಲಿಲ್ಲ. ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸುವಂತಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಕೈಗೊಂಡ ನಿರ್ಬಂಧಗಳೇನು ಎಂಬುದು ತಿಳಿಯುತ್ತಲೇ ಇಲ್ಲ.

ಆರೋಗ್ಯದ ಬಗ್ಗೆ ನಿರ್ಲಕ್ಷ್ಯ :

      ನಗರಗಳಿಗಿಂತ ಹೆಚ್ಚಾಗಿ ಗ್ರಾಮೀಣ ವಾಸಿಗಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಕುಡಿಯುವ ನೀರಿನ ಅನೈರ್ಮಲ್ಯ ಸೇರಿದಂತೆ ಹಲವು ವಿಷಯಗಳು ಇದಕ್ಕೆ ಪೂರಕವಾಗುತ್ತಿವೆ. ಈ ಕಾರಣಕ್ಕಾಗಿಯೇ ಹಳ್ಳಿಗಳಲ್ಲಿ ಕೆಲವೊಮ್ಮೆ ಮಲೇರಿಯಾ, ಚಿಕುನ್ ಗನ್ಯಾ, ಡೆಂಗ್ಯು ಮತ್ತಿತರ ಕಾಯಿಲೆಗಳು ಸಾಂಕ್ರಾಮಿಕವಾಗಿ ಹರಡಿಬಿಡುತ್ತವೆ. ಈಗ ಬೇಸಿಗೆಯಿಂದ ಮಳೆಗಾಲಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಹಲವು ರೋಗಗಳು ವಕ್ಕರಿಸುವ ಸಾಧ್ಯತೆಗಳಿವೆ. ಈಗಾಗಲೇ ಹಲವು ಗ್ರಾಮೀಣರು ರೋಗರುಜಿನಗಳಿಗೆ ಒಳಗಾಗಿದ್ದಾರೆ. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಗ್ರಾಮೀಣ ಜನರ ಆರೋಗ್ಯ ಕಾಪಾಡುವ ಕಾರ್ಯಕ್ರಮಗಳತ್ತ ಗಮನ ಹರಿಸುವ ಅನಿವಾರ್ಯತೆ ಇದೆ. ಕೆಲವು ಇಲಾಖೆಗಳು ದಿನವಿಡಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಕೆಲವು ಇಲಾಖೆಗಳ ಅಧಿಕಾರಿ ನೌಕರರು ಮನೆಯಲ್ಲಿ ಕುಳಿತಿದ್ದಾರೆ. ಇಂತಹವರನ್ನು ಬಳಸಿಕೊಂಡು ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವ ಕಡೆಗೆ ಆಡಳಿತಗಳು ಹೆಚ್ಚು ಗಮನ ಹರಿಸಬೇಕು.

ಮಾಂಸ ಖರೀದಿಯಲ್ಲಿ ಜನ ಜಂಗುಳಿ :

      ಕೊರೊನಾ ನಿಯಂತ್ರಣಕ್ಕೆಂದೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇದರ ಮುಖ್ಯ ಉದ್ದೇಶ ಜನರ ಗುಂಪುಗೂಡುವಿಕೆಯನ್ನು ನಿಯಂತ್ರಿಸುವುದು. ವೈರಾಣು ಸುಲಭವಾಗಿ ಬಾಯಿ ಹಾಗೂ ಮೂಗಿನ ಮೂಲಕ ಶ್ವಾಸಕೋಶ ಸೇರುವುದರಿಂದ ಪರಸ್ಪರ ದೈಹಿಕ ಅಂತರ ಕಾಪಾಡುವುದೇ ಈಗಿನ ಮುಖ್ಯ ಉದ್ದೇಶ. ಆದರೆ ಇವೆಲ್ಲವನ್ನೂ ಗಾಳಿಗೆ ತೂರಲಾಗುತ್ತಿದೆ.
ಜಾತ್ರೆ, ಹಬ್ಬ ಹರಿದಿನಗಳು ಇತ್ತೀಚೆಗಷ್ಟೇ ಕಡಿಮೆಯಾಗಿರಬಹುದು ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಸಹ ಕೆಲವು ಹಬ್ಬ, ಹಬ್ಬದೂಟ ಹಿಂದಿನಂತೆಯೇ ಮುಂದುವರೆದಿದೆ. ಸಾಮೂಹಿಕವಾಗಿ ಹಬ್ಬದ ಆಚರಣೆಗಳು ಇಲ್ಲದೆ ಹೋದರೂ ಮನೆ ಮನೆಗಳಲ್ಲಿ ಆಚರಣೆ ನಡೆದೆ ಇದೆ.

      ಕೆಲವು ಮನೆಗಳಲ್ಲಿ ಹಬ್ಬದೂಟ ಅಥವಾ ವಿಶೇಷ ಅಡುಗೆ ತಯಾರಿಸಿದಾಗ ಇತರೆ ಬಂಧುಗಳನ್ನು, ಪಕ್ಕದ ಮನೆಯವರನ್ನು ಆಹ್ವಾನಿಸುವುದು ರೂಢಿ. ಈಗಾಗಲೇ ಬೆಂಗಳೂರಿನಿಂದ ಬಂದು ಊರು ಸೇರಿಕೊಂಡಿರುವ ಜನರಿಗೆ ಒಂದೇ ತರಹದ ಊಟ ಹಿಡಿಸುತ್ತಿಲ್ಲ. ವಿಶೇಷ ಅಡುಗೆಗಳ ಕಡೆಗೆ ಹೆಚ್ಚು ಆಸಕ್ತಿ. ಹೀಗಾಗಿ ಕರೆದವರ ಮನೆಗೆ ಹೋಗುವ, ಗುಂಪು ಗುಂಪಾಗಿ ಊಟ ಮಾಡುವ ಪ್ರವೃತ್ತಿಗಳಿಂದ ಸೋಂಕು ಬಹುಬೇಗನೆ ಹರಡುತ್ತಿದೆ.

ನಿಲ್ಲದ ಮಾಂಸ ಖರೀದಿ :

      ನಗರ ಪ್ರದೇಶಗಳಂತೆಯೇ ಗ್ರಾಮೀಣ ಜನರು ಮಾಂಸಕ್ಕಾಗಿ ಮುಗಿ ಬೀಳುತ್ತಿರುವುದು ನಿಂತಿಲ್ಲ. ಹೋಬಳಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿರುವ ಚಿಕನ್ ಸೆಂಟರ್, ಮಾಂಸ ಮಾರಾಟದ ಅಂಗಡಿಗಳಿಗೆ ಬೆಳ್ಳಂಬೆಳಿಗ್ಗೆ ದೌಡಾಯಿಸುತ್ತಿದ್ದಾರೆ. 10 ಗಂಟೆಯ ಒಳಗೆ ಅಲ್ಲಿಂದ ಹೊರಬರಬೇಕು. ಅದಕ್ಕಾಗಿ ಎಲ್ಲರೂ ಅಂಗಡಿಗಳ ಮುಂದೆ ಮುಗಿಬೀಳುತ್ತಿದ್ದಾರೆ. ಮಾಂಸಕ್ಕಾಗಿ ಹೀಗೆ ಗುಂಪುಗೂಡುವುದನ್ನು ತಡೆಯಲು ಸಾಧ್ಯವಾಗಿಲ್ಲ.

ಕೊರೊನಾ ಹಬ್ಬ :

      ಈ ಹಿಂದೆ ಪ್ಲೇಗ್‍ನಂತಹ ಮಹಾಮಾರಿ ರೋಗಗಳು ಬಂದಾಗ ರೋಗ ವಾಸಿಯಾಗಲು ಅದರ ಹೆಸರಿನಲ್ಲೇ ಹಬ್ಬ ಮಾಡುತ್ತಿದ್ದರು. ಈಗಲೂ ಜಿಲ್ಲೆಯ ಕೆಲವು ಕಡೆ ಕೊರೊನಾ ಅಜ್ಜಿ ಹಬ್ಬ ಆಚರಿಸಿರುವ ವರದಿಗಳು ಬಂದಿವೆ. ವೈಜ್ಞಾನಿಕ ಕಾಲಘಟ್ಟದಲ್ಲಿ ಇಂದಿಗೂ ಜನತೆ ಮೂಢನಂಬಿಕೆಗಳ ಮೊರೆ ಹೋಗುತ್ತಿದ್ದಾರೆ. ಕೊರೊನಾ ಅಜ್ಜಿ ಹಬ್ಬವನ್ನು ಆಚರಿಸುವ ಮೂಲಕ ಗುಂಪುಗೂಡುವುದು ಹೆಚ್ಚಿದರೆ ಆ ಊರಿಗೆ ಅಪಾಯ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link