ಪಾವಗಡ : ಖಾಸಗಿ ಶಾಲಾ ಶಿಕ್ಷಕರಿಗೆ ದಿನಸಿ ಕಿಟ್ ವಿತರಣೆ

 ಪಾವಗಡ :

      ಕೋವಿಡ್ 19 ಎರಡನೇ ಅಲೆ ಇಡೀ ದೇಶವನ್ನೇ ನಲುಗಿಸಿದೆ. ಈ ಮಹಾ ಮಾರಿಯ ಸಾವಿನ ಸುನಾಮಿಯು ಎಲ್ಲೆಡೆ ಏಕಪ್ರಕಾರವಾಗಿ ಹರಡುತ್ತಿದ್ದು, ಇಡೀ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಈ ನಿಟ್ಟಿನಲ್ಲಿ ಖಾಸಗಿ ಶಾಲಾ ಶಿಕ್ಷಕರ ಸ್ಥಿತಿ ಹೇಳತೀರದು. ಇತ್ತ ದರಿ, ಅತ್ತ ಪುಲಿ ಎಂಬಂತಿದೆ ಇವರ ಸ್ಥಿತಿ. ಪಾವಗಡ ತಾಲ್ಲೂಕಿನ ಖಾಸಗಿ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇತ್ತೀಚೆಗೆ ಸ್ವಾಮೀಜಿಯವರಲ್ಲಿ ಈ ನತದೃಷ್ಟ ಶಿಕ್ಷಕರ ಸ್ಥಿತಿಯನ್ನು ವಿವರಿಸಿದಾಗ ಸ್ವಾಮೀಜಿಯವರು ಸ್ಪಂದಿಸಿ, ಸುಮಾರು 250 ಖಾಸಗಿ ಶಾಲಾ ಶಿಕ್ಷಕರಿಗೆ ಸಹಾಯ ಹಸ್ತವನ್ನು ನೀಡಲು ಸಮ್ಮತಿಸಿದ್ದರು.

      ಸೋಮವಾರ ಈ ಕಾರ್ಯಕ್ರಮದ ಆರಂಭೋತ್ಸವ ನೆರವೇರಿತು. ಖಾಸಗಿ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಸನ್ನಮೂರ್ತಿ, ಹಿರಿಯ ವಕೀಲ ಯಜ್ಞ ನಾರಾಯಣ ಶರ್ಮ, ಆರ್ಯವೈಶ್ಯ ಸಂಘದ ಅಧ್ಯಕ್ಷ ಸುದೇಶ್ ಬಾಬು ಹಾಗೂ ವಿವೇಕ ಬ್ರಿಗೇಡಿನ ದೇವರಾಜ್, ಲೋಕೇಶ್, ವೇಣುಗೋಪಾಲರೆಡ್ಡಿ ಹಾಗೂ ಇತರ ಸದಸ್ಯರು ಭಾಗವಹಿಸಿದ್ದರು.

ಸುಮಾರು ಐದು ದಿವಸದ ಈ ಕಾರ್ಯಕ್ರಮದಲ್ಲಿ ಪ್ರತಿ ದಿನ ದವಸ ಧಾನ್ಯದ ಕಿಟ್‍ನ್ನು ವಿತರಿಸುವಂತಹ ಯೋಜನೆಯಾಗಿದೆ. ಇನ್ಫೋಸಿಸ್ ಫೌಂಡೇಷನ್ನಿನ ಸಹಕಾರದಿಂದ ಈ ಯೋಜನೆ ಕಳೆದ ಬಾರಿಯೂ ನೆರವೇರಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕಳೆದ ಬಾರಿ ಸರಿಸುಮಾರು 30000 ಧಾನ್ಯದ ಕಿಟ್‍ಗಳನ್ನು ಪಾವಗಡ, ತುಮಕೂರು, ಮಧುಗಿರಿ, ಕೊರಟಗೆರೆ, ಗುಲ್ಬರ್ಗಾ, ಬಿಜಾಪುರ, ಶಹಾಪುರ, ಜಮಖಂಡಿ ಹಾಗೂ ಮಹಾರಾಷ್ಟ್ರದ ಗಡಿ ಭಾಗದಲ್ಲಿನ ಪ್ರವಾಹ ಪೀಡಿತ ಹಾಗೂ ಕೋವಿಡ್19ರ ಮೊದಲನೆಯ ಅಲೆಯಲ್ಲಿ ಸಿಲುಕಿದ ಜನರಿಗೆ ಸಹಾಯಹಸ್ತವನ್ನು ನೀಡಲು ಇನ್ಫೋಸಿಸ್ ಫೌಂಡೇಷನ್ ಹಾಗೂ ಶ್ರೀರಾಮಕೃಷ್ಣ ಸೇವಾಶ್ರಮ ಮಹಾರಾಷ್ಟ್ರದ ಶೋಲಾಪುರದವರೆಗೂ ಧಾವಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

      ಇದೇ ಸಂದರ್ಭದಲ್ಲಿ ಪಾಂಡಿಚೆರಿ ಹಾಗೂ ತಮಿಳುನಾಡಿನಲ್ಲಿ ಸಂಭವಿಸಿದ ಚಂಡಮಾರುತಕ್ಕೆ ತುತ್ತಾಗಿದ್ದವರಿಗೂ ಸಹ ಸಹಾಯಹಸ್ತವನ್ನು ನೀಡಿದ್ದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು. ಈಗ ಕೋವಿಡ್ ಎರಡನೇ ಅಲೆ ಭಯಂಕರವಾಗಿದ್ದು ಸ್ವಾಮಿ ಜಪಾನಂದಜೀರವರು ಯಾವುದೇ ರೀತಿಯ ಭಯಾನಕ ಸ್ಥಿತಿಯಲ್ಲೂ ಧೈರ್ಯ ಹಾಗೂ ಸ್ಥೈರ್ಯದಿಂದ ಸೇವಾ ಯಜ್ಞವನ್ನು ನಿರಂತರವಾಗಿ ನಡೆಸುತ್ತಿರುವುದು ಇಡೀ ರಾಜ್ಯದಲ್ಲಿಯೇ ಒಂದು ಮಹಾನ್ ವಿಚಾರವಾಗಿ ಪರಿಗಣಿಸಲ್ಪಟ್ಟಿದೆ. ಮೇ 24ರಂದು ಸರಿಸುಮಾರು 80 ಖಾಸಗಿ ಶಾಲೆಗಳ ಶಿಕ್ಷಕರು ತಮ್ಮ ಪರಿಹಾರ ಸಾಮಗ್ರಿಗಳನ್ನು ಸ್ವಾಮೀಜಿಯವರ ನೇತೃತ್ವದಲ್ಲಿ ಸ್ವೀಕರಿಸಿ ಧನ್ಯರಾದರು.

     ಸ್ವಾಮೀಜಿಯವರು ನೆರೆದ ಖಾಸಗಿ ಶಾಲಾ ಶಿಕ್ಷಕರನ್ನುದ್ದೇಶಿಸಿ ಮಾತನಾಡುತ್ತಾ ಶಿಕ್ಷಕರು ದೇಶದ ಭವಿಷ್ಯವನ್ನು ರೂಪಿಸುವಂತಹ ಮಹತ್ತರವಾದ ಕಾರ್ಯವನ್ನು ಕೈಗೊಳ್ಳುವರು. ಅವರಿಗೆ ಸದಾ ಸಹಕಾರ, ಪ್ರೋತ್ಸಾಹ ಹಾಗೂ ಸಹಾಯ ನೀಡುವುದು ನಮ್ಮೆಲ್ಲರ ಅದಮ್ಯ ಕರ್ತವ್ಯವಾಗಿದೆ. ಕಳೆದ ಬಾರಿಯೂ ಸಹ ಎರಡೆರಡು ಬಾರಿ ರೇಷನ್ ಕಿಟ್‍ಗಳನ್ನು ಶ್ರೀಮತಿ ಸುಧಾಮೂರ್ತಿರವರ ಇನ್ಫೋಸಿಸ್ ಫೌಂಡೇಷನ್ನಿಂದ ನೀಡಲಾಗಿತ್ತು. ಈ ಬಾರಿಯೂ ಶ್ರೀರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಷನ್ ನಿರಂತರವಾಗಿ ತಮ್ಮ ಸೇವಾ ಯಜ್ಞವನ್ನು ನಡೆಸುತ್ತಿದೆ ಎಂದು ಸ್ವಾಮಿ ಜಪಾನಂದಜೀ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap