RTPCR ವರದಿ ವಿಳಂಬ : ಹರುಡುತ್ತಿದೆ ಕೊರೊನಾ!!

ಹುಳಿಯಾರು: 

      ಕೋವಿಡ್‍ಗೆ ಸಂಬಂಧಿಸಿದಂತೆ ಆರ್‍ಟಿಪಿಸಿಆರ್ ವರದಿ ವಿಳಂಬ ಆಗುತ್ತಿರುವುದರಿಂದ ಕೊರೊನಾ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ವ್ಯಾಪಕವಾಗಿ ಹಬ್ಬುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

      ಕೊರೊನಾ 2ನೇ ಅಲೆಯ ಆರಂಭದಲ್ಲಿ ಕೊರೊನಾ ಪರೀಕ್ಷೆಗೆ ಸಾರ್ವಜನಿಕರು ಮುಂದಾಗುತ್ತಿರಲಿಲ್ಲ. ಕೊರೊನಾ ಲಸಿಕೆ ಹಾಕಿಕೊಳ್ಳವರು ಬಂದವರಿಗೆ, ಜ್ವರದಿಂದ ಬಳಲುತ್ತಿರುವವರಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಲಾಗುತ್ತಿತ್ತು. ಈಗ ಸಾವಿನ ಸಂಖ್ಯೆ ಹೆಚ್ಚಾಗಿರುವುದರಿಂದ ಭಯಭೀತರಾದ ಸಾರ್ವಜನಿಕರು ರೋಗದ ಲಕ್ಷಣಗಳು ಗೊತ್ತಾಗುತ್ತಿದ್ದಂತೆ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ.

      ನಿಯಮದ ಪ್ರಕಾರ 24 ಗಂಟೆಯೊಳಗೆ ಆರ್‍ಟಿಪಿಸಿಆರ್ ವರದಿ ದೊರೆಯಬೇಕು. ಆದರೆ, ಪರೀಕ್ಷೆ ಪ್ರಮಾಣ ಒತ್ತಡ ಹೆಚ್ಚಾಗಿರುವುದರಿಂದ 5 ರಿಂದ 6 ದಿನಗಳೊಳಗೆ ವರದಿ ಬರುತ್ತಿದೆ. ವರದಿ ಬರುವವರೆಗೂ ಮನೆಯಲ್ಲೇ ಇರುವಂತೆ ಹೇಳಿ ಕಳುಹಿಸಲಾಗುತ್ತಿದೆ. ಆದರೆ ಆದರೆ ಐಸೊಲೇಶನ್ ಪರಿಣಾಮಕಾರಿ ಯಾಗದೇ ಸೋಂಕಿತರು ಮತ್ತಷ್ಟು ಜನರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ.

      ರೋಗ ಲಕ್ಷಣ ಇರುವವರನ್ನಾದರೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಬೇಕು. ಅಥವಾ ಮಾತ್ರೆಗಳನ್ನಾದರೂ ಕೊಟ್ಟು ಮನೆಯಲ್ಲಿದ್ದು ನುಂಗುವಂತೆ ಹೇಳಬೇಕು. ಆದರೆ ಕೊರೊನಾ ರಿಪೋರ್ಟ್ ಬಾರದೆ ಆಸ್ಪತ್ರೆಯ ಸಿಬ್ಬಂದಿ ಔಷಧಿಗಳನ್ನೇ ಕೊಡದೆ ಕಳುಹಿಸುತ್ತಿದ್ದಾರೆ. ಇದು ರೋಗಿಗಳಿಗೂ, ಕುಟುಂಬಸ್ಥರಿಗೂ, ನೆರೆಹೊರೆಯವರಿಗೂ ಆತಂಕ ಸೃಷ್ಠಿಸಿದೆ.

      ಸಾರ್ವಜನಿಕರ ಅಭಿಪ್ರಾಯದ ಪ್ರಕಾರ ಹೋಂ ಐಸೊಲೇಶನ್‍ನಲ್ಲಿ ಇರುವವರು ಈ ನಿಯಮ ಪಾಲನೆ ಮಾಡದೇ ಎಲ್ಲೆಂದರಲ್ಲಿ ಅಡ್ಡಾಡುತ್ತಿದ್ದಾರೆ. ಇದರಿಂದ ಅವರ ಸಂಪರ್ಕಿತರಿಗೆಲ್ಲ ಸೋಂಕು ಬರುತ್ತಿದೆ. ಅಲ್ಲದೆ ಹಳ್ಳಿಹಳ್ಳಿಗಳಲ್ಲಿ ನೂರಾರು ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಸಾವುಗಳಾಗುತ್ತಿವೆ.

      ಹಾಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಆರ್‍ಟಿಪಿಸಿಆರ್ ವರದಿಯನ್ನು 24 ಗಂಟೆಯೊಳಗೆ ಕೊಡುವ ವ್ಯವಸ್ಥೆ ಮಾಡಬೇಕು. ಅಲ್ಲದೆ ಪರೀಕ್ಷೆಗೆ ಬಂದವರಲ್ಲಿ ಕೊರೊನಾ ಲಕ್ಷಣಗಳು ಕಂಡುಬಂದರೆ ಔಷಧಿಯನ್ನು ಕೊಟ್ಟು ಕಳುಹಿಸಬೇಕು. ಹೋಂ ಐಸೋಲೇಷನ್‍ನಲ್ಲಿರುವವರ ಮೇಲೆ ಹದ್ದಿನ ಕಣ್ಣಿಟ್ಟು ಊರೂರು ತಿರುಗುವುದನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

      ಜ್ವರ ಬಂದ ತಕ್ಷಣ ಪರೀಕ್ಷೆ ಮಾಡಿಸುವವರು ಕಮ್ಮಿ. ಮೆಡಿಕಲ್ ಸ್ಟೋರ್‍ನಲ್ಲಿ ಮಾತ್ರೆ ತಂದು ನುಂಗುತ್ತಾರೆ. ಆಗಲೂ ಜ್ವರ ಬಿಡದಿದ್ದಾಗ ಪರೀಕ್ಷೆಗೆ ಮುಂದಾಗುತ್ತಾರೆ. ಇನ್ನು ಪರೀಕ್ಷೆ ಮಾಡಿದ ವರದಿ ವಾರ ತಡವಾಗಿ ಕೊಡುತ್ತಿದ್ದಾರೆ. ಅಂದರೆ ವ್ಯಕ್ತಿಯೊಬ್ಬನಿಗೆ ಕೊರೊನಾ ಬಂದು ಹತ್ತನ್ನೆರಡು ದಿನಗಳ ನಂತರ ದೃಢಪಡಿಸಿ ಸರ್ಕಾರ ಚಿಕಿತ್ಸೆ ಕೊಡುತ್ತಿದೆ. ಇದರಿಂದ ರೋಗನಿರೋಧಕ ಶಕ್ತಿಯಿಲ್ಲದ ವ್ಯಕ್ತಿ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಅಲ್ಲದೆ ಈ ವ್ಯಕ್ತಿ ಊರಿನ ಇತರರಿಗೂ ಹರಡುತ್ತಾನೆ. ಹಾಗಾಗಿಯೇ ಕೆಂಕೆರೆ ಪಂಚಾಯ್ತಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.

-ವಿಕಾಸ್, ಅಧ್ಯಕ್ಷರು, ಗ್ರಾಪಂ, ಕೆಂಕೆರೆ

      ನಮ್ಮ ಆಯಿಲ್ ಮಿಲ್‍ನಲ್ಲಿ ಕೆಲಸ ನಿರ್ವಹಿಸುವ ಮಹಿಳೆಯೊಬ್ಬರಿಗೆ ಜ್ವರ, ತಲೆನೋವಿನ ಜೊತೆಗೆ ನಾಲಿಗೆ ರುಚಿ ಸಹ ಇಲ್ಲದಾಗಿದೆ. ಇವೆಲ್ಲವೂ ಕೊರೊನಾ ಸೋಂಕಿನ ಲಕ್ಷಣಗಳಾಗಿವೆ. ಇವರು ಆತಂಕದಿಂದ ಯಳನಾಡು ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದರಾದರೂ 5 ದಿನಗಳ ನಂತರ ವರದಿ ಬರುತ್ತದೆ. ಆಗ ಚಿಕಿತ್ಸೆ ಕೊಡುತ್ತೇವೆ ಎಂದು ಹೇಳಿ ಕಳುಹಿಸಿದ್ದಾರೆ ವಿನಃ ಯಾವೊಂದು ಮಾತ್ರೆಯನ್ನೂ ಕೊಟ್ಟಿಲ್ಲ. ಹೀಗಾಗದೆ ಸೋಂಕು ಹರಡುವುದನ್ನು ತಡೆಯುವುದಾದರೂ ಹೇಗೆ…? ಸೋಂಕು ತಗುಲಿರುವ ವ್ಯಕ್ತಿಗಳನ್ನು ಪ್ರಾಣಾಪಾಯದಿಂದ ಪಾರು ಮಾಡುವುದಾದರೂ ಹೇಗೆ? ಆರ್‍ಟಿಪಿಸಿಆರ್ ವರದಿ ತಡವಾಗುತ್ತಿರುವ ವಿಷಯ ಗಂಭೀರವಾಗಿ ಪರಿಗಣಿಸಬೇಕಿದೆ.

-ಎಲ್.ಆರ್.ಸುಧೀರ್, ಆಯಿಲ್‍ಮಿಲ್ ಮಾಲೀಕರು, ಹುಳಿಯಾರು.

      ಆರ್‍ಟಿಪಿಸಿಆರ್ ವರದಿ ಎರಡು ದಿನಗಳಲ್ಲಿ ಬರುತ್ತಿದೆ. ತಿಪಟೂರಿನ ಲ್ಯಾಬ್ ಸಮಸ್ಯೆಯಾದಾಗ ಮಾತ್ರ ತುಮಕೂರಿಗೆ ಕಳುಹಿಸುತ್ತೇವೆ. ತುಮಕೂರಿನಿಂದ ವರದಿ ಬರೋದು ಸ್ವಲ್ಪ ತಡವಾಗುತ್ತದೆ. ತಪಾಸಣೆಗೆ ಬಂದವರ ಪೈಕಿ ಕೊರೊನಾ ಲಕ್ಷಣ ಇರುವ ಬಗ್ಗೆ ವೈದ್ಯರು ನಿರ್ಧರಿಸಿ ಚಿಕಿತ್ಸೆ ಕೊಡುತ್ತಾರೆ. ಆಯಿಲ್ ಮಿಲ್‍ನಲ್ಲಿ ಕೆಲಸ ಮಾಡುವ ಮಹಿಳೆಯ ಪ್ರಕರಣದ ಬಗ್ಗೆ ಅಲ್ಲಿನ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದು ಅಗತ್ಯವಿದ್ದರೆ ತಕ್ಷಣ ಔಷಧಿ ಕೊಡುವಂತೆ ಸೂಚಿಸುತ್ತೇನೆ.

-ನವೀನ್, ತಾಲೂಕು ಆರೋಗ್ಯಾಧಿಕಾರಿಗಳು, ಚಿಕ್ಕನಾಯಕನಹಳ್ಳಿ

 

 

 

 

Recent Articles

spot_img

Related Stories

Share via
Copy link
Powered by Social Snap