ತುರುವೇಕೆರೆ :
ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಡಿವೈಎಸ್‍ಪಿ ರಮೇಶ್ ಅವರು ತಾವೇ ಖುದ್ದು ರಸ್ತೆಗಿಳಿದು ವಿನಾ ಕಾರಣ ಸಂಚರಿಸುವವರ ವಿರುದ್ದ ಶಿಸ್ತು ಕ್ರಮ ಕೈಗೊಂಡರು.
ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ಶೇ.50 ರ ಗಡಿ ಮುಟ್ಟಿದ್ದು ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರ ಅಣತಿ ಮೇರೆಗೆ ಖುದ್ದು ಡಿವೈಎಸ್‍ಪಿ ಅವರೇ ಬಾಣಸಂದ್ರ ವೃತ್ತದಲ್ಲಿ ಸ್ವತಃ ತಾವೇ ಲಾಠಿ ಹಿಡಿದು ಸಿಬ್ಬಂದಿಯೊಂದಿಗೆ ಸುಖಾ ಸುಮ್ಮನೆ ರಸ್ತೆಗಿಳಿದು ಸಂಚರಿಸುವವರ ಬೈಕ್ ಹಾಗೂ ವಾಹನ ಚಾಲಕರಿಗೆ ಬಿಸಿ ಮುಟ್ಟಿಸಿದರು.
ಪಟ್ಟಣದಲ್ಲಿ ಬೆಳಿಗ್ಗೆ 6ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರಿಗೆ ಅವಕಾಶ ನೀಡಿದ್ದರೂ ಸಹಾ ಕೆಲ ಬೈಕು ಸವಾರರು ಇಲ್ಲಸಲ್ಲದ ಸಬೂಬು ಹೇಳಿಕೊಂಡು ಅನಾವಶ್ಯಕವಾಗಿ ಓಡಾಡುತ್ತಿರುವವರನ್ನು ತಡೆದು ಅವರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡರು. ಇನ್ನೂ ಕೆಲವರು ವಿನಾ ಕಾರಣ ಓಡಾಡುತ್ತಿದ್ದವರಿಗೆ ಬೆತ್ತದಿಂದ ಗದರಿಸಿ ರಸ್ತೆಗಿಳಿಯದಂತೆ ಭಯ ಮೂಡಿಸಿದರು. ಸೋಮವಾರದಿಂದೀಚೆಗೆ 72 ಬೈಕುಗಳು, 2 ಜೆಸಿಬಿ, 2 ಕಾರು ಹಾಗೂ ಒಂದು ಆಟೋವನ್ನು ಈಗಾಗಲೇ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಈ ಭಾಗದಲ್ಲಿ ಹೆಚ್ಚು ನಿಗಾ ವಹಿಸುತ್ತಿದ್ದು ಅನಾವಶ್ಯಕವಾಗಿ ಜನರು ಮನೆಯಿಂದ ಹೊರಬರಬಾರದು. ಅವಶ್ಯಕತೆಯಿದ್ದವರು ಮಾತ್ರ ಮನೆಯಿಂದ ಹೊರಬನ್ನಿ. ವಿನಾ ಕಾರಣ ಮನೆಯಿಂದ ಹೊರಬಂದವರ ವಿರುದ್ದು ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ದಯಮಾಡಿ ಸರ್ಕಾರದ ಮಾರ್ಗಸೂಚಿಗಳನ್ವಯ ಮನೆಯಲ್ಲಿಯೇ ಇದ್ದು ಕೋವಿಡ್ ನಿರ್ಮೂಲನೆಗೆ ನಮ್ಮೊಂದಿಗೆ ಸಹಕರಿಸಿ ಎಂದು ಡಿವೈಎಸ್‍ಪಿ ರಮೇಶ್ ತಾಲ್ಲೂಕಿನ ಜನತೆಗೆ ಮನವಿ ಮಾಡಿದ್ದಾರೆ.
ಈ ಸಂಧರ್ಭದಲ್ಲಿ ವೃತ್ತ ನಿರೀಕ್ಷಕ ನವೀನ್ ಸೇರಿದಂತೆ ಪೋಲೀಸ್ ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
