ಹುಳಿಯಾರು:
ಹುಳಿಯಾರು ಸಮೀಪದ ಲಕ್ಷ್ಮೀಪುರ ಗ್ರಾಮದಲ್ಲಿ ಲಾಕ್ಡೌನ್ ನಡುವೆಯೂ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಸುತ್ತಮುತ್ತಲ ಗ್ರಾಮಗಳ ಮದ್ಯಪ್ರಿಯರು ಲಕ್ಷ್ಮೀಪುರಕ್ಕೆ ಲಗ್ಗೆ ಇಡುತ್ತಿದ್ದಾರೆ. ಇದರಿಂದ ಕೊರೊನಾ ಸೋಂಕು ಹರಡುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಕೋವಿಡ್ 1 ನೇ ಅಲೆಯ ಲಾಕ್ಡೌನ್ನಲ್ಲಿ ಮದ್ಯ ಮಾರಾಟಕ್ಕೂ ನಿರ್ಬಂಧ ವಿಧಿಸಿತ್ತು. ಹಾಗಾಗಿ ಮದ್ಯದಂಗಡಿಗಳೆಲ್ಲವೂ ಮುಚ್ಚಿದ್ದವು. ಆದರೂ ಅಕ್ರಮ ಮದ್ಯ ಮಾರಾಟ ನಡೆದ ನಿರ್ದಶನಗಳಿರಲಿಲ್ಲ. ಆದರೆ ಕೋವಿಡ್ 2 ನೇ ಅಲೆಯ ಲಾಕ್ಡೌನ್ನಲ್ಲಿ ಬೆಳಿಗ್ಗೆ 6 ರಿಂದ 10 ರವರೆಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಆದರೂ ಹಳ್ಳಿಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ.
ಲಕ್ಷ್ಮೀಪುರ ಗ್ರಾಮದಲ್ಲಿ ನಾಲ್ಕೈದು ಕಡೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಅಕ್ರಮ ಮದ್ಯ ದಿನವಿಡೀ ಸಿಗುತ್ತಿರುವುದರಿಂದ ಸುತ್ತಮುತ್ತಲಿನ ಚೌಳಕಟ್ಟೆ, ಹರೇನಹಳ್ಳಿ, ಗದ್ದಿಗೆರೆಹಟ್ಟಿ, ಟಿ.ತಾಂಡ್ಯ, ಬಸವಾಪಟ್ಟಣ, ನರುವಗಲ್ಲು, ಗೊಲ್ಲರಹಟ್ಟಿ, ಗೂಬೆಹಳ್ಳಿ, ತೊರೆಮನೆ, ಸೀಗೆಬಾಗಿ ಗ್ರಾಮಗಳ ಮದ್ಯ ಪ್ರಿಯರು ಇಲ್ಲಿಗೆ ಗುಂಪು, ಗುಂಪಾಗಿ ಬರುತ್ತಿದ್ದಾರೆ. ಕೋವಿಡ್ ನಿಯಮ ಪಾಲಿಸದೆ ಜನರು ಓಡಾಡುತ್ತಿರುವುದರಿಂದ ಗ್ರಾಮಸ್ಥರಲ್ಲಿ ಕೊರೊನಾ ಆತಂಕ ಹೆಚ್ಚಾಗಿದೆ ಎಂಬುದು ಸ್ಥಳೀಯರು ಆರೋಪವಾಗಿದೆ.
ಇಲ್ಲಿ ಅಕ್ರಮ ಮದ್ಯ ಮಾರಾಟ ಮೊದಲಿನಿಂದಲೂ ನಡೆಯುತ್ತಿದ್ದು ಹಂದನಕೆರೆ ಪೊಲೀಸರು ಅನೇಕ ಬಾರಿ ಎಚ್ಚರಿಸಿದ ನಿದರ್ಶನಗಳಿದ್ದವು. ಈಗ ಕೊರೊನಾ ಅಟ್ಟಹಾಸದಲ್ಲೂ ಅಕ್ರಮ ಮದ್ಯ ಮಾರಾಟ ನಿಲ್ಲಿಸದೆ ಮುಂದುವರಿಸಿದ್ದು ದುಪ್ಪಟ್ಟು ಬೆಲೆಗೆ ಎಗ್ಗಿಲ್ಲದಂತೆ ಮಾರುತ್ತಿದ್ದಾರೆ. ಇದರಿಂದ ಗ್ರಾಮಸ್ಥರ ನೆಮ್ಮದಿ ಹಾಳಾಗುತ್ತಿರುವ ಜತೆಗೆ, ಕೋವಿಡ್ ಸೋಂಕಿನ ಭೀತಿಯೂ ಹೆಚ್ಚಾಗುತ್ತಿದೆ. ಜನರ ಹಿತ ಕಾಪಾಡಲು ಅಬಕಾರಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ